ಬೆಂಗಳೂರು, ಜೂ.9 www.bengaluruwire.com : ಇಂಧನ ಇಲಾಖೆಯ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಗುರುವಾರ ತಿಳಿಸಿದರು.
ಕರ್ನಾಟಕ ಇವಿ ಜಾಗೃತಿ ಪೋರ್ಟಲ್ ಮತ್ತು ಬೆಂಗಳೂರು ನಗರವನ್ನು ಜಾಗತಿಕ ಇವಿ ವಲಯವನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿ ಬಿಡುಗಡೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ , ಇಂಧನ ಇಲಾಖೆ ಅಧೀನದಲ್ಲಿ ಬರುವ ಎಲ್ಲ ಕಚೇರಿಗಳಲ್ಲಿ ವಿದ್ಯುತ್ ಚಾಲಿತ ವಾಹನ ಬಳಕೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮೂರು ತಿಂಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ಹೇಳಿದರು.
ವಿದ್ಯುತ್ ಚಾಲಿತ ವಾಹನಗಳ ಬೆಲೆ, ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬೆಲೆಗಿಂತ ದುಬಾರಿ ಇರುವುದರಿಂದ, ಎಲೆಕ್ಟ್ರಿಕ್ ವಾಹನ ಬಳಕೆಗೆ ಇನ್ನೂ ಒಪ್ಪಿಗೆ ದೊರೆತಿಲ್ಲ. ಎಲೆಕ್ಟ್ರಿಕ್ ವಾಹನ ಬಳಸುವುದು ನಮ್ಮ ಇಲಾಖೆಯ ಆದ್ಯತೆ ಆಗಿದ್ದು, ಹಣಕಾಸು ಇಲಾಖೆ ಸಮ್ಮತಿಸಿದರೆ, ಮುಂದಿನ ದಿನಗಳಲ್ಲಿ ಇಂಧನ ಇಲಾಖೆಯ ಎಲ್ಲ ಕಚೇರಿಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮೊದಲು ಇವಿ ಜಾಗೃತಿ ಪೋರ್ಟಲ್ ಮತ್ತು ದಿಕ್ಸೂಚಿ ವರದಿ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಇಲೆಕ್ಟ್ರಿಕ್ ವಾಹನ ಬಳಕೆಗೆ ರಾಜ್ಯ ಸರ್ಕಾರ ಉತ್ತೇಜನ ನೀಡುತ್ತಿದ್ದು, ಜೂನ್ 23 ರಿಂದ ಜೂನ್ 30ರವರೆಗೆ ರಾಜ್ಯದಲ್ಲಿ ಇವಿ ಚಾರ್ಜಿಂಗ್ ಸೆಂಟರ್ ಗಳ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 1000 ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಗಳಿದ್ದು, 3000 ಚಾರ್ಜಿಂಗ್ ಸ್ಟೇಷನ್ ಗಳ ಗುರಿ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಗರದಲ್ಲಿ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಟೆಂಡರ್ ಕರೆಯುವ ಹೊಣೆಯನ್ನು ಬೆಸ್ಕಾಂ ಗೆ ನೀಡಲಾಗಿದೆ. ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣಕ್ಕೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಭಾರತದ ಬ್ರಿಟಿಷ್ ಹೈಕಮಿಷನರ್ ಆಲೆಕ್ಸ್ ಇಲ್ಲಿಸ್ ಮಾತನಾಡಿ, ಭಾರತ, ಅಮೆರಿಕ ಮತ್ತು ಚೀನಾ ದೇಶಗಳು ಯುಕೆ ಜತೆ ಸಹಭಾಗಿತ್ವದ ವಹಿವಾಟಿನಲ್ಲಿ ತೊಡಗಿಕೊಂಡಿವೆ. ಭಾರತದ ಸುಮಾರು 22 ಕೋಟಿ ಜನರು ನಗರ ಪ್ರದೇಶಕ್ಕೆ ಮುಂದಿನ ದಿನಗಳಲ್ಲಿ ವಲಸೆ ಹೋಗಲಿದ್ದಾರೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳ ಸಮರ್ಥ ಅಭಿವೃದ್ದಿ ಮುಖ್ಯ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಇವಿ ವಾಹನ ಬಳಕೆಗೆ ಹೆಚ್ಚಿನ ಅವಕಾಶವಿದೆ :
“ಭಾರತದಲ್ಲಿ ಎಲೆಕ್ಟ್ರಾನಿಕ್ ವಾಹನಗಳ ಬಳಕೆ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ನಾನು ಮಾತನಾಡಿದ್ದೇನೆ. ಅವರು ಈ ಕುರಿತು ಧನಾತ್ಮಕ ಧೋರಣೆ ಹೊಂದಿದ್ದು, ಭಾರತ ಸರಕಾರ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಇವಿ ಚಲನೆಶೀಲತೆ ಬಗ್ಗೆ ಸಹಭಾಗಿತ್ವಹೊಂದಲು ಬ್ರಿಟನ್ ಉತ್ಸುಕತೆ ಹೊಂದಿದೆ”. ನಮ್ಮ ಇತಿಹಾಸ ಪಠ್ಯದಲ್ಲಿ ಭಾರತ, ಸ್ವಾತಂತ್ರ್ಯಕ್ಕಾಗಿ ಬ್ರಿಟನ್ ಜತೆ ಹೋರಾಟ ಮಾಡಿದೆ. ನಾವು ಅದನ್ನು ಮರೆತು ಪ್ರಸ್ತುತ ನಮ್ಮ ದೇಶಗಳ ಪರಸ್ಪರ ಅಭಿವೃದ್ದಿಗಾಗಿ ಕೈಜೋಡಿಸಬೇಕಾಗಿದೆ. ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಅವಕಾಶ ಇದೆ ಎಂದು ಆಲೆಕ್ಸ್ ಇಲ್ಲಿಸ್ ಉಲ್ಲೇಖಿಸಿದರು.
ಬೆಸ್ಕಾಂ ಆಡಳಿತ ನಿರ್ದೇಶಕ ಪಿ. ರಾಜೇಂದ್ರ ಚೋಳನ್ ಪ್ರಸ್ತಾವಿಕ ಮಾತನಾಡಿ, ದೇಶದಲ್ಲೇ ಮೊದಲ ಬಾರಿಗೆ ಬೆಸ್ಕಾಂ ಸಾರ್ವಜನಿಕರಿಗಾಗಿ ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ತೆರೆದಿದ್ದು, ಎರಡು ಚಾರ್ಜಿಂಗ್ ಸ್ಟೇಷನ್ ಗಳನ್ನು ಬೆಸ್ಕಾಂ ನ ನಿಗಮ ಕಚೇರಿಗಳಲ್ಲಿ ತೆರೆಯಲಾಗಿದೆ.ಪ್ರಸ್ತುತ ವಿರುವ ಬೆಸ್ಕಾಂ ಚಾರ್ಜಿಂಗ್ ಸ್ಟೇಷನ್ ಗಳಿಂದ ತಿಂಗಳಿಗೆ 6,000ಕ್ಕೂ ಹೆಚ್ಚು ವಹಿವಾಟು ನಡೆಯುತ್ತಿದ್ದು, ಸುಮಾರು 30,000 ಕಿ.ವ್ಯಾಟ್ ಇಂಧನ ಮಾರಾಟ ಮಾಡಿ, 2.5 ಲಕ್ಷ ರೂ, ಆದಾಯಗಳಿಸುತ್ತಿದೆ ಎಂದು ಮಾಹಿತಿ ನೀಡಿದರು.
ಇವಿ- ಜಾಗೃತಿ ಪೋರ್ಟಲ್ ಗೆ ಚಾಲನೆ :
ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಬಳಕೆಗೆ ಬಗ್ಗೆ ಜನರದಲ್ಲಿ ಜಾಗೃತಿ ಮೂಡಿಸಲು ಇವಿ- ಜಾಗೃತಿ ಪೋರ್ಟಲ್ (EV Awareness Portal : www.evkarnataka.co.in) ಜನರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಿದೆ. ಕರ್ನಾಟಕದಲ್ಲಿ ವಿದ್ಯುತ್ ವಾಹನಗಳ ಅಂಕಿ ಅಂಶಗಳ ಮಾಹಿತಿಗೆ ಈ ಜಾಲತಾಣವು ‘ಒನ್ ಸ್ಟಾಪ್ ಸೈಟ್’ ಆಗಿ ಕಾರ್ಯನಿರ್ವಹಿಸುವ ಗುರಿಯನ್ನು ಈ ಪೋರ್ಟಲ್ ಹೊಂದಿದೆ.
ಬೆಂಗಳೂರು ನಗರವನ್ನು ಎಲೆಕ್ಟ್ರಿಕ್ ವಾಹನಗಳ ವಲಯವನ್ನಾಗಿಸುವ ದಿಕ್ಸೂಚಿ ವರದಿಯಲ್ಲಿ, 2030ರ ಇಸವಿಯ ವೇಳೆಗೆ, ನಗರದ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಖಾಸಗಿ ಕಾರಿನ ವರ್ಗದಲ್ಲಿ, ಎಲೆಕ್ಟ್ರಿಕ್ ಕಾರುಗಳ ಪಾಲು ಶೇ.30ರಷ್ಟು, ವಾಣಿಜ್ಯ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನದ ಪಾಲು ಶೇ.70ರಷ್ಟು ಹಾಗೂ ಬಸ್ ನಲ್ಲಿ ಶೇ.40ರಷ್ಟು ಹಾಗೂ ದ್ವಿಚಕ್ರ- ತ್ರಿಚಕ್ರ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಶೇ.80ರಷ್ಟಾಗಲಿದೆ. ಎಲ್ಲಾ ವರ್ಗದ ಎಲೆಕ್ಟ್ರಿಕ್ ವಾಹನಗಳಿಗೆ 58,146 ಚಾರ್ಜರ್ ಗಳ ಅಗತ್ಯ ಬರಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಮತ್ತು ಕೇರಳದ ಬ್ರಿಟಿಷ್ ಉಪ ಹೈಕಮಿಷನರ್ ಅನ್ನಾ ಶೋಟ್ ಬೋಲ್ಟ್, ಅಪರ ಮುಖ್ಯ ಕಾರ್ಯದರ್ಶಿ ಜಿ. ಕುಮಾರ್ ನಾಯಕ್ ಮತ್ತು ಕೆಪಿಟಿಸಿಎಲ್ ಆಡಳಿತ ನಿರ್ದೇಶಕಿ ಡಾ. ಎನ್. ಮಂಜುಳಾ ಹಾಜರಿದ್ದರು.