ಬೆಂಗಳೂರು, ಜೂ.7 www.bengaluruwire.com : ರಾಜಧಾನಿಯಲ್ಲಿ ವೀಕೆಂಡ್ ಆದ್ರೆ ಟೆಕಿಗಳು, ವೀಕೆಂಡ್ ರಜೆ ಇರೋರು ತಮ್ಮ ಕಾರು ಹಿಂದೆ ಸೈಕಲ್ ಕಟ್ಟಿಕೊಂಡು ಊರ ಹೊರಗೆ ಸುತ್ತೋಕೆ ಹೋಗ್ತಾರೆ. ಕೆಲವರು ಸೈಕಲ್ ನಲ್ಲೇ ಆಫೀಸಿಗೆ ಹೋಗೋಕೆ ಪ್ರಾರಂಭಿಸಿದ್ದಾರೆ. ಇದನ್ನು ಮನಗಂಡ ನಮ್ಮ ಮೆಟ್ರೊ ಕೂಡ ಈಗ, ನಗರದಲ್ಲಿ ಸೈಕಲ್ ಬಳಕೆ ಮತ್ತಷ್ಟು ಹೆಚ್ಚಿಸಲು ಹಸಿರು ಪರಿಸರಕ್ಕೆ ಕೊಡುಗೆ ನೀಡಲು ಮುಂದಾಗಿದೆ.
ಇನ್ನು ಮುಂದೆ ಮೆಟ್ರೊ ಪ್ರಯಾಣಿಕರು ಮತ್ತು ಸಾರ್ವಜನಿಕರು ಮೆಟ್ರೊ ರೈಲಿನ ಕೊನೆಯ ಬೋಗಿಯಲ್ಲಿ ಮಡಚಿಡಬಹುದಾದ ಸೈಕಲ್ ಅನ್ನು ತಮ್ಮೊಂದಿಗೆ ಕೊಂಡೊಯ್ಯಬಹುದು. ಇದಕ್ಕೆ ಮೆಟ್ರೊ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುತ್ತಿಲ್ಲ. ಆದರೆ ಮೆಟ್ರೊ ರೈಲಿನಲ್ಲಿ ತಮ್ಮ ಸೈಕಲ್ ಕೊಂಡೊಯ್ಯುವವರಿಗೆ ಕೆಲವೊಂದು ಷರತ್ತುಗಳನ್ನು ನಮ್ಮ ಮೆಟ್ರೊ ವಿಧಿಸಿದೆ.
60 ಸೆಂ.ಮೀX 45 ಸೆಂ.ಮೀ X 24 ಸೆಂ.ಮೀ ಅಳತೆಯ ಅಥವಾ 15 ಕೆಜಿ ತೂಕವನ್ನು ಮೀರದ ಬೈಸಿಕಲ್ ಗಳನ್ನು ಕೊಂಡೊಯ್ಯಬಹುದು. ಮೆಟ್ರೊ ರೈಲು ನಿಲ್ದಾಣದ ಪ್ರವೇಶದ ಸಮಯದಲ್ಲಿ ಆ ಬ್ಯಾಗೇಜ್ ಸ್ಕ್ಯಾನರ್ ಮೂಲಕ ಭದ್ರತಾ ತಪಾಸಣೆಗೆ ಒಳಪಡಿಸಿಯೇ ಈ ಮಡಿಚಿಡಬಹುದಾದ ಸೈಕಲ್ ತಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು.
ಈ ಮಡಚಬಹುದಾದ ಸೈಕಲ್ ಗಳನ್ನು ಕೊಂಡೊಯ್ಯುವಾಗ ಮೆಟ್ರೊ ರೈಲು ಬೋಗಿಗಳ ಒಳಭಾಗದಲ್ಲಿ ಯಾವುದೇ ಹಾನಿಯಾಗದಂತೆ ಕೊಂಡೊಯ್ಯುವ ರೀತಿಯಲ್ಲಿ ಸರಿಯಾಗಿ ಪ್ಯಾಕ್ ಮಾಡಿರಬೇಕು. ಹಾಗೂ ಪಕ್ಕದ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ಎಚ್ಚರವಹಿಸಬೇಕು ಎಂದು ನಮ್ಮ ಮೆಟ್ರೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.