ಬೆಂಗಳೂರು, (www.bengaluruwire.com) : ಕನ್ನಡ ಚಲನಚಿತ್ರಗಳು ಈಗೀಗ ಪ್ಯಾನ್ ಇಂಡಿಯಾ ಹಾಗೂ ವಿಶ್ವಾದ್ಯಂತ ಪ್ರದರ್ಶನವಾಗುತ್ತಿದೆಯಲ್ಲದೇ ಚಿತ್ರರಂಗದಲ್ಲೇ ಹೊಸ ಅಲೆಯ ಸೃಷ್ಟಿಗೆ ಹಾಗೂ ಅನಂತ ಅವಕಾಶಗಳೆಡೆಗೆ ಸಾಗುತ್ತಿದೆ. ಇದಕ್ಕೆ ಹೊಸ ಸಾಕ್ಷಿ ನಟ ಕಿಚ್ಚಾ ಸುದೀಪ್ (Kichcha Sudeepa) ಹಾಗೂ ನಟಿ ಜಾಕ್ವಲಿನ್ ಫರ್ನಾಂಡೀಸ್ (Jacqueline Fernandez) ಅಭಿನಯದ ‘ವಿಕ್ರಾಂತ್ ರೋಣ’ (Vikrant Rona – Movie)ದ ಟೀಸರ್. ಈ ಬಹುಭಾಷಾ ಚಿತ್ರದ ಟೀಸರ್ ಬಿಡುಗಡೆಯಾದ ಎರಡನೇ ದಿನಕ್ಕೆ ಯೂಟ್ಯೂಬ್ (Youtube), ಇನ್ ಸ್ಟಾಗ್ರಾಮ್ (Instagram) ಸೇರಿದಂತೆ ಇಂಟರ್ ನೆಟ್ ಗಳಲ್ಲಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.
ವಿಶ್ವದಾದ್ಯಂತ ಇರುವ ಚಿತ್ರರಸಿಕರು ಚಿತ್ರದ ಟೀಸರ್ ಬಗ್ಗೆ ವ್ಯಾಪಕವಾಗಿ ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ. ಚಿತ್ರದ ಟೀಸರ್ ನಲ್ಲಿ ಕಂಡು ಬಂದಿರುವ ಕಿಚ್ಚಾ ಸುದೀಪ್ ಗೆಟಪ್ ಗೆ ಜನರು ಫಿದಾ ಆಗಿದ್ದಾರೆ. ದಟ್ಟಾರಣ್ಯದ ಕಾಡು, ಹಡಗಿನಲ್ಲಿ ಕಾಣಿಸಿಕೊಳ್ಳುವ ಸುದೀಪ್, ರಫ್ ಎಂಡ್ ಟಫ್ ಲುಕ್ ನಲ್ಲಿನ ಎಂಟ್ರಿ, ಅದಕ್ಕೆ ಸೂಕ್ತವಾದ ಹಿನ್ನಲೆ ಸಂಗೀತ ಎಲ್ಲವೂ ಚಿತ್ರದ ಕುರಿತು ಅವರ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹೆಚ್ಚಿಸಿವೆ. ಕನ್ನಡ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ಕನ್ನಡವೊಂದರ ಟೀಸರ್ ಕೇವಲ ಒಂದೇ ದಿನದಲ್ಲಿ 18 ಲಕ್ಷ ಜನರು ವೀಕ್ಷಿಸಿದ್ದಾರೆ.
ಜುಲೈ 28ರಂದು ವಿಶ್ವದಾದ್ಯಂತ ಬಿಗ್ ಸ್ಕ್ರೀನ್ ಗಳಲ್ಲಿ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ರಿಲೀಸ್ ಆಗಲಿರುವ ಈ ಚಿತ್ರದ ಟೀಸರ್ ಶನಿವಾರವಷ್ಟೆ ಪ್ಯಾನ್ ಇಂಡಿಯಾ ಬಿಡುಗಡೆ ಯಾಗಿತ್ತು. ‘ವಿಕ್ರಾಂತ್ ರೋಣ’ ಟೀಸರ್ ಅನ್ನು ದೊಡ್ಡ ದೊಡ್ಡ ಸ್ಟಾರ್ ನಟರುಗಳಾದ ಸಲ್ಮಾನ್ ಖಾನ್ (Salman Khan), ಚಿರಂಜೀವಿ (Chiranjeevi), ಮೋಹನ್ ಲಾಲ್ (Mohanlal), ಸಿಂಬು (Simbu) ಮತ್ತಿತರರು ಬಿಡುಗಡೆ ಮಾಡಿದ್ದಾರೆ. ಕಾಲ್ಪನಿಕ ಚಿತ್ರವಾಗಿರುವ ‘ವಿಕ್ರಾಂತ್ ರೋಣ’ ಚಿತ್ರವು ತನ್ನ ಟೀಸರ್ ನಲ್ಲಿ ಚಿತ್ರ ನಿರ್ಮಾಣದ ಗತ್ತು ಗೈರತ್ತನ್ನು ತೆರೆದಿಟ್ಟಿದೆ. ವಿಶ್ಯುವಲ್ ಎಫೆಕ್ಟ್ಸ್ (VFX) ಹಾಗೂ ಸಿನಿಮಾಗೆ ಅಗತ್ಯ ಸಂದರ್ಭದಲ್ಲಿ ನೀಡುವ ಹಿನ್ನಲೆ ಸಂಗೀತದ ಎಫೆಕ್ಟ್ (BGM) ಹಾಗೂ ಆಕ್ಷನ್ ಸನ್ನಿವೇಶಗಳು ಚಿತ್ರದ ಆಸಕ್ತಿಯನ್ನು ಹೆಚ್ಚಿಸಿದೆ.
ವಿದೇಶಿ ಭಾಷೆಗಳಲ್ಲೂ ಚಿತ್ರ ರಿಲೀಸ್ ?
ಜೀ ಪ್ರೊಡಕ್ಷನ್, ಶಾಲಿನಿ ಆರ್ಟ್ಸ್ ನಿರ್ಮಾಣದ ವಿಕ್ರಾಂತ್ ರೋಣ ಚಿತ್ರವನ್ನು ಕನ್ನಡದ ಅನೂಪ್ ಬಂಡಾರಿ ನಿರ್ದೇಶಿಸಿದ್ದಾರೆ. ನಟ ಕಿಚ್ಚಾ ಸುದೀಪ್ ಹಾಗೂ ನಟಿ ಜಾಕ್ವಲಿನ್ ಫರ್ನಾಂಡೀಸ್ ಜೊತೆಗೆ ನಿರೂಪ್ ಬಂಡಾರಿ ಹಾಗೂ ನೀತಾ ಅಶೋಕ್ ಅಭಿನಯಿಸಿದ್ದಾರೆ. ಜುಲೈ 28 ರಂದು ಕನ್ನಡ, ಹಿಂದಿ, ತೆಲಗು, ತಮಿಳು, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ‘ವಿಕ್ರಾಂತ್ ರೋಣ’ ವಿಶ್ವದಾದ್ಯಂತ 3ಡಿ ಫಿಲಮ್ ಬಿಡುಗಡೆಯಾಗುತ್ತಿದೆ. ಈ ಚಿತ್ರವು ಇಂಗ್ಲಿಷ್, ರಷ್ಯಾ, ಜರ್ಮನ್, ಮಂದರಿನ್, ಅರೇಬಿಕ್ ಮತ್ತಿತರ ಭಾಷೆಗಳಲ್ಲೂ ರಿಲೀಸ್ ಆಗಲಿದೆ ಎಂಬ ಸುದ್ದಿ ಸಿನಿಮಾ ರಂಗದಲ್ಲಿ ಚಾಲ್ತಿಯಲ್ಲಿದೆ.
ವಿಕ್ರಾಂತ್ ರೋಣ ಚಿತ್ರದ ಶೂಟಿಂಗ್ ಎಲ್ಲೆಲ್ಲಿ ಆಗಿದೆ?
1ನೇ ಮಾರ್ಚ್ 2020ರಂದು ಈ ಚಿತ್ರದ ಫೊಟೋ ಶೂಟ್ ಆರಂಭವಾಗಿ, ಮಾರ್ಚ್ 2ರಂದು ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಪ್ರಾರಂಭವಾಯ್ತು. ಈ ಚಿತ್ರದ ಶೂಟಿಂಗ್ ಹಾಗೂ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್ ಎರಡಲ್ಲೂ ಅಭಿನಯ ಮಾಡಿದ್ದರು. ಪ್ರಾರಂಭದಲ್ಲಿ ಈ ಚಿತ್ರದ ನಾಯಕ ಸುದೀಪ್ ಸೋದರಳಿಯನ ಪಾತ್ರದಲ್ಲಿ ಸಂಚಿತ್ ಸಂಜೀವ್ ಅಭಿನಯಿಸಬೇಕಿತ್ತು. ಆನಂತರ ನಿರೂಪ್ ಬಂಡಾರಿಗೆ ಅವಕಾಶ ನೀಡಲಾಯಿತು. ವಿಕ್ರಾಂತ್ ರೋಣ ಚಿತ್ರದ ಶೂಟಿಂಗ್ ಎರಡನೇ ಶೆಡ್ಯೂಲ್ ಆರಂಭವಾಗುವ ಹೊತ್ತಿಗೆ ದೇಶದಲ್ಲಿ ಕೋವಿಡ್-19 ಎರಡನೇ ಅಲೆಯಿಂದಾಗಿ ಚಿತ್ರತಂಡದ ಕಾರ್ಯಗಳು ಸಂಪೂರ್ಣವಾಗಿ ನಿಂತಿತ್ತು. ಆನಂತರ ಜೂನ್ 16ರಿಂದ ಸಿನಿಮಾ ಕಾರ್ಯಗಳು ಅಧಿಕೃತ ಚಾಲನೆ ಪಡೆದುಕೊಂಡಿತ್ತು. ಕರೋನಾ ಸೋಂಕಿನ ನಡುವೆಯೇ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋ ಹಾಗೂ ರಾಮೋಜಿ ಫಿಲಂಮ್ ಸಿಟಿಯಲ್ಲಿ ದಟ್ಟಾರಣ್ಯದ ಸೆಟ್ ನಿರ್ಮಿಸಿ ಬಹುತೇಕ ಇಲ್ಲಿ ಶೂಟಿಂಗ್ ನಡೆಸಿತ್ತು. ಅಲ್ಲದೆ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಾದ ಮಲ್ಶೆಚ್ ಘಾಟ್ (Malshej Ghat), ಮಹಾಬಲೇಶ್ವರ (Mahabaleshwar) ಹಾಗೂ ಕೇರಳದಲ್ಲಿ ಶೂಟಿಂಗ್ ಕೈಗೊಳ್ಳಲಾಗಿದೆ.