ಬೆಂಗಳೂರು, ಜೂ.14 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದಲ್ಲಿನ ಭೂಸ್ವಾಧೀನ ವಿಭಾಗದಲ್ಲಿ ಸರ್ವೆಯರ್ ಗಳು ನಡೆಸುತ್ತಿರುವ ಅಕ್ರಮಗಳ ವಿವರವನ್ನು ಜೂ.8ರಂದು ಪ್ರಸಾರ ಮಾಡಿದ ವಿಶೇಷ ವರದಿಯಲ್ಲಿ ಬೆಂಗಳೂರು ವೈರ್ ವಿಸ್ತ್ರತವಾಗಿ ತಿಳಿಸಿತ್ತು. ಈ ಭಾಗದಲ್ಲಿ ಎಷ್ಟು ಸರ್ವೆಯರ್ ಗಳ ಹುದ್ದೆ ಬಿಡಿಎನಲ್ಲಿ ಅಸಲಿಗೆ ಮಂಜೂರಾತಿಯಾಗಿದೆ. ಎಷ್ಟು ಮಂದಿ? ಎಷ್ಟು ವರ್ಷದಿಂದ ಸೀಟಿಗೆ ಫೆವಿಕಾಲ್ ಹಾಕ್ಕೊಂಡು ಕೂತಿದ್ದಾರೆ? ಬಿಡಿಎ ನಲ್ಲಿನ ಸರ್ವೆ ಸೂಪರ್ ವೈಸರ್ ಹುದ್ದೆ ಅಧಿಕೃತವಾ? ಈ ಹುದ್ದೆಯಲ್ಲಿರುವವರು ಎಷ್ಟು ಮಂದಿ? ಅವರೆಲ್ಲಾ ಹೇಗೆ ಸಂಬಳ ಪಡೆಯುತ್ತಿದ್ದಾರೆ? ಇದೆಲ್ಲದರ ಬಗ್ಗೆ ಇಲಾಖೆಯ ಮುಖ್ಯಸ್ಥರು ಹೇಳೋದೇನು? ಇಲ್ಲಿದೆ ಸ್ಪೆಷಲ್ ರಿಪೋರ್ಟ್.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ವಾಸ್ತವವಾಗಿ 10 ಸರ್ವೇಯರ್ ಗಳ ಹುದ್ದೆ ಮಂಜೂರಾತಿಯಾಗಿದ್ದರೂ 2017 ಇಸವಿಯಿಂದ 2021ರ ಇಸವಿಯವರೆಗೆ 17 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಸರ್ವೆ ಸೂಪರ್ ವೈಸರ್ ಗಳ ಹುದ್ದೆಗೆ ಅನುಮೋದಿತ ವೃಂದ ಮತ್ತು ನೇಮಕಾತಿ ನಿಯಮವಳಿ (C & R Rule) ಅನ್ವಯ ಮಂಜೂರಾತಿಯೇ ಇಲ್ಲದಿದ್ದರೂ ನಾಲ್ವರು ಸರ್ವೇ ಸೂಪರ್ ವೈಸರ್ ಗಳು ಹಲವು ವರ್ಷಗಳಿಂದಲೇ ಸರ್ವೆಯರ್ ಹುದ್ದೆಯ ಕೆಲಸಗಳನ್ನು ಕಾರ್ಯನಿರ್ವಹಿಸುತ್ತಿದ್ದಾರೆ. ಆ ಪೈಕಿ ಇಬ್ಬರು ಸರ್ವೆ ಸೂಪರ್ ವೈಸರ್ ಗಳು 2006 ಹಾಗೂ 2010ರಿಂದ ಬಿಡಿಎನಲ್ಲಿ ಕೆಲಸ ಮಾಡುತ್ತಿದ್ದಾರೆ. 17 ಮಂದಿ ಸರ್ವೆಯರ್ ಗಳಲ್ಲಿ 5 ಹುದ್ದೆಯಲ್ಲಿರುವವರು ತಾವು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಿಂತ ಹಿರಿಯ ದರ್ಜೆಯಲ್ಲಿರುವವರಾಗಿದ್ದಾರೆ. ಹೀಗಾಗಿ ಅವರಿಗೆ ಮಂಜೂರಾತಿ ಹುದ್ದೆಗೆ ನಿಗಧಿಪಡಿಸಿದ ವೇತನಕ್ಕಿಂತ ಹೆಚ್ಚಿನ ಸಂಬಳ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಬಿಡಿಎ ಉನ್ನತ ಮೂಲಗಳು ತಿಳಿಸಿವೆ.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಭೂಮಾಪಕರು ಮತ್ತು ಸರ್ವೆ ಸೂಪರ್ ವೈಸರ್ ಗಳ ಹೆಸರು, ಪ್ರಾಧಿಕಾರದಲ್ಲಿ ಯಾವಾಗಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ನೀವೇ ನೋಡಿ :
ಭೂಮಾಪನಾ ಇಲಾಖೆಯಿಂದ ಮೊದಲ ದರ್ಜೆಯ 10 ಸರ್ವೆಯರ್ ಗಳನ್ನು ನಿಯೋಜನೆ ಮೇಲೆ ಬಿಡಿಎ ಬಳಸಿಕೊಳ್ಳುವಂತೆ 12 ಮಾರ್ಚ್ 2009ರಂದು ಕರ್ನಾಟಕ ರಾಜ್ಯಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಿದ್ದರೂ 17 ಸರ್ವೆಯರ್ ಗಳು ಬಿಡಿಎನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತ ದಾಖಲೆ ಬೆಂಗಳೂರು ವೈರ್ ಗೆ ಲಭ್ಯವಾಗಿದೆ.
ಮಂಜೂರಾತಿ ಹುದ್ದೆ ಇಲ್ಲದಿದ್ದರೂ ಪ್ರತಿ ತಿಂಗಳು ಬಿಡಿಎನಿಂದ 5 ಸರ್ವೆಯರ್ ಗಳು ಹಾಗೂ 4 ಸೂಪರೈವೈಸರ್ ಗಳಿಗೆ ವೇತನ ತಪ್ಪದೇ ಪಾವತಿಯಾಗುತ್ತಿದೆ. ಈ ಬಗ್ಗೆ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಆಗಲಿ, ಆಯುಕ್ತರಾದ ರಾಜೇಶ್ ಗೌಡ ಅವರಾಗಲಿ ಕ್ರಮ ಕೈಗೊಳ್ಳಲು ಮುಂದಾಗಿಲ್ಲ.
ಭೂಮಾಪನಾ ಇಲಾಖೆಯಿಂದ ಬಿಡಿಎಗೆ ನಿಯೋಜನೆಗೊಂಡ ಕೆಲವು ಸರ್ವೆಯರ್ ಗಳು ಮತ್ತು ಸರ್ವೆ ಸೂಪರ್ ವೈಸರ್ ಗಳು ಎಷ್ಟು ಪ್ರಭಾವಿಗಳೆಂದರೆ ಭೂಮಾಪನಾ ಇಲಾಖೆ ಆಯುಕ್ತರು ತಮ್ಮ ಇಲಾಖೆಗೆ ವಾಪಸ್ ಕರೆಸಿಕೊಳ್ಳಲು ಸಾಕಷ್ಟು ಆದೇಶಗಳನ್ನು ಹೊರಡಿಸಿದ್ದಾಗ್ಯೂ, ನ್ಯಾಯಾಲಯದ ಮೊರೆ ಹೋಗಿ, ಜನಪ್ರತಿನಿಧಿಗಳಿಂದ ಒತ್ತಡ ತಂದು ಅದೇ ಜಾಗದಲ್ಲಿ ಬೀಡು ಬಿಟ್ಟಿದ್ದಾರೆ. ಈ ಕಾರಣಕ್ಕೆ ಭೂಸ್ವಾಧೀನ ವಿಭಾಗದಲ್ಲಿನ ಅಕ್ರಮಗಳನ್ನು ಮಟ್ಟ ಹಾಕಲು ಈತನಕ ಸಾಧ್ಯವಾಗಿಲ್ಲ. ಇಲ್ಲಿ ನಡೆಯುವ ಅಕ್ರಮ- ಅನಾಚಾರಣಗಳು ಬುಡಸಮೇತ ಆಚೆ ಬಂದಲ್ಲಿ ಬಹುಶಃ ಬೆಂಗಳೂರಿನಲ್ಲಿ ನಡೆದ ಅತಿದೊಡ್ಡ ಭ್ರಷ್ಟಾಚಾರಗಳು ಈ ವಿಭಾಗದ ಮುಂದೆ ಏನೇನು ಅಲ್ಲ ಎಂದು ಹೇಳುತ್ತಾರೆ ಬಿಡಿಎ ಅಧಿಕಾರಿಯೊಬ್ಬರು.
ಸಾಕಷ್ಟು ಬಾರಿ ಆದೇಶಿಸಿದರೂ ಮಾತೃ ಇಲಾಖೆಗೆ ವಾಪಸ್ ಬರಲ್ಲ :
“ಭೂಮಾಪನಾ ಇಲಾಖೆಯಿಂದ ಬಿಡಿಎಗೆ ನಿಯೋಜನೆ ಮೇಲೆ ವರ್ಗಾವಣೆಯಾದ ಸರ್ವೆಯರ್ ಮತ್ತು ಸರ್ವೆ ಸೂಪರ್ ವೈಸರ್ ಗಳನ್ನು ಮತ್ತೆ ಮಾತೃ ಇಲಾಖೆಗೆ ಕರೆಸಿಕೊಳ್ಳಲು ಸಾಕಷ್ಟು ಬಾರಿ ಆದೇಶ ಮಾಡಲಾಗಿದೆ. ಆದರೆ ಬಿಡಿಎ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿ ವಾಪಸ್ ನಮ್ಮ ಇಲಾಖೆಗೆ ಕಳುಹಿಸಿಕೊಡುತ್ತಿಲ್ಲ. ಇನ್ನೊಂದೆಡೆ ಕರ್ತವ್ಯಲೋಪ ಎಸಗಿದ ಸರ್ವೆಯರ್ ಗಳನ್ನು ಅಮಾನತ್ತುಗೊಳಿಸಿ ಅವರ ವಿರುದ್ಧ ಇಲಾಖೆ ವಿಚಾರಣೆ ನಡೆಸಿ, ಬೇರೆಡೆ ವರ್ಗಾವಣೆ ಮಾಡಿದರೂ ಪುನಃ ನ್ಯಾಯಾಲಯದ ಆದೇಶ ತಂದು ಬಿಡಿಎ ಭೂಸ್ವಾಧೀನ ವಿಭಾಗದಲ್ಲೇ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಡಿಎನಲ್ಲಿ ಮಂಜೂರಾತಿಗಿಂತಲೂ ಹೆಚ್ಚಿಗೆ ಸರ್ವೆಯರ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲ ಸಾಕಷ್ಟು ಪ್ರಭಾವಿಗಳು. ಹಾಗಾಗಿ ಏನೂ ಮಾಡದ ಸ್ಥಿತಿಯಲ್ಲಿದ್ದೇವೆ.”
– ಮೊನಿಷ್ ಮೌದ್ಗಿಲ್, ಆಯುಕ್ತರು, ಭೂ ಮಾಪನಾ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
ದೀರ್ಘಾವಧಿಯಿಂದ ಸೇವೆ ಸಲ್ಲಿಸುತ್ತಿರುವ ಸರ್ವೆಯರ್ ಗಳ ಟ್ರಾನ್ಸ್ ಫರ್ ಆಗ್ತಾರಾ?
ಮಂಜೂರಾತಿ ಹುದ್ದೆಗಳಿಗಿಂತ ಹೆಚ್ಚು ಜನರು ಸರ್ವೆಯರ್ ಗಳಾಗಿ ಕಾರ್ಯನಿರ್ವಸುತ್ತಿರುವ ಬಗ್ಗೆ ಹಾಗೂ ಸಿಎಂಡ್ ಆರ್ ರೂಲ್ಸ್ ನಲ್ಲಿ ಮಂಜೂರಾತಿಯಿಲ್ಲದೆ ಸರ್ವೆ ಸೂಪರ್ ವೈಸರ್ ಗಳು ಬಿಡಿಎನಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಬಿಡಿಎ ಆಯುಕ್ತ ರಾಜೇಶ್ ಗೌಡ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದು ಹೀಗೆ :
“ಬೆಂಗಳೂರು ದಿನೇ ದಿನೇ ಬೆಳವಣಿಗೆ ಹೊಂದುತ್ತಿದೆ. ಬಿಡಿಎನಲ್ಲಿ ಈಗಿರುವ ಸರ್ವೆಯರ್ ಗಳು ಯಾತಕ್ಕೂ ಸಾಲದಾಗಿದೆ. ಇನ್ನು ಹೆಚ್ಚಿನ ಸರ್ವೆಯರ್ ಗಳನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸುತ್ತೇನೆ. ಹಲವು ವರ್ಷಗಳಿಂದ ಕಾನೂನು ಉಲ್ಲಂಘಿಸಿ ಕೆಲಸ ನಿರ್ವಹಿಸುತ್ತಿರುವ ಭೂಮಾಪಕರನ್ನು ಬದಲಾಯಿಸಿ ಬೇರೆಯವರನ್ನು ಇಲ್ಲಿಗೆ ಕರೆಯಿಸಿಕೊಳ್ಳುತ್ತೇವೆ. ಹಾಗೂ ಭೂಸ್ವಾಧೀನ ವಿಭಾಗದಲ್ಲಿ ಮಂಜೂರಾತಿಯಿಲ್ಲದೆ ಸರ್ವೆ ಸೂಪರ್ ವೈಸರ್ ಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಭೂಸ್ವಾಧೀನ ವಿಭಾಗದ ಉಪ ಆಯುಕ್ತರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.”
– ರಾಜೇಶ್ ಗೌಡ, ಬಿಡಿಎ ಆಯುಕ್ತರು
ಬಿಡಿಎನಲ್ಲಿ ಸಾಮಾನ್ಯ ಜನರು, ಮುಗ್ಧ ರೈತರು- ಸ್ವತ್ತಿನ ಮಾಲೀಕರು ಸರ್ವೆ ಕೆಲಸಗಳಿಗೆಂದು ಸರ್ವೆಯರ್ ಗಳ ಬಳಿ ಸಿಲುಕಿಕೊಂಡ್ರೆ ಆ ವಿಷ ವರ್ತುಲದಿಂದ ಆಚೆ ಬರೋದು ಅಷ್ಟು ಸುಲಭವಲ್ಲ. ಒಂದೋ ಸರ್ವೆಯರ್- ಬಿಡಿಎ ಎಂಜಿನಿಯರ್ ಹಾಗೂ ಬ್ರೋಕರ್ ಗಳ ಹೇಳಿದಷ್ಟು ಲಂಚ ಕೊಡಬೇಕು. ಇಲ್ಲವಾದ್ರೆ ವರ್ಷಗಟ್ಟಲೆ ಬಿಡಿಎಗೆ ತಮ್ಮ ಸ್ವತ್ತು ಪಡೆಯಲು, ಭೂಸ್ವಾಧೀನಗೊಂಡ ಭೂಮಿಗೆ ಪರಿಹಾರ ಪಡೆಯಲು ಚಪ್ಪಲಿ ಸವೆಸೋದು ತಪ್ಪಲ್ಲ. ಹಲವು ವರ್ಷಗಳಿಂದ ಬೇರು ಬಿಟ್ಟಿರುವ ಸರ್ವೆಯರ್ ಮತ್ತು ಸರ್ವೆ ಸೂಪರ್ ವೈಸರ್ ಗಳನ್ನು ಸರ್ಕಾರ ಈ ಕೂಡಲೇ ವರ್ಗಾವಣೆ ಮಾಡಬೇಕು. ಆ ಮೂಲಕ ಭೂಸ್ವಾಧೀನ ವಿಭಾಗದಲ್ಲಿನ ಭ್ರಷ್ಟಾಚಾರವೆಂಬ ಕೊಳಕನ್ನು ತೊಡೆದು ಹಾಕಿ ಪಾರದರ್ಶಕ ಆಡಳಿತ, ಉತ್ತರದಾಯಿತ್ವಯಾಗುವ ರೀತಿ ಬದಲಾಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾಲವೇ ಉತ್ತರಿಸಬೇಕಿದೆ.