ಬೆಂಗಳೂರು, ಜೂ.3 www.bengaluruwire.com : ರಾಜಧಾನಿಯಲ್ಲಿ ಅಕ್ರಮವಾಗಿ ಆನೆದಂತ ಕಲಾಕೃತಿ ಹಾಗೂ ಹೆಬ್ಬಾವಿನ ಚರ್ಮವನ್ನು ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.
ಕೊಡಗು ಮೂಲದ ಅಪ್ಪಯ್ಯ (52) ಎಂಬಾತನೇ ಬಂಧನಕ್ಕೊಳಗಾದವನು. ಆ ಆರೋಪಿಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅತ್ಯಂತ ಬೆಲೆಬಾಳುವ 13 ಆಫ್ರಿಕ ಆನೆ ದಂತಗಳ ಕಲಾಕೃತಿಗಳನ್ನು ಹಾಗೂ 16 ಅಡಿ ಉದ್ದದ ಹೆಬ್ಬಾವಿನ ಎರಡು ಚರ್ಮಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಲಾಕೃತಿಗಳು ಆಫ್ರಿಕಾ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಬಿಂಬಿಸುವ ಉಡುಗೆ- ತೊಡುಗೆಗಳನ್ನುಟ್ಟ ಸ್ತ್ರೀಯರ ಕಲಾಕೃತಿಗಳಾಗಿವೆ. ಆರೋಪಿ ಅಪ್ಪಯ್ಯ ಬುಧವಾರ ರಾತ್ರಿ ಕೆ.ಆರ್.ಪುರ ಬಳಿಯ ಹೋಟೆಲ್ ಬಳಿ ಅಕ್ರಮವಾಗಿ ಆನೆದಂತ ಕಲಾಕೃತಿ ಹಾಗೂ ಹೆಬ್ಬಾವಿನ ಚರ್ಮವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಅನುಮಾನಗೊಂಡು ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆನೆದಂತ ಕಲಾಕೃತಿ ಹಾಗೂ ಹೆಬ್ಬಾವಿನ ಚರ್ಮ ವಸ್ತುಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ಆರೋಪಿ ಅಪ್ಪಯ್ಯನ ವಿರುದ್ಧ ಅರಣ್ಯ ಸಂರಕ್ಷಣಾ ಕಾಯ್ದೆ 1972 ಹಾಗೂ ಐಪಿಸಿ ಕಲಂ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೆ.ಆರ್.ಪುರ ಪೊಲೀಸ್ ಇನ್ಸ್ ಪೆಕ್ಟರ್ ನಂದೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.