ಬೆಂಗಳೂರು, (www.bengaluruwire.com) : ಬಿಬಿಎಂಪಿ ವ್ಯಾಪ್ತಿಯ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು 2 ಕೋಟಿ ರೂ. ಅನುದಾನ ಒದಗಿಸುವುದಾಗಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಬಜೆಟ್ ನಲ್ಲಿ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು ಅನುದಾನ ಮೀಸಲಿಡಲಾಗುತ್ತದೆ. ಆದರೆ ಈ ಬಾರಿಯ 2022-23ನೇ ಸಾಲಿನ ಬಜೆಟ್ ನಲ್ಲಿ ಪತ್ರಕರ್ತರ ಯಾವುದೇ ಬೇಡಿಕೆಗಳನ್ನು ಈಡೇರಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಪತ್ರಕರ್ತರೆಲ್ಲ ಗುರುವಾರ ಆಡಳಿತಾಧಿಕಾರಿ ಅವರನ್ನು ಭೇಟಿ ಮಾಡಿ ಆಕ್ಷೇಪ ವ್ಯಕ್ತಪಡಿಸಿತ್ತು.
ಇದೇ ವೇಳೆ ಪತ್ರಕರ್ತರ ಬೇಡಿಕೆಯ ಕುರಿತಂತೆ ಮಾತನಾಡಿದ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಪತ್ರಕರ್ತರ ಚಿಕಿತ್ಸಾ ವೆಚ್ಚವನ್ನು ಹೆಚ್ಚು ಮಾಡಲಾಗುತ್ತದೆ. ಹಾಗೆಯೇ ಪತ್ರಕರ್ತರ ಜಾಹಿರಾತು ಒದಗಿಸುವುದಕ್ಕೆ ಆದ್ಯತೆ ನೀಡುತ್ತೇವೆ. ಜೊತೆಗೆ ಮಾಧ್ಯಮ ಕೇಂದ್ರ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಶಿವಕುಮಾರ್ ಬೆಳ್ಳಿತಟ್ಟೆ, ಪ್ರತಿವರ್ಷ ಪತ್ರಕರ್ತರ ಚಿಕಿತ್ಸಾ ವೆಚ್ಚ ಭರಿಸಲು ಬಿಬಿಎಂಪಿಯಲ್ಲಿ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿತ್ತು. ಸಣ್ಣ ಪತ್ರಿಕೆಗಳ ಪುನಶ್ಚೇತನಕ್ಕಾಗಿ ಜಾಹಿರಾತು ಒದಗಿಸಲು ಅನುದಾನ ಮೀಸಲಾಗಿತ್ತು. ಎಲ್ಲವನ್ನು ಅಧಿಕಾರಿಗಳು ರದ್ದುಗೊಳಿಸಿದ್ದಾರೆಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಪತ್ರಕರ್ತರ ಬೇಡಿಕೆಗಳ ಪರವಾಗಿ ನಾನಿದ್ದೇನೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ನಾನು ನಿಮ್ಮ ಪರ ನಿಲ್ಲುತ್ತೇನೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ಸ್ವಾಮಿ, ಲಿಂಗರಾಜು, ಅನಿಲ್ ಕುಮಾರ್, ಶ್ಯಾಮ್.ಎಸ್, ಅತುಲ್ ಚತುರ್ವೇದಿ, ಚಂದ್ರಶೇಖರ್, ರಮೇಶ್ ಹಿರೇಜಂಬೂರ್, ಛಾಯಾಗ್ರಾಹಕ ಪ್ರಭು, ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.