ನವದೆಹಲಿ, (www.bengaluruwire.com) : ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India- RBI) ಆರ್ ಬಿಐ ಸಹಾಯಕ ಹುದ್ದೆಯ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ (Admit Card)ಗಳನ್ನು ಇಂದು (ಮಾ.20) ಬಿಡುಗಡೆ ಮಾಡಲಿದ್ದು, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಆರ್ ಬಿಐ ಅಧಿಕೃತ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.
ಆರ್ ಬಿಐ ಸಹಾಯಕ ಹುದ್ದೆ ಪ್ರವೇಶ ಪರೀಕ್ಷೆ 2022 (RBI Assistant Admit Card 2022) ರ ಪೂರ್ವಭಾವಿ ಪರೀಕ್ಷೆಯು ಇದೇ ಮಾರ್ಚ್ 26 ಹಾಗೂ 27 ರಂದು ನಡೆಯಲಿದೆ. ಈ ಹುದ್ದೆಯ ಅಡ್ಮಿಟ್ ಕಾರ್ಡ್ ಬಿಡುಗಡೆ ದಿನಾಂಕ ಸಂಬಂಧ ಆರ್ ಬಿಐ ಈತನಕ ಅಧಿಕೃತವಾಗಿ ತಿಳಿಸಿಲ್ಲ. ಆರ್ ಬಿಐ ಸಹಾಯಕ ಹುದ್ದೆ ಪ್ರವೇಶ ಪರೀಕ್ಷೆಗೆ ಇನ್ನು ಒಂದು ವಾರ ಬಾಕಿಯಿರುವ ಕಾರಣದಿಂದ ಆರ್ ಬಿಐ ಇಂದು ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನು rbi.org.in ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸಲಾಗಿದೆ.
ಕೆಲವೊಂದು ವೆಬ್ ಸೈಟ್ ಗಳು ಈಗಾಗಲೇ ಆರ್ ಬಿಐ ಅಸಿಸ್ಟೆಂಟ್ ಪ್ರಿಲಿಮ್ಸ್ ಪ್ರವೇಶ ಪತ್ರಗಳನ್ನು ರಿಸರ್ವ್ ಬ್ಯಾಂಕ್ ಈಗಾಗಲೇ ಬಿಡುಗಡೆ ಮಾಡಿದ್ದಾಗಿ ತಿಳಿಸುತ್ತಿವೆ. ಆದರೆ ಅಭ್ಯರ್ಥಿಗಳು ಇದನ್ನು ನಂಬಬಾರದು. ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರಗಳ ಕುರಿತಂತೆ ಯಾವುದೇ ಅಧಿಕೃತ ಮಾಹಿತಿಗಳಿಗಾಗಿ ಆರ್ ಬಿಐ ನ ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಡಿ.
ಆರ್ ಬಿಐ ಸಹಾಯಕ ಪೂರ್ವಭಾವಿ ಪರೀಕ್ಷೆ 2022 ಹೇಗಿರುತ್ತೆ?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 950 ಆರ್ ಬಿಐ ಸಹಾಯಕ ಖಾಲಿ ಹುದ್ದೆಗಳಿಗಾಗಿ ನೇಮಕಾತಿ ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ಭಾಷಾ ಪ್ರಾವಿಣ್ಯತಾ ಪರೀಕ್ಷೆ ಹೀಗೆ ಹಂತ ಹಂತವಾಗಿ ನಡೆಯಲಿದೆ. ಪ್ರತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ತೋರುವ ಸಾಮರ್ಥ್ಯದ ಆಧಾರದ ಮೇಲೆ ಆರ್ ಬಿಐ ಅಂತಿಮವಾಗಿ ಯಶಸ್ವಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ.
ಆರ್ ಬಿಐ ಸಹಾಯಕ ಪೂರ್ವಭಾವಿ ಪರೀಕ್ಷೆಯಲ್ಲಿ ಒಟ್ಟು ಮೂರು ವಿಭಾಗಗಳಿರುತ್ತದೆ : ಇಂಗ್ಲೀಷ್ ಭಾಷೆ, ಸಂಖ್ಯಾ ಸಾಮರ್ಥ್ಯ (Numerical Ability), ತಾರ್ಕಿಕ ಸಾಮರ್ಥ್ಯ (Numerical Ability) ಕುರಿತಂತೆ ಒಟ್ಟು 100 ಅಂಕಗಳಿಗೆ 60 ನಿಮಿಷದ ಪರೀಕ್ಷೆಗಳಿರುತ್ತದೆ. ಆರ್ ಬಿಐ ಸಹಾಯಕ ಮುಖ್ಯ ಪರೀಕ್ಷೆ 2022 (RBI Assistant Mains 2022)ಗೆ ಪರೀಕ್ಷೆಯಲ್ಲಿ ಒಟ್ಟು 5 ವಿಭಾಗಗಳಿರುತ್ತದೆ : ತಾರ್ಕಿಕ, ಇಂಗ್ಲೀಷ್ ಭಾಷೆ, ಸಂಖ್ಯಾ ಸಾಮರ್ಥ್ಯ, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ ಕುರಿತಂತೆ ಒಟ್ಟು 200 ಅಂಕಗಳಿಗೆ 135 ನಿಮಿಷಗಳ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ, ಪೂರ್ವಭಾವಿ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ಅಂಕ ಕಡಿತವಾಗಲಿದ್ದು (ಪ್ರತಿಯೊಂದು ಪ್ರಶ್ನೆಯ ¼ ಅಂಕ) ಈ ಬಗ್ಗೆ ಎಚ್ಚರಿಕೆವಹಿಸಬೇಕಾಗಿದೆ.
ಅಭ್ಯರ್ಥಿಗಳು ನೇರವಾಗಿ ಆರ್ ಬಿಐ ಸಹಾಯಕ ಪ್ರವೇಶ ಪತ್ರ 2022 ಡೌನ್ ಲೋಡ್ ಮಾಡಿಕೊಳ್ಳಬಹುದು.
ಆರ್ ಬಿಐ ಸಹಾಯಕ ಪ್ರವೇಶ ಪತ್ರ 2022 ಹೇಗೆ ಡೌನ್ ಲೋಡ್ ಮಾಡಿಕೊಳ್ಳುವುದು ?
- ಅಭ್ಯರ್ಥಿಗಳು ಮೊದಲಿಗೆ ಆರ್ ಬಿಐನ, rbi.org.in ಅಧಿಕೃತ ವೆಬ್ ಸೈಟ್ ಗೆ ಮೊದಲಿಗೆ ಭೇಟಿಕೊಡಿ
- ಆರ್ ಬಿಐ ಹೋಮ್ ಪೇಜ್ ನಲ್ಲಿ ವೇಕೆನ್ಸೀಸ್ (Vacancies) ಟ್ಯಾಬ್ ಮೇಲೆ ಕ್ಲಿಕ್ ಮಾಡಿ, ಬಳಿಕ ಆರ್ ಬಿಐ ಸಹಾಯಕ ನೇಮಕಾತಿ ಪ್ರವೇಶ ಪರೀಕ್ಷೆ ಲಿಂಕ್ ಮೇಲೆ ಕ್ಲಿಕ್ ಮಾಡಿ
- ಅಭ್ಯರ್ಥಿಗಳು ತಮ್ಮ ವೆಬ್ ಸೈಟ್ ನಲ್ಲಿ ಕೇಳಿದ ಲಾಗಿನ್ ಮಾಹಿತಿ ನೀಡಿ
- ಆರ್ ಬಿಐ ಸಹಾಯಕ ಪೂರ್ವಭಾವಿ ಪರೀಕ್ಷೆ ಪ್ರವೇಶ ಪತ್ರ ನಿಮ್ಮ ಕಂಪ್ಯೂಟರ್ ಸ್ಕ್ರೀನ್ ಮೇಲೆ ಕಾಣಲಿದೆ
- ಈ ಪ್ರವೇಶಪತ್ರವನ್ನು ಡೌನ್ ಲೋಡ್ ಮಾಡಿ ನಂತರ ಪ್ರಿಂಟೌಟ್ ತೆಗೆದುಕೊಳ್ಳಿ