ಬೆಂಗಳೂರು, (www.bengaluruwire.com): ಪ್ರಸಕ್ತ ವರ್ಷದ ಆಯವ್ಯದಲ್ಲಿ ರೂ.100 ಕೋಟಿ ವೆಚ್ಚದಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ಅನ್ನು ಸ್ಥಾಪಿಸಲು ಘೋಷಿಸಲಾಗಿದ್ದು, ಅತಿ ಶೀಘ್ರದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಇಂದು ಕರ್ನಾಟಕ ರಾಜ್ಯ ಸಹಕಾರ ಮಂಡಳ ನಿ., ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿ. ಹಾಗೂ ಸಹಕಾರ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಹಾಲು ಉತ್ಪಾದನೆಯು ಒಂದು ದೊಡ್ಡ ಚಟುವಟಿಕೆಯಾಗಿದೆ. ಹಾಲು ಉತ್ಪಾದನೆಯಿಂದ ಬರುವ ಲಾಭವು ಹಾಲು ಉತ್ಪಾದಕರಿಗೇ ಸೇರಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ಪ್ರತಿಯೊಂದು ತಾಲ್ಲೂಕಿನಲ್ಲಿ ಕ್ಷೀರ ಸಮೃದ್ಧಿ ಬ್ಯಾಂಕ್ ತೆರೆಯಲಾಗುತ್ತಿದೆ. ಪ್ರತಿಯೊಬ್ಬ ಹಾಲು ಉತ್ಪಾದಕರು ಇದರ ಸದಸ್ಯರಾಗಬಹುದು.
ಹಾಲು ಉತ್ಪಾದಕರ ಎಲ್ಲಾ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ಸುಲಭದಲ್ಲಿ, ಕಡಿಮೆ ಬಡ್ಡಿ ದರದಲ್ಲಿ ಈ ಬ್ಯಾಂಕ್‌ನಿಂದ ಸಾಲ ದೊರೆಯಲಿದೆ. ಕ್ಷೀರ ಸಮೃದ್ಧಿ ಬ್ಯಾಂಕ್ ಅನ್ನು ಉತ್ತಮವಾಗಿ ಬಳಸಿಕೊಂಡಲ್ಲಿ ಭವಿಷ್ಯದಲ್ಲಿ ಅಪೆಕ್ಸ್ ಬ್ಯಾಂಕ್‌ಗೆ ಸರಿಸಮಾನವಾಗಿ ಸಹಕಾರಿ ರಂಗದಲ್ಲಿ ಬೆಳೆಯಲಿದೆ ಎಂದರಲ್ಲದೆ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ ಎಂದು ಹೇಳಿದರು.
ದೇಶದಲ್ಲಿ ಹಸಿರುಕ್ರಾಂತಿಯಾಗಿದೆ, ಆದರೆ ಕೃಷಿಗೆ ತಕ್ಕಂತೆ ರೈತ ಬೆಳೆದಿಲ್ಲ. ಇದಕ್ಕಾಗಿ ಯಶಸ್ವಿನಿ ಯೋಜನೆ ಮರು ಜಾರಿ ಮಾಡಲಾಗುತ್ತಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಯಶಸ್ವಿನಿ ಯೋಜನೆಗಾಗಿ 2022-23 ಬಜೆಟ್ ನಲ್ಲಿ 300 ಕೋಟಿ ರೂ. :
ಯಶಸ್ವಿನಿ ಯೋಜನೆ ಮರು ಜಾರಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ 300 ಕೋಟಿ ರೂ. ಹಾಗೂ ರೈತರ ಯಂತ್ರೋಪಕರಣಕ್ಕೆ ಅಗತ್ಯವಿರುವ ಡೀಸಲ್, ಪೆಟ್ರೋಲ್‌ಗೆ ರೂ.500 ಕೋಟಿ ಹಣವನ್ನು ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಮೀಸಲಿಡಲಾಗಿದೆ. ರಾಜ್ಯದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗುವುದು ಎಂದರಲ್ಲದೆ ಕೃಷಿಯಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಕೃಷಿ ಆರ್ಥಿಕತೆಯ ಮೂಲ. ರೈತರು ಕೇವಲ ಉತ್ಪಾದಕರಲ್ಲ, ಅವರು ಬಳಕೆದಾರರು ಕೂಡ ಎಂದು ಹೇಳಿದರು.
ಸಹಕಾರ ಕ್ಷೇತ್ರಕ್ಕೆ ಸಿಎಂ ಸಾಕಷ್ಟು ಒತ್ತು – ಎಸ್.ಟಿ.ಸೋಮಶೇಖರ್ :
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದರು.
ಸಹಕಾರ ರತ್ನ ಪ್ರಶಸ್ತಿಗೆ ಯಾವುದೇ ಪ್ರಭಾವ ಬಳಸಬಾರದು, ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಬೇಕು ಎಂಬ ಮುಖ್ಯಮಂತ್ರಿಗಳ ಆದೇಶದಂತೆ 60 ಸಹಕಾರಿಗಳನ್ನು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಸಹಕಾರಿಗಳ ಬೇಡಿಕೆಯಂತೆ ಯಶಸ್ವಿನಿ ಯೋಜನೆಯನ್ನು ಮುಖ್ಯಮಂತ್ರಿ ಅವರು ಜಾರಿಗೊಳಿಸಿದರು. 2021ನೇ ಸಾಲಿನಲ್ಲಿ ರೈತರಿಗೆ ರೂ.20810 ಕೋಟಿ ಶೂನ್ಯ ಬಡ್ಡಿ ಸಾಲ ನೀಡುವ ಗುರಿ ನೀಡಲಾಗಿದ್ದು, ಈಗಾಗಲೇ ರೂ.16 ಸಾವಿರ ಕೋಟಿ ಹಣ ವಿತರಣೆಯಾಗಿದೆ. ತಿಂಗಳ ಅಂತ್ಯದ ವೇಳೆಗೆ ನಿಗದಿತ ಗುರಿ ತಲುಪಲಾಗುವುದು ಎಂದರು.
ಯಶವಂತಪುರ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. 21 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ, ಒಳಚರಂಡಿ ಕಾಮಗಾರಿ ಏಪ್ರಿಲ್‌ಗೆ ಮುಕ್ತಾಯವಾಗಲಿದೆ. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸದ ಡಿ.ವಿ.ಸದಾನಂದಗೌಡ, ಜಲ ಸಂಪನ್ಮೂಲ ಸಚಿವ ಗೋವಿಂದ.ಎಂ.ಕಾರಜೋಳ, ಗೃಹ ಸಚಿವ ಅರಗ ಜ್ಞಾನೆಂದ್ರ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ವಿವಿಧ ಸಹಕಾರ ಮಂಡಳಿಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
60 ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ :
ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ 60 ಹಿರಿಯ ಸಹಕಾರಿಗಳಿಗೆ 2021ನೇ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ನಟ ಪುನೀತ್ ರಾಜ್‌ಕುಮಾರ್ ಹಾಗೂ ಕರೇಗೌಡ ಸಿದ್ಲಿಂಗಪ್ಪಗೌಡ ಸಣ್ಣ ಗೌಡ್ರ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ ಮಾಡಲಾಯಿತು.