ನವದೆಹಲಿ, (www.bengaluruwire.com) : ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಿ ಅಂತ ಆಗಾಗ ಬ್ಯಾಂಕ್ ಅಥವಾ ಕಂಪನಿಗಳ ಕಡೆಯಿಂದ ಗ್ರಾಹಕರಿಗೆ ಅತ್ಯಾಕರ್ಷಕ ಆಮೀಷ ನೀಡಿ ಕ್ರೆಡಿಟ್ ಕಾರ್ಡ್ ಗಳನ್ನು ನೀಡಿ ಕೊನೆಗೆ ಅವುಗಳನ್ನು ಪಡೆದುಕೊಂಡು ಸೂಕ್ತ ಸಂದರ್ಭದಲ್ಲಿ ಹಣ ಮರುಪಾವತಿ ಮಾಡಲಾಗದೆ ತೊಂದರೆಗೆ ಸಿಲುಕುತ್ತಿದ್ದ ಗ್ರಾಹಕರಿಗೆ ಇನ್ನು ಕೊಂಚ ರಿಲೀಫ್ ಸಿಗಲಿದೆ. ಅಲ್ಲದೆ ಗ್ರಾಹಕರಿಗೆ ಗೊತ್ತಿಲ್ಲದಂತೆ ತಮ್ಮ ಕ್ರೆಡಿಟ್ ಕಾರ್ಡ್ ಮೇಲ್ದರ್ಜೆಗೇರಿಸಿ ಕಂಪನಿಯು ಕೊನೆಯಲ್ಲಿ ದುಬಾರಿ ಶುಲ್ಕ ಕಟ್ಟುವಂತೆ ಪೀಡಿಸುವುದು ಇನ್ನು ತಪ್ಪಲಿದೆ.
ಏಕೆಂದರೆ ಜು.1ರಿಂದ ಅನ್ವಯವಾಗುವಂತೆ ರಿಸರ್ವ್ ಬ್ಯಾಂಕ್ ಇಂಡಿಯಾ (Reserve Bank Of India- RBI) ಕ್ರೆಡಿಟ್ ಕಾರ್ಡ್ ವಿತರಿಸುವ ಎಲ್ಲಾ ಬ್ಯಾಂಕ್ ಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. ಅದರಂತೆ ಬ್ಯಾಂಕ್ ಗ್ರಾಹಕರಿಂದ ಕೋರಿಕೆ ಇಲ್ಲದೆ ಕ್ರೆಡಿಟ್ ಕಾರ್ಡ್ ವಿತರಿಸಬಾರದು. ಅಲ್ಲದೆ ಅವರ ಒಪ್ಪಿಗೆ ಅಥವಾ ಸಮ್ಮತಿಯಿಲ್ಲದೆ ಅವರ ಬಳಿಯಿರುವ ಹಾಲಿ ಕ್ರೆಡಿಟ್ ಕಾರ್ಡ್ ಗಳನ್ನು ಮೇಲ್ದರ್ಜೆಗೆ ಏರಿಸಬಾರದು ಎಂದು ಕ್ರೆಡಿಟ್ ಕಾರ್ಡ್ ಕಂಪನಿಗಳಿಗೆ ಆರ್ ಬಿಐ ಖಡಕ್ ಎಚ್ಚರಿಕೆಯನ್ನು ನೀಡಿದೆ. ಈ ಸಂಬಂಧ ಆರ್ ಬಿಐ ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ವಿತರಣೆ ಕುರಿತಂತೆ ಹೊರಡಿಸಿರುವ ಅಧಿಸೂಚನೆಯಲ್ಲಿ ನಿರ್ದೇಶನ ನೀಡಿದೆ.
ಒಂದೊಮ್ಮೆ ಈ ನಿಯಮಗಳನ್ನು ಉಲ್ಲಂಘಿಸಿದರೆ, ಅಂತಹ ಕಂಪನಿಗಳು, ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತದ ಎರಡರಷ್ಟನ್ನು ದಂಡದ ರೂಪದಲ್ಲಿ ಪಾವತಿಸಬೇಕು. ಅಲ್ಲದೆ ಸಾಲದ ಬಾಕಿ ಮೊತ್ತ ವಸೂಲಿ ಮಾಡುವಾಗ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಬೆದರಿಕೆ ಒಡ್ಡಬಾರದು, ಕಿರುಕುಳ ನೀಡಬಾರದು ಹಾಗೂ ಆ ಗ್ರಾಹಕನ ಕುಟುಂಬ, ಸ್ನೇಹಿತರು ಮತ್ತಿತರ ವೈಯುಕ್ತಿಕ ಸ್ವಾತಂತ್ರಕ್ಕೆ ಧಕ್ಕೆ ತರಬಾರದು ಎಂದು ಕ್ರೆಡಿಟ್ ಕಾರ್ಡ್ ವಿತರಣಾ ಕಂಪನಿಗಳು ಹಾಗೂ ಮಧ್ಯವರ್ತಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಏಜಂಟ್ ಗಳಿಗೆ ಖಡಕ್ ಸೂಚನೆ ಕೊಟ್ಟಿದೆ.
100 ಕೋಟಿ ರೂ. ಗಿಂತಲೂ ಹೆಚ್ಚಿನ ವ್ಯವಹಾರ ನಡೆಸುತ್ತಿರುವ ವಾಣಿಜ್ಯ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ವಿತರಿಸುವ ವ್ಯವಹಾರವನ್ನು ಸ್ವತಂತ್ರವಾಗಿ ಅಥವಾ ಇತರ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಜೊತೆ ಒಗ್ಗೂಡಿ ಪ್ರಾರಂಭಿಸಬಹುದು. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (RRBs) ಗಳು ಇನ್ನು ಮುಂದೆ ಪ್ರಾಯೋಜಕತ್ವದ ಬ್ಯಾಂಕ್ ಹಾಗೂ ಇತರೆ ಬ್ಯಾಂಕ್ ಗಳ ಸಹಯೋಗದೊಂದಿಗೆ ಕ್ರೆಡಿಟ್ ಕಾರ್ಡ್ ನೀಡಬಹುದೆಂದು ಅಧಿಸೂಚನೆಯಲ್ಲಿ ತಿಳಿಸಿದೆ.
‘ಕ್ರೆಡಿಟ್ ಕಾರ್ಡ್ ಅಗತ್ಯವಿದೆ ಎಂದು ಕೋರಿಕೆ ಸಲ್ಲಿಸದಿದ್ದರೂ ಕಂಪನಿಗಳಿಗೆ ಗ್ರಾಹಕರು ಕಾರ್ಡ್ ಪಡೆದಲ್ಲಿ, ಅಂತಹ ವ್ಯಕ್ತಿಯು ತನಗಾದ ಮಾನಸಿಕ ಕಿರುಕುಳ, ಸಮಯ ನಷ್ಟ, ವೆಚ್ಚಗಳ ಬಗ್ಗೆ ಆರ್ ಬಿಐ ಓಂಬೋಡ್ಸ್ ಮನ್ ಮೊರೆ ಹೋಗಬಹುದು. ಕ್ರೆಡಿಟ್ ಕಾರ್ಡ್ ನೀಡಿದ ಕಂಪನಿಯು ಆ ವ್ಯಕ್ತಿಗೆ ಪಾವತಿಸಬೇಕಿರುವ ಪರಿಹಾರದ ಮೊತ್ತವನ್ನು ಒಂಬುಡ್ಸ್ ಮನ್ ನಿರ್ಧರಿಸಲಿದ್ದಾರೆ.’ ಎಂದು ಆರ್ ಬಿಐ ತನ್ನ ಹೇಳಿದೆ.
ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆರ್ ಬಿಐ ಪೂರ್ವಾನುಮತಿಯಿಲ್ಲದೆ ಕ್ರೆಡಿಟ್ ಕಾರ್ಡ್ ಬ್ಯುಸಿನೆಸ್ ನಡೆಸುವಂತಿಲ್ಲ ಎಂದು ಕೇಂದ್ರಬ್ಯಾಂಕ್ ಫರ್ಮಾನು ಹೊರಡಿಸಿದೆ. “ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆರ್ ಬಿಐ ಪೂರ್ವನಾಮತಿ ಇಲ್ಲದೆ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಚಾರ್ಜ್ ಕಾರ್ಡ್ ಅಥವಾ ಸಂಬಂಧಿತ ಉತ್ಪನ್ನಗಳನ್ನು ವರ್ಚುವಲಿಯಾಗಲಿ ಅಥವಾ ನೇರವಾಗಿಯಾಗಲಿ ವಿತರಿಸುವಂತಿಲ್ಲ” ಎಂದು ತನ್ನ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಇದರ ಜೊತೆಗೆ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಪಡೆದುಕೊಳ್ಳುವಂತೆ ಒತ್ತಾಯಿಸುವಂತಿಲ್ಲ. ಹಾಗೂ ಬ್ಯಾಂಕ್ ನ ಇತರ ಸೇವೆಗಳ ಜೊತೆ ಡೆಬಿಟ್ ಕಾರ್ಡ್ ಪಡೆದುಕೊಂಡರಷ್ಟೆ ಸೇವೆ ಲಭ್ಯವಾಗಲಿದೆ ಎಂದು ಷರತ್ತು ಹಾಕುವಂತಿಲ್ಲ ಎಂದು ವಿವರಿಸಿದೆ. ಆರ್ ಬಿಐ ವಿಸ್ತ್ರತ ಅಧಿಸೂಚನೆ ಕುರಿತು ತಿಳಿದುಕೊಳ್ಳಲು ಬಯಸುವುದಾದರೆ ಈ ಮುಂದಿನ ಲಿಂಕ್ https://www.rbi.org.in/scripts/FS_Notification.aspx?Id=12300&fn=2&Mode=0 ಭೇಟಿ ನೀಡಬಹುದು.