ಬೆಂಗಳೂರು, ಜೂ.29 www.bengaluruwire.com : ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಸಬ್ ರಿಜಿಸ್ಟ್ರಾರ್ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳ ಕಚೇರಿ ಸಮಯವನ್ನು ಈ ಹಿಂದಿನಂತೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ಮುಂದುವರೆಸಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತರು (IGR) ಆದೇಶಿಸಿದ್ದಾರೆ. ಇದು ಬೆಂಗಳೂರು ವೈರ್ ವರದಿ ಪರಿಣಾಮವಾಗಿದೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಚೇರಿ ಅವಧಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ಇದ್ದರೂ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಈ ಅವಧಿ ಸಂಜೆ 7 ಗಂಟೆಯವರೆಗೆ ಇದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರ್ಕಾರದ ಈ ಆದೇಶದಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಬೆಂಗಳೂರು ವೈರ್ “2021-22ನೇ ಸಾಲಿನಲ್ಲಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಯಲ್ಲಿ 14,250 ಕೋಟಿ ರೂ. ದಾಖಲೆ ಮಟ್ಟದ ಆದಾಯ ಸಂಗ್ರಹ…!” ಎಂಬ ಹೆಸರಿನಲ್ಲಿ ಸುದ್ದಿ ಪ್ರಕಟಿಸಿತ್ತು.
ಈ ವರದಿಯಿಂದ ಎಚ್ಚೆತ್ತುಕೊಂಡಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಚೇರಿ ಅವಧಿಯನ್ನು ಈ ಹಿಂದಿನಂತೆಯೇ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ಮರು ನಿಗಧಿಪಡಿಸಿ ಐಜಿಆರ್ ಮಮತ ಅವರು ಆದೇಶಿದ್ದಾರೆ.
ಕರೋನಾ ಸೋಂಕು ಮೊದಲ ಮತ್ತು ಎರಡನೇ ಅಲೆಯಲ್ಲಿ ಮುದ್ರಾಂಕ ಇಲಾಖೆಯಲ್ಲಿ ಲಾಕ್ ಡೌನ್ ಮತ್ತಿತರ ಕಾರಣಕ್ಕೆ ಸಂಪನ್ಮೂಲ ಸಂಗ್ರಹ ಕಡಿಮೆಯಾಗಿತ್ತು. ಆಗ ಸರ್ಕಾರ ಸಂಪನ್ಮೂಲ ಕ್ರೋಢೀಕರಣ ಹೆಚ್ಚಾಗಲು ಮಾರ್ಗಸೂಚಿ ದರದಲ್ಲಿ ಶೇ.10ರ ಕಡಿತವನ್ನು ಘೋಷಿಸಿತ್ತು. ಜನವರಿ ಒಂದರಿಂದಲೇ ಪ್ರಸ್ತುತ ದರ ಕಡಿತ ತಾತ್ಕಾಲಿಕವಾಗಿ ಜಾರಿಗೆ ಬಂದು ಮಾರ್ಚ್ 31ರ ತನಕ ಚಾಲ್ತಿಯಲ್ಲಿತ್ತು. ಇದೇ ಸಂದರ್ಭದಲ್ಲಿ ಸೋಂಕು ಕಡಿಮೆಯಾದ ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೈನಂದಿನ ಕಚೇರಿ ಕೆಲಸದಲ್ಲಿ ಜನಜಂಗುಳಿ ಹೆಚ್ಚಾಗಿ ನಾಗರೀಕರ ಕೆಲಸ ಕಾರ್ಯಕ್ಕೆ ತೊಂದರೆ ಉಂಟಾಗಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸಬ್ ರಿಜಿಸ್ಟ್ರಾರ್ ಕಚೇರಿಯ ಅವಧಿಯನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತೆ, ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ಇದ್ದಿದ್ದನ್ನು ಸಂಜೆ 7 ಗಂಟೆಯವರೆಗೆ ವಿಸ್ತರಿಸಿ ಜನವರಿ ಮೊದಲ ವಾರದಲ್ಲಿ ಆದೇಶಿಸಿತ್ತು. ಆ ಸಂದರ್ಭದಲ್ಲಿಯೇ ಕಚೇರಿ ವೇಳೆ ಹೆಚ್ಚಾದ ಬಗ್ಗೆ ಇಲಾಖೆಯ ನೌಕರರು ಸರ್ಕಾರಕ್ಕೆ ಕಚೇರಿ ಅವಧಿ ಮೊದಲಿನಂತೆ ಇರುವ ಬಗ್ಗೆ ಮನವಿ ಮಾಡಿತ್ತು. ಆನಂತರ ಸರ್ಕಾರ ಮತ್ತೆ ಎರಡನೇ ಬಾರಿ ಮಾರ್ಗಸೂಚಿ ಶೇ.10 ರ ದರ ಕಡಿತ ರಿಯಾಯಿತಿ ಮತ್ತೆ ಮುಂದುವರೆಸಿತ್ತು. ಇದೇ ವೇಳೆ ಸಂಜೆ 7 ಗಂಟೆವರೆಗಿನ ಕಚೇರಿ ಅವಧಿಯನ್ನು ಮರುವಿಸ್ತರಿಸಿ ಸರ್ಕಾರ ಆದೇಶಿಸಿತ್ತು.
ಆಗ ಮತ್ತೆ ಇಲಾಖೆ ನೌಕರರಿಂದ ಕಚೇರಿ ಅವಧಿ ಈ ಹಿಂದಿನಂತೆ ನಿಗಧಿ ಮಾಡುವಂತೆ ಒತ್ತಡ ತಂದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತಂತೆ ಬೆಂಗಳೂರು ವೈರ್ ನಲ್ಲಿ ಸುದ್ದಿ ಪ್ರಕಟವಾದ ನಂತರ ಇಲಾಖೆಯಿಂದ ಕಚೇರಿ ಅವಧಿ ಮರುನಿಗಧಿ ಆದೇಶ ಹೊರಬಿದ್ದಿದೆ.