ಬೆಂಗಳೂರು, ಜು.3 www.bengaluruwire.com : ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (HAL) ಸಂಸ್ಥೆಯ ಸಾಮಾನ್ಯ ಸಿಬ್ಬಂದಿ ತಮ್ಮ ಸಹದ್ಯೋಗಿಗಳು ಕಚೇರಿಗೆ ಬಂದು ಹೋಗಲು ಪರಿತಪಿಸುತ್ತಿರುವುದನ್ನು ಮನಗೊಂಡು ಏಕಾಂಗಿಯಾಗಿ ಹೋರಾಟ ಮಾಡಿ, ಬಿಎಂಟಿಸಿಯಿಂದ ವಿವಿಧ ರೂಟ್ ಗಳಲ್ಲಿ ಬಸ್ ಓಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಿಎಂಟಿಸಿಗೆ ಆದಾಯ ಮೂಲವೊಂದನ್ನು ಕಲ್ಪಿಸಿ, ಇನ್ನೊಂದೆಡೆ ಬಸ್ ಸೌಕರ್ಯವಿಲ್ಲದ ನೂರಾರು ಎಚ್ಎಎಲ್ ನೌಕರರಿಗೆ ಅನುಕೂಲವಾಗುವಂತಾಗಿದೆ.
ಇಂತಹ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದು ಹಳೇ ವಿಮಾನ ನಿಲ್ದಾಣದ ಬಳಿಯ ಹೆಲಿಕಾಪ್ಟರ್ ಡಿವಿಷನ್ ನಲ್ಲಿ ಕೆಲಸ ಮಾಡುತ್ತಿರುವ ಅಶೋಕ್. ಇಂತಹ ಸಾಹಸಕ್ಕೆ ಅಶೋಕ್ ಕೈಹಾಕಲು ಪ್ರಮುಖ ಕಾರಣವೆಂದರೆ, 8 ವರ್ಷಗಳ ಹಿಂದೆಯೇ ಎಚ್ಎಎಲ್ ತನ್ನ ಕಾರ್ಮಿಕರಿಗೆ ತಾವಿರುವ ಸ್ಥಳದಿಂದ ವಿವಿಧ ಕಚೇರಿಗಳಿಗೆ ಕರೆತರುತ್ತಿದ್ದ 50 ಬಸ್ ವ್ಯವಸ್ಥೆಯನ್ನು ರದ್ದುಪಡಿಸಿ ಕೇವಲ ಸಾರಿಗೆ ಭತ್ಯೆ ನೀಡಿ ಕೈತೊಳೆದುಕೊಂಡಿತ್ತು. ಇದರಿಂದ ನಗರದ ಎಚ್ಎಎಲ್ ನ 13 ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದ 2,500ಕ್ಕೂ ಹೆಚ್ಚು ಕಾರ್ಮಿಕರು ಬಸ್ ಬದಲು, ಟಿಟಿ, ದ್ವಿಚಕ್ರ ವಾಹನ ಮತ್ತಿತರ ವಾಹನಗಳಲ್ಲಿ ಬಂದು ಹೋಗುತ್ತಿದ್ದರು. ಕಾರ್ಮಿಕರ ಹಾಜರಾತಿ ಐದಾರು ನಿಮಿಷ ತಡವಾದರೂ ಆರ್ಥಿಕ ತೊಂದರೆಯಾಗುತ್ತಿತ್ತು. ಕೆಲವರು ತಮ್ಮ ಸ್ವಂತ ವಾಹನಗಳಲ್ಲಿ ಬರುವಾಗ ಅಪಘಾತಗಳಿಂದ ಕೈಕಾಲು ಕಳೆದು ಕೊಂಡರೆ, ಇನ್ನು ಕೆಲವರು ಅಪಘಾತದಿಂದ ಸಾವನ್ನಪ್ಪಿದ್ದರು. ಆದ್ದರಿಂದ ಸಂಸ್ಥೆಯ ನೌಕರರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಗೆ ಏನಾದರೂ ಮಾಡಬೇಕೆಂದು ಪಣತೊಟ್ಟರು ಅಶೋಕ್.
ನೆರೆಯ ಸಹೋದರ ಸಂಸ್ಥೆಗಳಾದ ಬಿಇಎಂಎಲ್ (BEML), ಬಿಇಎಲ್ (BEL), ಐಟಿಐ (ITI ) ಕಾರ್ಖಾನೆಯ ಉದ್ಯೋಗಿಗಳು ಇಂದಿಗೂ ತಮ್ಮ ಸಂಸ್ಥೆಯ ಸಾರಿಗೆ ವ್ಯವಸ್ಥೆಯ ಮೂಲಕ ಗೌರವಯುತವಾಗಿ ಕಾರ್ಖಾನೆಗೆ ಬರುತ್ತಿರುವುದನ್ನು ಹಲವು ವರ್ಷಗಳಿಂದ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಅಶೋಕ್ ಅವರು ಕಾರ್ಖಾನೆಗೆ ಹಾಗೂ ಕಾರ್ಮಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆ ಸಿದ್ಧಪಡಿಸತೊಡಗಿದರು.
ಪ್ರಾಜೆಕ್ಟ್ ಪುಷ್ಪಕ ವಿಮಾನ ಕಾರ್ಯಗತ ಆಗಿದ್ದು ಹೇಗೆ ?
ಆಗ ಹುಟ್ಟಿದ್ದೇ “ಪುಷ್ಪಕ ವಿಮಾನ” ಪ್ರಾಜೆಕ್ಟ್. “ಪುಷ್ಪಕ” ಅಂದರೆ ಈ ಹಿಂದೆ ಬಿಎಂಟಿಸಿ ಒದಗಿಸುತ್ತಿದ್ದ ಬಸ್ ಸೇವೆಯಾಗಿತ್ತು. ಇನ್ನು “ವಿಮಾನ” ಎಂಬುದು, ಎಚ್ಎಎಲ್ ಸಂಸ್ಥೆಯ ವಿಮಾನ ತಯಾರಿಕೆಯನ್ನು ಸಂಕೇತಿಸುತ್ತದೆ. ಈ ಹೆಸರಿನಲ್ಲಿ 2020ರ ಕೋವಿಡ್ ಪ್ರಾರಂಭವಾದ ಸಂದರ್ಭದಲ್ಲಿ ಅಶೋಕ್, ಸಂಸ್ಥೆಯ ಸಿಬ್ಬಂದಿ ಯಾವ ಕಡೆಗಳಿಂದ ಯಾವ ಸಾರಿಗೆ ಬಳಸಿ ಕಚೇರಿಗೆ ಬರುತ್ತಿದ್ದಾರೆ ಎಂಬುದರ ಬಗ್ಗೆ ಅಧ್ಯಯನ ನಡೆಸಿದರು. ಬಹಳಷ್ಟು ಮಂದಿ ಟೆಂಟೋ ಟ್ರಾವಲರ್ ಗಳಲ್ಲಿ ಬರುತ್ತಿದ್ದರು. ಇನ್ನು ಕೆಲವರು ಕಾರು, ದ್ವಿಚಕ್ರ ವಾಹನ ಸೇರಿದಂತೆ ಮೊದಲಾದ ವಾಹನಗಳ ಮೂಲಕ ಸಂಸ್ಥೆಗೆ ಬರುತ್ತಿರುವುದನ್ನು ಖಚಿತಪಡಿಸಿಕೊಂಡು, ಬಿಎಂಟಿಸಿ ಮೂಲಕ ವಿವಿಧ ರೂಟ್ ಗಳಲ್ಲಿ ಸಮೀಕ್ಷೆ ನಡೆಸಿ ಬಸ್ ವ್ಯವಸ್ಥೆ ಹೇಗೆ ಕಾರ್ಯಗತ ಮಾಡಬಹುದೆಂದು ಯೋಜನೆ ರೂಪಿಸಿಕೊಂಡರು.
ಅದಕ್ಕೆ ಸರಿಯಾಗಿ ಆರು ತಿಂಗಳ ಹಿಂದೆ ಒಂದೇ ಸಮನೆ ತೈಲಬೆಲೆ ಏರಿಕೆಯಾಗುತ್ತಿದ್ದ ಕಾರಣ ಟೆಂಪೋ ಟ್ರಾವಲರ್ ನವರು ಮಾಸಿಕ ಶುಲ್ಕವನ್ನು 2,500ರಿಂದ 3,000 ರೂ.ಗಳಿಗೆ ಏರಿಸಿದರು. ಇದರಿಂದ ಎಚ್ಎಎಲ್ ನೌಕರರ ಮೇಲೆ ಹೆಚ್ಚಿನ ಹೊರೆಯಾಯ್ತು. ಆಗ ಬಿಎಂಟಿಸಿ ಸಂಸ್ಥೆಯಲ್ಲಿ ಚಾಲ್ತಿಯಲ್ಲಿದ್ದ ನಿಗಧಿತ ಬಸ್ ಸೇವೆ (Premium Dedicated Bus Service)ಯ ಬಗ್ಗೆ ತಿಳಿದು, ಆ ಸೇವೆಯಲ್ಲಿ ಪ್ರತಿ ಎಚ್ಎಎಲ್ ಉದ್ಯೋಗಿಗೆ ಮಾಸಿಕ 2,500 ರೂ. ಬಸ್ ಪಾಸ್ ನಲ್ಲಿ, ಮನೆಯಿಂದ ಕಚೇರಿಗೆ ಹೋಗಿ ಬರಬಹುದಲ್ಲದೆ ವೋಲ್ವೋ ಬಸ್ ಬಿಟ್ಟು ಬೇರೆ ಬಿಎಂಟಿಸಿಯ ಎಲ್ಲಾ ಬಸ್ ಗಳಲ್ಲಿ ಓಡಾಡಬಹುದು.
10 ಲಕ್ಷ ರೂಪಾಯಿಗಳ ವೈಯಕ್ತಿಕ ಗುಂಪು ಅಪಘಾತ ವಿಮೆ ಸೌಲಭ್ಯವಿರುವ ಯೋಜನೆಯೂ ಲಭ್ಯವಾಗುತ್ತದೆ ಎಂದು ಈ ಉದ್ಯೋಗಿಗಳಿಗೆ ತಿಳಿಸಿದರು. ಟಿಟಿ ಬಳಸುತ್ತಿದ್ದ ಉದ್ಯೋಗಿಗಳಿಗೆ ಬಿಎಂಟಿಸಿ ಬಸ್ ಸೇವೆಯ ಪ್ರಯೋಜನಗಳನ್ನು ವಿವರಿಸಿದರು. ಇದರಿಂದ ಈ ವರ್ಷದ ಏಪ್ರಿಲ್ ಒಂದರಿಂದ ಬಿಎಂಟಿಸಿಯ ಮೊದಲ ರೂಟ್ ಬಸ್ಸು ಸೇವೆ ಆರಂಭವಾಗಿ, ಸದ್ಯ 10 ರೂಟ್ ಗಳಲ್ಲಿ 10 ಬಸ್ ಗಳು ಸಂಚರಿಸುತ್ತಿದೆ. ಇದರಲ್ಲಿ 400 ಎಚ್ಎಎಲ್ ಉದ್ಯೋಗಿಗಳು ಆರಾಮಾಗಿ ಕಚೇರಿಗೆ ಬಂದು ಹೋಗುತ್ತಿದ್ದಾರೆ. ಬಿಎಂಟಿಸಿ ಸಂಸ್ಥೆಗೆ ಇದರಿಂದ ಮಾಸಿಕ 10.52 ಲಕ್ಷ ರೂ. ಆದಾಯ ಹರಿದು ಬರುತ್ತಿದೆ.
ಪ್ರಾಜೆಕ್ಟ್ ಪುಷ್ಕಕ ವಿಮಾನ ರೂವಾರಿ ಏನಂತಾರೆ ?
“ಎಚ್ಎಎಲ್ ನಲ್ಲಿನ ನಮ್ಮ ಸಹದ್ಯೋಗಿಗಳು ಸಂಸ್ಥೆಯಲ್ಲಿ ಬಸ್ ಸಾರಿಗೆ ಸೌಲಭ್ಯ ನಿಲ್ಲಿಸಿದಾಗಿನಿಂದ ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಕರೋನಾ ಸಂಕಷ್ಠ ಕಾಲದಲ್ಲಿ ಕಚೇರಿಗೆ ಬಂದು ಹೋಗುವುದು ಒಂದು ಸವಾಲಾಗಿತ್ತು. ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಬೇಕು ಎಂದು ಮುನ್ನಡಿಯಿಟ್ಟಿದ್ದಕ್ಕೆ ಪುಷ್ಪಕ ವಿಮಾನ ಯೋಜನೆ ರೂಪುಗೊಂಡು ಯಶಸ್ವಿಯಾಗಿ ಅನುಷ್ಟಾನವಾಗಿದೆ. ತಮ್ಮ ಸ್ನೇಹಿತರೊಬ್ಬರ ಕಂಪನಿಯನ್ನು ಬಿಎಂಟಿಸಿ ಸೇವೆ ಪಡೆಯುವ ಸಲುವಾಗಿ ಸೇವಾದತರು ಎಂದು ಸಾರಿಗೆ ಸಂಸ್ಥೆಯಲ್ಲಿ ನೋಂದಾಯಿಸಿ ಎಚ್ಎಎಲ್ ಸಹದ್ಯೋಗಿಗಳಿಗೆ ಬಸ್ ಸೇವೆ ನೀಡಿದ್ದೇವೆ. ಇನ್ನು 2,500 ಉದ್ಯೋಗಿಗಳಿಗೆ ಬಿಎಂಟಿಸಿ ಬಸ್ ಅವಶ್ಯಕತೆಯಿದೆ. ಅದು ಯಶಸ್ವಿಯಾದರೆ ನನ್ನ ಶ್ರಮ ಸಾರ್ಥಕವಾದಂತೆ.”
– ಅಶೋಕ್.ಎಂ.ಎನ್, ಎಚ್ಎಎಲ್ ಹೆಲಿಕಾಪ್ಟರ್ ವಿಭಾಗ ನೌಕರ
ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಸ್ಸು ಹೊರಡುವುದಕ್ಕೆ ಎಂಟರಿಂದ ಹತ್ತು ತಿಂಗಳುಗಳ ಶ್ರಮದ ಸಮಯ ಹಿಡಿದಿತ್ತು. ಅಶೋಕ್ ಅವರ ಶ್ರಮ ಫಲನೀಡತೊಡಗಿತು. ಕಾರ್ಖಾನೆಯ ಅಧಿಕಾರಿಗಳು ಹಾಗೂ ಕಾರ್ಮಿಕರೆಲ್ಲರೂ ಅಶೋಕ್ ಅವರ ಕಾರ್ಮಿಕ ಕಾಳಜಿಯ ಕೆಲಸವನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಕ್ರಮೇಣವಾಗಿ ಕಾರ್ಖಾನೆಯ ಇತರ ಕಾರ್ಮಿಕರೂ ಕೂಡಾ ನಮ್ಮ ಮಾರ್ಗಕ್ಕೂ ಬಸ್ಸು ಬೇಕೆಂದು ಅಶೋಕ್ ಬಳಿ ಮನವಿ ಮಾಡತೊಡಗಿದ್ದಾರೆ.
“ಪ್ರಾಜೆಕ್ಟ್ ಪುಷ್ಪಕ ವಿಮಾನದ ಬಿಎಂಟಿಸಿ ಬಸ್ ಸೇವೆಯಿಂದ ಈ ಬಸ್ ನಲ್ಲಿ ಓಡಾಡುವವರೆಲ್ಲರಿಗೂ ಸಾಕಷ್ಟು ನೆಮ್ಮದಿ ಸಿಕ್ಕಿದೆ. ಈ ಟೆಂಪೋಟ್ರಾವಲರ್ ಗಾಡಿಯಲ್ಲಿ ಡೀಸೆಲ್ ರೇಟ್ ಹೆಚ್ಚುಕಮ್ಮಿಯಾದಂತೆ ತಿಂಗಳ ರೇಟ್ ಕೂಡ ಎಲ್ಲರಿಗೂ ಹಂಚಿಕೆಯಾಗಿ ಶುಲ್ಕ ಹೆಚ್ಚಾಗುತಿತ್ತು. ಆಗಾಗ ಟಿಟಿ ಕೆಟ್ಟು ಹೋದರೆ ಕಚೇರಿ- ಮನೆಗೆ ಬಂದು ಹೋಗೋದು ಕಷ್ಟ ಆಗುತ್ತಿತ್ತು. ಈಗ ಬಿಎಂಟಿಸಿ ಬಸ್ ನಲ್ಲಿ ನಿಗಧಿತ ಶುಲ್ಕ, ಸಮಯ ಅಲ್ಲದೆ ಎಲ್ಲಾ ಸಹದ್ಯೋಗಿಗಳು ಒಂದೇ ಬಸ್ ನಲ್ಲಿ ಹೋಗುತ್ತಿರುವುದರಿಂದ ನಮ್ಮ ನಡುವಿನ ಬಾಂಧವ್ಯ ಹೆಚ್ಚಾಗಿದೆ. ಸಂತೋಷದಿಂದ ಕೆಲಸಕ್ಕೆ ಹೋಗಿಬರುವಂತಾಗಿದೆ. ಅಶೋಕ್ ಅವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.”
– ಬಿ.ಎಸ್.ರವಿಶಂಕರ್, ಹಿರಿಯ ಪ್ರಧಾನ ಮೇಲ್ವಿಚಾರಕರು, ಎಚ್ಎಎಲ್ (ಎಆರ್ ಡಿಸಿ ವಿಭಾಗ)
ಸಮೂಹ ಸಾರಿಗೆ – ಇಂಧನ ಉಳಿತಾಯದ ಸಾಮಾಜಿಕ ಕಳಕಳಿ :
ಅಶೋಕ್ ಅವರ ಮೂಲಕ ಪರೋಕ್ಷವಾಗಿ ಬಿಎಂಟಿಸಿ ಸಂಸ್ಥೆಗೂ ಆರ್ಥಿಕ ಅನುಕೂಲ ಮಾಡಿದ ಆತ್ಮತೃಪ್ತಿಯನ್ನು ಎಚ್ಎಎಲ್ ನೌಕರರು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಸಮೂಹ ಸಾರಿಗೆ ವ್ಯವಸ್ಥೆಯಿಂದ ಇಡೀ ಪರಿಸರ ಮಾಲಿನ್ಯ ತಗ್ಗುವುದಲ್ಲದೆ ಇಂಧನ ಉಳಿತಾಯವೂ ಸಾಧ್ಯವಾಗುವ ಸಾಮಾಜಿಕ ಕಳಕಳಿ ಈ ವ್ಯವಸ್ಥೆಯಲ್ಲಿದೆ. ಒಟ್ಟಿನಲ್ಲಿ ಎಚ್ಎಎಲ್ ನಂಥ ಒಂದು ಪ್ರತಿಷ್ಠಿತ ಸಂಸ್ಥೆಯ ಉದ್ಯೋಗಿಗಳು ಸಂಸ್ಥೆಯ ಸುರಕ್ಷಿತ ಸಾರಿಗೆಯಿಲ್ಲದೆ ಪರಿತಪಿಸುತ್ತಿದ್ದ ಸಮಯದಲ್ಲಿ ಅಶೋಕ್ ಅವರು ತಮ್ಮ ಸ್ವಂತ ಶ್ರಮ, ಹಣ ವ್ಯಯಮಾಡಿ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಅಶೋಕ್ ಅವರು ಒಬ್ಬ ಸಾಮಾನ್ಯ ಕಾರ್ಮಿಕರಾಗಿ ಅಧಿಕಾರವಿಲ್ಲದೆಯೇ ಅಸಾಮಾನ್ಯವಾದುದನ್ನು ಸಾಧಿಸಿ ಯಶಸ್ವಿಯಾಗಿದ್ದಾರೆ.
ಖಾಸಗಿ- ಸರ್ಕಾರಿ ಸಂಸ್ಥೆಗಳೂ ಬಿಎಂಟಿಸಿ ಬಸ್ ಸೇವೆ ಬಳಸಿಕೊಳ್ಳಲಿ :
ಬೆಂಗಳೂರಿನಲ್ಲಿ 2014-15ನೇ ಇಸವಿಯಲ್ಲಿ ಪ್ರತಿದಿನ 51.3 ಲಕ್ಷ ಮಂದಿ ಪ್ರಯಾಣಿಕರು ಬಿಎಂಟಿಸಿ ಬಸ್ ನಲ್ಲಿ ಸಾಗುತ್ತಿದ್ದರು. ಯಾವಾಗ ಮೆಟ್ರೋ, ಸಬ್ ಅರ್ಬನ್ ರೈಲು ಸೇವೆ ವಿಸ್ತರಣೆಯಾಯಿತೋ ಆಗಿನಿಂದ ಬಿಎಂಟಿಸಿಯ ಪ್ರಯಾಣಿಕರ ಸಂಖ್ಯೆ ಕುಸಿದಿದೆ. 2019-20ನೇ ಸಾಲಿನಲ್ಲಿ ಬಿಎಂಟಿಸಿಯಲ್ಲಿ ಪ್ರತಿದಿನ 33 ಲಕ್ಷ ಜನರು ಪ್ರಯಾಣಿಸುತಿದ್ದರು. ಕರೋನಾ ಸೋಂಕಿನ ಮುಕ್ತಾಯದ ಬಳಿಕ ಈ ಸಂಖ್ಯೆಯೀಗ ಮತ್ತಷ್ಟು ಕುಸಿದಿದೆ. ಆದರೂ ಪ್ರತಿದಿನ ಸುಮಾರು 6,763 ವಿವಿಧ ರೀತಿಯ ಬಸ್ ಸೇವೆಯ ಮೂಲಕ 5,600 ಶೆಡ್ಯೂಲ್ ಗಳಲ್ಲಿ 1,800 ರಿಂದ 1,900 ಮಾರ್ಗಗಳ ಮೂಲಕ ಬಿಎಂಟಿಸಿಯು ಸರಾಸರಿ 50 ಸಾವಿರ ಟ್ರಿಪ್ಸ್ ನಲ್ಲಿ ಸಂಚರಿಸುತ್ತಿದೆ. ಇತ್ತೀಚೆಗೆ ಡೀಸೆಲ್ ಸಮಸ್ಯೆಯಿಂದ ಬಿಎಂಟಿಸಿಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.
ಇಂತಹ ಸಂದರ್ಭದಲ್ಲಿ ಹೆಚ್ಚೆಚ್ಚು ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು, ಮಾಸಿಕ ಶುಲ್ಕ ಕಟ್ಟುವ ಬಿಎಂಟಿಸಿಯ ಡಿಡಿಕೇಟೆಡ್ ಬಸ್ ಸರ್ವಿಸ್ ಅಥವಾ ಚಾರ್ಟಡ್ ಸರ್ವೀಸ್ ಬಳಸಿಕೊಳ್ಳುವ ಮೂಲಕ ಸಮೂಹ ಸಾರಿಗೆಗೆ ಉತ್ತೇಜನ ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಕೊಡುಗೆ ನೀಡಿದರೆ ಉತ್ತಮ. ಇದಲ್ಲದೆ, ಬಿಎಂಟಿಸಿಯ ಆದಾಯವೂ ಹೆಚ್ಚುತ್ತದೆ ಎಂಬ ಅಭಿಪ್ರಾಯ ಪ್ರಜ್ಞ ನಾಗರೀಕರಿಂದ ವ್ಯಕ್ತವಾಗಿದೆ.