ಬೆಂಗಳೂರು, ಮೇ.20(www.bengaluruwire.com) :
ರಾಜಧಾನಿಯಲ್ಲಿ ಮಳೆ ನೀರು ನಿರ್ವಹಣೆಗೆ ಅಷ್ಟ ದಿಕ್ಕುಗಳಿಗೂ ಅಂದರೆ ಪ್ರತಿ ಬಿಬಿಎಂಪಿ ವಲಯದಲ್ಲಿಯೂ ಸಚಿವರ ಮತ್ತು ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆಯನ್ನು ರಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುರಿದ ಭಾರಿ ಮಳೆಯಿಂದಾಗಿ ಕೆ.ಅರ್.ಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಕೆಲ ಪ್ರದೇಶಗಳಲ್ಲಿ ಹಾನಿಯನ್ನುಂಟು ಮಾಡಿದ ಸ್ಥಳಕ್ಕೆ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಕಾರ್ಯಪಡೆಯಲ್ಲಿ ಒಬ್ಬ ಸಚಿವರನ್ನು ಮುಖ್ಯಸ್ಥರನ್ನಾಗಿ ಮಾಡಿ, ಆ ಭಾಗದ ಶಾಸಕರು, ಸಂಸದರು, ಎಂಎಲ್ ಸಿ ಗಳು , ಹಿರಿಯ ಅಧಿಕಾರಿಗಳು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. ಈ ಕಾರ್ಯಪಡೆಗಳ ನೇತೃತ್ವದಲ್ಲಿ ಆಯಾ ವಲಯದ ಅಭಿವೃದ್ಧಿ ಕಾರ್ಯಗಳು, ಪ್ರವಾಹದಂತಹ ಸಂದರ್ಭಗಳಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನೀಡಿ ಇಂದೇ ಆದೇಶ ಹೊರಡಿಸಲಾಗುವುದು ಎಂದರು.
ಕ್ಷೇತ್ರದ ಅಭಿವೃದ್ಧಿ,ಕಾಮಗಾರಿ ಪರಿಶೀಲನೆ, ತುರ್ತು ಸಂದರ್ಭದಲ್ಲಿ ಟಾಸ್ಕ್ಫೋರ್ಸ್ ವಲಯ ಉಸ್ತುವಾರಿ ನೋಡಿಕೊಳ್ಳಲಿದೆ. ಬೆಂಗಳೂರು ಅಜೆಂಡಾಗೆ ಟಾಸ್ಕ್ ಫೋರ್ಸ್ ಪುನಾರಚನೆಗೆ ಈ ಹಿಂದೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಸಲಹೆ ನೀಡಿದ್ದರು. ಆ ಸಲಹೆ ಬೆನ್ನೆಲ್ಲೆ ಬಸವರಾಜ ಬೊಮ್ಮಾಯಿ ಟಾಸ್ಕ್ ಫೋರ್ಸ್ ರಚಿಸಲು ಮುಂದಾಗಿದ್ದಾರೆ.
ಕೆ.ಅರ್.ಪುರ ಕ್ಷೇತ್ರದ ಶಾಸಕ ಹಾಗೂ ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಅವರೊಂದಿಗೆ ಕ್ಷೇತ್ರದ ವ್ಯಾಪ್ತಿಯಲ್ಲಿನ ಸಾಯಿ ಬಡಾವಣೆ, ಪೈ ಬಡಾವಣೆ, ನಾಗಪ್ಪ ಬಡಾವಣೆ, ಹೊರ ಮಾವು ಸೇರಿದಂತೆ ಹಲ ಪ್ರದೇಶಗಳಲ್ಲಿ ಸಂಚರಿಸುವ ಮೂಲಕ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ನಿನ್ನೆ ಒಂದು ಭಾಗ ನೋಡಿದ್ದೇವೆ. ಇಂದು ಮತ್ತೊಂದು ಭಾಗ ಪರಿಶೀಲನೆ ಮಾಡಿದ್ದೇವೆ. ಈ ಭಾಗದ ರೈಲ್ವೆ ಭಾಗದಲ್ಲಿ ಸಮಸ್ಯೆ ಇದೆ. 42 ಕೋಟಿ ರೂ. ಅನುದಾನದಲ್ಲಿ ಅಲ್ಲಿ ಕಾಮಗಾರಿ ನಡೆಸಿ ಸಮಸ್ಯೆ ಬಗೆ ಹರಿಸುತ್ತೇವೆ. 900 ಮೀಟರ್ ಹೆಚ್ಚುವರಿ ಮಳೆನೀರು ಚರಂಡಿ ಕೂಡ ಮಾಡುತ್ತಿದ್ದೇವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಕೆಲವು ಕಡೆ ರಾಜಕಾಲುವೆ ಮೇಲೆ ಮನೆ ನಿರ್ಮಾಣ ಮಾಡಿದ್ದಾರೆ. ಅದನ್ನು ತೆರವು ಮಾಡಿಸುವ ಕೆಲಸ ಲಮಾಡುತ್ತೇವೆ. ಯಾವುದೇ ಕೆರೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಕಠಿಣ ಆದೇಶ ಮಾಡಿದ್ದೇನೆ. ಹಾಗಾಗಿ ಕೆರೆ ಜಾಗಗಳಲ್ಲಿ ಬಿಡಿಎ ವಸತಿ ನಿರ್ಮಾಣ ನೋಟಿಫಿಕೆಷನ್ ರದ್ದು ಮಾಡಿದ್ದೇವೆ ಎಂದು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಸಿಂಗ್, ಬಿಬಿಎಂಪಿ ಮುಖ್ಯ ಅಯುಕ್ತರಾದ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ದಾಸರಹಳ್ಳಿಯ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಎಚ್.ಡಿ.ಕೆ ಭೇಟಿ – ಪರಿಶೀಲನೆ :
ದಾಸರಹಳ್ಳಿಯ ರುಕ್ಮಿಣಿನಗರ, ಬೆಲ್ಮಾರ್ ಬಡಾವಣೆ, ಚಿಕ್ಕಬಾಣಾವಾರ ಪ್ರದೇಶಗಳ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಶುಕ್ರವಾರ ಭೇಟಿ ನೀಡಿದರು.
ನಗರ ಪ್ರದಕ್ಷಿಣೆ ವೇಳೆ ಕುಮಾರಸ್ವಾಮಿ ಮಾತನಾಡಿ, ನಾನು ಮುಖ್ಯಮಂತ್ರಿ ಆಗಿದ್ದಾಗ ದಾಸರಹಳ್ಳಿ ಕ್ಷೇತ್ರಕ್ಕೆ ನೀಡಿದ್ದ ಅನುದಾನವನ್ನು ನಂತರ ತಡೆ ಹಿಡಿದರು. ಇಷ್ಟು ವರ್ಷಗಳಾದರೂ ಯಾಕೆ ಇಲ್ಲೆಲ್ಲಾ ಅಭಿವೃದ್ಧಿ ಆಗಿಲ್ಲ? ಸಣ್ಣ ಮಕ್ಕಳನಿಟ್ಟುಕೊಂಡು ಇಲ್ಲಿನ ಜನತೆ ಹೇಗೆ ಜೀವನ ಮಾಡಬೇಕು? ನಗರದ 28 ವಿಧಾನಸಭಾ ಕ್ಷೇತ್ರದಲ್ಲಿ 15 ವರ್ಷ ದಲ್ಲಿ ಎಷ್ಟು ಹಣ ಬಿಡುಗಡೆ ಮಾಡಿದ್ದಾರೆ ಎಂದು ಮಾಹಿತಿ ಪಡೆಯುತ್ತೇನೆ.
ನಿಮ್ಮ ಶಾಸಕರ ಕ್ಷೇತ್ರ ಗಳಿಗೆಲ್ಲ ಮುಖ್ಯಮಂತ್ರಿ ಗಳೇ ನೀವು ಹೋಗಬೇಕಾಗಿದೆ. ನೀವು ಎಷ್ಟು ವರ್ಷ ಇರ್ತೀರೋ ಗೊತ್ತಿಲ್ಲ. ಜನರ ಜೀವನದ ಜೊತೆ ಚೆಲ್ಲಾಟ ಆಡಬೇಡಿ. ನಗರ ಪ್ರದಕ್ಷಿಣಿ ಕಾಟಾಚಾರದ ಫೋಟೋ ಶೂಟ್ ಆಗಬಾರದು. ಬಡವರ ಜೀವನದ ಜೊತೆ ಚೆಲ್ಲಾಟ ಆಡವಾರದು. ಕೆಆರ್ ಪುರಂ ವಿಧಾನಸಭಾ ಕ್ಷೇತ್ರಕ್ಕೆ 1600 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಆದ್ರೆ ಅಲ್ಲಿನ ಜನ ನೀರಿನಲ್ಲಿ ತೇಲುತ್ತಿದ್ದಾರೆ.
ಬೆಂಗಳೂರಿನಲ್ಲಿ ಚಂಬಲ್ ಕಣಿವೆ ರೀತಿಯ ದರೋಡೆಕೋರರಿದ್ದಾರೆ :
ಸಿಎಂ ನಾಲ್ಕು ದಿನದ ನಗರ ಪ್ರದಕ್ಷಣೆಯಲ್ಲಿ ಅವರಿಗೆ ನಗರದಲ್ಲಿನ ಮಳೆಹಾನಿಯ ಅನುಭವ ಆಗಿದೆ. ಒಂದು ಕಾಲದಲ್ಲಿ ಚಂಬಲ್ ಕಣಿವೆ ದರೋಡೆ ಕೋರರನ್ನ ಕಾಣುತ್ತಿದ್ದವು. ಈಗ ಬೆಂಗಳೂರಿನಲ್ಲಿ ದರೋಡೆ ಕೋರರಿದ್ದಾರೆ. ಸಾಕು ದರೋಡೆ ಮಾಡಿದ್ದು. ತಿನ್ನೋದು ಎರಡು ತುತ್ತು ಅನ್ನ, ಒಂದು ಸಲ ಯೋಚನೆ ಮಾಡಿ ಎಂದು ಬಿಬಿಎಂಪಿ ಮತ್ತಿತರ ಸಂಬಂಧಿಸಿದ ಅಧಿಕಾರಿಗಳಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದರು.
“20 ವರ್ಷದಿಂದ ರಾಜಕಾಲುವೆ ಅಂತಾ ಚರ್ಚೆ ಮಾಡುತ್ತಿದ್ದಾರೆ. ಇಷ್ಟು ದಿನ ಬೇಕಾ ಸಮಸ್ಯೆ ಬಗೆಹರಿಸೋಕೆ? ಜನಗಳ ಮದ್ಯೆ ಶೋ ಮಾಡೊದಲ್ಲ ಕಾಮನ್ ಮ್ಯಾನ್ ಚೀಫ್ ಮಿನಿಸ್ಟರ್, ಕಾಮನ್ ಮ್ಯಾನ್ಗಳ ಸಮಸ್ಯೆ ಬಗೆಹರಿಸಬೇಕು.
ಮಾಧ್ಯಮಗಳು ಟೀಕೆ ಮಾಡಿವೆ ಅಂತಾ ಮಾಧ್ಯಮಗಳ ವಿರುದ್ದ ಮಾತನಾಡೋದಲ್ಲ. ಸಮಸ್ಯೆ ಇರುವ ಸ್ಥಳಗಳಲ್ಲಿ ಧನಾತ್ಮಕವಾಗಿ ಕೆಲಸ ಮಾಡಬೇಕು. ಕಾಟಾಚಾರದ ಕೆಲಸ ಮಾಡಬಾರದು. ನಗರ ಪ್ರದಕ್ಷಿಣೆ ಮಾಡಬೇಡಿ, ಮಾಧ್ಯಮಗಳ ವಿಡಿಯೋ ತುಣುಕುಗಳನ್ನ ನೋಡಿ. ಆ ವಿಡಿಯೋ ಇಟ್ಟುಕೊಂಡು ಸಮಸ್ಯೆ ಬಗೆಹರಿಸಿ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಿವಿಮಾತು ಹೇಳಿದರು.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRIDL) ಅನ್ನೋ ಸಂಸ್ಥೆಯನ್ನು ಮೊದಲು ಮುಚ್ಚಿ. ಈ ಕೆಆರ್ಐಡಿಎಲ್ ಸಂಸ್ಥೆಯಿಂದ ಲೂಟಿ ಮಾಡೋಕೆ ಇಟ್ಟುಕೊಳ್ಳಲಾಗಿದೆ.
ಅವರ ಮಂತ್ರಿ ಮಂಡಲ, ಪಕ್ಷದ ಶಾಸಕರ ಅಭಿವೃದ್ದಿ ಆದರೆ ಮಾತ್ರ ಅದು ಅಭಿವೃದ್ದಿನಾ? ಮಳೆಹಾನಿಯಿಂದ ನಷ್ಟಕ್ಕೊಳಗಾದವರಿಗೆ 25 ಸಾವಿರ ಪರಿಹಾರ ಘೋಷಣೆ ಮಾಡಿದ್ದೀರ, ಜನಗಳು ಭಿಕ್ಷುಕರಾ?
ಮಳೆಯಿಂದ ನಷ್ಟ ಆಗಿರುವವರಿಗೆ ಸರ್ಕಾರ ಸರಿಯಾದ ಪರಿಹಾರ ಕೊಡಬೇಕು. ತೋರಿಕೆಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ಸಾರ್ವಜನಿಕರಿಗೆ ನಷ್ಟ ಆಗಿರುವ ಶೇ.75ರಷ್ಟು ಪರಿಹಾರ ಕೊಡಬೇಕು. ಆ ಪರಿಹಾರ ನೀಡಿಕೆಯಲ್ಲೂ ಅಧಿಕಾರಿಗಳು ಮತ್ತೆ ದುಡ್ಡು ಹೊಡೆಯಲು ನೋಡುತ್ತಾರೆ. ಹಾಗಾಗದಂತೆ ಎಚ್ಚರಿಕೆವಹಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದರು.