ಬೆಂಗಳೂರು, (www.bengaluruwire.com) : ಆಮ್ಲಜನಕದ ಮೂಲಕ ಹತ್ತಾರು ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ “ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್” (Hyperbaric Oxygen therapy unit)ಅತ್ಯಾಧುನಿಕ ಘಟಕವನ್ನು ವಿಕ್ಟೋರಿಯಾ ಆಸ್ಪತ್ರೆ (Victoria Hospital) ಸ್ಥಾಪನೆ ಮಾಡಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ಘಟಕವನ್ನು ಹೊಂದಿದ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಮೆರಿಕದಿಂದ ಆಮದು ಮಾಡಿಕೊಂಡ ಈ ಬಹು ಕೋಣೆಗಳಿರುವ “ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್” ಏಕ ಕಾಲಕ್ಕೆ ಮೂವರು ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಮೂಲಕ ಸರಬರಾಜಾಗುವ ಸಾಮಾನ್ಯ ಆಮ್ಲಜನಕವನ್ನು ಅತಿಹೆಚ್ಚಿನ ಒತ್ತಡದ ಆಮ್ಲಜನಕ ಪೂರೈಸುವ ವ್ಯವಸ್ಥೆಯ ಮೂಲಕ ರೋಗಿಗಳ ದೇಹಸ್ಥಿತಿ ಆಧರಿಸಿ ಚಿಕಿತ್ಸೆ ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಸಾಮಾನ್ಯವಾಗಿ ರೋಗಿಗಳಿಗೆ ನೀಡುವ ಆಕ್ಸಿಜನ್ ಕೆಂಪುರಕ್ತ ಕಣದ ಮೂಲಕ ಆಮ್ಲಜನಕ ಸೇರ್ಪಡೆಯಾಗಿ ದೇಹದ ಎಲ್ಲಾ ಭಾಗಗಳಿಗೆ ಪೂರೈಕೆಯಾಗುತ್ತದೆ. ಆದರೆ ಈ ಹೊಸ ತಂತ್ರಜ್ಞಾನ ಆಧಾರಿತ ಯಂತ್ರದಲ್ಲಿ ನೀಡುವ ಚಿಕಿತ್ಸೆಯಲ್ಲಿ ಆಮ್ಲಜನಕವು ರಕ್ತದ ಪ್ಲಾಸ್ಮಾದಿಂದ ದೇಹದ ಎಲ್ಲಾ ಅಂಗಾಂಗ ಭಾಗಗಳಿಗೆ ಸಂಚರಿಸಿ ರೋಗದ ಗುಣವಾಗುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳುತ್ತಾರೆ ವಿಕ್ಟೋರಿಯಾ ಆಸ್ಪತ್ರೆ ಹಿರಿಯ ವೈದ್ಯರು.
ಒಂದು ಚೇಂಬರ್ (ಕೋಣೆ) ಇರುವ “ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್” ಗೆ 50 ಲಕ್ಷ ರೂ. ಗಳಾಗುತ್ತದೆ. ಆದರೆ ಮೂರು ಚೇಂಬರ್ (Chamber) ಇರುವ ಈ ಘಟಕಕ್ಕೆ 3.5 ಕೋಟಿ ರೂ. ಗಳಾಗುತ್ತದೆ. ರೋಗಿಗಳಿಗೆ ಪ್ರತಿ ಬಾರಿ ಚಿಕಿತ್ಸೆಯ ಅವಧಿ (Session) ಒಂದೂವರೆಯಿಂದ ಎರಡು ಗಂಟೆಯಾಗಲಿದ್ದು ಒಟ್ಟಾರೆ ಐದರಿಂದ ಆರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ನೀಡಲಾಗುತ್ತದೆ.
“ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್ ಘಟಕ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಪೈಕಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಸ್ಥಾಪನೆ ಮಾಡಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ವಿ.ಸುಧಾಕರ್ ಅವರ ಸಹಕಾರದಿಂದಾಗಿ ಆ ವ್ಯವಸ್ಥೆಯನ್ನು ಅಳವಡಿಸಲು ಸಾಧ್ಯವಾಗುತ್ತಿದೆ. ಮಂಗಳವಾರ ಈ ಯಂತ್ರವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಇನ್ನೆರಡು ವಾರದಲ್ಲಿ ಈ ಘಟಕವನ್ನು ಬಳಸಿ ಚಿಕಿತ್ಸೆ ಆರಂಭವಾಗಲಿದೆ. ಸಾವಿರಾರು ರೋಗಿಗಳಿಗೆ ಇದರಿಂದ ಗುಣಮಟ್ಟ ಚಿಕಿತ್ಸೆ ಸಾಧ್ಯವಾಗಲಿದೆ.”
– ಡಾ.ಕೆ.ರಮೇಶ್ ಕೃಷ್ಣ, ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಾದ ಮಣಿಪಾಲ್, ಹಾಸ್ಮಾಟ್ ಹಾಗೂ ಕೇಂದ್ರ ರಕ್ಷಣಾ ಇಲಾಖೆಯ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಈ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಸೆಶನ್ ಚಿಕಿತ್ಸೆಗೆ 1 ರಿಂದ 2,000₹ ರೂ. ಶುಲ್ಕ ನಿಗದಿ ಮಾಡಲಾಗಿದೆ. ಆದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯ ಜನರಿಗೆ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನೋಂದಾಯಿತರಾಗಿದ್ದಲ್ಲಿ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೆ ಚಿಕಿತ್ಸೆ ದೊರೆಯಲಿದೆ.
ಯಾವ್ಯಾವ ರೀತಿಯ ರೋಗಿಗಳಿಗೆ ಈ ಚಿಕಿತ್ಸೆ ದೊರೆಯಲಿದೆ?
ಗಾಯಗಳು, ಮಧುಮೇಹದಿಂದಾದ ಕಾಲಿ ಹುಣ್ಣು (Diabetic foot), ಸುಟ್ಟಗಾಯಗಳು, ಪಾರ್ಶ್ವವಾಯು (Stroke), ಹೃದಯಾಘಾತ (Heart attack), ನಾಳಗಳ ಸಂಬಂಧಿತ ಗಾಯಗಳು (Vascular injuries), ಕ್ರೀಡೆಯಿಂದಾದ ಗಾಯಗಳು, ಸ್ನಾಯು ಸೋಂಕು, ಮೂಳೆ ಸೋಂಕಿತ ಖಾಯಿಲೆಗಳು, ಮಿದುಳು ಸೋಂಕು, ಗ್ಯಾಸ್ ಗ್ಯಾಂಗ್ರೀನ್, ಕೋವಿಡ್ ಚಿಕಿತ್ಸೆ, ಬ್ಲಾಕ್ ಫಂಗಸ್ ಚಿಕಿತ್ಸೆ, ಹಿರಿಯರ ಕುರುಡು, ಕಿವುಡು, ನಿಮಿರುವಿಕೆ ಸಮಸ್ಯೆ ಹಾಗೂ ಅನಿಮಿಯಾದಂತಹ ಕಾಯಿಲೆಗಳ ಚಿಕಿತ್ಸೆಗೆ ಇದು ಸಹಕಾರಿಯಾಲಿದೆ.
ಒಟ್ಟಾರೆಯಾಗಿ ಒಂದು ಸಾವಿರ ಒಳರೋಗಿಗಳ ಹಾಸಿಗೆ ಒಳಗೊಂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಹೈಟೆಕ್ ಚಿಕಿತ್ಸೆ ರಾಜ್ಯದ ರೋಗಿಗಳಿಗೆ ಕಡಿಮೆ ವೆಚ್ಚ ಹಾಗೂ ಉಚಿತ ಚಿಕಿತ್ಸೆ ಲಭ್ಯವಾಗುತ್ತಿರುವುದು ಸಂತೋಷದ ಸಂಗತಿ.