ಬೆಂಗಳೂರು, ಜು.19 www.bengaluruwire.com : ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಸಹದ್ಯೋಗಿಗಳಿಗಾಗಿ ಏಕಾಂಗಿಯಾಗಿ ಹೋರಾಟ ನಡೆಸಿ ಬಿಎಂಟಿಸಿಯಿಂದ 10 ಬಸ್ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದ್ದ ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (HAL) ಸಂಸ್ಥೆಯ ನೌಕರರಾದ ಅಶೋಕ್ ಇದೀಗ ನೌಕರರ ಒತ್ತಾಸೆ ಮೇಲೆ ಅದೇ ಬಸ್ ಚಿಹ್ನೆ ಬಳಸಿ ಸಂಸ್ಥೆಯ ಕಾರ್ಮಿಕ ಸಂಘಟನೆಯ ಚುನಾವಣೆಯಲ್ಲಿ ನಿಂತು ಭರ್ಜರಿ ಗೆಲವು ಸಾಧಿಸಿದ್ದಾರೆ.
ಎಚ್ಎಎಲ್ ಕಾರ್ಮಿಕ ಸಂಘ (HAEA)ದಲ್ಲಿ 2022 ರಿಂದ 2025ರ ಇಸವಿ ವರೆಗಿನ ಅವಧಿಗಾಗಿ ಜು.16ರಂದು ನಡೆದ ಚುನಾವಣೆಯಲ್ಲಿ ಬಸ್ ಗುರ್ತಿನ ಚಿಹ್ನೆ ಬಳಸಿ ಎಚ್ ಇಎಇ ಸಂಘದ ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಹುದ್ದೆಗಾಗಿ ಒಟ್ಟಾರೆ ಚಲಾವಣೆಯಾದ 7,927 ಮತಗಳ ಪೈಕಿ ಅಶೋಕ್ ಒಟ್ಟು 4,410 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಅರವಿಂದ್ ವಿರುದ್ಧ 2,291 ಮತಗಳ ಅಂತರದಿಂದ ಭರ್ಜರಿ ಗೆಲವು ಸಾಧಿಸಿದ್ದಾರೆ.
ಎಚ್ಎಎಲ್ ನ ತನ್ನ ಸಹದ್ಯೋಗಿಗಳಿಗಾಗಿ ಬಿಎಂಟಿಸಿ ಜೊತೆ ಮಾತುಕತೆ ನಡೆಸಿ, ನೌಕರರು ಕಾರ್ಖಾನೆಗೆ ಬಂದು ಹೋಗುವ ಮಾರ್ಗದ ಬಗ್ಗೆ ಸುಧೀರ್ಘವಾಗಿ ಎರಡು ವರ್ಷ ಅಧ್ಯಯನ ಕೈಗೊಂಡು ತಮ್ಮ ಪ್ರಾಜೆಕ್ಟ್ ಪುಷ್ಪಕ ವಿಮಾನ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯಗತ ಮಾಡುವಲ್ಲಿ ಅಶೋಕ್ ಯಶಸ್ವಿಯಾಗಿದ್ದರು. ಇವರ ಒಂಟಿ ಹೋರಾಟದಿಂದ ಇಂದು ಎಚ್ಎಎಲ್ ನಲ್ಲಿ 10 ಬಿಎಂಟಿಸಿ ಬಸ್ ಓಡಾಡುತ್ತಿದ್ದು, ಅದರಲ್ಲಿ 400 ನೌಕರರು ಪ್ರಯಾಣಿಸುವಂತಾಗಿದೆ.
ನಾಡು, ನುಡಿ, ಸಾಮಾಜಿಕ ಕಾಳಜಿ ಹೊಂದಿರುವ ಬೆಂಗಳೂರು ವೈರ್, ಅಶೋಕ್ ಅವರ ಯಶೋಗಾಥೆಯ ಬಗ್ಗೆ ಜು.3ರಂದು HAL- BMTC #PushpakaVimana | ಪ್ರಾಜೆಕ್ಟ್ ಪುಷ್ಪಕ ವಿಮಾನ : ಒಂಟಿ ಹೋರಾಟದಿಂದ ಎಚ್ಎಎಲ್ ಗಾಗಿ 10 ಬಿಎಂಟಿಸಿ ಬಸ್ಸುಗಳ ಸೇವೆ ಒದಗಿಸಿದ ಸಾಮಾನ್ಯ ನೌಕರ !! ಎಂಬ ವಿಶೇಷ ವರದಿ ಸವಿಸ್ತಾರವಾಗಿ ಪ್ರಕಟಿಸಿತ್ತು. ಈ ಸುದ್ದಿ ಪ್ರಕಟಗೊಂಡ ಮೇಲೆ ಎಚ್ಎಎಲ್ ನ ಸಾಕಷ್ಟು ನೌಕರರು, ಸಾರ್ವಜನಿಕರು, ಸಂಘಸಂಸ್ಥೆಗಳಿಗೂ ಅಶೋಕ್ ಅವರ ಪ್ರಯತ್ನದ ಬಗ್ಗೆ ತಿಳಿಯುವಂತಾಯಿತು ಎಂದು ಸಂಸ್ಥೆಯ ನೌಕರರೇ ಸ್ವತಃ ಬೆಂಗಳೂರು ವೈರ್ ಬಳಿ ಈ ವಿಷಯ ತಿಳಿಸಿದ್ದರು.