ಬೆಂಗಳೂರು, (www.bengaluruwire.com) : ರಾಜಧಾನಿಯಲ್ಲಿ ಇಂದು ಬಣ್ಣ ಬಣ್ಣದ ಭಾವನೆಗಳ ಮನಸೂರೆಗೊಳ್ಳುವ ಚಿತ್ರಸಂತೆ ಎರಡು ವರ್ಷಗಳ ನಂತರ ನಡೆಯುತ್ತಿದ್ದು, ನಗರವೂ ಸೇರಿದಂತೆ ಬೇರೆ ಬೇರೆ ಭಾಗಗಳಿಂದ ಜನರು ಮಕ್ಕಳು, ಸ್ನೇಹಿತರು, ಬಂಧುಬಾಂಧವರೊಂದಿಗೆ ಆಗಮಿಸಿ ನೂರಾರು ಚಿತ್ರಕಲಾವಿದರ ಚಿತ್ರಕೃತಿಗಳನ್ನು ವೀಕ್ಷಿಸಿ, ಖರೀದಿಸಿದರು.
ಭಾನುವಾರದ ಈ ಚಿತ್ರಸಂತೆ 19ನೇ ಆವೃತ್ತಿಯದ್ದಾಗಿದ್ದು, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಸ್ವಾತಂತ್ರ್ಯ ಯೋಧರಿಗೆ ಚಿತ್ರಸಂತೆ ಸಮರ್ಪಣೆ ಮಾಡಲಾಗಿದೆ. ಕಳೆದ ವರ್ಷ ಕರೋನಾ ಎರಡನೇ ಅಲೆಯ ಕಾರಣದಿಂದ ಆನ್ ಲೈನ್ ನಲ್ಲಷ್ಟೇ ನಡೆಸಲಾಗಿತ್ತು. ಆದರೆ ಈ ಬಾರಿ ಚಿತ್ರಸಂತೆಯನ್ನು ಸಾರ್ವಜನಿಕರು ಮತ್ತು ಕಲಾವಿದರ ಕಲಾಕೃತಿಗಳ ಪ್ರದರ್ಶನ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬೆಳಗ್ಗೆಯಿಂದ ಪ್ರವಾಹೋಪಾದಿಯಲ್ಲಿ ಚಿತ್ರರಸಿಕರು ಕುಮಾರಕೃಪಾ ರಸ್ತೆಗೆ ಆಗಮಿಸಿ ತಮ್ಮ ನೆಚ್ಚಿನ ಕಲಾಕೃತಿಗಳನ್ನು ಖರೀದಿಸಿದರು. ದೇಶದ ವಿವಿಧ ಭಾಗಗಳಿಂದ 1500 ಕಲಾವಿದರು ಭಾಗಿಯಾಗಿದ್ದಾರೆ. ಒಟ್ಟು 4 ಕಲಾವಿದರಿಗೆ ಈ ಕಾರ್ಯಕ್ರಮದಲ್ಲಿ ಚಿತ್ರ ಸಮ್ಮಾನ್ ಪ್ರಶಸ್ತಿ ನೀಡಲಾಯಿತು. 4 ಲಕ್ಷ ಜನರು ಚಿತ್ರ ಸಂತೆಗೆ ಬರುವ ನಿರೀಕ್ಷೆ ಇದೆ.
ಕುಮಾರಕೃಪಾ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸಂಚಾರ ಬಂದ್ :
19ನೇ ಚಿತ್ರಸಂತೆ ಹಿನ್ನೆಲೆ ಕುಮಾರ ಕೃಪಾ ರಸ್ತೆಯಲ್ಲಿ ಸಂಚಾರ ನಿಷೇಧ ಮಾಡಲಾಗಿತ್ತು. ಬೆಳಗ್ಗೆ 6 ರಿಂದ ರಾತ್ರಿ 9ಗಂಟೆವರೆಗೂ ಕುಮಾರಕೃಪ ರಸ್ತೆ ಬಂದ್ ಮಾಡಲಾಗಿದೆ. ಕುಮಾರಕೃಪ ರಸ್ತೆಯ ವಿನ್ಸರ್ ಮ್ಯಾನರ್ ವೃತ್ತದಿಂದ ರೇಸ್ ವ್ಯೂವ್ ಜಂಕ್ಷನ್ ರಸ್ತೆವರೆಗೂ ಎರಡೂ ಬದಿ ರಸ್ತೆಗಳು ಬಂದ್ ಆಗಿದ್ದವು. ಪರ್ಯಾಯ ಮಾರ್ಗವಾಗಿ ಟ್ರಿಲೈಟ್ ಜಂಕ್ಷನ್, ಬಸವೇಶ್ವರ ವೃತ್ತ, ಹಳೇ ಹೈಗ್ರೌಂಡ್ಸ್ ಮ್ಯಾನರ್ ಸರ್ಕಲ್ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ವಿವಿಧ ಕಲಾ ಪ್ರಕಾರಗಳ ಸಂಗಮದಂತಿದ್ದ ಚಿತ್ರಸಂತೆ :
ಇನ್ನು ಈ ಚಿತ್ರಸಂತೆಯಲ್ಲಿ ನಟ ಪುನೀತ್ ರಾಜ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೇರಿದಂತೆ ವಿವಿಧ ಗಣ್ಯರ ಚಿತ್ರವನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು. ಈ ಬಾರಿಯ ಚಿತ್ರಸಂತೆಯಲ್ಲಿ ಕೊಲಾಜ್, ಲಿಥೋಗ್ರಾಫ್, ಡೂಡಲ್, ಎಂಬೋಸಿಂಗ್, ವಿಡಿಯೊ ಕಲೆ, ಗ್ರಾಫಿಕ್ ಕಲೆ, ಶಿಲ್ಪಕಲೆ, ಪರ್ಫಾಮೆನ್ಸ್ ಕಲೆ, ಮಿಶ್ರ ಮಾಧ್ಯಮ, ಫೋಟೋಗ್ರಫಿ ಹೀಗೆ ಹಲವು ಬಗೆಯ ಕಲಾ ಪ್ರಕಾರದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇನ್ನು ಸಾಂಪ್ರದಾಯಿಕ ತಂಜಾವೂರು ಶೈಲಿ, ಮೈಸೂರು ಶೈಲಿಯ ಕಲೆ, ರಾಜಸ್ಥಾನಿ ಶೈಲಿ, ಮಧುಬನಿ ಶೈಲಿ, ತೈಲ ಮತ್ತು ಜಲವರ್ಣಗಳಲ್ಲಿ ರಚಿಸಿರುವ ಚಿತ್ರಗಳು, ಆಕ್ರಿಲಿಕ್, ಗಾಜಿನ ಮೇಲೆ ಬಿಡಿಸಿರುವ ಚಿತ್ರಗಳು ಸೇರಿದಂತೆ ನಾನಾ ರೀತಿಯ ಕಲಾಕೃತಿಗಳನ್ನು ಒಂದೇ ಸ್ಥಳದಲ್ಲಿ ನೋಡಿ ಕಲಾಭಿಮಾನಿಗಳು ಸಂತಸಪಟ್ಟರು.
ರಾಜ್ಯದ ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳ ಪ್ರಾರಂಭ :
ಇದಕ್ಕೂ ಮುನ್ನ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರಸಂತೆ – 2022 ಕಾರ್ಯಕ್ರಮಕ್ಕೆ, ಭಾರತಾಂಬೆ ಕಲಾಕೃತಿ ಪಕ್ಕ ಹಸ್ತಾಕ್ಷರ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಇಡೀ ಕರ್ನಾಟಕದ ಚಿತ್ರಕಲೆಗೆ ತವರೂರು ಚಿತ್ರಕಲಾ ಪರಿಷತ್ತು. ಇದು ಎಲ್ಲೆಡೆ ವ್ಯಾಪಿಸಬೇಕೆಂಬ ಉದ್ದೇಶವಿದೆ. ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸ್ವಾಯತ್ತ ಸಂಸ್ಥೆಯಾಗಿರುವ ಚಿತ್ರ ಕಲಾ ಪರಿಷತ್ತನ್ನು ಡೀಮ್ಡ್ ವಿಶ್ವವಿದ್ಯಾಲಯ ಮಾಡಬೇಕೆಂಬ ಬೇಡಿಕೆ ಇದ್ದು, ಬರುವ ಅಧಿವೇಶನದಲ್ಲಿ ಡೀಮ್ಡ್ ವಿಶ್ವವಿದ್ಯಾಲಯವೆಂದು ಘೋಷಿಸಲು ಕ್ರಮ ವಹಿಸಲಾಗುವುದು. ಇದರಡಿಯಲ್ಲಿ ಹಲವಾರು ಸಂಸ್ಥೆಗಳನ್ನು ತಂದು ಚಿತ್ರಕಲೆಗೆ ಹೊಸ ಆಯಾಮ ನೀಡುವ ಕೆಲಸವನ್ನು ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಮಾಡಲಾಗುವುದು ಎಂದರು.
ಬಾಲ್ಯದ ನೆನಪಿಗೆ ಜಾರಿ ಮ್ಯಾಂಗೋ ಐಸ್ ಕ್ಯಾಂಡಿ ಸವಿದ ಸಿಎಂ :
ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ ಆಯೋಜಿಸಲಾಗಿದ್ದ ಚಿತ್ರಸಂತೆ ಯಲ್ಲಿ ದೇಶ-ವಿದೇಶದ ಕಲಾವಿದರು ಪ್ರದರ್ಶಿಸಿದ ಕಲಾಕೃತಿಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿರುವುದನ್ನು ಗಮನಿಸಿದ ಅವರು, ತಮಗೆ ಬಾಲ್ಯದಿಂದಲೂ ಇಷ್ಟವಾದ ಜಾಯ್ ಮ್ಯಾಂಗೋ ಕ್ರೀಮ್ ಐಸ್ ಕ್ಯಾಂಡಿಯನ್ನು ತಾವೇ ಹಣ ಪಾವತಿಸುವ ಮೂಲಕ ಖರೀದಿಸಿ ಸಂತೋಷದಿಂದ ಸವಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಅಶ್ವತ್ಥನಾರಾಯಣ, ಎಸ್.ಟಿ ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್, ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.