ನವದೆಹಲಿ, (www.bengaluruwire.com) : ಆಧಾರ್ ಕಾರ್ಡ್ (Aadhaar) ದೇಶದಲ್ಲಿ ಹಲವು ಕೆಲಸ ಕಾರ್ಯಗಳಿಗೆ ಬಳಸಲು ಅನುಕೂಲವಾಗುವಂತಹ ವ್ಯಕ್ತಿಯೊಬ್ಬರ ವ್ಯಕ್ತಿಗತ ಮಾಹಿತಿ ಒಳಗೊಂಡ ಸಮಗ್ರ ದಾಖಲೆಯಾಗಿದೆ.
ಇಂತಹ ಇ-ಆಧಾರ್ (e-Adhar) ದಾಖಲೆಯನ್ನು ಸಾರ್ವಜನಿಕ ಇಂಟರ್ ನೆಟ್ ಕೆಫೆ, ಕಿಯೋಸ್ಕ್ ಅಥವಾ ಬ್ರೌಸಿಂಗ್ ಸೆಂಟರ್ ನಲ್ಲಿ ಇ- ಆಧಾರ್ ಡೌನ್ ಲೋಡ್ ಮಾಡಿಕೊಳ್ಳುವುದನ್ನು ಆದಷ್ಟು ತಪ್ಪಿಸಿ. ಒಂದೊಮ್ಮೆ ಇಂತಹ ಕೇಂದ್ರಗಳಲ್ಲಿನ ಕಂಪ್ಯೂಟರ್ ನಿಂದ ಇ-ಆಧಾರ್ ಡೌನ್ ಲೋಡ್ ಮಾಡಿಕೊಂಡಲ್ಲಿ ಕೂಡಲೇ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿದ ಇ-ಆಧಾರ್ ಪ್ರತಿಗಳನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿ.
ಈ ಕುರಿತಂತೆ ಆಧಾರ್ ಪ್ರಾಧಿಕಾರವು ಟ್ವೀಟ್ ಮೂಲಕ ಸಾರ್ವಜನಿಕರನ್ನು ಎಚ್ಚರಿಕೆಯಿಂದ ಇರುವಂತೆ ತಿಳಿಸಿದೆ. ಆಧಾರ್ ಕಾರ್ಡ್ ಈಗ ನಮ್ಮ ಜೀವನದ ಪ್ರತಿ ಹಂತದಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಅವಿಭಾಜ್ಯ ಅಂಗವಾಗಿ ಹೋಗಿದೆ. ಬ್ಯಾಂಕ್ ಖಾತೆ ಪ್ರಾರಂಭಿಸುವುದರಿಂದ ಹಿಡಿದು, ಕಾರು ಖರೀದಿಸುವ ತನಕ, ಮರಣ ಪ್ರಮಾಣಪತ್ರ ಪಡೆಯುವಲ್ಲೂ ಆಧಾರ್ ದಾಖಲೆ ಬಳಕೆಯಾಗುತ್ತದೆ.
ಒಂದೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಕೆಫೆ/ಕಿಯೋಸ್ಕ್ ಗಳಿಂದ ಇ-ಆಧಾರ್ ಡೌನ್ ಲೋಡ್ ಕೊಂಡು ಆನಂತರ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಕಾಪಿಗಳನ್ನು ಅಳಿಸದಿದ್ದರೆ, ವಂಚಕರಿಗೆ ಆ ಮಾಹಿತಿ ಸಿಕ್ಕರೆ ಆಧಾರ್ ಕಾರ್ಡ್ ಹೊಂದಿದ ವ್ಯಕ್ತಿ ಮುಂದೆ ಮೋಸದ ಜಾಲದಲ್ಲಿ ಸಿಲುಕಬಹುದು.
ಒಟಪಿಗಾಗಿ ಮೊಬೈಲ್ ಅಥವಾ ಇಮೇಲ್ ಮೂಲಕ ನೋಂದಣಿ :
ಇತ್ತೀಚಿನ ದಿನಗಳಲ್ಲಿ ಆಧಾರ್ ಗೆ ನೋಂದಣಿ ಮಾಡಿದ ಮೊಬೈಲ್ ಅಥವಾ ಇಮೇಲ್ ಗೆ ಒಟಿಪಿ ಕಳುಹಿಸುವ ಮೂಲಕ ದೃಢೀಕರಣ ಪಡೆಯುವ ಪ್ರಕ್ರಿಯೆಯನ್ನು ಸುಲಭವಾಗಿಸಿದೆ. ಇಂತಹ ಒಟಿಪಿಯನ್ನು ಯಾವುದೇ ಸಂದರ್ಭದಲ್ಲಿ ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ. ಒಂದೊಮ್ಮೆ ನಿಮ್ಮ ಮೊಬೈಲ್ ನಂಬರ್ ಬದಲಾವಣೆಯಾದರೆ ಆಧಾರ್ ಕಾರ್ಡ್ ನಲ್ಲಿ ಅದರ ಮಾಹಿತಿಯನ್ನು ಅಪಡೇಟ್ ಮಾಡಿ. ಇಲ್ಲವಾದಲ್ಲಿ ಬೇರೆಯವರು ನಿಮ್ಮ ಕಾರ್ಡ್ ಬಳಸಿ ದೃಢೀಕರಣಪಡೆದು ಕೊಳ್ಳುವ ಸಾಧ್ಯತೆಯಿರುತ್ತದೆ.
ಆಧಾರ್ ಬಯೋಮೆಟ್ರಿಕ್ ಗೆ ಲಾಕ್ ಹಾಕಿಡುವುದು :
ವ್ಯಕ್ತಿ ಗುರುತಿನ ಕಣ್ಣಿನ ಪಾಪೆ, ಕೈ ಬೆರಳಚ್ಚು ಹಾಗೂ ಭಾವಚಿತ್ರಗಳು ಸಾಮಾನ್ಯವಾಗಿ ಆಧಾರ್ ಗೆ ಲಿಂಕ್ ಆಗಿರುತ್ತದೆ. ಹಿಂದೆಲ್ಲಾ ಕೈ ಬೆರಳಚ್ಚು ನಕಲು ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಮೋಸಗಾರರು ಕನ್ನ ಹಾಕುತ್ತಿದ್ದರು. ಆದರೆ ಆಧಾರ್ ವಿಚಾರದಲ್ಲಿ ಲಿಂಕ್ ಆಗಿರುವ ಈ ಮಾಹಿತಿಗಳನ್ನು ಕದಿಯುವುದು ಅಷ್ಟು ಸುಲಭವಲ್ಲ. ಆದರೂ ನಾಗರೀಕರು ತಮ್ಮ ಯುಐಡಿಎಐ ಬಯೋಮೆಟ್ರಿಕ್ ಮಾಹಿತಿಯನ್ನು ಅವಶ್ಯಕತೆಯಿದ್ದಾಗ ಬಳಸಿಕೊಂಡು, ಅನಗತ್ಯ ಸಂದರ್ಭದಲ್ಲಿ ಲಾಕ್ ಮಾಡಿಟ್ಟುಕೊಳ್ಳಲು ಸಲಹೆ ನೀಡಿದೆ.
ಆಧಾರ್ ಗೆ ಬದಲಿಯಾಗಿ ದೃಢೀಕರಣಕ್ಕೆ ವರ್ಚುವಲ್ ಐಡಿ ಬಳಸಿ :
ಇ- ಕೆವೈಸಿ ಅಥವಾ ಇನ್ನಿತರ ದೃಢೀಕರಣ ಕಾರ್ಯಗಳಿಗೆ ಆಧಾರ್ ಬಳಸುವ ಬದಲು ಅದರೊಂದಿಗೆ ಮ್ಯಾಪ್ ಮಾಡಲಾದ ತಾತ್ಕಾಲಿಕವಾಗಿ ಹಿಂಪಡೆಯಬಹುದಾದ 16 ಸಂಖ್ಯೆಯ ವರ್ಚುವಲ್ ಐಡಿಯನ್ನು ಬಳಸಿದರೆ ಉತ್ತಮ. ಈ ವರ್ಚುವಲ್ ಐಡಿ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದು.
ನಿರಂತರವಾಗಿ ನಿಮ್ಮ ಆಧಾರ್ ಅನ್ನು ಪರಿಶೀಲಿಸುತ್ತಿರಿ :
UIDAI ವೆಬ್ ಪೋರ್ಟಲ್ ಗೆ ಆಗಾಗ ಭೇಟಿಕೊಟ್ಟು ನಿಮ್ಮ ಆಧಾರ್ ದೃಢೀಕರಣದ ಇತಿಹಾಸದ ಬಗ್ಗೆ ಪರಿಶೀಲನೆ ನಡೆಸುತ್ತಿರಿ. ಇತರರ ಆಧಾರ್ ಸಂಖ್ಯೆಯ ಧೃಢೀಕರಣವನ್ನು ಈ ವೆಬ್ ಪೋರ್ಟಲ್ ಮೂಲಕ ಪರೀಕ್ಷಿಸಬಹುದಾಗಿದೆ. ವ್ಯವಹಾರಸ್ಥರಾದವರು ಕೆಲಸಗಾರರನ್ನು ನೇಮಕ ಮಾಡಿಕೊಳ್ಳುವಾಗ ಅವರು ಸಲ್ಲಿಸುವ ಆಧಾರ್ ಕಾರ್ಡ್ ಅಸಲಿಯತ್ತನ್ನು ಯುಐಡಿಎಐ ನಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಆನ್ ಲೈನ್ ಮೂಲಕ ಈ ರೀತಿ ಚೆಕ್ ಮಾಡಬಹುದು :
- ಮೊದಲ ಹಂತ : UIDAI ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು, ಆ ಪೋರ್ಟಲ್ ಬಲ ಮೇಲ್ಬಾಗದ ತುದಿಯಲ್ಲಿ ‘My Adhar’ ಡ್ರಾಪ್ ಡೌನ್ ಮೆನ್ ನಲ್ಲಿನ ಆಪ್ಶನ್ ಕ್ಲಿಕ್ ಮಾಡಬೇಕು.
- ಎರಡನೇ ಹಂತ : ಅದರಲ್ಲಿ ‘Verify an Aadhaar Number’ ಎಂಬ ಆಪ್ಶನ್ ಅನ್ನು ಕ್ಲಿಕ್ ಮಾಡಿ. ಆಗ ನಿಮಗೆ ‘Aadhaar Services’ ಎಂಬ ವಿಭಾಗವು ಕಾಣಿಸುತ್ತದೆ.
- ಮೂರನೇ ಹಂತ : ಇದನ್ನು ಕ್ಲಿಕ್ ಮಾಡಿದಾಗ ಹೊಸ ಪೇಜ್ ನಿಮಗೆ ಕಾಣಸಿಗುತ್ತದೆ. ಅದರಲ್ಲಿ ನಿಮ್ಮ 12 ಡಿಜಿಟ್ ಇರುವ ಆಧಾರ್ ಸಂಖ್ಯೆಯನ್ನು ಹಾಗೂ ವಿಂಡೋನಲ್ಲಿ ಕಾಣುವ ಕಾಪ್ಚಾ (Captcha) ನಮೂದಿಸಬೇಕು. ಆನಂತರ ಕೆಳಗೆ ಕಾಣುವ ‘Proceed to Verify’ ಬಟನ್ ಒತ್ತಿದರೆ ಸಾಕು, ನೀವು ನಮೂದಿಸಿದ ಆಧಾರ್ ನಂಬರ್ ಕಾರ್ಡ್ ಮಾನ್ಯವೇ ಅಥವಾ ಅಮಾನ್ಯವಾದುದಾ? ಎಂದು ತಿಳಿಯಬಹುದು.
ದೇಶದಲ್ಲಿ ಈತನಕ 132.84 ಕೋಟಿ ಆಧಾರ್ ಸಂಖ್ಯೆಯನ್ನು ಯುಐಡಿಎಐ ಪ್ರಾಧಿಕಾರ ಸೃಜನೆ ಮಾಡಿದೆ. ಅಲ್ಲದೆ 6922.61 ಸಾವಿರ ಕೋಟಿ ಆಧಾರ್ ದೃಢೀಕರಣ ಮಾಡಲಾಗಿದೆ. ವ್ಯಕ್ತಿಗತ ಬಯೋಮೆಟ್ರಿಕ್ ಮಾಹಿತಿ ಲಿಂಕ್ ಇರುವ ಆಧಾರ್ ಕಾರ್ಡ್ ಸಾಕಷ್ಟು ಸುರಕ್ಷಿತವಾಗಿದ್ದು, ಅವುಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ ಎಂದು ಪ್ರಾಧಿಕಾರ ತಿಳಿಸುತ್ತಿದೆ.