ಗುಂಡ್ಲುಪೇಟೆ (ಚಾಮರಾಜನಗರ) ಜು.3 www.bengaluruwire.com : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದ ಬಳಿಯ ಲಕ್ಕೀಪುರ ಎಂಬ ಕಾಡಂಚಿನ ಗ್ರಾಮದಲ್ಲಿ ಇಬ್ಬರು ರೈತರ ಮೇಲೆ ಶನಿವಾರ ದಾಳಿ ನಡೆಸಿದ್ದ ಹೆಣ್ಣು ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಭಾನುವಾರ ರಾತ್ರಿ ಹಿಡಿದಿದ್ದಾರೆ.
ಪಶುವೈದ್ಯಾಧಿಕಾರಿಗಳಾದ ಮಿರ್ಜಾ ವಾಸಿಂ ಮತ್ತು ಮುಜೀಬ್ ರೆಹಮಾನ್ ರವರು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಧಿಂದ ಅಭಿಮನ್ಯು ಮತ್ತು ಶ್ರೀಕಂಠ ಎಂಬ ಸಾಕಾನೆಗಳನ್ನು ಬಳಸಿಕೊಂಡು ಭಾನುವಾರ ಬೆಳಗ್ಗೆ 6 ಗಂಟೆಯಿಂದ ಸತತ ಕಾರ್ಯಾಚರಣೆ ನಡೆಸಿ ಹುಲಿಗೆ ಅರವಳಿಕೆ ಚುಚ್ಚುಮದ್ದನ್ನು ನೀಡಿ ಭಾನುವಾರ ರಾತ್ರಿ 8.45ಕ್ಕೆ ಯಶಸ್ವಿಯಾಗಿ ಸೆರೆಹಿಡಿಯಲಾಯಿತು.
ಯಶಸ್ವಿಯಾಗಿ 24 ಗಂಟೆಗಳ ಒಳಗಾಗಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಅರವಳಿಕೆ ಚುಚ್ಚುಮದ್ದು ನೀಡಿ ಹಿಡಿದ ಈ ಹೆಣ್ಣು ಹುಲಿಯ ಕಾಲು, ಭುಜದ ಹಿಂಭಾಗ, ಹೊಟ್ಟೆಯ ಭಾಗ, ಬಾಲದ ಬುಡದಲ್ಲಿ ಗಂಭೀರವಾದ ಗಾಯಗಳು ಕಂಡುಬಂದಿದೆ. ಮುಂದಿನ ಬಲಗೈಗೆ ತೀವ್ರ ಪೆಟ್ಟಾಗಿದ್ದು, ಹುಲಿಯ ಮುಂದಿನ ಎರಡು ಹಲ್ಲುಗಳು ಸವಿದಿರುತ್ತದೆ. ಹುಲಿಯು ಸಾಕಷ್ಟು ನಿತ್ರಾಣಗೊಂಡಿರುವುದರಿಂದ ಮೈಸೂರಿನ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಸಾಗಿಸಲಾಗಿದೆ ಎಂದು ಬಂಡೀಪುರ ಹುಲಿ ಯೋಜನೆ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾದ ಡಾ.ರಮೇಶ್ ಕುಮಾರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಈ ಕಾರ್ಯಾಚರಣೆಗೂ ಮುನ್ನ ಸಾಕಾನೆಗಳ ಸಹಾಯದಿಂದ ಹುಲಿಯ ಛಾಯಾಚಿತ್ರವನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿನ ಟೈಗರ್ ಸೆಲ್ ಗೆ ಕಳುಹಿಸಿಕೊಡಲಾಗಿತ್ತು. ಆಗ ಟೈಗರ್ ಸೆಲ್ ದತ್ತಾಂಶದಲ್ಲಿನ ಮಾಹಿತಿಯಂತೆ, ಈ 10 ವರ್ಷದ ಹೆಣ್ಣು ಹುಲಿಯನ್ನು ಬಂಡಿಪುರ15_ಯು420 ಎಂದು ಗುರ್ತಿಸಲಾಗಿದೆ. ಈ ಹುಲಿಯು ಮೊದಲು 2014-15ನೇ ಸಾಲಿನಿಂದ 2020-2021ನೇ ಸಾಲಿನ ತನಕ ಹೆಡಿಯಾಲ ವಲಯದಲ್ಲಿ ಕಾಣಿಸಿಕೊಂಡಿತ್ತು ಎಂಬ ಮಾಹಿತಿಯನ್ನು ಸಂಗ್ರಹಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಶನಿವಾರ ಬೆಳಗ್ಗೆ ತಾಲೂಕಿನ ಕೋಪಾಲಪುರ ಗ್ರಾಮದ ಗವಿಯಪ್ಪ ಹಾಗೂ ರಾಜಶೇಖರ ಎಂಬುವರ ಮೇಲೆ ಹುಲಿ ದಾಳಿ ನಡೆಸಿ ತೀವ್ರ ಗಾಯಗೊಂಡಿದ್ದರು. ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಗವಿಯಪ್ಪ ತಮ್ಮ ಜಮೀನಿನಲ್ಲಿ ಹಸು ಮೇಯಿಸುತ್ತಿದ್ದಾಗ ಹುಲಿಯು ಏಕಾ ಏಕಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಹಸುವನ್ನು ರಕ್ಷಣೆ ಮಾಡಲು ಬಂದ ಗವಿಯಪ್ಪನವರ ಮೇಲೆ ಹುಲಿಯು ದಾಳಿ ನಡೆಸಿದ ಪರಿಣಾಮ ಅವರ ಕಣ್ಣು ಮತ್ತು ತಲೆಗೆ ತೀವ್ರ ಗಾಯವಾಗಿತ್ತು. ದೇಹದ ಮೇಲೆ ಪರಿಚಿದ ಗಾಯಗಳಾಗಿತ್ತು.
ತಮ್ಮ ಮೇಲೆ ಹುಲಿ ದಾಳಿ ನಡೆಸಿದ ಸಂದರ್ಭದಲ್ಲಿ ಗವಿಯಪ್ಪ ಸಹಾಯಕ್ಕಾಗಿ ಕೂಗಿಕೊಂಡಾಗ, ಸುತ್ತಮುತ್ತಲಿದ್ದ ರೈತರೆಲ್ಲಾ ಬಂದ ಕಾರಣ ಬೆದರಿದ ಹುಲಿ ಹತ್ತಿರದಲ್ಲಿದ್ದ ಶಿವಬಸಪ್ಪ ಎಂಬುವರ ಬಾಳೆ ತೋಟಕ್ಕೆ ನುಗ್ಗಿತ್ತು. ಈ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹುಲಿಗಾಗಿ ಹುಡುಕಾಟದಲ್ಲಿದ್ದಾಗ ಗೋಪಾಲಪುರದ ರಾಜಶೇಖರ್ ಎಂಬುವರು ಹುಲಿಯ ಛಾಯಾಚಿತ್ರ ತೆಗೆಯಲು ಹುಲಿಯ ಹತ್ತಿರ ಹೋದಾಗ, ಆ ಹೆಣ್ಣು ಹುಲಿಯು ಗಾಬರಿಗೊಂಡು ಇವರ ಮೇಲೆ ದಾಳಿ ನಡೆಸಿತ್ತು. ಇದರಿಂದ ರಾಜಶೇಖರ್ ತೀವ್ರವಾಗಿ ಗಾಯಗೊಂಡಿದ್ದು, ಗುಂಡ್ಲುಪೇಟೆಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.