ಬೆಂಗಳೂರು, (www.bengaluruwire.com) : ಬಹು ನಿರೀಕ್ಷೆಯ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ -2 (KGFChapter2) ಸಿನಿಮಾ ನಾಳೆ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಯಶ್ ಅಭಿಮಾನಿಗಳು ಈ ಚಿತ್ರದ ವೀಕ್ಷಣೆಗಾಗಿ ಪ್ರಪಂಚದಾದ್ಯಂತ ಕಾತುರದಿಂದ ಕಾಯುತ್ತಿದ್ದಾರೆ.
ಈ ಚಿತ್ರದ ಮೊದಲ ಶೋ ಕರ್ನಾಟಕದಲ್ಲೇ ತೆರೆ ಕಾಣಲಿದ್ದು, ಏ.13ರ ಮಧ್ಯರಾತ್ರಿ 12ಗಂಟೆಯ ನಂತರ ಅಂದರೆ ಏ.14ರಂದು ಊರ್ವಶಿ ಥಿಯೇಟರ್ ನಲ್ಲಿ ಮೊದಲ ಪ್ರದರ್ಶನ ಕಾಣಲಿದೆ. ಭಾರತವೊಂದರಲ್ಲೇ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕ ಕಾಲಕ್ಕೆ ತೆರೆ ಕಾಣುತ್ತಿರುವ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆ ವ್ಯಕ್ತವಾಗಿದೆ.
ಮೊದಲ ದಿನವೇ ಭರ್ಜರಿ ಗಳಿಕೆ ನಿರೀಕ್ಷೆ :
ನಮ್ಮ ದೇಶದ ಸುಮಾರು 6,500 ಚಿತ್ರಮಂದಿರ ಸೇರಿದಂತೆ ವಿಶ್ವದಾದ್ಯಂತ 7,500 ಸ್ಕ್ರೀನ್ ಗಳಲ್ಲಿ ತೆರೆ ಕಾಣುತ್ತಿರುವ ಪಂಚಭಾಷೆಯ ಈ ಚಲನಚಿತ್ರ ಪ್ರೀಬುಕ್ಕಿಂಗ್ ನಲ್ಲೇ 20 ಕೋಟಿ ರೂ. ಮೊತ್ತದ ಪ್ರೀ ಬುಕಿಂಗ್ ಆಗುವ ನಿರೀಕ್ಷೆಯಿದೆ. ಆದರೆ ಚಿತ್ರ ಬಿಡುಗಡೆಯಾದ ಮೊದಲ ದಿನ ಕರ್ನಾಟಕದಲ್ಲಿ 30 ಕೋಟಿ ರೂ., ಆಂಧ್ರ/ತೆಲಂಗಾಣದಲ್ಲಿ 35 ಕೋಟಿ ರೂ., ತಮಿಳುನಾಡಿನಲ್ಲಿ 10 ಕೋಟಿ ರೂ., ಕೇರಳದಲ್ಲಿ 5 ಕೋಟಿ ರೂ., ದೇಶದ ಇತರ ಭಾಗಗಳಲ್ಲಿ 60 ಕೋಟಿ ರೂ., ವಿದೇಶಗಳಲ್ಲಿ 25 ಕೋಟಿ ರೂ. ಹಾಗೂ ಒಟ್ಟಾರೆ ವಿಶ್ವದಾದ್ಯಂತ ಒಂದೇ ದಿನ 165 ಕೋಟಿ ರೂ. ಗಳಿಕೆಯಾಗಲಿದೆ ಎಂದು ಚಿತ್ರೋದ್ಯಮದ ವಿಶ್ಲೇಷಕರು ಅಂದಾಜಿಸಿದ್ದಾರೆ. ರಾಜ್ಯದ ಕೆಲವು ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯ ಮೊದಲ ದಿನ ಸತತ 24 ಗಂಟೆಗಳ ಕಾಲ 7 ಚಿತ್ರಪ್ರದರ್ಶನವಿರಲಿದೆ. ಮೊದಲ ದಿನವೇ ಕೆಜಿಎಫ್ ಚಾಪ್ಟರ್-2 ಚಿತ್ರವು ಒಟ್ಟು 13,006 ಪ್ರದರ್ಶನ ಕಾಣಲಿದ್ದು, 12.09 ಲಕ್ಷ ಜನರು ಈ ಚಿತ್ರವನ್ನು ನೋಡಲಿದ್ದಾರೆ.
ಹೊಂಬಾಳೆ ಫಿಲಮ್ಸ್ ಎಂದಿಗೂ ಕೆಜಿಎಫ್ ಚಿತ್ರ ಮಾರಾಟ ಮಾಡಿಲ್ಲ :
ಕರ್ನಾಟಕವೊಂದರಲ್ಲೇ 500 ಏಕ ತೆರೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡರೆ, ತಮಿಳು ನಾಡಿನಲ್ಲಿ 350 ಸಿಂಗಲ್ ಸ್ಕ್ರೀನ್ ನಲ್ಲಿ ಮತ್ತು ತೆಲುಗು ಭಾಷೆಯಲ್ಲೂ ಈ ಚಿತ್ರಕ್ಕೆ ಸಖತ್ ನಿರೀಕ್ಷೆಯಿದೆ. ಹೊಂಬಾಳೆ ಫಿಲಮ್ಸ್ ಚಿತ್ರ ನಿರ್ಮಾಣ ಕೆಜಿಎಫ್ ಚಾಪ್ಟರ್-1 ಕೂಡ ಈ ಹಿಂದೆ ಬಿಡುಗಡೆಯಾಗಿ ಸಾಕಷ್ಟು ಯಶಸ್ಸುಗಳಿಸಿತ್ತು. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಬ್ಯಾನರ್ ಗಳ, ನಟರ ಸಿನಿಮಾಗಳು ಬಿಡುಗಡೆಯಾದ ಸಂದರ್ಭದಲ್ಲೇ ದೊಡ್ಡ ಮೊತ್ತಕ್ಕೆ ಟಿವಿ, ಒಟಿಟಿ ಫ್ಲಾಟ್ ಫಾರಮ್ ಅಥವಾ ಅಮೆಜಾನ್, ನೆಟ್ ಫ್ಲಿಕ್ಸ್ ಮತ್ತಿತರ ಕಡೆ ಮಾರಾಟವಾಗುತ್ತದೆ. ಆದರೆ ಈ ಕೆಜಿಎಫ್ ಚಾಪ್ಟರ್-1 ಚಿತ್ರವಾಗಲಿ, ಚಾಪ್ಟರ್-2 ಚಿತ್ರವಾಗಲಿ ಇವುಗಳನ್ನು ನಿರ್ಮಾಪಕ ವಿಜಯ್ ಕಿರಗಂದೂರ್ ಯಾವತ್ತೂ ಮಾರಾಟ ಮಾಡಿಲ್ಲ. ಕೇವಲ ವಿತರಕರಿಗೆ ಇಂತಿಷ್ಟು ಕಮಿಷನ್ ರೂಪದಲ್ಲೇ ಚಿತ್ರವನ್ನು ಪ್ರದರ್ಶನಕ್ಕೆ ನೀಡುತ್ತಿದ್ದರು. ಆ ಚಿತ್ರ ಯಶಸ್ಸು ಪಡೆಯಲಿ ಅಥವಾ ಫ್ಲಾಪ್ ಆಗಲಿ ಅವುಗಳನ್ನು ಯಾವತ್ತೂ ಮಾರಾಟ ಮಾಡಿಲ್ಲ ಎಂದು ಹೊಂಬಾಳೆ ಫಿಲ್ಸ್ಮ್ ಪ್ರತಿನಿಧಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
ಈ ಚಿತ್ರದ ಮೊದಲ ದಿನದ ಕಲೆಕ್ಷನ್, ಒಟ್ಟಾರೆ ಗಳಿಕೆಯ ಬಗ್ಗೆ ಇಂತಿಷ್ಟೆ ಗಳಿಕೆಯಾಗುತ್ತದೆಂದು ಊಹೆ ಮಾಡಲು ಆಗುತ್ತಿಲ್ಲ. ಹೊಂಬಾಳೆ ಫಿಲಂಮ್ಸ್ ಗೂ ಪಂಚಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿರುವುದು ಇದು ಮೊದಲ ಅನುಭವ. ಒಟ್ಟಾರೆ ಚಿತ್ರರಂಗದ ಹಲವು ದಾಖಲೆಗಳನ್ನು ಮಾಡಲಿದೆ ಎಂಬ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಏಪ್ರಿಲ್.13ರಂದು ಅಂದರೆ ಬುಧವಾರ ತಮಿಳು ನಟ ವಿಜಯ್ ದಳಪತಿಯವರ ಬೀಸ್ಟ್ ಚಿತ್ರ ತೆರೆ ಕಂಡಿದೆ. ಆದರೆ ಕೆಜಿಎಫ್-2 ಚಿತ್ರದ ಎಬ್ಬಿಸಿರುವ ಹವಾದ ಎದುರು ಬೀಸ್ಟ್ ಚಿತ್ರದ ಅಬ್ಬರ ಕಡಿಮೆಯಿದೆ. ಇಂದು ರಾಜ್ಯದ 300 ಚಲನಚಿತ್ರ ಮಂದಿರದಲ್ಲಿ 1,500 ಪ್ರದರ್ಶನ ಕಾಣಲಿದೆ. ಆದರೆ ಗುರುವಾರ ಕೆಜಿಎಫ್ ಚಾಪ್ಟರ್-2 ಚಿತ್ರ ಬಿಡುಗಡೆಯಾಗುತ್ತಿರುವ ಕಾರಣ ಕೇವಲ 50 ಚಿತ್ರಮಂದಿರದಲ್ಲಷ್ಟೇ ಬೀಸ್ಟ್ ಚಿತ್ರ ಪ್ರದರ್ಶನವಿರಲಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಸಾಲು ಸಾಲು ರಜೆಗಳ ಮಧ್ಯೆ ಫಿಲಮ್ ರಿಲೀಸ್ :
ಕೆಜಿಎಫ್-2 ಭರ್ಜರಿ ಬುಕ್ಕಿಂಗ್ ಗೆ ಮತ್ತೊಂದು ಕಾರಣವೆಂದರೆ ಈ ವಾರದಲ್ಲಿ ಬಂದಿರುವ ಸಾಲು ಸಾಲು ರಜೆಗಳು ಎನ್ನಬಹುದು. ಏ.14ರ ಗುರುವಾರ ಅಂಬೇಡ್ಕರ್ ಜಯಂತಿ, ಏ.15ರಂದು ಗುಡ್ ಫ್ರೈಡೆ, 16ರಂದು ಶನಿವಾರ ಹಾಗೂ 17 ಭಾನುವಾರ ಬಂದಿರುವುದರಿಂದ ಲಕ್ಷಾಂತರ ಪ್ರೇಕ್ಷಕರು ಈ ಅವಧಿಯಲ್ಲೇ ಸಿನಿಮಾ ನೋಡಬೇಕೆಂದು ತುದಿಗಾಲಲ್ಲಿ ನಿಂತಿದ್ದಾರೆ. ಈ ಅವಧಿಯಲ್ಲೇ ದಾಖಲೆ ಪ್ರಮಾಣದ ಟಿಕೆಟ್ ಆದಾಯ ಹರಿದು ಬರುವ ನಿರೀಕ್ಷೆಯಿದೆ.
ಅಭಿಮಾನಿಗಳಿಂದ ನಟ ಯಶ್ ದೊಡ್ಡ ಮೈದಾನ ಗಾತ್ರದ ಭಾವಚಿತ್ರ ರಚನೆ :
ಕೋಲಾರದ ಮಾಲೂರಿನ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದವರು ಕೆಜಿಎಫ್-2 ಬಿಡುಗಡೆ ಹಿನ್ನಲೆಯಲ್ಲಿ ದೊಡ್ಡ ಮೈದಾನದಲ್ಲಿ ಚಿಕ್ಕ ಚಿಕ್ಕ ಮೊಸಾಯಿಕ್ ತುಂಡನ್ನು ಬಳಸಿ ನೆಲದ ಮೇಲೆ ನಟ ಯಶ್ ಬೃಹತ್ ಪೋಟ್ರೈಟ್ ಅನ್ನು ರಚಿಸಿದ್ದಾರೆ. ಇದು ವಿಶ್ವದಲ್ಲೇ ಅತಿದೊಡ್ಡದಾದ ಮೊಸಾಯಿಕ್ ಭಾವಚಿತ್ರವೆಂದು ಟ್ವಿಟರ್ ನಲ್ಲಿ ಅವುಗಳ ಚಿತ್ರವನ್ನು ಶೇರ್ ಮಾಡಿದ್ದಾರೆ.
ಮಧ್ಯಾಹ್ನದವರೆಗೂ ಬಹುತೆರೆ ಸಂಸ್ಥೆ ಜೊತೆ ಮಾತುಕತೆ ಮುಂದುವರಿಕೆ :
ಮಲ್ಟಿಪ್ಲೆಕ್ಸ್, ಪಿವಿಆರ್, ಮತ್ತಿತರ ಬಹುತೆರೆಯ ಸಂಸ್ಥೆಗಳೊಂದಿಗೆ ಏ.13ರ ಮಧ್ಯಾಹ್ನ 12 ಗಂಟೆಯವರೆಗೂ ಚಿತ್ರ ಬಿಡುಗಡೆ ಸಂಬಂಧ ನಿರ್ಮಾಪಕ ವಿಜಯ್ ಕಿರಂಗದೂರ್ ಬಿಡುವಿಲ್ಲದೆ ಮಾತುಕತೆ ನಡೆಸುತ್ತಿದ್ದರೂ, ಒಮ್ಮತ ಸಂಬಂಧ ಅಂತಿಮ ತೀರ್ಮಾನಕ್ಕೆ ಬಂದಿರಲಿಲ್ಲ. ನಿರ್ಮಾಪಕರು ಹಾಗೂ ಬಹುತೆರೆ ಸಿನಿಮಾ ಪ್ರದರ್ಶಕರ ನಡುವೆ ಇಬ್ಬರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಬೆಂಗಳೂರು ವೈರ್ ಗೆ ಹೇಳಿವೆ.
ಈ ಮಧ್ಯೆ ಕೆಜಿಎಫ್-2 ನಿರ್ಮಾಪಕ ವಿಜಯ್ ಕಿರಗಂದೂರ್ ತಮ್ಮ ಟ್ವಿಟರ್ ನಲ್ಲಿ ಚಿತ್ರದ ವಿಡಿಯೋ ತುಣಕುಗಳನ್ನು ಹಂಚಿಕೊಂಡಿದ್ದಾರೆ.