ವಯ್ನಾಡ್, (ಕೇರಳ) www.bengaluruwire.com : ದಟ್ಟ ಪಶ್ಚಿಮ ಘಟ್ಟಗಳ ಕಾನನದ ನಡುವೆ ಬೃಹದಾಕಾರದ ಬಂಡೆಯೊಳಗಿರುವ ಎಡಕ್ಕಲ್ ಗುಹೆಯೊಳಗೆ (Edakkal Cave) ಕ್ರಿಸ್ತಪೂರ್ವ 6,000 ವರ್ಷಗಳ ಹಿಂದೆ ಶಿಲಾಯುಗದ ಮಾನವನು ನೆಲಸಿದ್ದ ಎಂಬುದೇ ಒಂದು ಸೋಜಿಗದ ಸಂಗತಿ. ಈ ಗುಹೆಯೊಳಗಿನ ಕಲ್ಲಿನ ಮೇಲೆ ಶಿಲಾಯುಗದ ಮಾನವನು ರಚಿಸಿದ ಚಿತ್ರಕಲೆಗಳು ಇಂದಿಗೂ ಆಗಿನ ಪ್ರಾಚೀನ ನಾಗರೀಕತೆ ಮತ್ತು ಸಂಸ್ಕೃತಿಯನ್ನು ಸಾರಿ ಹೇಳುತ್ತಿದೆ.
ಅಂದಹಾಗೆ ಈ ಎಡಕ್ಕಲ್ ಗುಹೆಗಳು ಶಿಲಾಯುಗದ ಮಾನವನ ಕಲೆಯನ್ನು ಪ್ರಚುರಪಡಿಸುವ ಕೆತ್ತನೆಗಳನ್ನು ಒಳಗೊಂಡಿರುವ ಭಾರತದ ಏಕೈಕ ತಾಣವಾಗಿದೆ. ವಿಶ್ವಾದಾದ್ಯಂತ ಇರುವ ಪುರಾತತ್ವ ಶಾಸ್ತ್ರಜ್ಞರು, ಇತಿಹಾಸಕಾರರನ್ನು ಹೆಚ್ಚಾಗಿ ಗಮನ ಸೆಳೆದಿರುವ ಈ ಎಡಕ್ಕಲ್ ಗುಹೆಗಳು ಪ್ರವಾಸಿ ಕ್ಷೇತ್ರವಾಗಿಯೂ ಬೆಳೆದಿದೆ. ಕೇರಳದ ವಯನಾಡ್ ಜಿಲ್ಲೆಯ ಕಲ್ಪೆಟ್ಟಾದಿಂದ 25 ಕಿ.ಮೀ ದೂರದಲ್ಲಿದೆ ಈ ಅಪರೂಪದ ಗುಹೆ. ಅಂಬಕುಟ್ಟಿ ಮಲೆ ಬೆಟ್ಟವನ್ನು ಹತ್ತಿ ಈ ಸ್ಥಳವನ್ನು ತಲುಪಬಹುದಾಗಿದೆ. ಈ ಪ್ರಾಚೀನ ಪ್ರಾಕೃತಿಕ ರಚನೆಗಳು ಸಮುದ್ರ ಮಟ್ಟದಿಂದ 1200 ಮೀಟರುಗಳಷ್ಟು ಎತ್ತರದಲ್ಲಿದೆ.
ಎಡಕ್ಕಲ್ ಗುಹೆಯಲ್ಲಿ ಒಟ್ಟು ಎರಡು ಗುಹೆಗಳಿವೆ. ಕೆಳಗಿನ ರಚನೆಯ ಗುಹೆಯು 18 ಅಡಿ ಉದ್ದ, 12 ಅಡಿ ಅಗಲ ಹಾಗೂ 10 ಅಡಿ ಎತ್ತರವಿದೆ. ಮೇಲ್ಬಾಗದಲ್ಲಿರುವ ಗುಹೆಯು 96 ಅಡಿ ಉದ್ದ, 22 ಅಡಿ ಅಗಲ, 18 ಅಡಿ ಎತ್ತರವಾಗಿದೆ. ಮೇಲ್ಬಾಗದ ಗುಹೆಯಲ್ಲಿ ಎರಡು ಕಲ್ಲುಗಳನ್ನು ಸೀಳಿ ಬೃಹತ್ ಬಂಡೆಯೊಂದು ಮಧ್ಯದಲ್ಲಿ ಸಿಲುಕಿಕೊಂಡು ಗುಹೆಯ ರಚನೆಯಾಗಿದೆ. ಹೀಗಾಗಿ ಇದನ್ನು ಎಡಕ್ಕಲ್ ಗುಹೆ ಎಂದು ಕರೆಯಲಾಗುತ್ತದೆ.
ಶ್ರೀಮಂತವಾಗಿದ್ದ ಪ್ರಾಚೀನ ನಾಗರೀಕತೆಗೆ ಇಲ್ಲಿದೆ ಸಾಕ್ಷಿ :
ಈ ಗುಹೆಯಲ್ಲಿ ಶಿಲಾಯುಗದ ಮಾನವ, ಪ್ರಾಣಿಗಳು ಹಾಗೂ ಆಗಿನ ಶಿಲಾಯುಗದ ಮಾನವ ಬಳಸುತ್ತಿದ್ದ ವಸ್ತುಗಳನ್ನು ಗುಹೆಯ ಗೋಡೆಗಳ ಮೇಲೆ ಕೆತ್ತಲಾಗಿದೆ. ಈ ಕೆತ್ತನೆಗಳು ಪ್ರಾಚೀನ ಇತಿಹಾಸ ಪೂರ್ವ ಯುಗದಲ್ಲಿ ಆಗಿನ ನಾಗರೀಕತೆ ಎಷ್ಟು ಶ್ರೀಮಂತವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಉಳಿದಿದೆ.
ಮಲಬಾರ್ ಜಿಲ್ಲೆಯಲ್ಲಿ 1890ರಲ್ಲಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಆಗಿದ್ದ ಫ್ರೆಡ್ ಫಾಸೆಟ್ ಎಂಬಾತ ವಯ್ನಾಡಿಗೆ ಭೇಟೆಯಾಡಲು ಬಂದಾಗ ಎಡಕ್ಕಮಲೆಯ ಪಶ್ಚಿಮ ಭಾಗದಲ್ಲಿರುವ ಎಡಕ್ಕಲ್ ಕಲ್ಲಿನ ಆವಾಸಸ್ಥಾನವಾದ ಈ ಎಡಕ್ಕಲ್ ಗುಹೆಯನ್ನು ಮೊದಲಿಗೆ ಪತ್ತೆಹಚ್ಚಿದ್ದ. ಆಗ ಈ ಗುಹೆಯಲ್ಲಿ ನವ ಶಿಲಾಯುಗದ ಜನರು (Neolothic people) ಬಾಳಿ ಬದುಕಿದ್ದರು ಎಂಬುದನ್ನು ಈತ ಗುರುತಿಸಿದ್ದ.
ಇದನ್ನೂ ಓದಿ : BW SPECIAL | BESCOM METERS SHORTAGE | ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಮೀಟರ್ ಪೂರೈಕೆಯಲ್ಲಿ ತೀವ್ರ ಕೊರತೆ….!
ಶಿಲಾ ಕೆತ್ತನೆ ಮಧ್ಯ ಶಿಲಾಯುಗ ಮತ್ತು ನವಶಿಲಾಯುಗಕ್ಕೆ ಸೇರಿದವು :
ಎಡಕ್ಕಲ್ ಗುಹೆಯಲ್ಲಿ ಶಿಲಾ ಗೋಡೆಗಳ ಮೇಲಿನ ಕೆತ್ತನೆಗಳು ನವಶಿಲಾಯುಗ ಹಾಗೂ ಮಧ್ಯ ಶಿಲಾಯುಗ (Mesolithic age) ಕ್ಕೆ ಸೇರಿದವು ಎಂದು ಪುರಾತತ್ವ ತಜ್ಞರು ಹೇಳುತ್ತಾರೆ. ಗುಹೆಯಲ್ಲಿನ ಮಾನವನ ರಚನೆಯ ಚಿತ್ರಕಲೆಯಲ್ಲಿ ವ್ಯಕ್ತಿಯ ಕೂದಲು ಕೆದರಿರುವ ಹಾಗೂ ಕೆಲವು ಮಾನವರು ಮುಖವಾಡ ಧರಿಸಿರುವುದನ್ನು ಪತ್ತೆಹಚ್ಚಲಾಗಿದೆ. ಇದರ ಜೊತೆಗೆ ಹಳೆಗನ್ನಡ, ತಮಿಳು ಹಾಗೂ ಬ್ರಾಹ್ಮಿ ಅಕ್ಷರಗಳು ಎಡಕ್ಕಲ್ ಗುಹೆಯಲ್ಲಿ ಕಂಡು ಬಂದಿದೆ. ಎಡಕ್ಕಲ್ ಗುಹೆಯಲ್ಲಿ ಇತ್ತೀಚೆಗೆ 400 ರೀತಿಯ ಸಂಕೇತವಿರುವ ಕೆತ್ತನೆಗಳನ್ನು ಗುರ್ತಿಸಲಾಗಿದೆ. ಅದರಲ್ಲಿ ಮಾನವನೊಬ್ಬ ತನ್ನ ಕೈಯಲ್ಲಿ ಜಾಡಿಯ ರೂಪದ ಲೋಟ ಹಿಡಿದಿರುವ ಚಿತ್ರ (a man with a jar cup) ಪ್ರಮುಖವಾಗಿದೆ. ಈ ಗುಹೆಗೂ ವಿಶ್ವದ ಅತಿ ಪ್ರಾಚೀನ ನಾಗರೀಕತೆಯಾದ ಸಿಂಧೂ ಕಣಿವೆಯ ನಾಗರೀಕತೆಗೂ ಸಂಪರ್ಕವಿರುವುದು ತಿಳಿದು ಬಂದಿದೆ.
ಧಾರ್ಮಿಕ ಮತ್ತು ಪೌರಾಣಿಕ ಹಿನ್ನಲೆಯುಳ್ಳ ಸ್ಥಳ :
ಎಡಕ್ಕಲ್ ಗುಹೆಯ ರಚನೆಯ ಹಿಂದೆ ಪೌರಾಣಿಕ ಮತ್ತು ಧಾರ್ಮಿಕ ಹಿನ್ನಲೆಗಳು ಸೇರಿಕೊಂಡಿದೆ. ರಾಮಾಯಣದ ಶ್ರೀರಾಮನ ಮಕ್ಕಳಾದ ಲವ ಮತ್ತು ಕುಶ ಅವರು ಬಿಲ್ಲಿನಿಂದ ಚಿಮ್ಮಿದ ಬಾಣದಿಂದ ಈ ಗುಹೆಗಳು ನಿರ್ಮಾಣವಾಗಿದೆ ಎಂದು ಪುರಾಣದ ಕಥೆಗಳಿವೆ. ಇನ್ನು ಈ ಗುಹೆಯ ರಚನೆಯ ಹಿಂದೆ ಕುಟ್ಟಿ ಚೇತನ ಹಾಗೂ ಮುಡಿಯಪಿಲ್ಲಿ ಎನ್ನುವ ದೇವರಿಂದ ಈ ಗುಹೆ ರಚನೆಯಾಗಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ. ಹಾಗಾಗಿ ಇಲ್ಲಿನ ಜನತೆ ಈ ದೇವತೆಯಿರುವ ಸ್ಥಳಕ್ಕೆ ಯಾತ್ರೆ ಕೈಗೊಂಡು ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ.
ಎಡಕ್ಕಲ್ ಗುಹೆ ಭೇಟಿ ಸಮಯ? :
ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ಈ ಎಡಕ್ಕಲ್ ಗುಹೆಯ ಪ್ರವೇಶಕ್ಕೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಶುಲ್ಕ ಪಾವತಿಸಿ ಪ್ರವಾಸಿಗರು ಈ ಗುಹೆಗೆ ಭೇಟಿ ನೀಡಿ ಪ್ರಾಚೀನ ಶಿಲಾಯುಗದ ಮಾನವರು ಕಲ್ಲಿನ ಮೇಲೆ ಕೆತ್ತಿನ ಗುಹಾ ಕಲೆಗಳನ್ನು ಕಣ್ತುಂಬಿಕೊಳ್ಳಬಹುದು. ಅಂಬುಕುಟ್ಟಿ ಬೆಟ್ಟದ ಬುಡದವರೆಗೆ ಬಸ್, ಕಾರು ಅಥವಾ ಖಾಸಗಿ ವಾಹನದ ಮೂಲಕ ಪ್ರವಾಸಿಗರು ತಲುಪಬಹುದು.