ಬೆಂಗಳೂರು, (www.bengaluruwire.com) : ಕರ್ನಾಟಕದ ಹತ್ತು ರಾಜ್ಯ ಹೆದ್ದಾರಿಗಳಲ್ಲಿ ಇನ್ನು ಮುಂದೆ ಪ್ರಯಾಣಿಸಿದರೆ ನೀವು ಟೋಲ್ ಪಾವತಿಸಬೇಕಾಗುತ್ತದೆ.
ಈ ಕುರಿತಂತೆ ಟೋಲ್ ಸಂಗ್ರಹಿಸುವ ಸಂಬಂಧ ಖಾಸಗಿಯವರಿಂದ ಬಿಡ್ ಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ಸ್ವೀಕರಿಸಿದ್ದು, ಅವುಗಳ ಪರಿಶೀಲನೆ ನಡೆಸುತ್ತಿದೆ. ಟೋಲ್ ಸಂಗ್ರಹ ಸಂಬಂಧ ಲೋಕೋಪಯೋಗಿ ಇಲಾಖೆಯು ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದೆ. 617.19 ಕಿ.ಮೀ ಉದ್ದದ ಈ ಹತ್ತು ರಸ್ತೆಗಳಿಂದ ವಾರ್ಷಿಕ 44.72 ಕೋಟಿ ರೂ. ಟೋಲ್ ಸಂಗ್ರಹವಾಗುವುದೆಂದು ಅಂದಾಜಿಸಲಾಗಿದೆ. ಇದಕ್ಕಾಗಿ ಖಾಸಗಿ ಕಂಪನಿಗಳು ಸಲ್ಲಿಸಿರುವ ಬಿಡ್‍ಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಒಟ್ಟು 10 ರಸ್ತೆಗಳಿಂದ ಟೋಲ್ ಸಂಗ್ರಹಿಸಲೆಂದು ಲೋಕೋಪಯೋಗಿ ಕರೆದ ಟೆಂಡರ್ ನಲ್ಲಿ ಒಟ್ಟು 61 ಬಿಡ್ ಗಳು ಸಲ್ಲಿಕೆಯಾಗಿದ್ದವು.
ಈ ಹೊಸ ಹತ್ತು ರಸ್ತೆಗಳಲ್ಲಿ ಟೋಲ್ ಕಟ್ಟಬೇಕು :
ಮೇ ತಿಂಗಳಿನಲ್ಲಿ ಯಡಿಯೂರು-ಕೌಡಲೆ-ಮಂಡ್ಯ, ಹಾನಗಲ್-ತಡಾಡಸ್ ರಸ್ತೆ, ಪಡುಬಿದ್ರಿ-ಕಾರ್ಕಳ, ಗುಬ್ಬಿ- ಯಡಿಯೂರು, ಶಿವಮೊಗ್ಗ-ಶಿಕಾರಿಪುರ-ಹಾನಗಲ್, ತಿಂಥಣಿ-ದೇವದುರ್ಗ-ಕಲ್ಮಲ ರಸ್ತೆ, ಸವದತ್ತಿ-ಬಾದಾಮಿ-ಕಮತಗಿ, ಬಳ್ಳಾರಿ-ಮೊಕಾ, ದಾವಣಗೆರೆ-ಬಿರೂರು ಮತ್ತು ಕೂಡ್ಲಿಗಿ-ಸಂಡೂರು-ತೋರಣಗಲ್ಲು, ಹೊಸಕೋಟೆ-ಚಿಂತಾಮಣಿ ಬೈಪಾಸ್ ರಸ್ತೆ ಮಾರ್ಗದಲ್ಲಿ ಟೋಲ್ ಸಂಗ್ರಹ ಆರಂಭವಾಗಲಿದೆ.
ಇದನ್ನೂ ಓದಿ :
ಆ ಪೈಕಿ ಸವದತ್ತಿ- ರಾಮದುರ್ಗ- ಬಾದಾಮಿ- ಕಮತಗಿ ರಸ್ತೆಯ ಎಸ್ ಎಚ್-34 ಹಾಗೂ ಎಸ್ ಎಚ್-14 ಇರುವ 127.26 ಕಿ.ಮೀ ಉದ್ದದ ರಸ್ತೆಯಾಗಿದೆ. ಬಳ್ಳಾರಿ- ಮೋಕಾದ ಎಸ್ ಎಚ್- 132 ಮಾರ್ಗವು ಒಟ್ಟು 25.27 ಕಿ.ಮೀ ಉದ್ದವಿದ್ದು, 10 ರಸ್ತೆಗಳಲ್ಲೇ ಅತಿ ಕಡಿಮೆ ಉದ್ದದ ರಸ್ತೆಯಾಗಿದೆ. 52.46 ಕಿ.ಮೀ ಉದ್ದದ ಹೊಸಕೋಟೆ- ಚಿಂತಾಮಣಿ ರಸ್ತೆಯಲ್ಲಿ ಟೋಲ್ ಸಂಗ್ರಹಿಸಲು 15 ಬಿಡ್ ಗಳು ಸಲ್ಲಿಕೆಯಾಗಿವೆ. ಇದು 10 ರಸ್ತೆಗಳಿಗಾಗಿ ಮಾಡಿರುವ ಬಿಡ್ ಗಳಲ್ಲೆ ಅತಿಹೆಚ್ಚು. ಈ ರಸ್ತೆಯೊಂದರಿಂದಲೇ ವಾರ್ಷಿಕ 10.72 ಕೋಟಿ ರೂ. ಸಂಗ್ರಹವಾಗುವ ಅಂದಾಜನ್ನು ಲೋಕೋಪಯೋಗಿ ಇಲಾಖೆ ಮಾಡಿದೆ.
2,400 ಕೋಟಿ ರೂ. ವೆಚ್ಚದ ಯೋಜನೆ :
ವಿಶ್ವಬ್ಯಾಂಕ್ (World Bank) ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ (Asian Development Bank) ಈ ಹತ್ತು ರಸ್ತೆಗಳ ಅಭಿವೃದ್ಧಿ ಯೋಜನೆಗೆ ಸಾಲ ನೀಡಿದ್ದು, ಒಟ್ಟು 2,400 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆಗಳನ್ನು ನಿರ್ಮಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ (ಕೆ-ಶಿಪ್), ಹಾಗೂ ಕೆಆರ್ ಡಿಸಿಎಲ್ ಈ ರಾಜ್ಯ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿದ್ದು, ಈ ಪೈಕಿ ನಾಲ್ಕನ್ನು ಸರ್ಕಾರಿ- ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ನಿರ್ಮಿಸಲಾಗಿದೆ.
“ಟೆಂಡರ್ ಪರಿಶೀಲನೆ ಸಮಿತಿ ಈಗಾಗಲೇ 10 ರಸ್ತೆಗಳ ಬಿಡ್‍ಗಳನ್ನು ಸ್ವೀಕರಿಸಿದೆ. ಯಾವಾಗ ಟೋಲ್ ಸಂಗ್ರಹ ಮಾಡಬೇಕು ಎಂಬ ಬಗ್ಗೆ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ರಸ್ತೆಯ ನಿರ್ವಹಣಾ ವೆಚ್ಚದ ಜತೆಗೆ ವಿವಿಧ ಏಜೆನ್ಸಿಗಳಿಂದ ಪಡೆದ ಸಾಲದ ಮೊತ್ತವನ್ನೂ ಗಮನದಲ್ಲಿಟ್ಟುಕೊಂಡು ಟೋಲ್ ನಿಗದಿಪಡಿಸಲಾಗುತ್ತಿದೆ ಎಂದು ಕೆಆರ್ ಡಿಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕರ್ನಾಟಕ ಲೋಕೋಪಯೋಗಿ ಇಲಾಖೆಯು 31 ರಾಜ್ಯ ಹೆದ್ದಾರಿಗಳ ರಸ್ತೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ. ಇದರಲ್ಲಿ ಕೆಲವೆಡೆ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಂಡಿರುವ ಮಾರ್ಗಗಳಲ್ಲಿ ಟೋಲ್ ಸಂಗ್ರಹಿಸಲು ಶೀಘ್ರದಲ್ಲಿ ಹಸಿರು ನಿಶಾನೆ ನೀಡುವ ಎಲ್ಲಾ ಸಾಧ್ಯತೆಯಿದೆ.
ಈಗಾಗಲೇ 17 ಮಾರ್ಗಗಳ ರಾಜ್ಯ ಹೆದ್ದಾರಿಯಲ್ಲಿ ಈಗಾಗಲೇ ಟೋಲ್ ಸಂಗ್ರಹಿಸುತ್ತಿದ್ದು ಇದೀಗ ಇನ್ನೂ 10 ರಸ್ತೆಗಳು ಸೇರ್ಪಡೆಯಾಗಿ ಒಟ್ಟಾರೆ 27 ರಾಜ್ಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಿಸಿದಂತಾಗುತ್ತದೆ. 10 ಮಾರ್ಗಗಳಲ್ಲಿ ಟೋಲ್ ಸಂಗ್ರಹಿಸುವ ಸಂಬಂಧ ಟೆಂಡರ್ ಭದ್ರತಾ ಸಮಿತಿಯು ಅಂತಿಮ ಸಿದ್ಧತೆ ನಡೆಸಿದ್ದು ಸರ್ಕಾರದಿಂದ ಸಮ್ಮತಿ ಸಿಕ್ಕ ಕೂಡಲೇ ಟೋಲ್ ಸಂಗ್ರಹಕ್ಕೆ ಹಸಿರು ನಿಶಾನೆ ತೋರಲಿದೆ.