ಬೆಂಗಳೂರು, ಜೂ.8 www.bengaluruwire.com : ಬಿಬಿಎಂಪಿಯಲ್ಲಿ ನಡೆದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದಲ್ಲಿ ಭ್ರಷ್ಟಾಚಾರ, ಅಕ್ರಮಗಳು ನಿತ್ಯ ನಿರಂತವಾಗಿದೆ. ಖಾತೆ ಮಾಡಿಕೊಡೋಕೆ ಲಂಚ, ಪರ್ಯಾಯ ಸೈಟ್ ಹಂಚಿಕೆಗೆ ಲಂಚ, ಸರ್ವೆ ವರದಿ ನೀಡಲು ಲಂಚ, ಖಾಸಗಿ ಲೇಔಟ್ ಒಪ್ಪಿಗೆ ನೀಡಲು ಲಂಚ…..ಹೀಗೆ ಇಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಕೊನೆ ಮೊದಲಿಲ್ಲದಂತಾಗಿದೆ. ಈ ಭ್ರಷ್ಟಕೂಪಗಳಲ್ಲಿ ಅತಿಹೆಚ್ಚು ಆರೋಪಕ್ಕೆ ಗುರಿಯಾಗಿರುವ ವಿಭಾಗದಲ್ಲಿ ಬಿಡಿಎ ಭೂಸ್ವಾಧೀನ ವಿಭಾಗವೂ (Land Acquisition Section) ಒಂದು.
ಈ ಭೂಸ್ವಾಧೀನ ವಿಭಾಗದಲ್ಲಿ ರಾಜ್ಯ ಭೂಮಾಪನಾ ಇಲಾಖೆಯಿಂದ ನಿಯೋಜನೆ (Deputation) ಗೊಂಡ ಭೂಮಾಪಕರು ಮತ್ತು ಸರ್ವೆ ಸೂಪರ್ ವೈಸರ್ ಗಳು ಹಲವು ವರ್ಷಗಳಿಂದ ಇಲ್ಲೇ ಬೀಡು ಬಿಟ್ಟಿದ್ದಾರೆ. ಕೆಲವರು ತಮ್ಮ ಭ್ರಷ್ಟ ಬೇರುಗಳನ್ನು ಬೆಂಗಳೂರಿನಾದ್ಯಂತ ಹರಡಿಕೊಂಡಿದ್ದಾರೆ. ಬಿಡಿಎ ಭೂಸ್ವಾಧೀನ, ಭೂ ಪರಿಹಾರ, ನಗರ ಯೋಜನೆ ಕಡತ ವಿಲೇವಾರಿ, ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ವೆ ಸ್ಕೆಚ್, ಭೂ ಬಳಕೆ ಬದಲಾವಣೆ ಹೀಗೆ ಪ್ರಾಧಿಕಾರದಲ್ಲಿ ಸರ್ವೆಯರ್ ಗಳು ಭೂಮಿ ಅಳತೆ- ಕಚ್ಛಾ ನಕಾಶೆ ನೆಪದಲ್ಲಿ ಭ್ರಷ್ಟಾಚಾರ ನಡೆಸಲು ಭರಪೂರ ಅವಕಾಶಗಳಿವೆ. ಇದರಲ್ಲಿ ಲಂಚ ಬಾಕ ಕೆಲವು ಭೂಸ್ವಾಧೀನ ಅಧಿಕಾರಿಗಳ ಪಾತ್ರವೂ ಇದ್ದೇಯಿದೆ.
ಭೂಸ್ವಾಧೀನ ವಿಭಾಗದಲ್ಲಿ ಹೇಗೆ ಅಕ್ರಮಗಳು ನಡೆಯುತ್ತವೆ?
ಬಿಡಿಎ ಈ ಹಿಂದೆ ಭೂಮಿ ಲೆಕ್ಕಪರಿಶೋಧನೆ (Land Audit) ಮಾಡಿದಾಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರಾಜಧಾನಿಯ ವಿವಿಧೆಡೆ 64 ಬಡಾವಣೆಗಳು, ರಸ್ತೆ ಮತ್ತಿತರ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಬರೋಬ್ಬರಿ 37,168 ಎಕರೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿತ್ತು. ಆ ಪೈಕಿ ಸರ್ಕಾರಿ ಭೂಮಿ ಸೇರಿ 33,249.42 ಎಕರೆ ಭೂಮಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿತ್ತು. ಆ ಪೈಕಿ 11,504 ಎಕರೆ ಪ್ರದೇಶದಲ್ಲಷ್ಟೇ 64 ಬಡಾವಣೆಗಳನ್ನು ನಿರ್ಮಾಣ ಮಾಡಿದೆ. ಈ ಕುರಿತಂತೆ ಬೆಂಗಳೂರು ವೈರ್ 2021 ಇಸವಿಯಲ್ಲೇ ಎಲ್ಲಾ ಮಾಧ್ಯಮಗಳಿಗಿಂತ ಮುಂಚೆ ಈ ಲ್ಯಾಂಡ್ ಆಡಿ ವರದಿಯನ್ನು ಸವಿಸ್ತಾರವಾಗಿ ಪ್ರಕಟಿಸಿತ್ತು. ಬಿಡಿಎ ಅಧಿಸೂಚಿತ ಪ್ರದೇಶದಲ್ಲಿ ಅನುಮತಿಯಿಲ್ಲದೆ ಸ್ವತ್ತಿನ ಮಾಲೀಕರು ಅವುಗಳನ್ನು ವಿಲೇವಾರಿ ಮಾಡೋಕೆ ಸಾಧ್ಯವಿಲ್ಲ. ಇದನ್ನೇ ಬಿಡಿಎ ಸರ್ವೆಯರ್ ಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಈಗ ವಿಷಯಕ್ಕೆ ಬರೋಣ. ಬಿಡಿಎ ಒಂದು ಸಲ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ಬಳಿಕ ಅಥವಾ ಬಿಡಿಎ ಭೂಸ್ವಾಧೀನಪಡಿಸಿಕೊಂಡ ಆ ಖಾಸಗಿ ಜಮೀನನ್ನು ಆ ಸ್ವತ್ತಿನ ಮಾಲೀಕ ಅಷ್ಟು ಸುಲಭವಾಗಿ ಮಾರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಭೂಸ್ವಾಧೀನ ಅಧಿಸೂಚನೆಗೊಂಡ ರೈತ ಅಥವಾ ಸ್ವತ್ತಿನ ಮಾಲೀಕ ಒಂದೊ ಭೂಮಿ ಕಳೆದುಕೊಂಡಿದ್ದಕ್ಕೆ ಭೂ ಪರಿಹಾರವಾಗಿ ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನವನ್ನು ಪಡೆದುಕೊಳ್ಳಬೇಕು. ಇದನ್ನೇ ಸರ್ವೆಯರ್ ಗಳು ಎನ್ ಕ್ಯಾಷ್ ಮಾಡಿಕೊಳ್ಳುತ್ತಾರೆ. ಬಿಡಿಎ ಭೂಸ್ವಾಧೀನಗೊಂಡ ಪ್ರದೇಶದ ಆಸ್ತಿ ಮಾಲೀಕರು ಭೂಪರಿಹಾರಕ್ಕಾಗಿ ಸಲ್ಲಿಸುವ ಅರ್ಜಿ ಬಿಡಿಎ ಭೂಸ್ವಾಧೀನ ವಿಭಾಗಕ್ಕೆ ಬಂದ ಕೂಡಲೇ ಸರ್ವೆಯರ್ ಗಳು ಮತ್ತು ಸರ್ವೆ ಸೂಪರ್ ವೈಸರ್ ಗಳ ದುಷ್ಟ ಕೂಡ ಅಲರ್ಟ್ ಆಗುತ್ತೆ. ಆ ಭೂಮಿಗೆ ಚಿನ್ನದ ಬೆಲೆಯಿದೆ, ಭೂ ಮಾಲೀಕ ಮುಗ್ಧ ಎಂದು ಗೊತ್ತಾದರಂತೂ ಆತನಿಂದ ಎಷ್ಟು ಹಣ ಕಕ್ಕಿಸಬಹುದು ಎಂಬುದಕ್ಕೆ ಮಾಸ್ಟರ್ ಪ್ಲಾನ್ ರೆಡಿಯಾಗುತ್ತೆ.
ಅಕ್ರಮ ನಡೆಯುವ ವಿಧಾನ- 1 :
ಬಿಡಿಎ ಭೂಸ್ವಾಧೀನ ಮಾಡಿಕೊಂಡ ಜಾಗದ ಮಾಲೀಕ ಭೂಪರಿಹಾರಕ್ಕಾಗಿ, ಅರ್ಜಿ ಸಲ್ಲಿಸಿದಾಗ ಆ ಜಮೀನಿನ ಮಾಲೀಕ ಪ್ರಾಧಿಕಾರದ ಸರ್ವೆಯರ್ ಬಳಿ ಅಡ್ಜೆಸ್ಟ್ ಆಗಲಿಲ್ಲ ಅಂದರೆ ಭೂಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯ ಹೆಸರಿನಲ್ಲೇ ಬೇರೊಬ್ಬರಿಂದ ಬಿಡಿಎನಲ್ಲಿ ತಕರಾರು ಅರ್ಜಿ ಸಲ್ಲಿಸುವಂತೆ ನೋಡಿಕೊಳ್ಳುತ್ತಾರೆ. ಒಮ್ಮೆ ಆ ನಿಗಧಿತ ಜಾಗಕ್ಕೆ ತಕರಾರು ಅರ್ಜಿ ಸಲ್ಲಿಸಿದರೆ, ಆ ಸ್ವತ್ತಿನ ನೈಜ ಮಾಲೀಕ, ತಾನೇ ಆ ಆಸ್ತಿಯ ಮಾಲೀಕ ಎಂದು ಸಾಬೀತುಪಡಿಸಲು ತಿಂಗಳುಗಟ್ಟಲೆ ಅಲೆದಾಡಬೇಕು. ಇದರ ಜೊತೆಗೆ ಮಧ್ಯವರ್ತಿಗಳಿಂದಲೂ ಸರ್ವೆಯರ್ ಗಳು ಕಿರುಕುಳ ನೀಡುವಂತೆ ನೋಡಿಕೊಳ್ಳುತ್ತಾರೆ. ಒಂದೋ ಸ್ವತ್ತಿನ ನೈಜ ಮಾಲೀಕ ಸರ್ವೆಯರ್ ಜೊತೆ ಕೈಮಿಲಾಯಿಸಿದರೆ, ತಕರಾರು ಅರ್ಜಿ ಹಿಂಪಡೆಯಲು ಬೇಕಾದ ವ್ಯವಸ್ಥೆಯಾಗುತ್ತೆ. ಇಲ್ಲದಿದ್ದಲ್ಲಿ ಜಾಗದ ನಿಜವಾದ ಮಾಲೀಕ ತನ್ನ ಸ್ವತ್ತಿನ ಮಾಲೀಕ ತನ್ನ ಮಾಲೀಕತ್ವ ಸಾಬೀತಿಗೆ ಅಲೆಯುವದಷ್ಟೆ ಅಲ್ಲದೆ ಅದನ್ನು ನಿವಾರಿಸಿಕೊಂಡು ಭೂಪರಿಹಾರ ಪಡೆಯುವಷ್ಟರಲ್ಲಿ ಹಲವು ವರ್ಷಗಳೇ ಕಳೆದಿರುತ್ತೆ.
ಅಕ್ರಮ ನಡೆಯುವ ವಿಧಾನ-2 :
ಬಿಡಿಎ ರಸ್ತೆ, ಬಡಾವಣೆ ಮತ್ತಿತರ ಉದ್ದೇಶಕ್ಕೆ ಒಂದು ಪ್ರದೇಶದಲ್ಲಿ ಅಧಿಸೂಚನೆ ಹೊರಡಿಸುವ ಮುಂಚೆ ಭ್ರಷ್ಟ ಸರ್ವೇಯರ್ ಗಳು ಸಮೀಕ್ಷೆ ಮಾಡುವಾಗ ಯಾರ ಜಮೀನು ಪ್ರಸ್ತಾಪಿತ ಭೂಸ್ವಾಧೀನ ಪ್ರದೇಶಕ್ಕೆ ಒಳಪಡಲಿದೆ ಎಂದು ಹೆದರಿಸಿದರೆ ತಮ್ಮ ಕೈಬಿಸಿಯಾಗುತ್ತೆ ಎಂಬುದನ್ನು ಸ್ಥಳೀಯ ಬ್ರೋಕರ್ ಅಥವಾ ನೆಟ್ ವರ್ಕ್ ನಿಂದ ತಿಳಿದುಕೊಳ್ಳುತ್ತಾರೆ. ಬಳಿಕ ಅಂತಹ ಖಾಸಗಿ ಜಮೀನನಲ್ಲೂ ಸರ್ವೆ ನಡೆಸಿದಂತೆ ಮಾಡಿ, ಈ ಜಮೀನನ್ನು ಬಿಡಿಎ ಅಧಿಸೂಚನೆ ಹೊರಡಿಸುತ್ತಿದೆ, ನೀವು ಸರ್ಕಾರಿ ಜಾಗದಲ್ಲಿದ್ದೀರಿ, ನಿಮ್ಮ ದಾಖಲೆಗಳು ಸರಿಯಿಲ್ಲ ಅದೂ ಇದೂ ಎಂದು ತಿಳಿಸಿ ಹೆದರಿಸುತ್ತಾರೆ. ಇವರ ಮಾತನ್ನು ಪರಿಶೀಲಿಸದೆ ನಂಬಿದರೆ ಕೆಲಸ ಕೆಟ್ಟಂತೆ. ಬುದ್ದಿವಂತರಾದರೆ, ಆ ಭೂಮಿಯನ್ನು ಖಾಸಗಿಯವರಿಂದ ಸರ್ವೆ ಮಾಡಿಸಿ ವಾಸ್ತವ ಅರಿತು ಮುಂದಿನ ಹೆಜ್ಜೆ ಇಡುತ್ತಾರೆ.
ಅಕ್ರಮ ನಡೆಯುವ ವಿಧಾನ- 3 :
ಉದಾಹರಣೆಯೊಂದಿಗೆ ವಿವರಿಸಿ ಹೇಳೋದಾದರೆ, ಬಿಡಿಎ ಬೆಂಗಳೂರಿನ ಒಂದು ಪ್ರದೇಶದಲ್ಲಿ 10 ಎಕರೆ ಜಾಗದಲ್ಲಿ 5 ಎಕರೆ ಜಾಗ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿರುತ್ತೆ. ಉಳಿದ 5 ಎಕರೆ ಪ್ರದೇಶ ಒಂದು ಸರ್ವೆ ನಂಬರ್ ನಲ್ಲಿರುತ್ತೆ. ಆ ಸರ್ವೆ ನಂಬರ್ ನಲ್ಲಿನ ಯಾವುದೋ 5 ಗುಂಟೆ ಜಾಗವನ್ನು ಆ ಜಾಗದ ಮಾಲೀಕ ವ್ಯಕ್ತಿಯೊಬ್ಬರಿಗೆ ಮಾರುತ್ತಾನೆ. ಆ ಸ್ವತ್ತಿನ ಚೆಕ್ಕುಬಂದಿ ಹಾಕುವಾಗ ಪೂರ್ವ, ಪಶ್ಚಿಮ, ಉತ್ತರ- ದಕ್ಷಿಣ ಭಾಗದಲ್ಲಿ ಅದೇ ಸರ್ವೆ ನಂಬರಿನ ಉಳಿಕೆ ಭಾಗ ಎಂಬುದಷ್ಟೆ ನಮೂದಾಗಿರುತ್ತೆ. ಈ ಜಾಗಕ್ಕೆ ಬಿಡಿಎ ನಿರಾಪೇಕ್ಷಣಾ ಪತ್ರ ನೀಡಬೇಕೆಂದು ಅರ್ಜಿ ಸಲ್ಲಿಸಿದರೆ, ಅಳತೆಗೆಂದು ಸ್ಥಳಕ್ಕೆ ಬರುವ ಬಿಡಿಎ ಸರ್ವೆಯರ್ ನೀವು ಖರೀದಿಸಿದ ಜಮೀನು ಬಿಡಿಎ ನೋಟಿಫೈಡ್ ಮಾಡಿದ ಏರಿಯಾದಲ್ಲಿ ಬರುತ್ತೆ ಅಂತ ಏನೇನೊ ಹೇಳಿ ಹೆದರಿಸಿ, ಆತ ಇವರು ಕೇಳಿದಷ್ಟು ಲಂಚದ ಹಣ ನೀಡಿದಲ್ಲಿ ಬಿಡಿಎ ಅಧಿಸೂಚಿತ ಪ್ರದೇಶದಿಂದ ಹೊರಗಿದೆ ಎಂದು ಸರ್ವೆ ಸ್ಕೆಚ್ ಮತ್ತಿತರ ದಾಖಲೆಗಳನ್ನು ಸಿದ್ದಮಾಡಿಕೊಡುತ್ತಾರೆ. ಇಲ್ಲದಿದ್ದಲ್ಲಿ ಬಿಡಿಎ ನೋಟಿಫೈಡ್ ಮಾಡಿದ ಪ್ರದೇಶದಲ್ಲಿ ಈ ಆಸ್ತಿ ಬರುತ್ತೆ ಅಂತ ವರದಿ ಕೊಡುತ್ತಾರೆ.ಆಗ ಭೂಮಿ ಖರೀದಿಸಿದ ವ್ಯಕ್ತಿ ಯಾಕಪ್ಪಾ? ಇಲ್ಲಿ ಜಮೀನು ತಗೊಂಡೆ ಅಂತ ನೊಂದುಕೊಳ್ಳುವಷ್ಟು ಕಿರುಕುಳ ನೀಡುತ್ತಾರೆ. ಇದಕ್ಕೆ ಬಿಡಿಎ ಎಂಜಿನಿಯರ್ ಹಾಗೂ ಬ್ರೋಕರ್ ಗಳ ಸಹಕಾರವಿರುತ್ತೆ.
ಅಕ್ರಮ ನಡೆಯುವ ವಿಧಾನ- 4 :
ಒಂದು 100 ಎಕರೆ ಸರ್ಕಾರಿ ಜಮೀನಿದ್ದು, ಆ ಪೈಕಿ ಬಿಡಿಎ 20 ಎಕರೆ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸುತ್ತೆ ಅಂದುಕೊಳ್ಳೋಣ. ಆಗ ಆ ಸರ್ವೆ ನಂಬರ್ ನಲ್ಲಿರುವ ಅಷ್ಟೂ ಜನರ ಹೆಸರನ್ನು ಅಧಿಸೂಚನೆಯಲ್ಲಿ ಹಾಕುತ್ತಾರೆ. ಆಗ ಭ್ರಷ್ಟ ಸರ್ವೆಯರ್ ಗಳು ಬ್ರೋಕರ್ ಜೊತೆ ಸೇರಿ, ಸರ್ಕಾರ ಭೂಮಂಜೂರಾತಿ ಮಾಡದಿದ್ದರೂ ಕೇವಲ ಆ ಸ್ಥಳದಲ್ಲಿ ಅನುಭೋಗದಲ್ಲಿರುವ ಅಥವಾ ಟೈಟಲ್ ಅಮಾಯಕ ವ್ಯಕ್ತಿಗಳನ್ನು ಪತ್ತೆಹಚ್ಚಿ ಬಿಡಿಎನಿಂದ ಭೂಪರಿಹಾರ ಕೊಡಿಸುತ್ತೇವೆ ಎಂತ ನಂಬಿಸಿ ಆತನಿಂದ ಭೂಪರಿಹಾರಕ್ಕೆ ಅರ್ಜಿ ಸಲ್ಲಿಸುತ್ತಾರೆ. ಆತ ಭೂಪರಿಹಾರ ಪಡೆದುಕೊಳ್ಳಲು ಅಗತ್ಯವಾದ ದಾಖಲೆ ಸೃಷ್ಟಿಸಿ, ಭೂಪರಿಹಾರ ಕೇಳಿದ ಜಾಗ ಅರ್ಜಿದಾರನ ಸ್ವಾಧೀನದಲ್ಲಿದೆ ಎಂದು ವರದಿ ನೀಡುತ್ತಾರೆ. ಕೊನೆಗೆ ಬಿಡಿಎನಿಂದ ಬಂದ ನಗದು ಪರಿಹಾರ ಅಥವಾ ಅಭಿವೃದ್ಧಿಪಡಿಸಿದ ನಿವೇಶನವನ್ನು ಮಾರಾಟ ಮಾಡಿಸಿ ಸರ್ವೆಯರ್ ಗಳು ಅದರಿಂದ ಹಣ ಮಾಡುತ್ತಾರೆ.
ಅಕ್ರಮ ನಡೆಯುವ ವಿಧಾನ- 5 :
ಬಿಲ್ಡರ್ ಅಥವಾ ಖಾಸಗಿ ಲೇಔಟ್ ಡೆವಲಪರ್ ಹತ್ತಾರು ಎಕರೆ ಜಾಗ ಖರೀದಿ ಮಾಡಿದ್ದು, ಒಂದೊಮ್ಮೆ ಆ ಜಾಗದಲ್ಲಿ ಸರ್ಕಾರಿ ನಾಲೆ, ಬಂಡೀದಾರಿ, ಗುಡ್ಡ, ಕರಾಬ್ ಭೂಮಿಯಿದ್ದರೆ ಇಂತಿಷ್ಟು ಮೀಸಲು ಜಾಗಬಿಟ್ಟು ನಿರ್ಮಾಣ ಕಾರ್ಯ ಮಾಡಬೇಕಾಗುತ್ತೆ. ಹಿಂದೆ ಗ್ರಾಮ ನಕ್ಷೆಯಲ್ಲಿ ನಾಲೆ, ಗುಡ್ಡ, ಹಳ್ಳಿ, ಬಂಡಿದಾರಿಗಳಿದ್ದು, ಪ್ರಸ್ತುತ ಅವುಗಳು ಕಾಲಾನುಕ್ರಮದಲ್ಲಿ ತನ್ನ ಅಸ್ಥಿತ್ವಗಳನ್ನು ಕಳೆದುಕೊಂಡಿದ್ದರೆ, ಆ ಜಾಗದಲ್ಲಿ ಪ್ರಸ್ತುತ ಯಾವುದೇ ನಾಲೆ, ಬಂಡಿದಾರಿ, ಹಳ್ಳ, ಸರ್ಕಾರಿ ಕರಾಬ್ ಜಾಗವಿಲ್ಲ ಅಂತ ಬಿಡಿಎ ಸರ್ವೆಯರ್ ಗಳು ಹಣ ಪಡೆದು ವರದಿ ನೀಡುತ್ತಾರೆ.
ಅಕ್ರಮ ನಡೆಯುವ ವಿಧಾನ- 6 :
ಬಿಡಿಎ ಒಂದು ಪ್ರದೇಶದಲ್ಲಿ ಭೂಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ ಅಂದಾಗ, ಆ ಪ್ರದೇಶದಲ್ಲಿನ ಸ್ವತ್ತಿನ ಮಾಲೀಕರು ತಮ್ಮ ಭೂಮಿಯನ್ನು ಅಧಿಸೂಚನೆಯಿಂದ ಹೊರಗಿಡುವುದಕ್ಕೆ ಹೆಣಗಾಡಲು ಪ್ರಾರಂಭಿಸಿರುವುದನ್ನು ಬ್ರೋಕರ್ ಗಳ ಮೂಲಕ ತಿಳಿದುಕೊಳ್ಳುವ ಸರ್ವೆಯರ್ ಗಳು, ಪ್ರಾಧಿಕಾರದ ಎಂಜಿನಿಯರ್ ಗಳ ಸಹಕಾರದಿಂದ ಪ್ರಸ್ತಾವಿತ ಅಧಿಸೂಚನೆ ಸ್ಥಳಕ್ಕೆ ಆಗಮಿಸಿ ಸರ್ವೆ ನಡೆಸಿ, ತನ್ನೊಂದಿಗೆ ಕೈಮಿಸಾಯಿಸಿದ ಸ್ವತ್ತಿನ ಮಾಲೀಕರ ಜಮೀನು ಬಿಡಿಎ ಅಧಿಸೂಚಿತ ಭಾಗದಿಂದ ಹೊರಗಿದೆ ಎಂದು ಸರ್ವೆ ಸ್ಕೆಚ್ ಹಾಗೂ ಇತರ ದಾಖಲೆಗಳನ್ನು ಮಾಡಿಕೊಟ್ಟು ಆತನಿಂದ ಲಕ್ಷಾಂತರ ರೂಪಾಯಿ ರೂಪದಲ್ಲಿ ಲಂಚದ ಹಣ ಜೇಬಿಗಿಳಿಸುತ್ತಾರೆ.
ಅಕ್ರಮ ನಡೆಯುವ ವಿಧಾನ- 7 :
ಮೂಲೆ ನಿವೇಶನವನ್ನು ಬಿಡಿಎ ಹರಾಜಿನ ಮೂಲಕವಷ್ಟೇ ಹಂಚಿಕೆ ಮಾಡಬೇಕು. ಹೀಗಾಗಿ ನಗರದಲ್ಲಿ ಬಿಡಿಎನ ಪ್ರತಿಷ್ಠಿತ ಬಡಾವಣೆಯಲ್ಲಿ ದೊಡ್ಡ ಅಳತೆಯ ಮೂಲ ನಿವೇಶನವಿದ್ದರೆ, ಆ ಮೂಲೆ ನಿವೇಶನದ ಅಳತೆಯಲ್ಲಿ ಕಡಿತ ಮಾಡಿ, ಕಣ್ತಪ್ಪಿನಿಂದ ಅಳತೆ ತಪ್ಪಾಗಿದೆ ಎಂದು ಲೇಔಟ್ ಪ್ಲಾನ್ ನಲ್ಲಿ ತಿದ್ದುಪಡಿ ಮಾಡಿ, ಕಾರ್ನರ್ ಸೈಟ್ ನಿಂದ ಕಟ್ ಮಾಡಿಸುತ್ತಾರೆ. ಹೀಗೆ ಸೃಷ್ಟಿಸಿದ ಉಳಿದ ನಿವೇಶನವನ್ನು ಆಲ್ಟರ್ ನೇಟಿವ್ ಸೈಟ್ ಗೆ ಅರ್ಜಿ ಸಲ್ಲಿಸಿದವರಿಗೆ ಕಡಿಮೆ ಬೆಲೆ ಹಂಚಿಗೆ ಮಾಡಲಾಗುತ್ತಿತ್ತು. ಇದರಲ್ಲೂ ಸರ್ವೆಯರ್ ಗಳ ಪಾತ್ರ ಪ್ರಮುಖವಾಗಿತ್ತು. ಒಂದೆರಡು ವರ್ಷಗಳ ಮುಂಚಿನವರೆಗೂ ಕಾರ್ನರ್ ಸೈಟ್ ಕಟಿಂಗ್ ವಿಧಾನ ಬಿಡಿಎನಲ್ಲಿ ಕುಖ್ಯಾತಿಪಡೆದಿತ್ತು. ಆದರೀಗ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾದ್ದರಿಂದ, ಕಾರ್ನರ್ ಸೈಟ್ ಕಟಿಂಗ್ ಮಾಡುವ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಇವುಗಳೆಲ್ಲಾ ಕೇವಲ ಸ್ಯಾಂಪಲ್ ಗಳಷ್ಟೆ :
ಇವುಗಳೆಲ್ಲಾ ಕೇವಲ ಸ್ಯಾಂಪಲ್ ಗಳಷ್ಟೆ, ಬಿಡಿಎನ ಭೂಸ್ವಾಧೀನ ವಿಭಾಗವು ಸರ್ವಂ ಲಂಚ ಮಯಂ ಎಂಬ ಸ್ಥಿತಿ ನಿರ್ಮಾಣವಾಗಿ ಎಷ್ಟೋ ಕಾಲವಾಗಿದೆ. ಈ ಕುಖ್ಯಾತಿಯನ್ನು ತೊಡೆದು ಹಾಕಿ ಪಾರದರ್ಶಕವಾಗಿ ಸರ್ಕಾರಿ ಕೆಲಸಗಳು ಸಾಮಾನ್ಯ ಜನರಿಗೆ ನಿಗಧಿತ ಅವಧಿಯಲ್ಲಿ ಮಾಡಿಕೊಡುವ ವ್ಯವಸ್ಥೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಜಾರಿಗೆ ಬರಬೇಕಿದೆ.
“ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 11 ಸಾವಿರ ಎಕರೆ ಜಾಗ ಅತಂತ್ರ ಸ್ಥಿತಿಯಲ್ಲಿದೆ. ಈ ಜಾಗವನ್ನು ಬಿಡಿಎ ಬಳಸಿಕೊಳ್ಳತ್ತಲೂ ಇಲ್ಲ. ಇನ್ನೊಂದೆಡೆ ಭೂಮಾಲೀಕರಿಗೆ ಭೂಪರಿಹಾರವನ್ನು ನೀಡುತ್ತಿಲ್ಲ. ಈ ಮಧ್ಯೆ ಪ್ರಾಧಿಕಾರದ ಸರ್ವೆಯರ್ ಗಳು ಬಿಡಿಎ ಸ್ವಾಧೀನಪಡಿಸಿಕೊಂಡ ಸರ್ಕಾರಿ ಜಾಗವನ್ನು ಖಾಸಗಿ ಜಾಗವೆಂದು ಗುರ್ತಿಸಿ ವರದಿ ಕೊಟ್ಟು ಅಕ್ರಮವಾಗಿ ಭೂ ಪರಿಹಾರ ಕೊಡಿಸಲು ನೆರವಾಗುತ್ತಿದ್ದಾರೆ. ಆ ಮೂಲಕ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದರಲ್ಲಿ ಭೂಸ್ವಾಧೀನ ಅಧಿಕಾರಿಗಳು ಶಾಮೀಲಾಗಿದ್ದಾರೆ. ಈ ಅಕ್ರಮಗಳಿಗೆ ಸರ್ಕಾರ ಕೂಡಲೇ ಕಡಿವಾಣ ಹಾಕಬೇಕಿದೆ.
– ಸಾಯಿದತ್ತ, ಸಾಮಾಜಿಕ ಕಾರ್ಯಕರ್ತರು