ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಐಪಿಎಸ್ ಯೇತರ 109 ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (SP) ಮಂಜೂರಾತಿ ಹುದ್ದೆಗಳಿದ್ದರೂ ಅವುಗಳಿಗೆ ಅರ್ಹರಾದ ಡಿವೈಎಸ್‌ಪಿ ಅಥವಾ ಎಸಿಪಿ ದರ್ಜೆಯ ಹಾಗೂ ನೇರವಾಗಿ ಡಿವೈಎಸ್‌ಪಿ ಹುದ್ದೆಗೆ ನೇಮಕಾತಿ ಹೊಂದಿದ ಅಧಿಕಾರಿಗಳಿಗೆ ಮೀಸಲಿಡದ ಕಾರಣ ನೂರಾರು ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿದೆ.
ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ವಪೆಕ್ಟರ್ (PSI) ಹುದ್ದೆಗೆ ನೇರವಾಗಿ ನೇಮಕವಾಗುವ ಅಧಿಕಾರಿಗಳು, ಇಲಾಖೆಯಲ್ಲಿ ಸುಮಾರು 30 ರಿಂದ 35 ವರ್ಷ ಸೇವೆ ಸಲ್ಲಿಸಿದ್ದರೂ ಸಹ, ಹೆಚ್ಚಿನ ಅಧಿಕಾರಿಗಳು ಎಸಿಪಿ ಅಥವಾ ಡಿವೈಎಸ್‌ಪಿ ಹುದ್ದೆಯಿಂದಲೇ ನಿವೃತ್ತಿ ಆಗುತ್ತಿದ್ದಾರೆಯೇ ವಿನಃ ಅವರಿಗೆ ಎಸ್ ಪಿ ಹುದ್ದೆ ಎಂಬುದು ಕೇವಲ ಗಗನ ಕುಸುಮವಾಗಿದೆ. ಅಂದರೆ ಅವರು ತಮ್ಮ ಸೇವಾವಧಿಯಲ್ಲಿ ಕೇವಲ ಎರಡು ಬಡ್ತಿಗಳನ್ನು ಮಾತ್ರ ಪಡೆದುಕೊಳ್ಳುವಂತಾಗಿದೆ. ಇನ್ನು ಕೆಲವರು ಪೊಲೀಸ್ ಇನ್ಸ್ ಪೆಕ್ಟರ್ (PI) ಹುದ್ದೆಯಿಂದ ನಿವೃತ್ತಿ ಹೊಂದುತ್ತಾರೆ. ಇವರು ತಮ್ಮ ಸೇವಾವಧಿಯಲ್ಲಿ ಕೇವಲ ಒಂದೇ ಬಡ್ತಿಯನ್ನು ಪಡೆಯುವಂತಾಗಿದೆ.
ಹೆಚ್ಚಿನ ಅಧಿಕಾರಿಗಳು ಎಸ್ ಪಿ (Non-IPS) ಹುದ್ದೆಗೆ ಬಡ್ತಿಯನ್ನು ಪಡೆದರೂ ಅವರ ಸೇವಾವಧಿಯ ಒಂದು ದಿನದಿಂದ ಒಂದು ವರ್ಷದವರೆಗೆ ಮಾತ್ರಇರುತ್ತದೆ. ಇಂತಹ ಹಲವಾರು ನಿದರ್ಶನಗಳು ಇವೆ. ಇದರಿಂದ ಪಿಎಸ್‌ಐ ಹುದ್ದೆಗೆ ನೇಮಕ ಹೊಂದುವ ಅಧಿಕಾರಿಗಳಿಗೆ ಅನ್ಯಾಯವಾಗುತ್ತಿದೆ. ರಾಜ್ಯದಲ್ಲಿ ಒಟ್ಟು 109 ಎಸ್ ಪಿ (ಐಪಿಎಸ್- ಯೇತರ) ಹುದ್ದೆಗಳ ಮಂಜೂರಾತಿ ಇದ್ದರೂ ಐಪಿಎಸ್ ಅಧಿಕಾರಿಗಳೇ ಅದರಲ್ಲಿ ತುಂಬಿ ಹೋಗಿದ್ದಾರೆ. ಇದರಿಂದ 1994 ನೇ ಸಾಲಿನಲ್ಲಿ ಪಿಎಸ್‌ಐ ಹುದ್ದೆಗೆ ನೇಮಕಾತಿ ಹೊಂದಿ, ತದನಂತರ ಎಸಿಪಿ ಅಥವಾ ಡಿವೈಎಸ್‌ಪಿ ಹುದ್ದೆಗೆ ಪದನ್ನೋತಿ ಹೊಂದಿ ಐದೂವರೆ ವರ್ಷಗಳನ್ನು ಪೂರೈಸಿದ್ದರೂ ಸಹ ಅಂತಹವರು ಬಡ್ತಿಯಿಂದ ವಂಚಿತರಾಗುವಂತಾಗಿದೆ.
109 SP(ಐಪಿಎಸ್ ಯೇತರ ) ಹುದ್ದೆಯನ್ನು, ನೇರವಾಗಿ ಪಿಎಸ್‌ಐ ಹುದ್ದೆಗೆ ನೇಮಕಾತಿ ಹೊಂದಿ ಬಡ್ತಿ ಪಡೆದು ಐಪಿಎಸ್ ಯೇತರ ಎಸ್ ಪಿ ಹುದ್ದೆಗೆ ಅರ್ಹರಾಗಿರುವ ಡಿವೈಎಸ್‌ಪಿ ಅಥವಾ ಎಸಿಪಿ ರವರಿಗೆ ಹಾಗೂ ನೇರವಾಗಿ ಡಿವೈಎಸ್‌ಪಿ ಹುದ್ದೆಗೆ ನೇಮಕಾತಿ ಹೊಂದಿದ ಅಧಿಕಾರಿಗಳಿಗೆ ಮೀಸಲಿರಿಸಬೇಕು. ಹಾಗೂ ಈ ಅರ್ಹ ಅಧಿಕಾರಿಗಳಿಗೆ SP(ಐಪಿಎಸ್ ಯೇತರ ) ಹುದ್ದೆಗೆ ಬಡ್ತಿ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು, ಈ ಹಿಂದೆ ಸಂಬಂಧಿಸಿದ ಅಧಿಕಾರಿಗಳು ಬಿಜೆಪಿ ನೇತೃತ್ವದ ಸರ್ಕಾರದಲ್ಲಿನ ಗೃಹಸಚಿವ ಆರಗ ಜ್ಞಾನೇಂದ್ರ ಅವರಿಗೆ ಎರಡು ಬಾರಿ ಮನವಿ ಸಲ್ಲಿಸಿದ್ದರು. ಆದರೂ ಅದಿಕ್ಕೆ ರಾಜ್ಯ ಸರ್ಕಾರ ಕ್ಯಾರೇ ಎಂದಿಲ್ಲ ಎಂದು ಆ ಅಧಿಕಾರಿಗಳು ಬೆಂಗಳೂರು ವೈರ್ ಜೊತೆಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಏನಂತಾರೆ?
“ರಾಜ್ಯದಲ್ಲಿ ಐಪಿಎಸ್ ಯೇತರ ಎಸ್ಪಿ ಹುದ್ದೆಗಳಿಗೆ ಬಡ್ತಿ ಹೊಂದಿದ ಅಧಿಕಾರಿಗಳನ್ನು ನೇಮಕ ಮಾಡುವ ಕುರಿತು ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು. ಎಸ್ಪಿ ಹುದ್ದೆಗಳಿಗೆ ನೇಮಕ ಮಾಡುವಾಗ ಬಡ್ತಿ ಹೊಂದಿದ ಅಧಿಕಾರಿಗಳನ್ನು ಪರಿಗಣಿಸಿ ಅವರಿಗೆ ನ್ಯಾಯ ಒದಗಿಸಬೇಕು. ಈ ವಿಚಾರದಲ್ಲಿ ನಾನು ಸಹ ಸರ್ಕಾರದ ಗಮನ ಸೆಳೆಯುತ್ತೇನೆ.”
– ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳು
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ದರ್ಜೆಯ 7 ಹುದ್ದೆಗಳು, ಮೈಸೂರು, ಧಾರವಾಡ, ಮಂಗಳೂರು ಹಾಗೂ ಕಲ್ಬುರ್ಗಿ(ಕಾನೂನು ಮತ್ತು ಸುವ್ಯವಸ್ಥೆ ಸೇರಿ), ಬೆಳಗಾವಿ (ಕಾನೂನು ಮತ್ತು ಸುವ್ಯವಸ್ಥೆ ಸೇರಿ) ಅಪರಾಧ ಮತ್ತು ಸಂಚಾರ ವಿಭಾಗದಲ್ಲಿ 7 ಹುದ್ದೆಗಳು, ಪೊಲೀಸ್ ಪ್ರಧಾನ ಕಚೇರಿಯಲ್ಲಿರುವ ಎಸ್ ಪಿ ದರ್ಜೆಯ 2 ಹುದ್ದೆಗಳು, ಬೆಂಗಳೂರಿನಲ್ಲಿ ಎಸ್ ಪಿ ದರ್ಜೆಯ ಎಸ್ ಸಿಆರ್ ಬಿ 1 ಹುದ್ದೆ ಸೇರಿದಂತೆ 109 ಐಪಿಎಸ್ ಯೇತರ ಹುದ್ದೆಗಳು ಮಂಜೂರಾಗಿದೆ.
ಸರ್ಕಾರದಿಂದ ಮಂಜೂರು ಮಾಡಲಾದ 109 ಎಸ್ ಪಿ (ಐಪಿಎಸ್ ಯೇತರ) ಹುದ್ದೆಗಳಲ್ಲಿ, ಪ್ರಸ್ತುತ 30 ಐಪಿಎಸ್ ಅಧಿಕಾರಿಗಳು, ಸಶಸ್ತ್ರ ಅಧಿಕಾರಿಗಳು ಮತ್ತು ಎಸ್.ಪಿ.ಡಿಟೆಕ್ಟಿವ್ ದರ್ಜೆಯ ಅಧಿಕಾರಿಗಳು (ಸದರಿ ಎಸ್.ಪಿ. ಡಿಟೆಕ್ಟಿವ್ ಅಧಿಕಾರಿಗಳು ನೇಮಕಾತಿ ಹೊಂದುವಾಗಲೇ ಪಿಎಸ್‌ಐ ಡಿಟೆಕ್ಟಿವ್ ಹುದ್ದೆಗೆ 2001ರಲ್ಲಿ ನೇಮಕಾತಿ ಹೊಂದಿರುತ್ತಾರೆ) ಕಾರ್ಯನಿರ್ವಹಿಸುತ್ತಿದ್ದಾರೆ.
ಸದ್ಯ 1994ರ ಬ್ಯಾಚಿನಲ್ಲಿ ನೇಮಕಗೊಂಡ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ಐಪಿಎಸ್ ಯೇತರ ಎಸ್ ಪಿ ಹುದ್ದೆ ಸಿಗುವಲ್ಲಿ ಅನ್ಯಾಯವಾಗುತ್ತಿದೆ. ಮುಂದೇ ಇದು ಎಲ್ಲರಿಗೂ ವಿಸ್ತರಣೆಯಾಗಲಿದೆ. ಹಾಗಾಗಿ 109 ಎಸ್ ಪಿ (ಐಪಿಎಸ್ ಯೇತರ) ಹುದ್ದೆಗಳಿಗೆ ಮೀಸಲಾತಿ ಕಲ್ಪಿಸಿದರೆ ಆ ಅನ್ಯಾಯವನ್ನು ತಪ್ಪಿಸಬಹುದು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.