ಬೆಂಗಳೂರು, (www.bengaluruwire.com) : ನಮ್ಮ ಬಾಲ್ಯಕ್ಕೂ – ಗುಬ್ಬಚ್ಚಿಗಳಿಗೂ ಒಂದು ರೀತಿ ಭಾವನಾತ್ಮಕ ನಂಟಿದೆ. ಗುಬ್ಬಚ್ಚಿಗಳನ್ನು ಕಂಡ ಕೂಡಲೇ ಒಂದು ಕ್ಷಣ ನೆನಪಿನ ಹಾಯಿದೋಣಿಯಲ್ಲಿ ಮುಳುಗಿ ವಾಪಸ್ ಬಂದಂತಾಗುತ್ತದೆ.
ಮನೆಯ ಸುತ್ತಮುತ್ತ, ಉದ್ಯಾನವನ, ಅಂಗಡಿ- ಮುಂಗಟ್ಟು, ಚಿಕ್ಕಪುಟ್ಟ ಮರ-ಗಿಡಗಳ ಟೊಂಗೆಗಳಲ್ಲಿ ಚೀವ್ ಚೀವ್ ಎಂದು ಹಾರುವ ಗುಬ್ಬಚ್ಚಿಗಳು ಆಧುನೀಕರಣ, ನಗರೀಕರಣ ಭರಾಟೆಯಲ್ಲಿ ಕ್ರಮೇಣ ನಗರದಲ್ಲಿ ಮರೆಯಾಗುತ್ತಾ ಬಂದಿದೆ. ಇವುಗಳ ಸಂರಕ್ಷಣೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾರ್ಚ್ 20ರಂದು ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತದೆ.
ಗುಬ್ಬಿಗಳ ಚಟುವಟಿಕೆ ನೋಡುವುದೇ ಕಣ್ಣಿಗೊಂದು ಹಬ್ಬ :
2010ರಿಂದ ವಿಶ್ವ ಗುಬ್ಬಚ್ಚಿಗಳ ದಿನವನ್ನು ಆಚರಿಸಲಾಗುತ್ತಿದೆ. ನಿರುಪದ್ರವಿ ಈ ಹಕ್ಕಿಗಳ ಸಂತತಿ ಕಳೆದ ಒಂದೂವರೆ ದಶಕಗಳಿಂದ ನಿರಂತರವಾಗಿ ಕಡಿಮೆಯಾಗುತ್ತಲೇ ಬಂದಿದೆ. ಈ ಹಿಂದೆ ಬೆಂಗಳೂರಿನಲ್ಲಿ ಹಂಚಿನ ಮನೆಗಳು, ಶೀಟ್ ಮನೆಗಳಿದ್ದಾಗ ಮನೆಯೊಳೆಗೆ ಗೂಡು ಕಟ್ಟಿ, ಮನೆಯ ಒಳಗೂ, ಹೊರಗೂ, ಓಡಾಡುವುದನ್ನು ಕಾಣುತ್ತಿದ್ದೆವು. ಪ್ರತಿಯೊಂದು ಮನೆಯಲ್ಲೂ ಗುಬ್ಬಚ್ಚಿಗಳ ಗೂಡು ಕಾಣುತ್ತಿದ್ದವು. ಅಷ್ಟರಮಟ್ಟಿಗೆ ಮನೆಯ ಸದಸ್ಯರಂತೆ ಗುಬ್ಬಿಗಳು ತಮ್ಮ ಚಟುವಟಿಕೆಗಳು ದಿನನಿತ್ಯ ನಡೆಸುತ್ತಿದ್ದವು. ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ.
ಧವಸ- ಧಾನ್ಯಗಳನ್ನು ಶುಚಿಗೊಳಿಸಿ ಮನೆ ಮುಂದೆ ಅಥವಾ ಹಿತ್ತಲಲ್ಲಿ ಹಾಕುವ ಈ ವಸ್ತುಗಳೇ ಅವುಗಳಿಗೆ ಆಹಾರವಾಗುತ್ತಿದ್ದವು. ಕಿರಾಣಿ ಅಂಗಡಿ, ಸಣ್ಣ ಸಣ್ಣ ಹಿಟ್ಟು ಮಾಡುವ ಶಾಪ್ ಗಳಲ್ಲಿ ಗುಬ್ಬಚ್ಚಿಗಳ ಕಲರವಕ್ಕೆ ಕೊರತೆ ಇರಲಿಲ್ಲ. ಹಳೆಯ ಶಾಲೆಗಳ ಮಾಡಾದರೇನು? ಶಿಥಿಲವಾದ ಮನೆಯಾದರೇನು? ಅಲ್ಲೊಂದು ಗುಬ್ಬಚ್ಚಿ ಗೂಡು ಇಲ್ಲದಿದ್ದರೆ ನಗರಕ್ಕೆ ಕಳೆಯೇ ಇರುತ್ತಿರಲಿಲ್ಲ. ಗುಬ್ಬಚ್ಚಿಯು ಧಾನ್ಯಗಳು, ಹುಳ-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತವೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ.
ಚಿತ್ರ ಕೃಪೆ : ವಿಶ್ವನಾಥ ಸುವರ್ಣ
ಆ ಪುಟ್ಟ ಹಕ್ಕಿಗಳು ದಶಕಗಳ ಹಿಂದೆ ಬೆಂಗಳೂರಿನಂತಹ ಪಿಂಚಣಿದಾರರ ನಗರಿಯಲ್ಲಿ ನಿಶ್ಯಬ್ದದ ನಡುವೆ ಹಕ್ಕಿಗಳ ಕೂಗು ಹೃದಯಕ್ಕೆ ಅದೇನೋ ಮುದ ಕೊಡುತ್ತಿತ್ತು. ನಗರದಲ್ಲಿನ ಶಬ್ದ ಮಾಲಿನ್ಯ, ವಾಯು ಮಾಲಿನ್ಯ, ವೇಗವಾದ ನಗರೀಕರಣ, ಉದ್ಯಾನ ನಗರಿಯಲ್ಲಿ ಹಸಿರು ಪರಿಸರ ಕಡಿಮೆಯಾಗುತ್ತಾ ಬಂದಿದ್ದೂ ಹೀಗೆ ಹಲವು ಕಾರಣಕ್ಕೆ ಗುಬ್ಬಚ್ಚಿಗಳ ಸಂತತಿ ಇಳಿಕೆ ಹಾದಿ ಹಿಡಿದವು. ಸೀಸರಹಿತ ಪೆಟ್ರೋಲ್ ದಹಿಸಿದಾಗ ಅದರಿಂದ ಉಂಟಾಗುವ ನೈಟ್ರೇಟ್ ಅಂಶವು ಗುಬ್ಬಿಗಳು ತಮ್ಮ ಮರಿಗಳಿಗೆ ಅವು ಹುಟ್ಟಿದಾಗ ಕೆಲವು ದಿನಗಳು ತಿನ್ನಿಸುವ ಕೀಟಗಳನ್ನು ಕೊಲ್ಲುತ್ತಿವೆ. ಹೀಗಾಗಿ ಗುಬ್ಬಚ್ಚಿಗಳ ಸಂತತಿ ಅಳಿಯುತ್ತಿದೆ ಎಂಬ ವಾದವೂ ಇದೆ. ಈಗಲೂ ಬಹಳ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಗುಬ್ಬಚ್ಚಿಗಳು ನಮಗೆ ಕಾಣಸಿಕ್ಕರೂ ಅದೇ ಪುಣ್ಯ ಅನ್ನುವಂತಾಗಿದೆ.
ವಿಶ್ವ ಗುಬ್ಬಿ ದಿನಾಚರಣೆ ಜಾಗೃತಿಗೆಂದೇ ಇದೆ ವೆಬ್ ಸೈಟ್ :
ದಿ ನೇಚರ್ ಫಾರೆವರ್ ಸೊಸೈಟಿ ಆಫ್ ಇಂಡಿಯಾ (The Nature Forever Society of India) ಹಾಗೂ ಫ್ರಾನ್ಸಿನ ಇಕೊ ಸಿಸ್ ಆಕ್ಷನ್ ಫೌಂಡೇಷನ್ (Eco-Sys Action Foundation) ಎಂಬ ಸಂಸ್ಥೆಗಳು ವಿಶ್ವ ಗುಬ್ಬಚ್ಚಿಗಳ ದಿನ ಆಚರಣೆ ಅಸ್ಥಿತ್ವಕ್ಕೆ ಬರಲು ಕಾರಣವಾದವು. ಮಾ.20ರ ಒಂದು ದಿನವನ್ನು ಗುಬ್ಬಚ್ಚಿಗಳ ಸಂರಕ್ಷಣೆ ಬಗ್ಗೆ ವಿಶ್ವದಲ್ಲಿನ ಜನರಿಗೆ ತಿಳಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ದಿ ನೇಚರ್ ಫಾರೆವರ್ ಸೊಸೈಟಿ ವಿಶ್ವ ಗುಬ್ಬಚ್ಚಿಗಳ ದಿನದ ಕುರಿತಂತೆ ಜಾಗೃತಿ ಮೂಡಿಸಲು ಇದಕ್ಕೆಂದೇ ವೆಬ್ ಸೈಟ್ ಸ್ಥಾಪಿಸಿದ್ದಾರೆ. ಈ ವೆಬ್ ತಾಣದಲ್ಲಿ ವಿಶ್ವಾದ್ಯಂತ ಇರುವ ಬಗೆ ಬಗೆಯ ತರಾವರಿ ಗುಬ್ಬಚ್ಚಿಗಳ ಚಿತ್ರ ಹಾಗೂ ಅವುಗಳ ಮಾಹಿತಿಯನ್ನು ಅದರಲ್ಲಿ ಹಂಚಿಕೊಂಡಿದ್ದಾರೆ.
ಪ್ರಾಣಿ- ಪಕ್ಷಿಗಳ ಮೇಲಿರಲಿ ಪ್ರೀತಿ –ಕಾಳಜಿ :
ಒಟ್ಟಿನಲ್ಲಿ ಮಾನವನ ಒಡನಾಡಿಗಳಲ್ಲಿ ಗುಬ್ಬಚ್ಚಿ ಸಂತತಿಯೂ ಒಂದು. ಇವುಗಳ ರಕ್ಷಣೆ ಹಾಗೂ ನಗರಗಳಲ್ಲಿ ಜೀವವೈವಿಧ್ಯತೆ ಕಾಯ್ದುಕೊಳ್ಳುವುದು ಹಿಂದೆಂದಿಗಿಂತ ಮುಖ್ಯವಾಗಿದೆ. ವಿಶ್ವ ಗುಬ್ಬಚ್ಚಿಗಳ ದಿನದಂದು ನಮ್ಮ ಸುತ್ತಮುತ್ತಲಿರುವ ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ,ಕರುಣೆ ಹಾಗೂ ಕಾಳಜಿ ತೋರುವ. ಹೇಗಿದ್ದರೂ ಬೇಸಿಗೆ ಕಾಲ ಹತ್ತಿರವಾಗುತ್ತಿದೆ. ಬಿಸಿಲಲ್ಲಿ ನಮ್ಮ ಮನೆ ಸುತ್ತಮುತ್ತ ಬರುವ ಪ್ರಾಣಿ- ಪಕ್ಷಿಗಳಿಗೆ ನೀರು, ಆಹಾರ ಇಡುವ ತಮ್ಮ ಹಳೆಯ ಪದ್ಧತಿಯನ್ನು ಮುಂದುವರೆಸೋಣ.