ಬೆಂಗಳೂರು, ಮೇ.30 www.bengaluruwire.com : ಪೆಟ್ರೋಲಿಯಂ ಉತ್ಪನ್ನಗಳ ದರ ದಿಢೀರ್ ಇಳಿಕೆ ಹಿನ್ನೆಲೆಯಲ್ಲಿ ಬಂಕ್ ಮಾಲೀಕರಿಗೆ ಉಂಟಾದ ನಷ್ಟ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 31 ರಂದು ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ (AKFT) ಸಂಘಟನೆ ಅಡಿಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರು (Petrol Bunk Owners) ತೈಲ ಖರೀದಿ ನಿಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಲಭ್ಯತೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.
2017 ರಿಂದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ 1 ರೂ. ಕಮಿಷನ್ ನೀಡಬೇಕೆಂದು ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಸಂಘಟನೆಯು ಬೇಡಿಕೆಯಿಡುತ್ತಾ ಬಂದಿದೆ. ಅಂದಿನಿಂದ ಈತನಕ ತಮ್ಮ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ, ವಿಧಿಯಿಲ್ಲದೆ ತೈಲ ಡಿಪೋಗಳಿಂದ ಇಂಧನ ಖರೀದಿ ಮಾಡದೆ ಪ್ರತಿಭಟನೆ ನಡೆಸಲು ಫೆಡರೇಷನ್ ನಿರ್ಧರಿಸಿದೆ.
ರಾಜ್ಯದಲ್ಲಿ ಒಟ್ಟು 4,800 ಪೆಟ್ರೋಲ್ ಬಂಕ್ ಗಳಿವೆ. ಈ ಬಂಕ್ ಗಳು ಸರಾಸರಿಯಾಗಿ ಪ್ರತಿದಿನ ಒಂದು ಸಾವಿರ ಲೋಡ್ ನಷ್ಟು ಪೆಟ್ರೋಲ್ ಮತ್ತು ಡೀಸೆಲ್ ಗಳನ್ನು ವಿವಿಧ ಪೆಟ್ರೋಲಿಯಮ್ ಕಂಪನಿಗಳಿಂದ ಖರೀದಿ ಮಾಡುತ್ತವೆ. ಆದರೆ ನಾಳೆ ಪ್ರತಿಭಟನೆ ಕೈಗೊಳ್ಳಲಿರುವ ಹಿನ್ನಲೆಯಲ್ಲಿ ಸರಾಸರಿ 1.25 ಕೋಟಿ ಲೀ. ಇಂಧನ ಖರೀದಿಯು ಸ್ಧಗಿತಗೊಳ್ಳಲಿದೆ. ಪ್ರತಿ ಪೆಟ್ರೋಲ್ ಬಂಕ್ ಗಳಲ್ಲಿ ಮೂರು ನಾಲ್ಕು ದಿನ ಇಂಧನ ಸಂಗ್ರಹಣೆಯಿದೆ. ಹಾಗಾಗಿ ಗ್ರಾಹಕರು ಹೆದರಬೇಕಿಲ್ಲ ಎಂದು ಎಕೆಎಫ್ ಟಿ ಫೆಡರೇಷನ್ ಅಧ್ಯಕ್ಷ ಕೆ.ಎಂ.ಬಸವೇಗೌಡ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“2017ರ ಆಗಸ್ಟ್ ನಲ್ಲಿ ಪೆಟ್ರೋಲ್ ಡೀಲರ್ಸ್ ಗೆ ಪೆಟ್ರೋಲ್, ಡೀಸೆಲ್ ಕಮಿಷನ್ ಅನ್ನು ಕೇಂದ್ರ ಸರ್ಕಾರ ನಿಗಧಿಪಡಿಸಿತ್ತು. ಆನಂತ್ರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದರೂ ಪೆಟ್ರೋಲ್ ಡೀಲರ್ ಗಳ ಕಮಿಷನ್ ಹೆಚ್ಚಳ ಮಾಡಿಲ್ಲ. ಆ ಕಮಿಷನ್ ಅನ್ನು ಏರಿಕೆ ಮಾಡಬೇಕು. ಅದೇ ರೀತಿ ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಲರ್ ಗಳಿಗೆ ತಿಳಿಸದೆ ಏಕಾ ಏಕಿ ಇಂಧನದ ಅಬಕಾರಿ ಸುಂಕವನ್ನು ಇಳಿಕೆ ಮಾಡಿದೆ. ಇದರಿಂದಾಗಿ ತೈಲ ಬೆಲೆ ಇಳಿಕೆಗೆ ಮುನ್ನ ತೆರಿಗೆ ಕಟ್ಟಿ ಇಂಧನ ಖರೀದಿ ಮಾಡಿದ್ದರಿಂದ ಪ್ರತಿ ಮಾರಾಟಗಾರರು ಕನಿಷ್ಟ 2 ಲಕ್ಷದಿಂದ 25 ಲಕ್ಷ ರೂ. ತನಕ ನಷ್ಟ ಅನುಭವಿಸಿದ್ದಾರೆ. ಈ ನಷ್ಟವನ್ನು ಕೇಂದ್ರ ಸರ್ಕಾರ ಭರಿಸಬೇಕು. ಕೇಂದ್ರ ಸರ್ಕಾರದ ಗಮನ ಸೆಳೆಯಲು ಖರೀದಿ ಸ್ಥಗಿತ ಮೂಲಕ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ. ನಮ್ಮ ಪ್ರತಿಭಟನೆಯಿಂದ ಗ್ರಾಹಕರಿಗೆ ತೊಂದರೆಯಾಗದು.”
– ಕೆ.ಎಂ.ಬಸವೇಗೌಡ, ಅಧ್ಯಕ್ಷರು, ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್
ಪೆಟ್ರೋಲ್ ಬಂಕ್ ನಡೆಸುವುದು ಸುಲಭವಲ್ಲ :
ಬಂಕ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರತಿ ವರ್ಷ ವೇತನ ಪರಿಷ್ಕರಣೆ ಮಾಡಬೇಕು. ಅಲ್ಲದೇ, ಕಂಪನಿಗಳ ಡೀಲರ್ಗಳು ಬಂಕ್‌ಗಳಲ್ಲಿ ಸಿಬ್ಬಂದಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸೂಚನೆ ನೀಡಿದೆ. ಶೌಚಾಲಯ, ತಿಂಡಿ, ಊಟದ ವ್ಯವಸ್ಥೆ, ಶುಚಿತ್ವ ಹೀಗೆ ಎಲ್ಲವನ್ನೂ ನಿರ್ವಹಿಸಬೇಕಾಗಿರುವುದರಿಂದ ಪೆಟ್ರೋಲ್ ಬಂಕ್ಗಳನ್ನು ನಡೆಸುವುದು ಅಸಾಧ್ಯವಾಗಿದೆ ಎಂದು ಸಂಘಟನೆಯು ತಿಳಿಸಿದೆ.
2017ರ ಆಗಸ್ಟ್ ನಲ್ಲಿ ಪೆಟ್ರೋಲಿಯಂ ಡೀಲರ್ ಗಳ ಕಮಿಷನ್ ನಿಗಧಿ ಮಾಡಲಾಗಿತ್ತು. ಆಗ ಲೀಟರ್ ಪೆಟ್ರೋಲ್ ಬೆಲೆ 75 ರೂ. ಹಾಗೂ ಡೀಸೆಲ್ ಬೆಲೆ 60 ರೂ. ನಷ್ಟಿತ್ತು. ಆದರೆ ಈಗ ಪೆಟ್ರೋಲ್ ಬೆಲೆ 101.94 ರೂ. ಹಾಗೂ ಡೀಸೆಲ್ ರೇಟು 87.89 ರೂ. ನಷ್ಟಾಗಿದೆ. ಇದರಿಂದಾಗಿ ಪೆಟ್ರೋಲ್ ಬಂಕ್ ಮಾಲೀಕರು ಹೆಚ್ಚಿನ ಬಂಡವಾಳ ಹೂಡಬೇಕಿದೆ. ಎಲ್ಲಾ ರೀತಿಯ ವಸ್ತುಗಳ ಬೆಲೆ ದುಬಾರಿಯಾದರೂ ತಮ್ಮ ಕಮಿಷನ್ ದರ ಏರಿಕೆಯಾಗದ ಕಾರಣ ಪೆಟ್ರೋಲ್ ಬಂಕ್ ನಿರ್ವಹಣೆ ಕಷ್ಟವಾಗಿದೆ ಎಂದು ಎಕೆಎಫ್ ಟಿ ಸಂಘಟನೆಯ ತಾರಾನಾಥ್ ಅಳಲು ತೋಡಿಕೊಂಡಿದ್ದಾರೆ.