ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರು ನಗರದ ಐತಿಹಾಸಿಕ ಹಾಗೂ ವಿಶ್ವವಿಖ್ಯಾತ ಕರಗ ಮಹೋತ್ಸವದ (Bangalore Karaga Festival) ಪೂಜಾ ಸ್ಥಳವಿರುವ ಶ್ರೀ ಕಂಠೀರವ ಕ್ರೀಡಾಂಗಣದ ಆವರಣದ ಹಸಿ ಕರಗ ಮಂಟಪವನ್ನು ಅಭಿವೃದ್ಧಿಪಡಿಸಲು ಬೆಂಗಳೂರು ಅಭಿವೃದ್ಧಿದ ಪ್ರಾಧಿಕಾರ (BDA) ನಿರ್ಧರಿಸಿದೆ.
ಇದಕ್ಕಾಗಿ ಸುಮಾರು 4 ಕೋಟಿ ರೂಪಾಯಿ ಹಣ ಮಂಜೂರಾತಿಗೆ ಬಿಡಿಎ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರಿಗೆ ಶುಕ್ರವಾರ ವಹ್ನಿಕುಲ ಕ್ಷತ್ರಿಯ ಸಮಾಜದ ಮುಖಂಡರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಆರ್.ವಿಶ್ವನಾಥ್ ಅವರು, ಬೆಂಗಳೂರು ಕರಗ ಇಡೀ ವಿಶ್ವದಲ್ಲಿ ಹೆಸರುವಾಸಿಯಾಗಿರುವ ಉತ್ಸವವಾಗಿದೆ. ಯಲಹಂಕದಲ್ಲಿ ನಡೆಯುವ ಕರಗ ಉತ್ಸವಕ್ಕೆ ಸೂಕ್ತ ರೀತಿಯಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇದನ್ನು ನೋಡಿದ ಬೆಂಗಳೂರು ಕರಗ ಸಮಿತಿಯವರು ಶ್ರೀ ಕಂಠೀರವ ಕ್ರೀಡಾಂಗಣದ ಆವರಣದಲ್ಲಿಯೂ ಇಂತಹ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು ಎಂದರು.
ಇಲ್ಲಿರುವ ಕಲ್ಯಾಣಿ ಮತ್ತು ಹಸಿ ಕರಗ ಮಂಟಪ ಶಿಥಿಲಗೊಂಡು ವೀರಗಾರರು ಪೂಜಾ ವಿಧಿವಿಧಾನಗಳನ್ನು ನಡೆಸುವುದು ಕಷ್ಟಕರವಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಡಿಎ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಬಿಡಿಎ ವತಿಯಿಂದಲೇ ಮಂಟಪ ಮತ್ತು ಕಲ್ಯಾಣಿಯನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ವಿಶ್ವವಿಖ್ಯಾತ ಕರಗದ ಬಗ್ಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೆಚ್ಚಿನ ಆಸಕ್ತಿ ತೋರಿ 4 ಕೋಟಿ ರೂಪಾಯಿಗಳನ್ನು ಮಂಜೂರು ಮಾಡುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಸುಂದರವಾಗಿ ಮಂಟಪ ನಿರ್ಮಾಣ ಸೇರಿದಂತೆ ಇನ್ನಿತರೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಒಂದು ವೇಳೆ ಈ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಹಣ ಬೇಕಾದರೆ ಅದನ್ನೂ ಒದಗಿಸಿಕೊಡಲು ಬಿಡಿಎ ಬದ್ಧವಾಗಿದೆ ಎಂದು ವಿಶ್ವನಾಥ್ ತಿಳಿಸಿದರು.
ಏಪ್ರಿಲ್ ನಲ್ಲಿ ಶಿಲಾನ್ಯಾಸ – ಮುಂದಿನ ವರ್ಷ ಕರಗಕ್ಕೆ ಸಿದ್ದ:
ಹಸಿ ಕರಗ ಮಂಟಪ ಮತ್ತು ಸುತ್ತಮುತ್ತಲಿನ ಪರಿಸರವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ರೂಪಿಸಲಾಗುತ್ತದೆ. ಏಪ್ರಿಲ್ ತಿಂಗಳಲ್ಲಿ ಈ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ನಡೆಯುವ ಕರಗದ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.
ಏನೇನು ಅಭಿವೃದ್ಧಿಯಾಗಲಿದೆ?
ಹಸಿ ಕರಗ ಮಂಟಪ ಅಭಿವೃದ್ಧಿ, ಕಲ್ಯಾಣಿ ಜೀರ್ಣೋದ್ಧಾರ, ಬೃಂದಾವನ, ಧ್ಯಾನ ಮಂದಿರ, ಭಕ್ತರು ಕುಳಿತುಕೊಳ್ಳಲು ವ್ಯವಸ್ಥೆ, ದೀಪಾಲಂಕಾರ ವ್ಯವಸ್ಥೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ.
ಏ.8 ರಿಂದ ಕರಗ ಶಕ್ತ್ಯೋತ್ಸವ ಕಾರ್ಯಕ್ರಮ ಆರಂಭ :
ಬೆಂಗಳೂರಿನ ಸಾಂಸ್ಕೃತಿಕ ಪರಂಪರೆಯ ವೈಭವಕ್ಕೆ ಕಳಶಪ್ರಾಯವಾದ ಧರ್ಮರಾಯ ಸ್ವಾಮಿ ದೇವಸ್ಥಾನ ಕರಗ ಮಹೋತ್ಸವ ಏ.8 ರಿಂದ 16 ರ ತನಕ ನಡೆಯಲಿದೆ. ಕಳೆದ 2020 ಮತ್ತು 2021 ರಲ್ಲಿ ಕರೋನಾ ಸೋಂಕಿನ ಕಾರಣಕ್ಕೆ ದೇವಸ್ಥಾನದ ಮಟ್ಟಿಗೆ ಮಾತ್ರ ಕರಗದ ಮೆರವಣಿಗೆ ನಡೆದಿತ್ತು. ಈ ವರ್ಷವೂ ಕರಗದ ಪೂಜಾರಿ ಜ್ಞಾನೇಂದ್ರ ಕರಗ ಹೊರಲಿದ್ದಾರೆ ಎಂದು ತಿಗಳ ಸಮುದಾಯದ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯರಾದ ಪಿ.ಆರ್.ರಮೇಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಿಗಳರ ಸಂಘದ ಸುಬ್ಬಣ್ಣ, ಲಕ್ಷ್ಮಣ್, ಲೋಕೇಶ್, ಕೃಷ್ಣಮೂರ್ತಿ, ಯಾದಗಿರಿ ರಾಮಚಂದ್ರ, ಸುರೇಶ್, ಜಯರಾಜ್ ಮೊದಲಾದವರು ಇದ್ದರು.