ಬೆಂಗಳೂರು, ಜು.27 www.bengaluruwire.com : ರಾಜ್ಯದ 3.78 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ರಾಜ್ಯ ಸರ್ಕಾರದ ವಿನೂತನ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ನೇತೃತ್ವದ ಆಡಳಿತ ಸರ್ಕಾರಕ್ಕೆ ಒಂದು ವರ್ಷ ಸಂದ ಹಿನ್ನಲೆಯಲ್ಲಿ ನಾಳೆ ಉದ್ಘಾಟಿಸಲಿದ್ದಾರೆ.
ರಾಜ್ಯದ ಎಲ್ಲಾ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಿಪಿಎಲ್ ಕಾರ್ಡ್ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಇದಾಗಿದೆ.
ಯೋಜನೆ ಕುರಿತು ರಾಜ್ಯದ ಎಲ್ಲಾ ಎಸ್ಕಾಂಗಳು ಎಸ್ ಸಿ-ಎಸ್ ಟಿ ಗ್ರಾಹಕರಿಗೆ ಅರಿವು ಮೂಡಿಸಿದ್ದು ವಿದ್ಯುತ್ ಮೀಟರ್ ಮಾಪಕರು ಮತ್ತು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಮನೆ ಮನೆಗೆ ತೆರಳಿ ಈ ಯೋಜನೆಯ ಕುರಿತು ಕರಪತ್ರಗಳನ್ನು ಹಂಚಿದ್ದಾರೆ.
ಡಾ. ಬಿ.ಆರ್.ಅಂಬೇಡ್ಕರ್ 115 ನೇ ಜಯಂತಿಯಂದು ಯೋಜನೆ ಘೋಷಣೆ :
ಬೆಸ್ಕಾಂ, ಸೆಸ್ಕಾಂ, ಜೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ಕಂಪನಿಗಳು ಈಗಾಗಲೇ ಈ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ಆರಂಭಿಸಿದ್ದು, ಎಸ್ಸಿ ಎಸ್ಟಿ ಗ್ರಾಹಕರು ಯೋಜನೆ ಲಾಭ ಪಡೆಯಲು ಉತ್ಸುಕರಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಾ. ಬಿ.ಆರ್.ಅಂಬೇಡ್ಕರ್ 115 ನೇ ಜಯಂತಿಯಂದು ಈ ಯೋಜನೆಯನ್ನು ಘೋಷಣೆ ಮಾಡಿದ್ದರು ಎಂದು ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಸ್ಕಾಂ 8 ಜಿಲ್ಲೆಗಳಲ್ಲಿ ಕಾರ್ಯಗತ :
ಈ ಯೋಜನೆ ಜುಲೈ ತಿಂಗಳಿಂದ ಬೆಸ್ಕಾಂನ 8 ಜಿಲ್ಲೆಯಲ್ಲಿ ಕಾರ್ಯಗತಗೊಂಡಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳು ತಾವು ಬಳಸುವ ವಿದ್ಯುತ್ ಪ್ರಮಾಣದಲ್ಲಿ 75 ಯೂನಿಟ್ ನವರೆಗೆ ಉಚಿತವಾಗಿ ಪಡೆಯಲಿದೆ. 75 ಯೂನಿಟ್ ವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಎಸ್.ಸಿ-ಎಸ್.ಟಿ ಗ್ರಾಹಕರಿಗೆ ನೇರಪಾವತಿ ವ್ಯವಸ್ಥೆ (DBT) ಮೂಲಕ ಸರ್ಕಾರ ಪಾವತಿಸಲಿದೆ.
75 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ ?
ಬೆಸ್ಕಾಂ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರ ಸಂಖ್ಯೆ ಮತ್ತು ಅವರು ಪ್ರತಿ ತಿಂಗಳು ಬಳಸಿರುವ 75 ಯೂನಿಟ್ ಗೆ ಸರ್ಕಾರದಿಂದ ಪಾವತಿಸಬೇಕಾದ ಸಬ್ಸಿಡಿ ಮೊತ್ತದ ಮಾಹಿತಿ ಕ್ರೋಡಿಕರಿಸಲು ಬೆಸ್ಕಾಂ ಸಾಫ್ಟ್ ವೇರ್ ಒಂದನ್ನು ಅಭಿವೃದ್ದಿ ಪಡಿಸಿದೆ. ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಗ್ರಾಹಕರು ಹತ್ತಿರದ ಎಸ್ಕಾಂ ಕಚೇರಿಗೆ ಒದಗಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.