ಬೆಂಗಳೂರು, ಜು.25 www.bengaluruwire.com : ದೇಶದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ಆಗಸ್ಟ್ 11 ರಿಂದ 15ನೆಯ ತಾರೀಖಿನವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ದೇಶಭಕ್ತಿ ಮೆರೆಯಲು ಬೆಂಗಳೂರಿನ ವ್ಯಾಪ್ತಿಗೆಂದು ರಾಜ್ಯ ಸರ್ಕಾರವು 2 ಲಕ್ಷ ರಾಷ್ಟ್ರಧ್ವಜಗಳನ್ನು ಬಿಬಿಎಂಪಿಗೆ ಹಂಚಿಕೆ ಮಾಡಿದೆ.
ಕೇಂದ್ರ ಸರ್ಕಾರದ ಹರ್ ಘರ್ ಮೆ ತಿರಂಗ್ ಎಂಬ ಘೋಷವಾಕ್ಯದಡಿ ಈ ರಾಷ್ಟ್ರಧ್ವಜಗಳನ್ನು ಪಾಲಿಕೆಗೆ ರಾಜ್ಯ ಸರ್ಕಾರವು ಹಂಚಿಕೆ ಮಾಡಿದೆ. ಈ ಕುರಿತಂತೆ ರಾಜ್ಯ ಸರ್ಕಾರವು ಇಂತಿಷ್ಟು ಧ್ವಜ ಬೇಕೆಂದು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿತ್ತು.
ಬಿಬಿಎಂಪಿಯು ವಲಯವಾರು ಈ ಬಾವುಟಗಳನ್ನು ಪಾಲಿಕೆ ವಲಯ ಮಟ್ಟದ ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿ, 22 ರಿಂದ 25 ರೂ. ನಡುವೆ ಪಾಲಿಕೆ ನಿಗಧಿಪಡಿಸುವ ಮೊತ್ತ ಪಾವತಿಸಿ ಸಾರ್ವಜನಿಕರು ಬಿಬಿಎಂಪಿಯ ನೀಡುವ ಬಾವುಟಗಳನ್ನು ಪಡೆದುಕೊಳ್ಳಬಹುದು.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉನ್ನತಮಟ್ಟದ ಸಮಿತಿಯು ಎರಡು ಲಕ್ಷ ಧ್ವಜಗಳನ್ನು ಬಿಬಿಎಂಪಿಗೆ ಬುಧವಾರದ ಒಳಗೆ ವಿತರಿಸಲಿದೆ. ಪೂರ್ವ ವಲಕ್ಕೆ 42,000, ಪಶ್ಚಿಮ ವಲಯಕ್ಕೆ – 36,000, ದಕ್ಷಿಣ ವಲಯಕ್ಕೆ – 40,000, ಮಹದೇವಪುರ ವಲಯ – 20,000, ಬೊಮ್ಮನಹಳ್ಳಿ – 22,000, ಯಲಹಂಕ – 14,000, ರಾಜರಾಜೇಶ್ವರಿ ನಗರ – 16,000, ದಾಸರಹಳ್ಳಿ ವಲಯಕ್ಕೆ – 10,000 ಸೇರಿದಂತೆ ಒಟ್ಟು 2 ಲಕ್ಷ ರಾಷ್ಟ್ರಧ್ವಜಗಳು ಹಂಚಿಕೆಯಾಗಲಿದೆ.
ಆಯಾ ವಲಯವಾರು ಕಾರ್ಯಪಾಲಕ ಅಭಿಯಂತರರು ಧ್ವಜ ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಹಾಗೂ ಈ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಪಾಲಿಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ವಹಿಸಲಾಗಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರು ತಮ್ಮ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ.