ಆಂಧ್ರಪ್ರದೇಶದಲ್ಲಿ ಶ್ರೀ ಸೀತಾರಾಮ ಕಲ್ಯಾಣ ಕಾರ್ಯಕ್ರಮದಲ್ಲಿ ಮಂಗನ ರೂಪದಲ್ಲಿ ಆಂಜನೇಯ ಸ್ವಾಮಿ ದರ್ಶನ ನೀಡಿದ್ದಾನೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಆಂಧ್ರಪ್ರದೇಶದ ಬೊಬ್ಬಿಲಿ ಎಂಬಲ್ಲಿ ಶೈಲಜಾ ಮತ್ತು ಜಗದೀಶ್ವರ ರಾವ್ ಎಂಬ ಶಿಕ್ಷಕರು ಏ.10ರಂದು ತಮ್ಮ ಮನೆಯಲ್ಲಿ ಶ್ರೀ ಸೀತಾರಾಮ ಕಲ್ಯಾಣ ಕಾರ್ಯಕ್ರಮ ಏರ್ಪಡಿಸಿದ್ದರು.
ಕಾರ್ಯಕ್ರಮ ನಡೆಯುತ್ತಿರುವ ಮಧ್ಯೆ ಎಲ್ಲಿಂದಲೋ ಕುಂಟುತ್ತಾ ಬಂದ ಕೋತಿಯೊಂದು ಸೀತಾರಾಮ ಕಲ್ಯಾಣ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವಲ್ಪ ಹೊತ್ತು ನೆಲದ ಮೇಲೆ ಹೊರಳಾಡಿ, ಅಲ್ಲಿ ದೇವರ ನೈವೇದ್ಯಕ್ಕೆ ಇಟ್ಟಿದ್ದ ಪ್ರಸಾದವನ್ನು ತಿಂದಿತು. ಆನಂತರ ಮನೆಯೊಡತಿ ಶೈಲಜಾ ಕುಳಿತ ಕಡೆ ಆಗಮಿಸಿ ಅವರ ತೊಡೆಯನ್ನೇರಿ ಅವರನ್ನು ಅಪ್ಪಿಕೊಂಡಿತು. ಕೊನೆಗೆ ಸ್ವಲ್ಪ ಹೊತ್ತಿನಲ್ಲೇ ಅಲ್ಲಿಂದ ಹೊರಟು ಹೋಯಿತು.
ಏಕಾ ಏಕಿ ನಡೆದ ಘಟನೆಯಿಂದ ಒಂದು ಕ್ಷಣ ಅಲ್ಲಿದ್ದವರು ಆಶ್ಚರ್ಯ ಚಕಿತರಾಗಿದ್ದರು. ಭಕ್ತಿಯಿಂದ ಶ್ಲೋಕ ಪಠನೆ ಮಾಡುತ್ತಿದ್ದ ಶೈಲಜಾ ಕೋತಿ ತೋರಿದ ವರ್ತನೆಯಿಂದ ಭಾವಪರವಶರಾಗಿದರು. ಸ್ವತಃ ಆಂಜನೇಯ ಸ್ವಾಮಿಯೇ ಕೋತಿ ರೂಪದಲ್ಲಿ ಆಗಮಿಸಿ ದರ್ಶನ ಕೊಟ್ಟರೆಂದು ಎಲ್ಲೆಡೆ ಹೇಳಲಾಗುತ್ತಿದೆ.