ಬೆಂಗಳೂರು, (www.bengaluruwire.com) : ವಿದ್ಯುತ್ (Power), ಅಡುಗೆ ಅನಿಲ (LPG), ಅಡುಗೆ ಎಣ್ಣೆ (Edible Oil) ಹಾಗೂ ಪೆಟ್ರೋಲ್ ದರ (Fuel Price) ಹೆಚ್ಚಾಗಿರುವ ಹಿನ್ನಲೆಯಲ್ಲಿ ಇದೀಗ ಹೋಟೆಲ್ (Hotel) ಊಟ- ತಿಂಡಿ ದರವೂ ಈ ವಾರದ ಒಳಗಾಗಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಶೇ.10ರಷ್ಟು ಏರಿಕೆಯಾಗಲಿದೆ.
“ಒಂದು ವರ್ಷದ ಹಿಂದೆ 900 ರೂ. ಇದ್ದ ಗ್ಯಾಸ್ ದರ ಈಗ 2,240 ರೂ. ಆಗಿದೆ. ಪೆಟ್ರೋಲ್, ಡೀಸೆಲ್ ದರ, ಎಣ್ಣೆ ಬೆಲೆ, ಈಗ ವಿದ್ಯುತ್ ದರ ಎಲ್ಲವೂ ಏರಿಕೆಯಾದ್ದರಿಂದ ಬೆಲೆ ಏರಿಕೆ ಅನಿವಾರ್ಯವಾಗಿತ್ತು. ಗುಣಮಟ್ಟ ಕಾಯ್ದುಕೊಂಡು ಶೇ.10ರ ಮಿತಿಯಲ್ಲಿ ಹೋಟೆಲ್ ಊಟ, ತಿಂಡಿ, ಚಾಟ್ಸ್ ಮತ್ತಿತರ ದರ ಏರಿಕೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.” ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.
“ಸೋಮವಾರ ನಡೆದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಮುಂದಿನ ಒಂದು ವಾರದೊಳಗೆ ರಾಜ್ಯದ ಹೋಟೆಲ್ ಗಳಲ್ಲಿ ಈ ದರ ಏರಿಕೆ ಜಾರಿಗೆಯಾಗಲಿದೆ. ಕೆಲವು ಹೋಟೆಲ್ ಮಾಲೀಕರು ಇಂದಿನಿಂದಲೇ ದರ ಏರಿಕೆ ಮಾಡಿದರೂ ಆಶ್ಚರ್ಯವಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಶೇ.10ರಷ್ಟು ಏರಿಕೆ ಮಾಡಲಾಗಿದೆ” ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ (PC Rao) ಹೇಳಿದ್ದಾರೆ.
ತಿಂಡಿ, ಊಟದ ಪ್ರಸ್ತುತ ರೇಟ್ ಮೇಲೆ ಶೇ.10ರಷ್ಟು ಬೆಲೆ ಏರಿಕೆ ಆಗಲಿದೆ. ಅಂದರೆ 10 ರೂ. ಕಾಫಿ .12 ರೂ. ಆಗಲಿದೆ. ಅದೇ ರೀತಿ, 25 ರೂ. ನ ಉದ್ದಿನ ವಡೆ 30, ಎರಡು ಇಡ್ಲಿ 25 ರೂನಿಂದ 30ಕ್ಕೆ ಹಾಗೂ 80 ಊಟ 90 ರೂ.ಗೆ ಹೆಚ್ಚಾಗಲಿದೆ. ಈಗಾಗಲೇ ದರ ಹೆಚ್ಚಿಸಿರುವ ನಗರದ ಕೆಲವು ಹೋಟೆಲ್‌ಗಳ ಬೆಲೆಗಳಲ್ಲಿ ತುಸು ಬದಲಾವಣೆ ಆಗಬಹುದು ಎಂದು ಮಾಹಿತಿ ನೀಡಿದರು.
ಈ ಹಿಂದೆ ಕೋವಿಡ್ ಸೋಂಕು ಏರಿಕೆಯಾದ ಮೊದಲ ಮತ್ತು ಎರಡನೇ ಅಲೆಯಲ್ಲಿ ಲಾಕ್ ಡೌನ್ ಮತ್ತಿತರ ಕಾರಣದಿಂದ ಅನೇಕ ಹೋಟೆಲ್ ಗಳು ನಷ್ಟದ ಹಾದಿ ಹಿಡಿದಿದ್ದವು. ಹಲವು ಹೋಟೆಲ್ ಗಳನ್ನು ಮುಚ್ಚಿಹೋಗಿದ್ದವು. ಹೋಟೆಲ್‌ಗೆ ಬರುವ ಗ್ರಾಹಕರು (Customers) ಸಂಖ್ಯೆ ಕಡಿಮೆಯಾಗುವ ಆತಂಕದಿಂದ ಬೆಲೆ ಏರಿಕೆ ಮಾಡಿರಲಿಲ್ಲ. ಆದರೆ ಈಗ ಬಹುತೇಕ ಅಗತ್ಯ ವಸ್ತುಗಳ ದರ ಒಂದೇ ಸಮನೆ ಏರುತ್ತಿರುವ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಹೋಟೆಲ್ ತಿಂಡಿ-ತಿನಿಸುಗಳ ದರ ಏರಿಕೆ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ನಾಲ್ಕು ತಿಂಗಳ ಹಿಂದೆ ಒಮ್ಮೆ ಊಟ- ತಿಂಡಿ ಏರಿಸಲಾಗಿತ್ತು. ಹಾಗಾಗಿ ಕೆಲವು ಹೋಟೆಲ್ ನವರು ಪುನಃ ದರ ಏರಿಕೆ ಮಾಡಲು ಒಲವು ತೋರಿಲ್ಲ.