ನವದೆಹಲಿ, ಜೂ.15, www.bengaluruwire.com : ದೇಶದ ರಕ್ಷಣಾ ಪಡೆಯ ಸೈನಿಕರ ನೇಮಕಾತಿಯಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ‘ಅಗ್ನಿಪಥ’ ಯೋಜನೆ ಪ್ರಕಟವಾದ ಮರುದಿನವೇ ಕೇಂದ್ರ ದೂರಸಂಪರ್ಕ ಸಚಿವಾಲಯ (Department of Telecom- DoT) ಬುಧವಾರ ಎಲ್ಲಾ ದೂರಸಂಪರ್ಕ ಸೇವೆ ಒದಗಿಸುವ ಕಂಪನಿಗಳೊಂದಿಗೆ (Telecom Service Providers –TSps) ಮಹತ್ವದ ಸಭೆಯನ್ನು ನಡೆಸಿದೆ.
ದೂರಸಂಪರ್ಕ ಇಲಾಖೆ ಹಾಗೂ ಇತರ ಟೆಲಿಕಾಮ್ ಸೇವೆಯನ್ನು ಒದಗಿಸುತ್ತಿರುವ ಖಾಸಗಿ ಕಂಪನಿಗಳು ‘ಅಗ್ನಿಪಥ’ ಯೋಜನೆಯಲ್ಲಿ 4 ವರ್ಷಗಳ ಕಾಲ ರಕ್ಷಣಾ ಇಲಾಖೆಯ ಸಶಸ್ತ್ರಪಡೆಯಲ್ಲಿ ತರಬೇತಿ ಹಾಗೂ ಸೇವೆ ಪೂರ್ಣಗೊಳಿಸಿ ಹೊರಬರುವ ಕೌಶಲ್ಯಯುಕ್ತ, ಪ್ರತಿಭಾವಂತ, ಶಿಸ್ತುಬದ್ಧ ‘ಅಗ್ನಿವೀರ’ರನ್ನು ಹೇಗೆ ತಮ್ಮ ಕ್ಷೇತ್ರದಲ್ಲಿ ಬಳಸಿಕೊಳ್ಳಬಹುದೆಂಬ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿದೆ.
ಏರ್ ಟೆಲ್ (Airtel), ಬಿಎಸ್ ಎನ್ಎಲ್ (BSNL), ರಿಲಯನ್ಸ್ ಜಿಯೋ (Reliance Jio) ಹಾಗೂ ವೊಡಾಫೋನ್- ಐಡಿಯಾ (Vocafone- Idea) ಈ ನಾಲ್ಕು ಟೆಲಿಕಾಮ್ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಡಿಒಟಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಂತ್ರಜ್ಞಾನ ಸದಸ್ಯರ ನೇತೃತ್ವದಲ್ಲಿ ಸಂಚಾರ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಟೆಲಿಕಾಮ್ ಕ್ಷೇತ್ರದ ಯಾವ್ಯಾವ ರಂಗದಲ್ಲಿ ‘ಅಗ್ನಿವೀರ’ರನ್ನು ಬಳಸಿಕೊಳ್ಳಬಹುದು, ಉದ್ಯೋಗ ಒದಗಿಸಬಹುದು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಮುಖವಾಗಿ ಆಪ್ಟಿಕಲ್ ಫೈಬರ್ ನಿರ್ವಹಣೆ, ಹವಾನಿಯಂತ್ರಣ ಉಪಕರಣ, ಕಟ್ಟಕಡೆಯವರೆಗೂ ಸಂಪರ್ಕ ಒದಗಿಸುವಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವುದು, ಗೃಹ ಬಳಕೆಗೆ ಫೈಬರ್ ಒದಗಿಸುವುದು, ಗ್ರಾಹಕರೊಂದಿಗೆ ಒಡನಾಟ ಇಟ್ಟುಕೊಳ್ಳುವ ಕಡೆಗಳಲ್ಲಿ ‘ಅಗ್ನಿವೀರ’ರ ಸೇವೆಯನ್ನು ಬಳಕೆ ಮಾಡಿಕೊಳ್ಳುವ ಅಂಶಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.
ಸೇನೆಯಲ್ಲಿ ‘ಅಗ್ನಿಪಥ’ ಯೋಜನೆಯಲ್ಲಿ ತರಬೇತಿ ಪಡೆದು, ಶಿಸ್ತುಬದ್ಧ ಹಾಗೂ ಕುಶಲ ‘ಅಗ್ನಿವೀರ’ರಾಗಿ ಹೊರಬರುವವರು ಟೆಲಿಕಾಮ್ ಕ್ಷೇತ್ರ ಸೇರಿದಂತೆ ದೇಶಕ್ಕೆ ಆಸ್ತಿಯಾಗಲಿದ್ದಾರೆ. 4 ವರ್ಷಗಳ ಸೇವೆ ಮುಗಿಸಿ ಹೊರಬರುವ ಅಗ್ನಿವೀರರನ್ನು ಬಳಸಿಕೊಳ್ಳಲು ಟೆಲಿಕಾಮ್ ಸೇವಾ ಕಂಪನಿಗಳು ಒಪ್ಪಿಗೆ ಸೂಚಿಸಿದವು. ಅಲ್ಲದೇ ಇದೇ ವೇಳೆ ತಮ್ಮ ಕ್ಷೇತ್ರದಲ್ಲಿ ಟೆಲಿಕಾಮ್ ಕಂಪನಿಗಳಿಗೆ ಅಗತ್ಯವಾದ ಕೌಶಲ್ಯಗಳೇನು? ಎಂಬುದರ ಬಗ್ಗೆ ಶೀಘ್ರದಲ್ಲಿಯೇ ದೂರಸಂಪರ್ಕ ಇಲಾಖೆಗೆ ತಿಳಿಸುವುದಾಗಿ ಹೇಳಿದೆ. ಇಂತಹ ಕೌಶಲ್ಯಗಳನ್ನು ‘ಅಗ್ನಿಪಥ’ ಯೋಜನೆಯಡಿ ತರಬೇತಿ ನೀಡಿದರೆ ಅವರು ಸೇವೆ ಮುಗಿಸಿ ಹೊರಬರುವ ಸಂದರ್ಭದಲ್ಲಿ ಟೆಲಿಕಾಮ್ ಉದ್ಯಮದಲ್ಲಿ ಕೆಲಸ ಮಾಡಲು ಸನ್ನದ್ಧರಾದರೆ ಅಷ್ಟರ ಮಟ್ಟಿಗೆ ಅನುಕೂಲವಾಗಲಿದೆ ಎಂದು ಟಿಎಸ್ ಪಿಎಸ್ ಪ್ರತಿನಿಧಿಗಳು ಸಭೆಯಲ್ಲಿ ಅಭಿಪ್ರಾಯಪಟ್ಟರು.
ಮಂಗಳವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ಭದ್ರತಾ ಸಮಿತಿಯು ‘ಅಗ್ನಿಪಥ’ ಯೋಜನೆಗೆ ಅನುಮೋದನೆ ನೀಡಿತ್ತು. ಭಾರತದಲ್ಲಿರುವ ‘ದೇಶಭಕ್ತ ಹಾಗೂ ಸ್ಪೂರ್ತಿದಾಯಕ’ ಯುವ ಸಮೂಹಕ್ಕೆ ದೇಶಕ್ಕಾಗಿ ನಾಲ್ಕು ವರ್ಷ ಸೇವೆ ಸಲ್ಲಿಸುವ ಅವಕಾಶವನ್ನು ಈ ಹೊಸ ಯೋಜನೆಯು ಒದಗಿಸಲಿದೆ. ನಾಲ್ಕು ವರ್ಷಗಳ ಕರ್ತವ್ಯ ನಿರ್ವಹಿಸಿದ ಬಳಿಕ, ಸೇನೆಯ ಅಗತ್ಯತೆ ಮತ್ತು ಆಯಾ ಕಾಲಮಾನಕ್ಕೆ ರೂಪಿಸಿದ ನೀತಿ- ನಿಯಮಾವಳಿಗಳಿಗೆ ಪೂರಕವಾಗಿ ಸೇನೆಯ ಖಾಯಂ ನೇಮಕಾತಿಯಲ್ಲಿ ಭಾಗವಹಿಸುವ ಅವಕಾಶವನ್ನು ಈ ‘ಅಗ್ನಿವೀರ’ರಿಗೆ ನೀಡಲು ಯೋಜನೆಯಲ್ಲಿ ರೂಪಿಸಲಾಗಿದೆ.
ಈ ಹೊಸ ನೀತಿಯು 90 ದಿನದಲ್ಲಿ ಜಾರಿಗೆ ಬರಲಿದ್ದು, ಪ್ರಥಮ ವರ್ಷದಲ್ಲಿ 46 ಸಾವಿರ ಯುವಜನರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 2023ರ ಜುಲೈ ವೇಳೆಗೆ ‘ಅಗ್ನಿವೀರ’ರ ಮೊದಲ ತಂಡವು ಸೇರ್ಪಡೆಯಾಗಲಿದೆ. ಸೈನಿಕರ ನೇಮಕಾತಿಗೆ ಇದುವರೆಗೆ ಅನುಸರಿಸಿಕೊಂಡ ವಿಧಾನವು ಇನ್ನು ಮುಂದೆ ಇರದು.
‘ಅಗ್ನಿಪಥ’ ಯೋಜನೆಯಡಿ ಸೇನೆಗೆ ಸೇರಲು ಇರುವ ಅರ್ಹತೆಯೇನು? :
- ಹದಿನೇಳೂವರೆ ವರ್ಷದಿಂದ 21 ವರ್ಷದೊಳಗಿನವರು ಸೇನೆ ಸೇರಲು ಅರ್ಜಿ ಸಲ್ಲಿಸಬಹುದು
- ಸೇನಾ ನೇಮಕಾತಿಗೆ ಇದ್ದ ದೈಹಿಕ, ವೈದ್ಯಕೀಯ ಹಾಗೂ ವೃತ್ತಿಪರ ಮಾನದಂಡಗಳು ಅಗ್ನಿಪಥ ಯೋಜನೆಗೂ ಅನ್ವಯಿಸುತ್ತದೆ
ಸಂಬಳ ಮತ್ತು ಸೇವಾ ಸೌಲಭ್ಯಗಳ ವಿವರ ಈ ಕೆಳಕಂಡಂತಿದೆ :
- ಮೊದಲ ವರ್ಷದಲ್ಲಿ ಪ್ರತಿ ತಿಂಗಳು 30 ಸಾವಿರ ವೇತನ. ಇದರಲ್ಲಿ 21 ಸಾವಿರ ಅಗ್ನಿವೀರರಿಗೆ ದೊರೆಯಲಿದೆ. ಉಳಿದ 9 ಸಾವಿರ ಸಂಚಿತ ನಿಧಿಗೆ ಸೇರಲಿದೆ. ಇಷ್ಟೆ ಪ್ರಮಾಣದ ಮೊತ್ತವನ್ನು ಸರ್ಕಾರವು ಸಂಚಿತ ನಿಧಿಗೆ ನೀಡಲಿದೆ.
- ಸೇನೆಗೆ ಸೇರಿದ ಎರಡನೇ ವರ್ಷ 33 ಸಾವಿರ ಸಂಬಳ, ಮೂರನೇ ವರ್ಷ 36,500 ರೂ. ಹಾಗೂ ನಾಲ್ಕನೇ ವರ್ಷ 40 ಸಾವಿರ ವೇತನ ದೊರೆಯಲಿದೆ.
- ಈ ನಾಲ್ಕು ವರ್ಷಗಳ ಕರ್ತವ್ಯ ನಿರ್ವಹಿಸಿದ ನಂತರ 11.71 ಲಕ್ಷ ರೂ. ನಿಧಿಯು ಪ್ರತಿ ಅಗ್ನಿವೀರನಿಗೆ ದೊರೆಯಲಿದೆ. ಇದಕ್ಕೆ ಯಾವ ರೀತಿಯಲಿ ಆದಾಯ ತೆರಿಗೆ ಕಡಿತವಿರುವುದಿಲ್ಲ.
- ಅಗ್ನಿಪಥ ಯೋಜನೆಯಲ್ಲಿ ನಾಲ್ಕು ವರ್ಷ ಸೇನೆಗೆ ಸೇರುವ ಸೈನಿಕರಿಗೆ ಗ್ರಾಚ್ಯುಟಿ ಮತ್ತು ಪಿಂಚಣಿ ಸೌಲಭ್ಯಗಳು ಇರುವುದಿಲ್ಲ.
ಸೇನೆಯಲ್ಲಿ ಇರುವ ತನಕ ಆ ಯೋಧನಿಗೆ 48 ಲಕ್ಷ ರೂ. ವಿಮೆ ಒದಗಿಸಲಾಗುತ್ತದೆ