ಬೆಂಗಳೂರು, (www.bengaluruwire.com) : ರಾಜಧಾನಿಯ ಸಾಂಸ್ಕೃತಿಕ ಸೊಗಡು ಹೊಂದಿದ ಬಸವನಗುಡಿ ಸೆರಗಿನಲ್ಲಿರುವ ಸಾವಿರಾರು ಬೆಂಗಳೂರಿಗರ ನಾಲಿಗೆಯ ಸವಿಗೆ ದೋಸೆ ರುಚಿ ಹತ್ತಿಸಿದ ‘ವಿದ್ಯಾರ್ಥಿ ಭವನ’ ಈಗ ಹೋಟೆಲ್ ಉದ್ಯಮದಿಂದ ರಂಗಭೂಮಿ ಕ್ಷೇತ್ರಕ್ಕೂ ಹೆಜ್ಜಿ ಇರಿಸುತ್ತಿದೆ. ಇದೇ ಮೇ 6ರಿಂದ 8ನೇ ತಾರೀಖಿನವರೆಗೆ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಅರ್ಜುನ್ ನಿರ್ದೇಶನ ಹಾಗೂ ರಾಜೇಂದ್ರ ಕಾರಂತ್ ರಚನೆಯ ‘ವಿದ್ಯಾರ್ಥಿ ಭವನ’ ನಾಟಕ ಪ್ರದರ್ಶನ ಕಾಣಲಿದೆ.
ಈ ಕುರಿತಂತೆ ವಿದ್ಯಾರ್ಥಿ ಭವನದ ವ್ಯವಸ್ಥಾಪಕ ಅರುಣ್ ಅಡಿಗ ಬೆಂಗಳೂರು ವೈರ್ ಗೆ ಮಾಹಿತಿ ನೀಡಿದ್ದು, ‘ವಿದ್ಯಾರ್ಥಿ ಭವನ’ ಹೋಟೆಲ್ ಹೇಗೆ ಬಸವನಗುಡಿಯಲ್ಲಿ ಬೆಂಗಳೂರಿನ ಒಂದು ಸಂಸ್ಕೃತಿಯ ಭಾಗವಾಗಿ ಬೆಳವಣಿಗೆ ಹೊಂದಿ, 8 ದಶಕಗಳಲ್ಲಿ ಲಕ್ಷಾಂತರ ಜನರ ಅವಿಸ್ಮರಣೀಯ ನೆನಪುಗಳಿಗೆ ಸಾಕ್ಷಿಯಾಗಿತ್ತು. ಇಂತಹ ಸವಿ ಅನುಭವಗಳಿಗೆ ಜೀವಂತ ಉದಾಹರಣೆಯಾಗಿ ಉಳಿದ ‘ವಿದ್ಯಾರ್ಥಿ ಭವನ’ ತನ್ನಲ್ಲಿ ಸ್ವಾದಿಷ್ಟ ದೋಸೆಯು ನಾಡಿನ, ದೇಶ- ವಿದೇಶದ ಮನೆ-ಮನಗಳಲ್ಲಿ ಶಾಶ್ವತ ಸ್ಥಾನ ಪಡೆದು ಬೆಳೆದು ಬಂದ ಕಥೆಯನ್ನು ‘ವಿದ್ಯಾರ್ಥಿ ಭವನ’ ನಾಟಕದಲ್ಲಿ ಅನಾವರಣಗೊಳ್ಳಲಿದೆ ಎಂದು ವಿವರಿಸಿದರು.
ಇತ್ತೀಚೆಗೆ ಸಾಮಾಜಿಕ ಜಾಲ ತಾಣದಲ್ಲಿ ಮಲ್ಲೇಶ್ವರದಲ್ಲಿ ವಿದ್ಯಾರ್ಥಿ ಭವನ ಎಂದು ಪೋಸ್ಟರ್ ಹಾಕಿದ್ದ ಬಗ್ಗೆ ಸ್ಪಷ್ಟನೆ ನೀಡಿದ ಅರುಣ್ ಅಡಿಗ, ವಿದ್ಯಾರ್ಥಿ ಭವನ ಹೋಟೆಲ್ ಗೆ ಸಾವಿರಾರು ಗ್ರಾಹಕರಿದ್ದಾರೆ ಹಾಗೂ ಅಭಿಮಾನಿಗಳು ಇದ್ದಾರೆ. ಈ ಕುರಿತಂತೆ ಜನರ ಆಸಕ್ತಿ ಕೆರಳಿಸುವ ನಿಟ್ಟಿನಲ್ಲಿ ‘ಮಲ್ಲೇಶ್ವರದಲ್ಲಿ ವಿದ್ಯಾರ್ಥಿ ಭವನ’ ಎಂದು ಪೋಸ್ಟರ್ ಪೋಸ್ಟ್ ಮಾಡಲಾಗಿತ್ತು. ವಿದ್ಯಾರ್ಥಿ ಭವನ ಹೋಟೆಲ್ ಎಂಟು ದಶಕಗಳಲ್ಲಿ ನಾಡಿನ ಜನರಿಗೆ ಗುಣಮಟ್ಟದ ಆಹಾರವನ್ನು ನೀಡುತ್ತಾ ತನ್ನ ಕಾಯಕವನ್ನು ಮುಂದುವರೆಸಿದೆ.
ಆದರೆ ವಿದ್ಯಾರ್ಥಿ ಭವನ ಹೋಟೆಲ್ ಮಲ್ಲೇಶ್ವರಕ್ಕೆ ಬರುತ್ತಿಲ್ಲ. ಬದಲಿಗೆ ಹೋಟೆಲ್ ಉದ್ಯಮದ ಜೊತೆಗೆ ರಂಗಭೂಮಿಯ ಸಾಂಸ್ಕೃತಿಕ ಚಟುವಟಿಕೆಗಳಿಗೂ ಒತ್ತು ನೀಡಲು ಹೊರಟಿದೆ. ಅದರ ಭಾಗವಾಗಿ ಬೆಂಗಳೂರು ಥಿಯೇಟರ್ ಫೌಂಡೇಶನ್ ನೊಂದಿಗೆ ಸೇರಿ ‘ವಿದ್ಯಾರ್ಥಿ ಭವನ’ ನಾಟಕವನ್ನು ಪ್ರದರ್ಶನ ನೀಡುತ್ತಿದ್ದೇವೆ.
ರಾಜ್ಯದ ಹಿರಿಯ ಕಿರಿಯ ರಾಜಕೀಯ ನಾಯಕರು, ಸಿನಿಮಾ ಕಲಾವಿದರು, ಉದ್ಯಮಿಗಳು, ಅದೆಷ್ಟೋ ಗಣ್ಯರು ವಿದ್ಯಾರ್ಥಿ ಭವನ ಹೋಟೆಲ್ ಗೆ ಬಂದು ಮಸಾಲೆ ದೋಸೆ, ಒಂದು ಲೋಟ ಕಾಫಿ ಕುಡಿದು ಇಲ್ಲಿಯ ಸವಿಗೆ ಬೆರಗಾಗಿ ಹೋಗಿದ್ದಾರೆ. ಲೆಕ್ಕವಿಲ್ಲದಷ್ಟು ಜನರ ಸ್ನೇಹ ಸಂಬಂಧ ಗಟ್ಟಿಗೊಳ್ಳಲು, ನೆನಪಿನ ಜಾತ್ರೆಯಲ್ಲೊಂದು ತನ್ನದೇ ಸ್ಥಾನ ಪಡೆದು ಕೊಳ್ಳಲು ಕಾರಣವಾದ ವಿದ್ಯಾರ್ಥಿ ಭವನ ಹೋಟೆಲ್ ಕುರಿತ ಕಥೆಯು ನಾಟಕದಲ್ಲಿ ಪ್ರದರ್ಶನಗೊಳ್ಳಲಿದೆ. ಇದನ್ನು ಮತ್ತೊಂದು ಪೋಸ್ಟ್ ನಲ್ಲಿ ಪ್ರಕಟಿಸುವ ಉದ್ದೇಶ ಹೊಂದಿದ್ದೆವು. ಆದರೆ ಅದಕ್ಕೆ ಮುಂಚೆಯೇ ಮಲ್ಲೇಶ್ವರದಲ್ಲೂ ವಿದ್ಯಾರ್ಥಿ ಭವನ ಹೋಟೆಲ್ ಬರಲಿದೆ ಎಂಬ ಸುದ್ದಿ ಹರದಾಡಿದೆ. ಇದು ಕೇವಲ ಗಾಳಿಸುದ್ದಿಯಷ್ಟೆ. ರಂಗಭೂಮಿ ಕ್ಷೇತ್ರಕ್ಕೆ ಕಾಲಿಟ್ಟು ಬೆಂಗಳೂರಿನ ಸಾಂಸ್ಕೃತಿಕ ಲೋಕಕ್ಕೆ ತನ್ನದೇ ಕೊಡುಗೆ ನೀಡಲು ನಾವು ತುದಿಗಾಲಲ್ಲಿ ನಿಂತಿದ್ದೇವೆ ಎನ್ನುತ್ತಾರೆ ಅರುಣ್ ಅಡಿಗ.
ವಿದ್ಯಾರ್ಥಿ ಭವನ ನಾಟಕದಲ್ಲಿ ಯಾರೆಲ್ಲಾ ಕಲಾವಿದರಿದ್ದಾರೆ? ಎಲ್ಲಿ ಟೆಕೆಟ್ ಲಭ್ಯವಿದೆ ?
ನಿರ್ದೇಶಕ ಅರ್ಜುನ್ ಕಬ್ಬಿಣ, ಸಿಹಿಕಹಿ ಚಂದ್ರು, ವೀಣಾ ಸುಂದರ್ ಮತ್ತಿತರರು ‘ವಿದ್ಯಾರ್ಥಿ ಭವನ’ ನಾಟಕದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಪ್ರವೀಣ್ ಬಿ.ವಿ, ಪ್ರದೀಪ್ ಬಿ.ವಿ. ಜಂಟಿಯಾಗಿ ರಂಗಸಂಗೀತ ನೀಡಲಿದ್ದು, ಶ್ರೀಧರಮೂರ್ತಿ ರಂಗಸಜ್ಜಿಕೆ ಹಾಗೂ ಪರಿಕರಗಳ ಜವಾಬ್ದಾರಿ ಹೊತ್ತಿದ್ದಾರೆ. ಪ್ರದೀಪ್ ಬೆಳವಾಡಿ ಬೆಳಕು ಹಾಗೂ ವಿಜಯ್ ಕುಮಾರ್ ಬೆಣಚ ಪ್ರಸಾಧನ ಕಾರ್ಯ ನಿರ್ವಹಿಸಲಿದ್ದಾರೆ. ಮೇ 6,7 ಹಾಗೂ 8ರಂದು ಈ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 6 ಮತ್ತು 7ರಂದು ಸಂಜೆ 6ಕ್ಕೆ, ಮೇ 8ರಂದು ಬೆಳಗ್ಗೆ 11.30 ಹಾಗೂ ಸಂಜೆ 6ಕ್ಕೆ ಪ್ರದರ್ಶನವಿರಲಿದ್ದು, ಪ್ರತಿ ಟಿಕೆಟ್ ಗೆ 249 ರೂ. ದರ ನಿಗಧಿಪಡಿಸಲಾಗಿದೆ. ಬುಕ್ ಮೈ ಶೋ ನಲ್ಲಿ ಸೋಮವಾರದಿಂದ ಟಿಕೆಟ್ ಲಭ್ಯವಿರಲಿದೆ. ಗಾಂಧಿ ಬಜಾರ್ ನಲ್ಲಿರುವ ವಿದ್ಯಾರ್ಥಿ ಭವನ ಹೋಟೆಲ್ ನಲ್ಲೂ ಟೆಕೆಟ್ ಪಡೆಯಬಹುದು.
ಗಾಂಧಿ ಬಜಾರ್- ವಿದ್ಯಾರ್ಥಿ ಭವನ ಅವಿನಾಭಾವ ಸಂಬಂಧ :
ಐತಿಹಾಸಿಕ ನಗರವಾದ ಬೆಂಗಳೂರಿನ ಬಡಾವಣೆಗಳ ಅತ್ಯಂತ ಹಳೆಯ ಜನಸಂಸ್ಕೃತಿ ಬೆಳದಿದ್ದು ಇದೇ ಬಸವನಗುಡಿಯಲ್ಲಿ. ಇದರ ಹಿಂದಿನ ಹೆಸರು ಸುಂಕೇನಹಳ್ಳಿ. ದೊಡ್ಡ ಗಣೇಶ ಮತ್ತು ದೊಡ್ಡ ಬಸವಣ್ಣ ಇಲ್ಲಿನ ಮೂಲ ನಿವಾಸಿಗಳ ಮನೆ ದೇವರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಇಲ್ಲಿಗೆ ಬಂದಿದ್ದರು ಎಂಬ ಬಗ್ಗೆ ಐತಿಹ್ಯವಿದೆ. ಈ ಸವಿನೆನಪಿನಲ್ಲಿ ಗಾಂಧಿ ಬಜಾರ್ ಜನ್ಮ ತಾಳಿತು. ಕಾರಂಜಿ ಆಂಜನೇಯ ದೇವಸ್ಥಾನದ ಆಸುಪಾಸಿನಲ್ಲಿದ್ದ ಈ ಪ್ರದೇಶ, ಕಡಲೆಕಾಯಿ ಪರಿಷೆಯಿಂದ ಸಾಂಸ್ಕೃತಿಕ ಉಡುಗೆ ಧರಿಸಿತು. ನ್ಯಾಷನಲ್ ಹೈಸ್ಕೂಲ್, ಆಚಾರ್ಯ ಪಾಠಶಾಲೆ, ಬಿ.ಎಂ.ಎಸ್.ಕಾಲೇಜು ಮುಂತಾದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸಂಪತ್ತಿನ ನಡುವೆ ವಿದ್ಯಾರ್ಥಿ ಭವನ ಕಳೆದ 79 ವರ್ಷಗಳಿಂದ ನಾಡಿನ ಜನತೆಗೆ ಶುಚಿ- ರುಚಿಯಾದ ತಿಂಡಿಯನ್ನು ನೀಡಿ ಸೇವೆ ಸಲ್ಲಿಸುತ್ತಾ ಬಂದಿದೆ.
‘ವಿದ್ಯಾರ್ಥಿ ಭವನ’ ನಾಟಕದ ಪೋಸ್ಟರ್ ನಲ್ಲೂ ಬಸವನಗುಡಿ ಚಿತ್ರಣ :
ಬೆಂಗಳೂರಿನ ಗಾಂಧಿ ಬಜಾರ್ ನಲ್ಲಿ ಜನ್ಮತೆಳೆದ ವಿದ್ಯಾರ್ಥಿ ಭವನ ಕುರಿತಂತೆ ನಾಟಕ ಪೋಸ್ಟರ್ ನಲ್ಲೂ ಕಹಳೆಬಂಡೆ ಗೋಪುರ, ಕಡಲೇಕಾಯಿ ಪರಿಷೆ, ಹೂವು- ಹಣ್ಣಿನ ವ್ಯಾಪಾರಿಗಳು, ದೊಡ್ಡ ಬಸವಣ್ಣ, ನ್ಯಾಷನಲ್ ಹೈಸ್ಕೂಲ್, ಆಚಾರ್ಯ ಪಾಠಶಾಲೆ, ಸ್ವಾಮಿ ವಿವೇಕಾನಂದರ ಮೂರ್ತಿಗಳನ್ನು ಮೂಡಿಸಲಾಗಿದೆ.