ದೇಶದ ಸೆನ್ಸೆಕ್ಸ್ ಮಾರ್ಚ್ 2020ರಿಂದ ಒಂದೂವರೆ ವರ್ಷದಲ್ಲಿ 2.5 ಪಟ್ಟು ಜಿಗಿದಿದೆ |ಷೇರು ಮಾರುಕಟ್ಟೆ ಈ ಅಸಾಧಾರಣ ಏರಿಕೆ ಯುವಕರು, ಕಾಲೇಜು ವಿದ್ಯಾರ್ಥಿಗಳು ಸುಲಭ ಹಣ ಮಾಡುವ ಆಮೀಷದೊಂದಿಗೆ ಸೆಳೆಯಲಾಗುತ್ತಿದೆ | ಹಣದ ಮಾರುಕಟ್ಟೆ ಬಗ್ಗೆ ತಿಳಿದು ಹೂಡಿಕೆ ಮಾಡಬೇಕಿದೆ
ಇತ್ತೀಚೆಗಷ್ಟೇ ಪುದುಚೇರಿಯಲ್ಲಿ ಓರ್ವ ಸಂಶೋಧಕರೊಬ್ಬರು ಷೇರು ಮಾರುಕಟ್ಟೆ ಕುಸಿತದಿಂದ ನಷ್ಟ ಅನುಭವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಶೇಷವಾಗಿ ಯುವಕರಲ್ಲಿ ಷೇರು ಮಾರುಕಟ್ಟೆಯ ನಷ್ಟದಿಂದ ಉಂಟಾಗುವ ಖಿನ್ನತೆಯಿಂದ ನರಳಿ ನರಳಿ, ಅತ್ಯಂತ ಅಪಾಯಕಾರಿ ನಿರ್ಧಾರ ಕೈಗೊಳ್ಳುವ ಮಟ್ಟ ತಲುಪುತ್ತಾರೆ. ಇದಕ್ಕೆ ಹಲವಾರು ನಿರ್ದಶನಗಳಿವೆ.
36 ವಿವಿಧ ದೇಶಗಳನ್ನು ಒಳಗೊಂಡ ಜಾಗತಿಕ ಸಂಶೋಧನಾ ವರದಿಯು ಹಲವಾರು ದಶಕಗಳ ಕಾಲ ಸಂಶೋಧನೆ ನಡೆಸಿ, ಸ್ಟಾಕ್ ಮಾರುಕಟ್ಟೆ ಕುಸಿತ ಮತ್ತು ಖಿನ್ನತೆ ಮತ್ತು ಆತ್ಮಹತ್ಯೆ ದರಗಳ ನಡುವೆ ಬಲವಾದ ಸಹ-ಸಂಬಂಧವು ಅಸ್ತಿತ್ವದಲ್ಲಿದೆ ಎಂಬುದನ್ನು ಸೂಚಿಸಿತ್ತು. ಇದು ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆಂದು ಆ ಸಂಶೋಧನಾ ವರದಿಯಲ್ಲಿ ತಿಳಿಸಲಾಗಿತ್ತು.
ಭಾರತದ ಷೇರು ಮಾರುಕಟ್ಟೆಯು ತುಲನಾತ್ಮಕವಾಗಿ ಹೊಸದು. ಜೊತೆಗೆ ಯುವ ಜನತೆಯಲ್ಲಿ, ಖಿನ್ನತೆ ಮತ್ತು ಆತ್ಮಹತ್ಯೆ ಪ್ರಕರಣಗಳನ್ನು ತಪ್ಪಿಸಲು ಅವರಿಗೆ ಸರಿಯಾದ ಮಧ್ಯಸ್ಥಿಕೆ ಮತ್ತು ಮಾರ್ಗದರ್ಶನ ಅವಶ್ಯಕತೆಯಿದೆ. ನಾವು ಇಂತಹ ಸಂಭವನೀಯ ಮಧ್ಯಸ್ಥಿಕೆಗಳನ್ನು ತಿಳಿದುಕೊಳ್ಳುವ ಮೊದಲು, ಭಾರತೀಯ ಷೇರು ಮಾರುಕಟ್ಟೆಯ ಸಂದರ್ಭವನ್ನು ಅರ್ಥಮಾಡಿಕೊಳ್ಳೋಣ.
“ತ್ವರಿತ ಮತ್ತು ಸುಲಭ ಹಣ ಮಾಡುವ” ಆಮಿಷ :
ಮಾರ್ಚ್ 2020 ರ ಮಾರುಕಟ್ಟೆ ಕುಸಿತದ ನಂತರ ಭಾರತೀಯ ಷೇರು ಮಾರುಕಟ್ಟೆಯು ಗಣನೀಯವಾಗಿ ಏರಿಕೆ ಕಂಡಿದೆ. ಬೆಂಚ್‌ಮಾರ್ಕ್ ಸೂಚ್ಯಂಕವಾದ ಸೆನ್ಸೆಕ್ಸ್ ಮಾರ್ಚ್ 2020 ರಿಂದ ಅಕ್ಟೋಬರ್ 2021 ರವರೆಗೆ 2.5 ಪಟ್ಟು ಜಿಗಿದಿದೆ ಮತ್ತು ಪ್ರಸ್ತುತ ಕುಸಿತದ ನಂತರವೂ ಇದು 2 ಪಟ್ಟು ಹೆಚ್ಚಾಗಿದೆ. ಇಂತಹ ಅಸಾಧಾರಣ ಹೆಚ್ಚಳವು ಹೆಚ್ಚು ಹೆಚ್ಚು ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಸುಲಭ ಮತ್ತು ತ್ವರಿತ ಆಮಿಷದೊಂದಿಗೆ ಷೇರು ಮಾರುಕಟ್ಟೆಯತ್ತ ಆಕರ್ಷಿಸಲಾಗುತ್ತಿದೆ.
ಮಾರ್ಚ್ 2019 ರಲ್ಲಿ ಸುಮಾರು 3.6 ಕೋಟಿ ಖಾತೆಗಳಿಂದ ಭಾರತವು 7.7 ಕೋಟಿಗೂ ಹೆಚ್ಚು ಡಿಮ್ಯಾಟ್ ಖಾತೆಗಳನ್ನು ಹೊಂದಿದೆ ಎಂದು SEBI ದತ್ತಾಂಶವು ತಿಳಿಸುತ್ತಿದೆ. ಭಾರತವು ಐತಿಹಾಸಿಕವಾಗಿ ಸುಮಾರು 4 ಲಕ್ಷ ಡಿಮ್ಯಾಟ್ ಖಾತೆಗಳನ್ನು ಕೋವಿಡ್ ಪೂರ್ವದಲ್ಲಿ ಸೇರ್ಪಡೆಯಾಗುತ್ತಿತ್ತು. ಈಗ ಪ್ರತಿ ತಿಂಗಳು ಡಿಮ್ಯಾಂಟ್ ಅಕೌಂಟ್ 20-30 ಲಕ್ಷಕ್ಕೆ ಏರಿಕೆಯಾಗುತ್ತಿದೆ ಎಂದು ವರದಿಗಳು ಸೂಚಿಸುತ್ತಿವೆ. ಎಲ್ಲಾ ಹೊಸ ಖಾತೆಗಳಲ್ಲಿ ಶೇ.75ರಷ್ಟು ಮಂದಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನತೆ ಸೇರಿರುವುದು ಆಶ್ಚರ್ಯವೇನಿಲ್ಲ.
ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಲ್ಲಿ “ಸ್ಟಾಕ್ ಟಿಪ್ಸ್” ನೊಂದಿಗೆ ಸೆಲೆಬ್ರಿಟಿ ಸ್ಥಾನಮಾನವನ್ನು ಅನೇಕ ತಜ್ಞರು ಗಳಿಸುವುದರೊಂದಿಗೆ ಕಳೆದ 2 ವರ್ಷಗಳಲ್ಲಿ ಷೇರು ಮಾರುಕಟ್ಟೆಯ ಬಗ್ಗೆ ಅರಿವು ಗಮನಾರ್ಹವಾಗಿ ಹೆಚ್ಚಾಗಿದೆ. ನಿಶ್ಚಿತ ಠೇವಣಿ ಮತ್ತು ಉಳಿತಾಯ ಬ್ಯಾಂಕ್ ಖಾತೆಗಳಲ್ಲಿನ ಬಡ್ಡಿ ದರವನ್ನು ಕಡಿಮೆ ಮಾಡಿರುವುದು ಷೇರು ಮಾರುಕಟ್ಟೆಯ ಮೇಲಿನ ಆಸಕ್ತಿಯ ಹಠಾತ್ ಹೆಚ್ಚಳಕ್ಕೆ ಕಾರಣವಾಗಿದೆ.
ಆರ್ಥಿಕ ಯಶಸ್ಸಿಗೆ ದುರಾಸೆಯಿರದ ಹಾಗೂ ತಾಳ್ಮೆ ಅಂಶಗಳೇ ಅಸ್ತ್ರಗಳು :
ಪ್ರತಿಯೊಬ್ಬ ವ್ಯಕ್ತಿಯು ಅಲ್ಪಾವಧಿಯ ವ್ಯಾಪಾರ ಅಥವಾ ದೀರ್ಘಾವಧಿಯ ಹೂಡಿಕೆಯ ವಿಚಾರದಲ್ಲಿ ತಮ್ಮ ಅಪಾಯದ ಪ್ರೊಫೈಲ್‌ಗೆ ಸರಿಹೊಂದುವ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಅತ್ಯಂತ ಪ್ರಸಿದ್ಧ ಹೂಡಿಕೆದಾರ ವಾರೆನ್ ಬಫೆಟ್ ಹಲವಾರು ದಶಕಗಳ ಕಾಲ ಷೇರುಗಳನ್ನು ತಾಳ್ಮೆಯಿಂದ ಹಿಡಿದುಕೊಂಡು ಯಶಸ್ಸನ್ನು ಸಾಧಿಸಿದ್ದರು. ಇವರ ಹೂಡಿಕೆ ತಂತ್ರಗಳು ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ. “ದ ಸೈಕಾಲಜಿ ಆಫ್ ಮನಿ” ಪುಸ್ತಕದಲ್ಲಿ, ಲೇಖಕ ಮೋರ್ಗಾನ್ ಹೌಸ್ಲ್ ಅವರು ಆರ್ಥಿಕ ಹಿನ್ನೆಲೆ ಅಥವಾ ಸ್ಟಾರ್ ಪದವಿಗಳನ್ನು ಹೊಂದಿರದ ಸರಾಸರಿ ವ್ಯಕ್ತಿಯೊಬ್ಬ ದಶಕಗಳಿಂದ ತಾಳ್ಮೆಯಿಂದ ಕಾಯುವ ಮೂಲಕ ಸಂಪತ್ತನ್ನು ಸೃಷ್ಟಿಸಬಹುದು ಎಂದು ಸುಂದರವಾಗಿ ಹೇಳಿದ್ದರು. ಪೆಟ್ರೋಲ್ ಬಂಕ್ ಪರಿಚಾರಕನಾಗಿದ್ದ ರೊನಾಲ್ಡ್ ರೀಡ್, ತನ್ನ ಗಳಿಕೆಯನ್ನು ಉಳಿಸಿ, ಬ್ಲೂಚಿಪ್ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿದ. ಅಲ್ಲದೆ ದಶಕಗಳ ಕಾಲ ತಾಳ್ಮೆಯಿಂದ ಕಾಯುತ್ತಿದ್ದ. ಕೊನೆಗೆ ತನ್ನ ಜೀವಿತಾವಧಿಯಲ್ಲಿ 8 ಮಿಲಿಯನ್ ಡಾಲರ್ ಸಂಪತ್ತನ್ನು ಸೃಷ್ಟಿಸಿದ ಉದಾಹರಣೆಯನ್ನು ಉಲ್ಲೇಖಿಸುವುದು ಇಲ್ಲಿ ಸೂಕ್ತವಾಗಿದೆ.
ಆರ್ಥಿಕ ಯಶಸ್ಸು ಕಠಿಣ ವಿಜ್ಞಾನವಲ್ಲ, ಆದರೆ ನೀವು ಆ ಸಂದರ್ಭದಲ್ಲಿ ಹೇಗೆ ವರ್ತಿಸುತ್ತೀರಿ ಎಂಬುದು ಮುಖ್ಯ. ಕಡಿಮೆ ದುರಾಸೆ ಮತ್ತು ಹೆಚ್ಚಿನ ಸಮಯ ಕಾಯುವಿಕೆಯು ಸಂಪತ್ತು ಸೃಷ್ಟಿಗೆ ಪ್ರಮುಖವಾದ ಅಂಶವಾಗಿದೆ ಎಂದು ಒತ್ತಿ ಹೇಳುತ್ತಾರೆ.
ವೈಯಕ್ತಿಕ ಹಣಕಾಸು ಸಲಹೆ ಕುರಿತಂತೆ ಹೇಳುವುದಾದರೆ, 1926 ರಲ್ಲಿ “ದಿ ರಿಚೆಸ್ಟ್ ಮ್ಯಾನ್ ಇನ್ ಬ್ಯಾಬಿಲೋನ್” ಪುಸ್ತಕದಲ್ಲಿ ಹೂಡಿಕೆ ಕುರಿತಂತೆ ಮಹತ್ವದ ಪರಿಕಲ್ಪನೆಗಳ ಬಗ್ಗೆ ತಿಳಿಸಲಾಗಿದೆ. ಅದೇನೆಂದರೆ : “ನೀವೇ ಮೊದಲು ಹಣ ಪಾವತಿಸುವುದು”, “ನಿಮ್ಮ ವಿಧಾನದಲ್ಲಿ ಬದುಕುವುದು”, “ನಿಮಗೆ ತಿಳಿದಿರುವುದರಲ್ಲಿ ಹೂಡಿಕೆ ಮಾಡುವುದು” ಮತ್ತು “ದೀರ್ಘಾವಧಿಯ ಉಳಿತಾಯದ ಪ್ರಾಮುಖ್ಯತೆ”ಯಂತಹ ಸರಳ ಪರಿಕಲ್ಪನೆಗಳ ಮೇಲೆ ಕೇಂದ್ರೀಕರಿಸುವ ದೃಷ್ಟಾಂತಗಳ ಸಂಗ್ರಹವನ್ನು ಅದರಲ್ಲಿ ನೀಡಲಾಗಿದೆ.
ಆರ್ಥಿಕ ಸಾಕ್ಷರತೆಯ ಅವಶ್ಯಕತೆ :
ಭಾರತೀಯ ಷೇರು ವಿನಿಮಯ ಕೇಂದ್ರಗಳು ನಿಯಮಿತವಾಗಿ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್ (NSE) ನಿಂದ “ಸೋಚ್ ಕರ್ ಸಮಾಜ್ ಕರ್ ಇನ್ವೆಸ್ಟ್ ಕರ್” ನಂತಹ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ಇದು ಸಾರ್ವಜನಿಕ ವಲಯಲಯದಲ್ಲಿ ಬಹಳ ಮೆಚ್ಚುಗೆ ಪಡೆದಿದೆ. ಆದರೆ ದೇಶದಲ್ಲಿ ಷೇರು ಮಾರುಕಟ್ಟೆ ಹಾಗೂ ಹೂಡಿಕೆ ಕುರಿತಂತೆ ನಾಗರೀಕರಲ್ಲಿ ಹೆಚ್ಚಿನ ಆರ್ಥಿಕ ಸಾಕ್ಷರತೆ ಕಲ್ಪಿಸಲು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.
ಸೆಬಿ (SEBI )ನಿಯಂತ್ರಕವು ತನ್ನ ಎಲ್ಲಾ ಪಾಲುದಾರರನ್ನು ಷೇರು ಮಾರುಕಟ್ಟೆ ಹೂಡಿಕೆಯೊಂದಿಗೆ ಇರುವ ಅಪಾಯಗಳು ಮತ್ತು ಸಂಭವನೀಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಇನ್ನಷ್ಟು ಸುಧಾರಿಸಲು ಕ್ರಮಕೈಗೊಳ್ಳಬೇಕು. ಅಮೆರಿಕ ಪಟ್ಟಿಮಾಡಿದ ಷೇರುಗಳಲ್ಲಿ ಹೂಡಿಕೆ ಮಾಡಲು ಹೊಸ NSE IFSC ನಂತಹ ಹಲವಾರು ಹೊಸ ಹಣಕಾಸು ಹೂಡಿಕೆ ಸಾಧನಗಳಿವೆ. ಭಾರತೀಯ ಸ್ಟಾಕ್ ಎಕ್ಸ್ ಜೇಂಟ್ ಸಂಸ್ಥೆಯು ಎಲ್ಲಾ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡುವ ಸ್ಟಾಕ್ ಮಾರುಕಟ್ಟೆ ತಜ್ಞರಿಗೆ ಹೆಚ್ಚುವರಿ ಕಡ್ಡಾಯ ಮಾರ್ಗಸೂಚಿಗಳನ್ನು ವಿಧಿಸಿದರೆ ಉತ್ತಮ.
ಗ್ರಾಹಕರ ಹೂಡಿಕೆ ಅಪಾಯದ ಪ್ರೊಫೈಲ್ ಗುರ್ತಿಸಲು AI ಬಳಸಿದರೆ ಉತ್ತಮವೇ?
ಸ್ಟಾಕ್ ಬ್ರೋಕರ್‌ಗಳು ತನ್ನ ಗ್ರಾಹಕರ ಅಪಾಯದ ಪ್ರೊಫೈಲ್ ಅನ್ನು ಗುರುತಿಸಲು ಕೃತಕ ಬುದ್ದಿಮತ್ತೆ (Artificial Intelligence) ನಂತಹ ಸುಧಾರಿತ ಕಂಪ್ಯೂಟಿಂಗ್ ತಂತ್ರಜ್ಞಾನಗಳನ್ನು ಬಳಸಬಹುದೇ? ಗ್ರಾಹಕರು ಹಳದಿ ಅಥವಾ ಕೆಂಪು ವಲಯಕ್ಕೆ ಬೀಳುವುದನ್ನು ಕಂಡಾಗ ಅಂತಹ ಗ್ರಾಹಕರಿಗೆ ಅವರು ಕೆಲವು ಪೂರ್ವಭಾವಿ ಹಸ್ತಕ್ಷೇಪವನ್ನು ನಡೆಸಬಹುದೇ? ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದರೆ ಉತ್ತಮ.
ಆರ್ಥಿಕವಾಗಿ ಸಾಕ್ಷರರಾಗಲು ನಮ್ಮ ಜನಾಂಗವನ್ನು ಸಿದ್ಧಪಡಿಸಬೇಕು. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮತ್ತು ಸಿಬಿಎಸ್ ಇ (CBSE) ಗಳು 6 ನೇ ತರಗತಿ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದ ಆರಂಭಿಕ ಹಂತದಲ್ಲಿ ಮೂಲಭೂತ ಆರ್ಥಿಕ ಪರಿಕಲ್ಪನೆಗಳನ್ನು ನೀಡಲು ಆರ್ಥಿಕ ಸಾಕ್ಷರತೆ ಪಠ್ಯ ಪುಸ್ತಕವನ್ನು ಪರಿಚಯಿಸಿವೆ. ಈ ಉಪಕ್ರಮವನ್ನು ಶ್ಲಾಘಿಸಬೇಕಾದರೂ, ಆರ್ಥಿಕ ಸಾಕ್ಷರತೆಯನ್ನು ಬಲಪಡಿಸಲು ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ(NEP) ಚೌಕಟ್ಟನ್ನು ಬಳಸಬೇಕು. ಹಣ ನಿರ್ವಹಣೆ ಮತ್ತು ಷೇರು ಮಾರುಕಟ್ಟೆ ಜಾಗೃತಿ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸರ್ಕಾರವು ಸರಣಿ ರೀತಿಯಲ್ಲಿ ಕೈಗೊಳ್ಳಬೇಕು. ಆರ್ಥಿಕ ಜಾಗೃತಿಯನ್ನು ಹೆಚ್ಚಿಸಲು ಜಾಗತಿಕ ಮತ್ತು ಭಾರತೀಯ ಉದಾಹರಣೆಗಳ ಮಿಶ್ರಣದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಗ್ಗೆ ಕಡ್ಡಾಯ ಕೋರ್ಸನ್ನು ಜಾರಿಗೆ ತಂದರೆ ಒಳಿತಾಗಲಿದೆ.
ಸ್ಟಾಕ್ ಮಾರುಕಟ್ಟೆ ಮತ್ತು ಇತರ ಹಣಕಾಸು ಸಾಧನಗಳಿಗೆ ಸಂಬಂಧಿಸಿದ ಅಪಾಯಗಳನ್ನು ನಮ್ಮ ಯುವಜನರಿಗೆ ಒತ್ತಿಹೇಳಬೇಕು ಮತ್ತು ಆ ಮೂಲಕ ಮುಂದಿನ ಜನಾಂಗಕ್ಕೆ ಸರಿಯಾದ ಆರ್ಥಿಕ ಶಿಸ್ತಿನ ಬಗ್ಗೆ ಪರಿಸ್ಥಿತಿ ಹದಗೆಡುವ ಮುಂಚೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
– ಜಿ ಕೃಷ್ಣ ಕುಮಾರ್, ಜಂಟಿ ಮ್ಯಾನೇಜಿಂಗ್ ಟ್ರಸ್ಟಿ ಜಿವಿಬಿ ಟ್ರಸ್ಟ್ ಮತ್ತು ಅಂಕಣಕಾರರು