ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ), ಜು.13, www.bengaluruwire.com : ಗಜಗಾಂಭೀರ್ಯ, ಏಷ್ಯಾ ತಳಿಯ ಆನೆಗಳಲ್ಲೇ ಅತಿ ಉದ್ದದ ದಂತಗಳನ್ನು ಹೊಂದಿದ್ದ, ಸುಂದರ ನಡೆಗೆ ಹೆಸರುವಾಸಿಯಾಗಿದ್ದ ಸೌಮ್ಯ ಸ್ವಭಾವದ ವನ್ಯಪ್ರೇಮಿಗಳು ಹಾಗೂ ಪ್ರವಾಸಿಗರ ನೆಚ್ಚಿನ ಭೋಗೇಶ್ವರ ಆನೆ ಈಗ ನೆನಪು ಮಾತ್ರ. ಈ ಆನೆಯ ದಂತಗಳನ್ನು ಈಗಾಗಲೇ ಕತ್ತರಿಸಿ ಸಂರಕ್ಷಿಸಿಡಲಾಗಿದ್ದು, ಬಂಡೀಪುರ ಪ್ರಕೃತಿ ಶಿಕ್ಷಣ ಕೇಂದ್ರದಲ್ಲಿ ಪ್ರದರ್ಶನಕ್ಕಿಡಲು ಅರಣ್ಯ ಇಲಾಖೆ ಉದ್ದೇಶಿಸಿದೆ.
ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿರುವ ಕಬಿನಿ ಹಿನ್ನೀರಿನಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಭೋಗೇಶ್ವರ ಆನೆಗೆ ‘ಮಿಸ್ಟರ್ ಕಬಿನಿ’ ಎಂಬ ಮತ್ತೊಂದು ಹೆಸರಿತ್ತು. 60 ವರ್ಷ ವಯಸ್ಸಿನ ಏಷ್ಯಾದ ತಳಿಯ ಆನೆಗಳ ಪೈಕಿ ಅತಿದೊಡ್ಡ ಆನೆದಂತ ಹೊಂದಿದ್ದ ಅಪರೂಪದ ಸಲಗವಾಗಿತ್ತು. ಈ ಆನೆಯು ನಡೆದು ಬರುತ್ತಿದ್ದರೆ ಅದರ ಎರಡೂ ದಂತಗಳು ನೆಲಕ್ಕೆ ತಾಕುತ್ತಿತ್ತು. ಹಾಗಾಗಿ ಈ ಆನೆಯು ನೆಲದ ಮೇಲೆ ಬೆಳೆಯುತ್ತಿದ್ದ ಹುಲ್ಲುಗಳನ್ನು ಸರಾಗವಾಗಿ ಸೇವಿಸಲು ಆಗುತ್ತಿರಲಿಲ್ಲ. ಈ ಕಾರಣಕ್ಕೆ ಭೋಗೇಶ್ವರ ಆನೆಯು ಹೆಚ್ಚು ಓಡಾಡುತ್ತಿರಲಿಲ್ಲ.
ಮೂರು ಸಾವಿ ಕೆಜಿ ತೂಕ, 23 ಅಡಿ ಉದ್ದದ ಆನೆ :
ಸುಮಾರು ಒಂಭತ್ತೂವರೆ ಎತ್ತರವಿದ್ದ ಈ ಸುಂದರ ಗಂಡಾನೆಯ ದಂತವು ಒಂದು 8.43 ಅಡಿ ಹಾಗೂ ಮತ್ತೊಂದು ದಂತವು 7.68 ಅಡಿ ಉದ್ದವಿತ್ತು. ಆ ದಂತಗಳ ಸರಾಸರಿ ಸುತ್ತಳತೆ .38 ಮೀಟರ್ (1.24 ಅಡಿ) ಈ ಸಲಗವು ಸುಮಾರು 3 ಸಾವಿರ ಕೆಜಿ ತೂಕ ಹೊಂದಿತ್ತು. 22.89 ಅಡಿ ಉದ್ದವಿದ್ದ ಭೋಗೇಶ್ವರ ಆನೆಯ ಭುಜದ ಎತ್ತರ 11.11 ಅಡಿಯಾಗಿತ್ತು. ತನ್ನ ನಿಲುವು, ಸೌಮ್ಯ ಸ್ವಭಾವದಿಂದ ಹೆಸರಾಗಿದ್ದ ಆನೆಯು ಸದಾ ತನ್ನ ಪಾಡಿಗೆ ತಾನಿರುತ್ತಿತ್ತು. ಬೇರೆ ವನ್ಯಪ್ರಾಣಿ, ಮನುಷ್ಯರ ಮೇಲೆ ದಾಳಿ ನಡೆಸಿದ ಉದಾಹರಣೆಗಳಿರಲಿಲ್ಲ. ಆ ಆನೆಯ ಹಲ್ಲುಗಳು ನೈಸರ್ಗಿಕವಾಗಿ ಉದುರಿ ಹೋಗಿ, ತನ್ನ ದೈನಂದಿನ ಆಹಾರ ತಿನ್ನಲು ಕಷ್ಟಪಡುತಿತ್ತು. ವಯೋಸಹಜ ಕಾರಣದಿಂದ ಈ ಆನೆ ಮೃತಪಟ್ಟಿದೆ. ಸಾಮಾನ್ಯವಾಗಿ ಆನೆಗಳು ಮುದಿ ವಯಸ್ಸು ಸಮೀಪಿಸುತ್ತಿದ್ದಂತೆ ಅವುಗಳ ನೆತ್ತಿ, ಕಿವಿ, ಹಣೆ ಭಾಗದ ಮೇಲೆ ಬಿಳಿ- ಕೆಂಪು ಬಣ್ಣದ ಕಲೆಗಳು ಮೂಡುತ್ತವೆ. ಅಲ್ಲದೆ ಕಿವಿಯ ಭಾಗದ ಬಳಿ ಚರ್ಮ ಮಡಚುತ್ತವೆ. ಇವುಗಳನ್ನು ನೋಡಿ ಆ ಆನೆಗಳ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ ಎನ್ನುತ್ತಾರೆ ಹಿರಿಯ ಅರಣ್ಯಾಧಿಕಾರಿಯೊಬ್ಬರು.
ಅತಿ ಉದ್ದನೆಯ ದಂತಗಳಿರುವ ಇನ್ನೆರಡು ಆನೆಗಳು ಪತ್ತೆ :
“ಭೋಗೇಶ್ವರ ಆನೆಯ ರೀತಿಯಲ್ಲಿಯೇ 50 ವರ್ಷ ಮೇಲ್ಪಟ್ಟ ಉದ್ದವಾದ ದಂತಗಳನ್ನು ಹೊಂದಿದ್ದ ಮತ್ತೆರಡು ಆನೆಗಳು ಕಬಿನಿ ಹಿನ್ನೀರ ಪ್ರದೇಶದಲ್ಲಿವೆ. ಅವುಗಳು ಆಗಾಗ ಅರಣ್ಯ ಸಿಬ್ಬಿಂದಿಗೆ ಕಾಣಸಿಗುತ್ತವೆ. ಇನ್ನು ಐದು ವರ್ಷಗಳಾದರೆ ಈ ಎರಡು ಆನೆಗಳ ದಂತವು ಭೋಗೇಶ್ವರ ಆನೆಯ ದಂತದ ರೀತಿ ಅತಿ ಉದ್ದವಾಗಿ ಬೆಳೆಯಬಹುದು. ಆದರೆ ಆ ಆನೆಗಳ ದಂತದ ಉದ್ದದ ಖಚಿತ ಅಳತೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. 2017ರಲ್ಲಿ ಅರಣ್ಯ ಇಲಾಖೆ ವತಿಯಿಂದ ಮಾಡಿದ ಆನೆ ಗಣತಿಯ ಪ್ರಕಾರ 1,036 ಚದರ ಕಿ.ಮೀ ವಿಸ್ತೀರ್ಣ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರತಿ ಚದರ ಕಿ.ಮೀನಲ್ಲಿ 1.5 ನಂತೆ ಒಟ್ಟಾರೆ 1,600 ಆನೆಗಳಿರುವುದನ್ನು ಗುರುತಿಸಲಾಗಿತ್ತು. ಈಗ ಅವುಗಳ ಸಂಖ್ಯೆ ಕೊಂಚ ಏರಿಕೆಯಾಗಿದೆ” ಎಂದು ಹೇಳುತ್ತಾರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ.ರಮೇಶ್.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದ ಗುಂಡ್ರೆ ವಲಯದ ಹೊಸಹಳ್ಳಿ ಶಾಖೆಯ ನಾಯಿಹಳ್ಳ ಗಸ್ತಿನ ಸುತ್ತನಹಳ್ಳ ಎಂಬ ಕಬಿನಿ ಹಿನ್ನೀರ ಪ್ರದೇಶದಲ್ಲಿ ಜು.11ರಂದು ಬೆಳಗ್ಗೆ 9.30ರ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಭೋಗೇಶ್ವರ ಆನೆಯು ಮೃತಪಟ್ಟಿರುವುದು ತಿಳಿದು ಬಂದಿದೆ. ಆ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳು, ಈ ಆನೆಗೆ 60 ವರ್ಷ ವಯಸ್ಸಾಗಿದ್ದು, ನೈಸರ್ಗಿಕವಾಗಿ ಮೃತಪಟ್ಟಿದೆ. ಇದರ ಮೈಮೇಲೆ ಯಾವುದೇ ಗಾಯದ ಗುರುತಾಗಲಿ, ಬೇರೆ ಆನೆಗಳ ಜೊತೆ ಕಾದಾಟದಿಂದ ಅಥವಾ ವಿಷಪ್ರಾಶನದಿಂದಾಗಿ ಸತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿಲ್ಲ ಎಂದಿದ್ದಾರೆ.
ಭೋಗೇಶ್ವರ ಆನೆಯನ್ನು ನೋಡಲೆಂದೇ ಅಲ್ಲಿಗೆ ಹೋಗುತ್ತಿದ್ದೆವು :
“ಡಿ.ಬಿ.ಕುಪ್ಪೆ ವಲಯದಲ್ಲಿರುವ ಅರಣ್ಯ ಪ್ರದೇಶದ ಭೋಗೇಶ್ವರ ದೇವಸ್ಥಾನ ಸಮೀಪದಲ್ಲಿ ಈ ಆನೆಯು ಹೆಚ್ಚಾಗಿ ವಾಸಿಸುತ್ತಿತ್ತು. ಹಾಗಾಗಿ ಆ ಆನೆಗೆ ಭೋಗೇಶ್ವರ ಎಂಬ ಹೆಸರು ಬಂದಿತ್ತು. ನಾವೆಲ್ಲ ಆನೆ ಗಣತಿ ಮಾಡುವ ಸಂದರ್ಭದಲ್ಲಿ ಈ ವಲಯದಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಿದ್ದನ್ನು ಗಮನಿಸಿದ್ದೆವು. ಕಬಿನಿ ಹಿನ್ನೀರ ಪ್ರದೇಶದಲ್ಲಿ ಸಫಾರಿಗೆ ಬರುವ ಪ್ರವಾಸಿಗರು, ವನ್ಯ ಛಾಯಾಗ್ರಾಹಕರಿಗೆ ಕಾಣಸಿಗುತ್ತಿತ್ತು. ಆನೆ ಗಣತಿ ಸಂದರ್ಭದಲ್ಲಿ ಬಿಡುವಾದಾಗ ಭೋಗೇಶ್ವರ ಆನೆಯನ್ನು ನೋಡಲೆಂದೇ ಹೋಗುತ್ತಿತ್ತು. ಅಂತಹ ಆಕರ್ಷಕ ಮೈಕಟ್ಟು, ಸೌಮ್ಯ ಸ್ವಭಾವ ಹೊಂದಿದ್ದ ಆನೆ ಈಗ ಮೃತಪಟ್ಟಿದೆ ಅನ್ನೋದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.” ಎಂದು ಹೇಳುತ್ತಾರೆ ವನ್ಯಜೀವಿ ಕಾರ್ಯಕರ್ತ ವಲ್ಲೀಶ್.
ಬಂಡೀಪುರದಲ್ಲಿ ಪ್ರಕೃತಿ ಶಿಕ್ಷಣ ಕೇಂದ್ರ ಸ್ಥಾಪನೆಗೆ ಚಿಂತನೆ :
“ಏಷ್ಯಾದಲ್ಲೇ ಅತಿ ಉದ್ದದ ದಂತಗಳನ್ನು ಹೊಂದಿದ್ದ ಭೋಗೇಶ್ವರ ಸಲಗದ ದಂತಗಳನ್ನು ಈಗಾಗಲೇ ಕತ್ತರಿಸಿ ಸಂರಕ್ಷಿಡಲಾಗಿದೆ. ಇದನ್ನು ಬಂಡೀಪುರದಲ್ಲಿ ಕಾಡಿನ ಪ್ರಕೃತಿ ಶಿಕ್ಷಣ ಕೇಂದ್ರ (interpretation Center)ವನ್ನು ಸ್ಥಾಪಿಸಿ, ಅಲ್ಲಿಗೆ ಬರುವ ಪ್ರವಾಸಿಗರಿಗಾಗಿ ಆ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲು ನಿರ್ಧರಿಸಿದ್ದೇವೆ. ಇಡೀ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಭೌಗೋಳಿಕ ಪ್ರದೇಶದ ಚಿಕ್ಕ ಪ್ರತಿರೂಪಗಳನ್ನಿಟ್ಟು ಕಾಡಿನ ಬಗ್ಗೆ ಮಾಹಿತಿ ನೀಡುವ ಉದ್ದೇಶವಿದೆ. ಆನೆ, ಹುಲಿ ವಿವಿಧ ವನ್ಯಪ್ರಾಣಿಗಳ ಸಂರಕ್ಷಿತ ಭಾಗಗಳು ಹಾಗೂ ತದ್ರೂಪುಗಳ ಪ್ರದರ್ಶನ, ಈ ಕಾಡಿನ ಪ್ರದೇಶದಲ್ಲಿ ಕಂಡು ಬರುವ ವಿಶೇಷ ಸಸ್ಯ- ಮರಗಿಡಗಳ ಪ್ರಬೇಧಗಳು, ಪಕ್ಷಿ, ಕೀಟ ಮತ್ತು ಸರೀಸೃಪಗಳ ಬಗ್ಗೆ ಮಾಹಿತಿಯನ್ನು ಬಂಡೀಪುರ ಸಫಾರಿಗೆ ಬರುವ ಪ್ರವಾಸಿಗರಿಗಾಗಿ ಪ್ರಕೃತಿ ಶಿಕ್ಷಣ ಕೇಂದ್ರದಲ್ಲಿ ನೀಡುವ ಉದ್ದೇಶ ಹೊಂದಲಾಗಿದೆ. ಈ ಕುರಿತಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ” ಎಂದು ಡಾ.ರಮೇಶ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಬಹಳ ಸೌಮ್ಯ ಸ್ವಭಾವದ ಮಿಸ್ಟರ್ ಕಬಿನಿ :
“2010ರಲ್ಲಿ ತಾವು ನಾಗರಹೊಳೆಯಲ್ಲಿ ಎಸಿಎಫ್ ಆಗಿ ಪ್ರೊಬೇಷನರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮೊದಲಿಗೆ ಭೋಗೇಶ್ವರ ಆನೆಯನ್ನು ಬಹಳ ಹತ್ತಿರದಿಂದ ಕಂಡಿದ್ದೆ. ಆ ಆನೆಯ ಹತ್ತಿರಕ್ಕೆ ಹೋದಾಗಲೂ ಒಮ್ಮೆಯೂ ಏನು ಮಾಡಿರಲಿಲ್ಲ. ಕಾಡಿನಲ್ಲಿದ್ದರೂ ಬೇರೆ ಸಲಗದಂತಿರಲಿಲ್ಲ. ಬಹಳ ಸೌಮ್ಯ ಸ್ವಭಾವ ಹೊಂದಿತ್ತು. ಆಗೆಲ್ಲ ಈ ಆನೆಗೆ ಭೋಗೇಶ್ವರ, ಮಿಸ್ಟರ್ ಕಬಿನಿ ಅಂತೆಲ್ಲಾ ಹೆಸರಿರಲಿಲ್ಲ. ಆ ಆನೆಯ ಸುಂದರ ಫೊಟೋಗಳು ನನ್ನ ಕ್ಯಾಮರಾದಲ್ಲಿ ಭದ್ರವಾಗಿದೆ. ಅದೊಂದು ಸುಂದರ ನೆನಪಾಗಿ ತಮ್ಮ ಬಳಿ ಉಳಿದಿದೆ” ಎಂದು ಭೋಗೇಶ್ವರ ಆನೆಯ ಜೊತೆಯ ಒಡನಾಟವನ್ನು ನೆನೆಸಿಕೊಂಡಿದ್ದಾರೆ ಡಾ.ರಮೇಶ್.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ, ಹುಲಿಯಂತಹ ದೊಡ್ಡ ದೊಡ್ಡ ವನ್ಯಪ್ರಾಣಿಗಳ ಕಳ್ಳಬೇಟೆ ನಿಯಂತ್ರಣಕ್ಕೆ ಬಂದಿದೆ. 1995-96ರಲ್ಲಿದ್ದ ಪರಿಸ್ಥಿತಿ ಈಗ ಇಲ್ಲ. 1036 ಚದರ ಕಿ.ಮೀ ವಿಸ್ತೀರ್ಣ ಬಂಡೀಪುರ ಕಾಡಿನಲ್ಲಿ 53 ಕಳ್ಳಬೇಟೆ ನಿಗ್ರಹ ಕ್ಯಾಂಪ್ ಗಳಿವೆ. ಆನೆ, ಹುಲಿ ಮತ್ತಿತರ ಪ್ರಾಣಿಗಳಿಗೆ ಗುಂಡೇಟಿನಿಂದ ಸಾಯಿಸುವುದು ಕಷ್ಟಸಾಧ್ಯ. ಅಷ್ಟರ ಮಟ್ಟಿಗೆ ಅರಣ್ಯ ಇಲಾಖೆಯು ಕಾಡಿನ ಸಂರಕ್ಷಣೆಯಲ್ಲಿ ಅಲರ್ಟ್ ಇರುತ್ತೆ. ಹೀಗಿದ್ದರೂ, ಅಲ್ಲಲ್ಲಿ ಜಿಂಕೆ, ಹಂದಿ ಮತ್ತಿತರ ಸಣ್ಣಪುಟ್ಟ ಪ್ರಾಣಿಗಳ ಕಳ್ಳಬೇಟೆ ಪ್ರಕರಣಗಳು ನಡೆಯುತ್ತಿರುತ್ತದೆ. ಕೆಲವು ಕಡೆ ಉರುಳು ಹಾಕಿ ಪ್ರಾಣಿಗಳನ್ನು ಹಿಡಿಯುತ್ತಾರೆ. ಇಂತಹ ಪ್ರಕರಣಗಳು ಸಂಪೂರ್ಣವಾಗಿ ನಿಲ್ಲಬೇಕು ಎಂಬುದು ವನ್ಯಪ್ರೇಮಿಗಳ ಆಗ್ರಹವಾಗಿದೆ.