ಬೆಂಗಳೂರು, (www.bengaluruwire.com) : ನೈರುತ್ಯ ರೈಲ್ವೆಯು ತನ್ನ ವ್ಯಾಪ್ತಿಯಲ್ಲಿನ ನಿಲ್ದಾಣಗಳು, ಸೇವಾ ಕಟ್ಟಡಗಳು, ಲೆವೆಲ್ ಕ್ರಾಸಿಂಗ್ ಗೇಟ್ ಗಳು ಮತ್ತಿತರ ಕಡೆಗಳಲ್ಲಿ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಳೆದ ಆರ್ಥಿಕ ವರ್ಷದಲ್ಲಿ ಸೌರಶಕ್ತಿಯ ಮೂಲಕ ಒಟ್ಟಾರೆ 46.11 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು ವಿದ್ಯುತ್ ಬಿಲ್ ನಲ್ಲಿ 1.96 ಕೋಟಿ ರೂಪಾಯಿಗಳ ಉಳಿತಾಯವಾಗಿದೆ.
ಸೌರಶಕ್ತಿಯನ್ನು ಬಳಸಿಕೊಳ್ಳುವ ಮೂಲಕ ನಿಲ್ದಾಣಗಳ ವಿದ್ಯುತ್ ಅಗತ್ಯವು ಪೂರೈಕೆಯಾಗುವುದರ ಜೊತೆಗೆ ರೈಲ್ವೆಯ ವಿದ್ಯುತ್ ಮೇಲಿನ ವೆಚ್ಚದಲ್ಲಿಯೂ ಸಹಾ ಉಳಿತಾಯವಾಗುತ್ತಿದೆ.
ಸೇವಾಕಟ್ಟಡಗಳು, ಪ್ರಮುಖ ನಿಲ್ದಾಣಗಳಲ್ಲಿ ನೈರುತ್ಯ ರೈಲ್ವೆಯು ಇದುವರೆಗೆ ಒಟ್ಟಾರೆ 4656.60 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರಫಲಕಗಳನ್ನು ಅಳವಡಿಸಿದೆ. ನೈರುತ್ಯ ರೈಲ್ವೆಯು 120 ನಿಲ್ದಾಣಗಳ ಛಾವಣಿಗಳ ಮೇಲೆ (ಪ್ರಮುಖ ನಿಲ್ದಾಣಗಳು- ಎಸ್.ಎಸ್.ಎಸ್. ಹುಬ್ಬಳ್ಳಿ, ಕೆ.ಎಸ್.ಆರ್.ಬೆಂಗಳೂರು, ಮೈಸೂರು, ಯಶವಂತಪುರ ಇತ್ಯಾದಿ) ಮತ್ತು 7 ಸೇವಾ ಕಟ್ಟಡಗಳಲ್ಲಿ (ನೈರುತ್ಯ ರೈಲ್ವೆಯ ಪ್ರಧಾನ ಕಾರ್ಯಾಲಯವಾದ ರೈಲ್ ಸೌಧ, ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯಗಳು, ಹುಬ್ಬಳ್ಳಿ ಮತ್ತು ಬೆಂಗಳೂರಿನ ರೈಲ್ವೆ ಆಸ್ಪತ್ರೆಗಳು, ಹಾಗೂ ಬೆಂಗಳೂರಿನ ಪಾರ್ಸೆಲ್ ಕಾರ್ಯಾಲಯ) ಸೌರಫಲಕಗಳನ್ನು ಒದಗಿಸಿದೆ.
ವರ್ಕ್ ಷಾಪ್‌ಗಳು (ಹುಬ್ಬಳ್ಳಿ ವರ್ಕ್‌ಷಾಪ್-1045 ಕೆ.ಡಬ್ಲ್ಯು.ಪಿ.; ಮೈಸೂರು ವರ್ಕ್‌ಷಾಪ್-500 ಕೆ.ಡಬ್ಲ್ಯು.ಪಿ. ಮತ್ತು ಶೆಡ್ ಗಳಲ್ಲಿಯೂ ಸಹಾ ಛಾವಣಿಯ ಮೇಲೆ ಸೌರಘಟಕಗಳನ್ನು ಒದಗಿಸಿದೆ. ಕೃಷ್ಣರಾಜಪುರಂ ಡೀಸೆಲ್ ಶೆಡ್ (240 ಕೆ.ಡಬ್ಲ್ಯು.ಪಿ.), ಹುಬ್ಬಳ್ಳಿ ಇ.ಎಮ್.ಡಿ. ಶೆಡ್ (640 ಕೆ.ಡಬ್ಲ್ಯು.ಪಿ.) ಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗಿದೆ. ಜೊತೆಗೆ 295 ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸೌರಫಲಕ ಅಳವಡಿಸಲಾಗಿದೆ.
2021-22 ನೇ ಆರ್ಥಿಕ ವರ್ಷದಲ್ಲಿ ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್ ಅಗತ್ಯತೆಯ ಸುಮಾರು ಶೇ.70 ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ. ಹುಬ್ಬಳ್ಳಿ ವರ್ಕ್ ಷಾಪ್‌ನ ಶೇ.83 ವಿದ್ಯುತ್ ಅಗತ್ಯವನ್ನು (ಒಟ್ಟು ವಿದ್ಯುತ್ ಅಗತ್ಯವು 13.51 ಲಕ್ಷ ಯುನಿಟ್ ಗಳು) ಸೌರಶಕ್ತಿಯ ಮೂಲಕ ಪೂರೈಸಲಾಗಿದೆ. ಹುಬ್ಬಳ್ಳಿ ಇ.ಎಮ್.ಡಿ. ಶೆಡ್‌ನ ವಾರ್ಷಿಕ 1.13 ಲಕ್ಷ ಯುನಿಟ್‌ಗಳ ವಿದ್ಯುತ್ ಬಳಕೆಯ ಪೈಕಿ ಶೇ.60 ವಿದ್ಯುತ್ತನ್ನು ಸೌರಶಕ್ತಿಯ ಮೂಲಕ ಪಡೆದುಕೊಳ್ಳಲಾಗಿದೆ.
2021-22 ನೇ ಆರ್ಥಿಕ ವರ್ಷದಲ್ಲಿ, ರೈಲ್ ಸೌಧದಲ್ಲಿ ಅಳವಡಿಸಲಾಗಿರುವ 250 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರ ಫಲಕಗಳಿಂದ 2.75 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು 15.51 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ. ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಲಾಗಿರುವ 320 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರಫಲಕಗಳಿಂದ 84,294 ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು 2.80 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ.
ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಲಾಗಿರುವ 80 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರಫಲಕಗಳಿಂದ 94,115 ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು 4.25 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ. ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಲಾಗಿರುವ 100 ಕೆ.ಡಬ್ಲ್ಯು.ಪಿ. ಸಾಮರ್ಥ್ಯದ ಸೌರ ಫಲಕಗಳಿಂದ 1.28 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದ್ದು 5.11 ಲಕ್ಷ ರೂ. ಉಳಿಕೆಯಾಗಿದೆ.
ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ಕಿಶೋರ್ ರವರು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸುವ ಯೋಜನೆಯನ್ನು ಹೊಂದಿದೆ. ನೈರುತ್ಯ ರೈಲ್ವೆಯು ಪರಿಸರ ಸ್ನೇಹಿ ಸೌರಶಕ್ತಿಯನ್ನು ಬಳಸಿಕೊಳ್ಳುತ್ತಿದ್ದು 2030ರೊಳಗೆ ʼನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆʼ (‘Net Zero Carbon Emission Railway’) ಯಾಗಿ ಹೊರಹೊಮ್ಮುವ ರೈಲ್ವೆ ಇಲಾಖೆಯ ಗುರಿಗೆ ಇದು ಸಹಕಾರಿಯಾಗಲಿದೆ ಎಂದರು.
2021-22 ನೇ ಆರ್ಥಿಕ ವರ್ಷದಲ್ಲಿ ಎಸ್.ಎಸ್.ಎಸ್. ಹುಬ್ಬಳ್ಳಿ ರೈಲು ನಿಲ್ದಾಣದ ಸೌರಫಲಕಗಳಿಂದ 3.38 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಯಶವಂತಪುರ ರೈಲು ನಿಲ್ದಾಣದ 80 ಕೆ.ಡಬ್ಲ್ಯು.ಪಿ. ಸೌರ ಫಲಕಗಳಿಂದ 0.95 ಲಕ್ಷ ಯುನಿಟ್, ಮೈಸೂರು ರೈಲು ನಿಲ್ದಾಣದ 110 ಕೆ.ಡಬ್ಲ್ಯು.ಪಿ. ಸೌರಫಲಕಗಳಿಂದ 1.42 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಯಾಗಿದೆ. ಈ ಎಲ್ಲ ನಿಲ್ದಾಣಗಳಿಂದ ಒಟ್ಟಾರೆ 21.42 ಲಕ್ಷ ರೂಪಾಯಿಗಳ ಉಳಿತಾಯವಾಗಿದೆ.
ಪ್ರಧಾನ ಮುಖ್ಯ ವಿದ್ಯುತ್ ಇಂಜಿನಿಯರ್ ಜೈಪಾಲ್ ಸಿಂಗ್ ನೇತೃತ್ವದಲ್ಲಿ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಮತ್ತು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್‌ವಾಲ್ ರ ಮಾರ್ಗದರ್ಶನದಲ್ಲಿ ಮೂರೂ ರೈಲ್ವೆ ವಿಭಾಗಗಳಲ್ಲಿ ಸೌರಶಕ್ತಿ ಬಳಕೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ.