ಬೆಂಗಳೂರು, ಜು.23 www.bengaluruwire.com : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕ್ಷೆ ಉಲ್ಲಂಘಿಸಿ ಇನ್ನು ಮುಂದೆ ಕಟ್ಟಡ ಕಟ್ಟಿದರೆ ಅಂತಹ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಹಾಗೂ ದಂಡ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೈಕೋರ್ಟ್ ಸೂಚನೆಯ ಹಿನ್ನಲೆಯಲ್ಲಿ ಜು.21ರಂದು ಹೊಸ ಸುತ್ತೋಲೆ ಹೊರಡಿಸಿದೆ.
ಈ ಹೊಸ ಸುತ್ತೋಲೆಯಲ್ಲಿ ಕೇಂದ್ರ ಕಚೇರಿ, ವಲಯ ಕಚೇರಿ ಹಾಗೂ ಉಪವಿಭಾಗ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಎಂಜಿನಿಯರ್ ಗಳು ಯಾವ ರೀತಿಯಲ್ಲಿ ಅನಧಿಕೃತ ನಿರ್ಮಾಣಗಳನ್ನು ತಡೆಯಬೇಕು? ನಕ್ಷೆ ಮಂಜೂರಾತಿ ಉಲ್ಲಂಘಿಸಿ ಕಟ್ಟಡ ಕಟ್ಟುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು? ನಕ್ಷೆ ಉಲ್ಲಂಘಿಸಿ ವ್ಯತಿರಿಕ್ತವಾಗಿ ನಿರ್ಮಿಸುವ ಕಟ್ಟಡದ ಭಾಗಗಳನ್ನು ತೆರವುಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಯಾವ ರೀತಿ ದಂಡ ವಿಧಿಸಿ, ಶಿಸ್ತುಕ್ರಮಕ್ಕೆ ಮುಂದಾಗಬೇಕು ಎಂಬ ಕುರಿತ ಮಾರ್ಗಸೂಚಿಯನ್ನು ಸುತ್ತೋಲೆಯಲ್ಲಿ ವಿವರವಾಗಿ ತಿಳಿಸಿದೆ.
ಬಿಲ್ಡಿಂಗ್ ಪ್ಲಾನ್ ಅಪ್ರೂವಲ್ ಗೆ ವಿರುದ್ಧವಾಗಿ ಕಟ್ಟಡ ಕಟ್ಟುವವರ ವಿರುದ್ಧ ಕ್ರಮ ಕೈಗೊಳ್ಳಲು, ಅನಧಿಕೃತ ಕಟ್ಟಡಗಳ ಕಾಮಗಾರಿ ತಡೆಯುವಲ್ಲಿ, ಕಟ್ಟಡ ನಿರ್ಮಾಣದ ಭಾಗವನ್ನು ತೆರವು ಮಾಡುವಲ್ಲಿ ಅಥವಾ ತಮ್ಮ ಹೊಣೆಗಾರಿಕೆ ನಿರ್ವಹಣೆಯಲ್ಲಿ ವಿಫಲರಾಗುವ ಅಧಿಕಾರಿಗಳ ವಿರುದ್ಧ ಕೆಎಂಸಿ ಕಾಯ್ದೆ 321 (ಬಿ) ರ ಅಡಿಯಲ್ಲಿ ಪ್ರಸ್ತುತ ಬಿಬಿಎಂಪಿ ಕಾಯ್ದೆ 2020ರ ಕಲಂ 252ರ ಅಡಿಯಲ್ಲಿ ಅಗತ್ಯ ದಂಡ ವಿಧಿಸಿ, ಅವರನ್ನು ಸಸ್ಪೆಂಡ್ ಮಾಡಿ ಅಂತಹ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಮ್ಮ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಇದಲ್ಲದೆ ಇನ್ನು ಮುಂದೆ ಕಂದಾಯ ವಿಭಾಗದ ಅಧಿಕಾರಿಗಳು ಅಕ್ರಮ ಕಟ್ಟಡ ನಿರ್ಮಾಣಗಳು ಕಂಡು ಬಂದರೆ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಅಭಿಯಂತರುಗಳಿಗೆ ತಿಳಿಸುವ ಹೊಸ ಜವಾಬ್ದಾರಿಯನ್ನು ಮುಖ್ಯ ಆಯುಕ್ತರ ನೂತನ ಸುತ್ತೋಲೆಯಲ್ಲಿ ನೀಡಲಾಗಿದೆ.
ಕಟ್ಟಡ ನಿರ್ಮಾಣ ಮತ್ತು ಕಂದಾಯ ನಿಗಧಿ ಒಂದಕ್ಕೊಂದು ಸಂಬಂಧ ಸಂಬಂಧಪಟ್ಟಿದೆ. ಕಟ್ಟಡ ಕಟ್ಟುವ ಪ್ರಕ್ರಿಯೆ ಮುಗಿದ ಬಳಿಕ ಆ ಕಟ್ಟಡಗಳಿಗೆ ಕಂದಾಯ ನಿಗಧಿ ಮಾಡುವ ಮತ್ತು ಟ್ಯಾಕ್ಸ್ ವಸೂಲಿ ಮಾಡುವ ಹೊಣೆಗಾರಿಕೆ ಕಂದಾಯ ಅಧಿಕಾರಿಗಳ ಮೇಲಿರುತ್ತದೆ. ಈ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು ಹಾಗೂ ಕಂದಾಯ ವಸೂಲಿಗಾರರು ಅವರ ಕಾರ್ಯವ್ಯಾಪ್ತಿಯಲ್ಲಿ ಕಂದಾಯ ಪರಿವೀಕ್ಷಣೆ ಜೊತೆ ಜೊತೆಗೆ ತಮ್ಮ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ನಿಗಾ ವಹಿಸುವ ಜವಾಬ್ದಾರಿಯನ್ನು ಹೊಸ ಸುತ್ತೋಲೆಯಲ್ಲಿ ನೀಡಲಾಗಿದೆ.
ಅನಧಿಕೃತ ಕಟ್ಟಡ ನಿರ್ಮಾಣಗಳನ್ನು 3 ವಿಧವಾಗಿ ವಿಂಗಡಿಸಿದ ಪಾಲಿಕೆ :
ಅನಧಿಕೃತ ಅಥವಾ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಟ್ಟಾರೆಯಾಗಿ ಬಿಬಿಎಂಪಿಯು ಮೂರು ರೀತಿಯ ವರ್ಗಗಳನ್ನು ವಿಂಗಡಿಸಿದೆ. 1) ನಕ್ಷೆ ಮಂಜೂರಾತಿ ಪಡೆದು ಕಟ್ಟಡ ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಾಣವಾಗುತ್ತಿರುವ ಕಟ್ಟಡಗಳು (ಸ್ವಾಧಿನಾನುಭವ ಪತ್ರ ಪಡೆಯುವ ತನಕ- OC) 2) ಒಸಿ ಪ್ರಮಾಣಪತ್ರ ಪಡೆದ ನಂತರ ನಕ್ಷೆ ಉಲ್ಲಂಘನೆ ಮಾಡಿ ಹೆಚ್ಚುವರಿಯಾಗಿ ಅಥವಾ ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣವಾಗುವ ಕಟ್ಟಡಗಳು 3) ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ನಿರ್ಮಾಣವಾಗುವ ಕಟ್ಟಡಗಳು ಎಂದು ವಿಂಗಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆಗಳನ್ನು ತಡೆಯಲು ವಿವಿಧ ಅಧಿಕಾರಿಗಳಿಗೆ ಸೂಕ್ತ ರೀತಿಯ ಕರ್ತವ್ಯ- ಜವಾಬ್ದಾರಿಯನ್ನು ನಿಗಧಿಪಡಿಸಲಾಗಿದೆ.
ಕಟ್ಟಡ ನಕ್ಷೆ ಮಂಜೂರಾತಿಯಾಗುತ್ತಿದ್ದಂತೆ ಅಧಿಕಾರಿಗಳಿಗೆ ಆನ್ ಲೈನ್ ಮಾಹಿತಿ ಲಭ್ಯ :
ಪಾಲಿಕೆಯಲ್ಲಿ ಮಂಜೂರಾಗುವ ಎಲ್ಲಾ ಕಟ್ಟಡಗಳ ಮಂಜೂರಾತಿಯನ್ನು ಪಾಲಿಕೆಯ EODB Software ನಲ್ಲಿ ಆನ್ ಲೈನ್ ಮೂಲಕ ನೀಡಲಾಗಿರುತ್ತದೆ. ಹೀಗೆ ಆನ್ ಲೈನ್ ನಲ್ಲಿ ನೀಡಲಾಗುವ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಗಳಲ್ಲಿನ ಮಂಜೂರಾತಿ ನೀಡಿದ ನಕ್ಷೆಯ ವಿವರಗಳು ಆಯಾ ಜೋನಲ್ ಗಳಲ್ಲಿ ಕಾರ್ಯನಿರ್ವಹಿಸುವ ಎಇಇ ಹಾಗೂ ವಲಯ ಕಚೇರಿಗಳಲ್ಲಿ ಕೆಲಸ ಮಾಡುವ ಸಹಾಯಕ ಕಂದಾಯ ಅಧಿಕಾರಿಗಳ ಕಾರ್ಯವ್ಯಾಪ್ತಿಯಲ್ಲಿ ನೇರವಾಗಿ ಆನ್ ಲೈನ್ ತಂತ್ರಾಂಶದ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆಯಾ ಎಇಇ, ಇಇ ಹಾಗೂ ಕಂದಾಯ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಬಿಲ್ಡಿಂಗ್ ಪ್ಲಾನ್ ಮಂಜೂರಾತಿ ಕುರಿತ ಮಾಹಿತಿ ಲಭಿಸುವಂತೆ ಸಾಫ್ಟ್ ವೇರ್ ನಲ್ಲಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಕಟ್ಟಡ ಪ್ಲಿಂತ್ ಲೈನ್ ಆನ್ ಲೈನ್ ನಲ್ಲೇ ಗುರುತು :
ಇನ್ನು ಮುಂದೆ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ನೀಡಿದ ಬಳಿಕ ನಗರ ಯೋಜನೆ ಕೇಂದ್ರ ಕಚೇರಿ ಹಾಗೂ ವಲಯ ಕಚೇರಿಯಲ್ಲಿ ನಕ್ಷೆ ಮಂಜೂರಾತಿ ನೀಡಿದ ದಿನದಿಂದ 30 ದಿನದ ಒಳಗಾಗಿ ಕಟ್ಟಡ ಮಾಲೀಕ ಅಥವಾ ಆತನ ಪ್ರತಿನಿಧಿಗಳ ಸಮ್ಮುಖದಲ್ಲಿ ಬಿಲ್ಡಿಂಗ್ ಪ್ಲಿಂತ್ ಲೈನ್ ಅನ್ನು (ಕಟ್ಟಡ ತಳಪಾಯದ ಗಡಿರೇಖೆ) ಅಧಿಕಾರಿಗಳೇ ಗುರುತು ಮಾಡಿಕೊಡಬೇಕು. ಆ ವಿವರವನ್ನು ಸಂಬಂಧಪಟ್ಟ ಕಟ್ಟಡ ನಕ್ಷೆ ಮಂಜೂರಾತಿ ಕಡತವಿರುವ ಅಂತರ್ಜಾಲ ತಂತ್ರಾಂಶದಲ್ಲಿ ನಿವೇಶನದ ಮಧ್ಯೆ ಹಾಗೂ ನಾಲ್ಕು ಮೂಲೆಗಳ ಭೌಗೋಳಿಕ ಸ್ಥಾನಿಕ ವ್ಯವಸ್ಥೆಯ ನಿರ್ದೇಶಾಂಕಗಳ (GPS Coordinate) ಮಾಹಿತಿಯನ್ನು ಹಾಗೂ ಫೊಟೊದೊಂದಿಗೆ ದಾಖಲಿಸಬೇಕು. ಆನಂತ್ರ ಕಾಲಕಾಲಕ್ಕೆ ಬಿಲ್ಡಿಂಗ್ ಪ್ಲಿಂತ್ ಲೈನ್ ನಿಗಧಿಪಡಿಸಿದಂತೆ ಕಟ್ಟಡ ಅನುಮೋದಿತ ನಕ್ಷೆಯ ರೀತಿಯಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ ಅದರ ಮಾಹಿತಿಯನ್ನು ಕಾಮಗಾರಿಯ ನಡೆಸುತ್ತಿರುವ ಸ್ಥಳದ ಫೊಟೋ ಹಾಗೂ ಜಿಪಿಎಸ್ ಮಾಹಿತಿಯನ್ನು ಕೇಂದ್ರ ಕಚೇರಿಯಿಂದ ನೀಡಿದ ಪ್ಲಾನ್ ಆಗಿದ್ರೆ 60 ದಿನಗಳ ಒಳಗಾಗಿ, ವಲಯ ಕಚೇರಿಯಿಂದ ನೀಡಿದ ಮಂಜೂರಾತಿ ಪ್ಲಾನ್ ಆಗಿದ್ರೆ 30 ದಿನದ ಒಳಗಾಗಿ ಸಾಫ್ಟ್ ವೇರ್ ನಲ್ಲಿ ಅಪ್ ಡೇಟ್ ಮಾಡಬೇಕು.
ಕಟ್ಟಡ ನಿರ್ಮಾಣದಲ್ಲಿ ಒಂದೊಮ್ಮೆ ಉಲ್ಲಂಘನೆ ಕಂಡು ಬಂದರೆ, ಕೇಂದ್ರ ಅಥವಾ ವಲಯ ಕಚೇರಿಯಲ್ಲಿ ಮಂಜೂರಾದ ಪ್ಲಾನ್ ಆಗಿದ್ರೆ, ಸಂಬಂಧಿಸಿದ ಸಹಾಯಕ ನಿರ್ದೇಶಕರು ಪರಿಶೀಲಿಸಿ, ಉಪನಿರ್ದೇಶಕರೊಂದಿಗೆ ದೃಢೀಕರಿಸಿಕೊಂಡು ಜಂಟಿ ನಿರ್ದೇಶಕರ ಗಮನಕ್ಕೆ ತರಬೇಕು. ಒಂದು ವೇಳೆ ಕಟ್ಟಡ ಫ್ಲಿಂತ್ ಕಾಮಗಾರಿ ಪರಿಶೀಲಿಸಿ, ಅದರ ಮಾಹಿತಿಯನ್ನು ಅಪಲೋಡ್ ಮಾಡುವ ಪ್ರಕ್ರಿಯೆ ನಡೆಸಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಕೆಎಂಸಿ ಕಾಯ್ದೆ ಕಲಂ 321(ಬಿ) ರ ಅಡಿಯಲ್ಲಿ ಪ್ರಸ್ತುತ ಬಿಬಿಎಂಪಿ ಕಾಯ್ದೆ-2020 ರ ಕಲಂ 252ರ ಅಡಿಯಲ್ಲಿ ಅಗತ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಮ್ಮ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ನಕ್ಷೆ ಮಂಜೂರಾತಿ ವಿರುದ್ಧ ಕಟ್ಟಡ ಕಟ್ಟಿದರೆ ಮುಲಾಜಿಲ್ಲದೆ ಕ್ರಮ :
“ಮಂಜೂರಾತಿ ನಕ್ಷೆಗೆ ವಿರುದ್ಧವಾಗಿ ಕಟ್ಟಡ ಕಟ್ಟುತ್ತಿದ್ದರೆ, ಸಂಬಂಧಿಸಿದ ಎಂಜಿನಿಯರ್ ಬಿಬಿಎಂಪಿ ಕಾಯ್ದೆ-2020ರ ಕಲಂ 248 (1)ರ ಅಡಿಯಲ್ಲಿ ಆ ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸಲು ಕ್ರಮವಹಿಸಬೇಕು. ಬಿಬಿಎಂಪಿ ಕಾಯ್ದೆ 2020ರ ಕಲಂ 248 (2) ಹಾಗೂ (3) ರ ಅಡಿಯಲ್ಲಿ ತಾತ್ಕಾಲಿಕ ಮತ್ತು ಸ್ಥಿರೀಕರಣ (PO/CO) ಆದೇಶವನ್ನು ಜಾರಿ ಮಾಡಿ, ಈ ಪ್ರಕ್ರಿಯೆಗಳನ್ನು 248 (1)ರ ಅಡಿಯಲ್ಲಿ ನೋಟಿಸ್ ನೀಡಿದ 60 ದಿನದ ಒಳಗಾಗಿ ಅಂತಿಮಗೊಳಿಸಬೇಕು.”
“ಬಿಬಿಎಂಪಿ ಕಾಯ್ದೆ-2020ರ ಕಲಂ 248 (3) ರ ಸ್ಥಿರೀಕರಣ ಆದೇಶದಲ್ಲಿ ಕಲಂ 356(1) ಅನ್ನು ಉಲ್ಲೇಖಿಸಿ, ಒಂದು ಪಕ್ಷ ಸ್ಥಿರೀಕರಣ ಆದೇಶ ಜಾರಿಯಾದ ದಿನಾಂಕದಿಂದ 30 ದಿನಗಳ ಒಳಗಾಗಿ (ಬೃಹತ್ ಕಟ್ಟಡಗಳಿಗೆ ಸಂದರ್ಭಾನುಸಾರ ಸಮಯ ನಿಗಧಿಪಡಿಸಿ) ಕಟ್ಟಡ ಮಾಲೀಕರು ಅಥವಾ ಸ್ವಾಧೀನದಾರರು ಸ್ಥಿರೀಕರಣ ಆದೇಶದಂತೆ ಅನಧಿಕೃತ ಕಟ್ಟಡ ಅಥವಾ ಅದರ ಭಾಗಗಳನ್ನು ತೆರವುಗೊಳಿಸಲು ಆ ಅಧಿಕಾರಿ ತಿಳಿಸಬೇಕು. ಒಂದು ಪಕ್ಷ ಆ ಕಟ್ಟಡ ಅಥವಾ ಅದರ ಭಾಗಗಳನ್ನು ನಿಗಧಿತ ಸಮಯದ ಒಳಗಾಗಿ ತೆರವುಗೊಳಿಸದಿದ್ದಲ್ಲಿ, ಬಿಬಿಎಂಪಿ ಕಾಯ್ದೆ-2020ರ ಕಲಂ 356 (2) ಅಡಿಯಲ್ಲಿ ಕ್ರಮ ಕೈಗೊಂಡು, ಆ ಕಟ್ಟಡವನ್ನು ತೆರವುಗೊಳಿಸಿ ಅದರ ಖರ್ಚನ್ನು ಆ ಬಿಲ್ಡಿಂಗ್ ಮಾಲೀಕರು ಅಥವಾ ಸ್ವಾಧೀನದಾರರಿಂದ ವಸೂಲಿಗಾಗಿ ಕ್ರಮ ಕೈಗೊಂಡು ವೆಚ್ಚದ ಹಣವನ್ನು ವಸೂಲಿ ಮಾಡಲಾಗುವುದು ಎಂದು ತಿಳಿಸತಕ್ಕದ್ದು.”
ತಾತ್ಕಾಲಿಕ ಮತ್ತು ಸ್ಥಿರೀಕರಣ ಆದೇಶಗಳಿಗೆ ಸಕ್ಷಮ ಮೇಲ್ಮನವಿ ಪ್ರಾಧಿಕಾರ/ನ್ಯಾಯಮಂಡಳಿ ಅಥವಾ ಇನ್ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ತಡೆಯಾಜ್ಞೆ ಪ್ರಕರಣಗಳನ್ನು ಹೊರತುಪಡಿಸಿ ಹೊರತುಪಡಿಸಿ, ಬೇರೆ ಸಂದರ್ಭದಲ್ಲಿ ಕೆಎಂಸಿ ಕಾಯ್ದೆ ಕಲಮ್ 321(3) ಹಾಗೂ ಪ್ರಸ್ತುತ ಬಿಬಿಎಂಪಿ ಕಾಯ್ದೆ 2020ರ ಕಲಮ್ 248 (3) ಅಡಿಯಲ್ಲಿನ ಸ್ಥಿರೀಕರಣ ಆದೇಶದಂತೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ವಾರ್ಡ್ ಎಂಜಿನಿಯರ್ ಗಳು ಕಟ್ಟಡ ಉಲ್ಲಂಘನೆ ಬಗ್ಗೆ ನಿಗಾ ವಹಿಸಬೇಕು :
ಬಿಬಿಎಂಪಿಯು 3 ವರ್ಗಗಳ ಕಟ್ಟಡ ನಕ್ಷೆ ಉಲ್ಲಂಘನೆಗಳನ್ನು ಗುರ್ತಿಸಿದ್ದು ಅವುಗಳ ಪೈಕಿ ಎರಡು ಮತ್ತು ಮೂರನೆ ವರ್ಗಗಳಾದ ಒಸಿ ಪ್ರಮಾಣಪತ್ರ ಪಡೆದ ನಂತರ ನಕ್ಷೆ ಉಲ್ಲಂಘನೆ ಮಾಡಿ ಹೆಚ್ಚುವರಿಯಾಗಿ ಅಥವಾ ಮಂಜೂರಾತಿ ನಕ್ಷೆಗೆ ವ್ಯತಿರಿಕ್ತವಾಗಿ ನಿರ್ಮಾಣವಾಗುವ ಕಟ್ಟಡಗಳು ಹಾಗೂ ನಕ್ಷೆ ಮಂಜೂರಾತಿ ಪಡೆಯದೇ ಅನಧಿಕೃತವಾಗಿ ನಿರ್ಮಾಣವಾಗುವ ಕಟ್ಟಡಗಳನ್ನು ನಿಯಂತ್ರಿಸಲು ಹಾಗೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ವಾರ್ಡ್ ಮಟ್ಟದ ಕಿರಿಯ ಎಂಜಿನಿಯರ್, ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಳಿಗೆ ಹೊಸ ಸುತ್ತೋಲೆಯಲ್ಲಿ ಹೊಣೆ ನೀಡಲಾಗಿದೆ.
ಒಟ್ಟಾರೆಯಾಗಿ ಹೈಕೋರ್ಟ್ ಚಾಟಿ ಬೀಸಿದ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೊನೆಗೂ ಎಚ್ಚತ್ತುಕೊಂಡಿದೆ. ಇನ್ನು ಮುಂದಾದರೂ ಪಾಲಿಕೆ ಮುಖ್ಯ ಆಯುಕ್ತರ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದಂತೆ ನಗರ ಯೋಜನೆ ಅಧಿಕಾರಿಗಳು, ಕಂದಾಯ ವಿಭಾಗದ ಅಧಿಕಾರಿಗಳು ಹಾಗೂ ವಾರ್ಡ್ ಎಂಜಿನಿಯರ್ ಗಳು ಚಾಚೂ ತಪ್ಪದಂತೆ ಕಾರ್ಯನಿರ್ವಹಿಸಿದರೂ ಅಂತ ಅಂದುಕೊಂಡರೂ, ಕಟ್ಟಡ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ನಗರದ ರಸ್ತೆ ರಸ್ತೆಯಲ್ಲಿ ಕಂಡು ಹಿಡಿಯುವುದು ದೊಡ್ಡದೇನಲ್ಲ. ವಾಸ್ತವದಲ್ಲಿ ಇದು ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೆ ಎಂಬುದೇ ಯಕ್ಷಪ್ರಶ್ನೆಯಾಗಿದೆ…!