ಬೆಂಗಳೂರು, (www.bengaluruwire.com) : ರಾಜ್ಯದ ರಫ್ತು ಬೆಳವಣಿಗೆಯ ಪ್ರಮಾಣ 2020-21 ಹಾಗೂ 2021-22ನೇ ಸಾಲಿನಲ್ಲಿ ಕೋವಿಡ್-19 ಕಾರಣಕ್ಕೆ ಸಾಕಷ್ಟು ಇಳಿಮುಖವಾಗಿರುವುದು 2021-22ನೇ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
2016-17ನೇ ಸಾಲಿನಲ್ಲಿ ರಾಜ್ಯದ ರಫ್ತು ಮೌಲ್ಯ 5.49 ಲಕ್ಷ ಕೋಟಿ ರೂ.ಗಳಾಗಿತ್ತು. 2018-19ನೇ ಸಾಲಿನಲ್ಲಿ ಇದರ ಪ್ರಮಾಣ 6.59 ಲಕ್ಷ ಕೋಟಿ ರೂ.ಗಳಾಗಿದ್ದರೆ, 2019-20ನೇ ಸಾಲಿನಲ್ಲಿ 7.03 ಲಕ್ಷ ಕೋಟಿ ರೂ. ಗಳಿಗೆ ಏರಿಕೆಯಾಗಿತ್ತು. ಆದರೆ 2020-21ನೇ ಸಾಲಿನಲ್ಲಿ ಕೋವಿಡ್-19 ಸೋಂಕಿನಿಂದ ಕರ್ನಾಟಕದ ರಫ್ತು ಪ್ರಮಾಣ 6.93 ಲಕ್ಷ ಕೋಟಿ ರೂ.ಗಳಿಗೆ ಇಳಿಮುಖವಾಯ್ತು. ಇನ್ನು 2021-22ನೇ ಸಾಲಿನಲ್ಲಿ (ಏಪ್ರಿಲ್ ನಿಂದ – ಸೆಪ್ಟೆಂಬರ್ 2021 ರ ತನಕ) 4.26 ಲಕ್ಷ ಕೋಟಿ ರೂ.ಗಳಿಗೆ ಮತ್ತಷ್ಟು ಕುಸಿತವಾಗಿದೆ.
ರಾಜ್ಯದಿಂದ ಕಾಫಿ, ಮಸಾಲೆ ಪದಾರ್ಥಗಳು, ರೇಷ್ಮೆ, ಗೋಡಂಬಿ, ಕೈಮಗ್ಗ ಮತ್ತು ಅಗರಬತ್ತಿಯಂತಹ ಸಾಂಪ್ರದಾಯಿಕ ರಫ್ತುಗಳ ಜೊತೆಗೆ ಕಳೆದ ಎರಡು ದಶಕಗಳಿಂದ ಎಲೆಕ್ಟ್ರಾನಿಕ್ಸ್, ಸಾಫ್ಟ್ ವೇರ್, ಇಂಜಿನಿಯರಿಂಗ್ ಸರಕುಗಳು, ರೆಡಿಮೇಡ್ ಗಾರ್ಮೆಂಟ್ಸ್, ಖನಿಜ, ಅದಿರುಗಳು, ಕೆಮಿಕಲ್ಸ್, ಸಾಗರೋತ್ಪನ್ನಗಳು ಸೇರಿದಂತೆ ಹಲವು ಉತ್ಪನ್ನಗಳನ್ನು ಕರ್ನಾಟಕ ರಫ್ತು ಮಾಡುತ್ತಿದೆ. ಹೀಗಿದ್ದರೂ, 2016-17ನೇ ಸಾಲಿನಲ್ಲಿ ರಾಜ್ಯವು ರಫ್ತು ಭಾಗವಹಿಸುವಿಕೆ ಪ್ರಮಾಣ ಶೇ.45 ರಷ್ಟಿದ್ದು ನಂತರದ ವರ್ಷಗಳಲ್ಲಿ ಏರಿಳಿಕೆಯಾಗುತ್ತಾ 2020-21 ಹಾಗೂ 2021-22ನೇ ಸಾಲಿನಲ್ಲಿ ಕ್ರಮವಾಗಿ ಶೇ.42 ಹಾಗೂ ಶೇ.25.28ಕ್ಕೆ ಇಳಿಕೆ ಕಂಡಿದೆ. 2021-22ನೇ ಸಾಲಿನಲ್ಲಿ ಕೋವಿಡ್-19 ಕಾರಣದಿಂದಾಗಿ ಈ ಕುಸಿತ ಕಂಡುಬಂದಿದೆ. ಆದರೆ ಇದೇ ಅವಧಿಯಲ್ಲಿ ರಫ್ತು ವಹಿವಾಟಿನಲ್ಲಿ ಭಾರತದ ಭಾಗವಹಿಸುವಿಕೆ ಶೇ.7.46ರಷ್ಟು ಮಾತ್ರ ಆಗಿದೆ ಎಂದು ರಾಜ್ಯದ ಆರ್ಥಿಕ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ದೇಶದ ಒಟ್ಟಾರೆ ಸೇವೆ ಮತ್ತು ಸರಕುಗಳ ರಫ್ತಿನಲ್ಲಿ ರಾಜ್ಯದ ಪ್ರಮಾಣ ಶೇ.18ರಷ್ಟಿದೆ. ಸಾಫ್ಟ್ ವೇರ್ ಮತ್ತು ಸೇವೆಗಳ ಸರಕಿನಲ್ಲಿ ಕರ್ನಾಟಕದ ಪ್ರಮಾಣ ಶೇ.38ರಷ್ಟಿದೆ. 2020-21 ದೇಶದಲ್ಲಿ ನಡೆದಿರುವ ವಾಣಿಜ್ಯ ಸರಕು ರಫ್ತಿನಲ್ಲಿ ಕರ್ನಾಟಕದ ಪಾಲು ಈ ರೀತಿಯಿದೆ : ಕಾಫಿ ಶೇ.86ರಷ್ಟು, ರೇಷ್ಮೆ ಉತ್ಪನ್ನಗಳು ಶೇ.50ರಷ್ಟು, ಗೋಡಂಬಿ ಶೇ.22ರಷ್ಟು, ಸೆಮಿಕಂಡಕ್ಟರ್ ಶೇ.15, ಏರೋಸ್ಪೇಸ್ ಶೇ.24 ಮತ್ತು ಇಂಜಿನಿಯರಿಂಗ್ ವಲಯದ ಒಟ್ಟು ರಫ್ತಿನಲ್ಲಿ ರಾಜ್ಯದ ಪಾಲು ಶೇ.9ರಷ್ಟಿದೆ.
ರಫ್ತಿನಲ್ಲಿ ದೇಶದ 30 ಜಿಲ್ಲೆಗಳಲ್ಲಿ ಬೆಂಗಳೂರಿಗೆ 10ನೇ ಸ್ಥಾನ :
ದೇಶದಿಂದ ಹೊರ ದೇಶಗಳಿಗೆ ರಫ್ತಿನಲ್ಲಿ ಪ್ರಮುಖ ಪಾತ್ರವಹಿಸಿರುವ ಭಾರತದ 30 ಜಿಲ್ಲೆಗಳಲ್ಲಿ ಕರ್ನಾಟಕದ ಬೆಂಗಳೂರು ನಗರ, ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳು ಕ್ರಮವಾಗಿ 10, 17 ಹಾಗೂ 26 ಸ್ಥಾನವನ್ನು ಗಳಿಸಿಕೊಂಡಿದೆ. 2021ನೇ ಸಾಲಿನಲ್ಲಿ ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ ತನಕ, ಬೆಂಗಳೂರು ನಗರದಿಂದ 3,749.18 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಎಕ್ಸ್ ಪೋರ್ಟ್ ಮಾಡಲಾಗಿದೆ. ಆ ಪೈಕಿ 3,283.09 ದಶಲಕ್ಷ ಡಾಲರ್ ಮೌಲ್ಯದ ಇಂಜಿನಿಯರಿಂಗ್ ಸರಕು, ಎಲೆಕ್ಟ್ರಾನಿಕ್ಸ್, ರೆಡಿಮೇಡ್ ಬಟ್ಟೆ, ಔಷಧಿ, ಸಾವಯವ ಮತ್ತು ಸಾವಯೇತರ ಪ್ರಮುಖ ಉತ್ಪನ್ನಗಳು ಸೇರಿವೆ.
ಇನ್ನು ದಕ್ಷಿಣ ಕನ್ನಡದಿಂದ 2,488.41 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ಎಕ್ಸ್ ಪೋರ್ಟ್ ಮಾಡಲಾಗಿದೆ. ಆ ಪೈಕಿ 2,368.94 ದಶಲಕ್ಷ ಡಾಲರ್ ಮೌಲ್ಯದ ಪೆಟ್ರೋಲಿಯಂ ಉತ್ಪನ್ನಗಳು, ಸಾವಯವ ಮತ್ತು ಸಾವಯವೇತರ ರಾಸಾಯನಿಕಗಳು, ಕಬ್ಬಿಣದ ಅದಿರು, ಸಾಗರದ ಉತ್ಪನ್ನಗಳು ಹಾಗೂ ಇಂಜಿನಿಯರಿಂಗ್ ನಂತಹ ಪ್ರಮುಖ ಉತ್ಪನ್ನಗಳನ್ನು ಎಕ್ಸ್ ಪೋರ್ಟ್ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯಿಂದ 1,769.36 ದಶಲಕ್ಷ ಡಾಲರ್ ಮೌಲ್ಯದ ವಸ್ತುಗಳನ್ನು ರಫ್ತು ಮಾಡಲಾಗಿದೆ. ಆದರೆ ಆ ಪೈಕಿ 1,754.98 ದಶಲಕ್ಷ ಡಾಲರ್ ಮೌಲ್ಯದ ಇಂಜಿನಿಯರಿಂಗ್ ಉತ್ಪನ್ನಗಳು, ಭತ್ತ, ಮೈಕಾ, ಕಲ್ಲಿದ್ದಲು, ಖನಿಜಗಳು, ಹಣ್ಣು ಮತ್ತು ತರಕಾರಿ, ಸಾವಯವ ಮತ್ತು ಸಾವಯವೇತರ ರಾಸಾಯನಿಕ ಉತ್ಪನ್ನಗಳು ಸೇರಿದೆ.
3.44 ಲಕ್ಷ ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ ವೇರ್ ರಫ್ತು :
ರಾಜ್ಯದಿಂದ 2020-21ನೇ ಸಾಲಿನಲ್ಲಿ 5,86,302 ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ ವೇರ್ ಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗಿದೆ. 2021-22ನೇ ಸಾಲಿನಲ್ಲಿ (ಏಪ್ರಿಲ್ ನಿಂದ ಸೆಪ್ಟೆಂಬರ್ ತನಕ) 3,44,079 ಕೋಟಿ ರೂ. ಮೌಲ್ಯದ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ ವೇರ್ ಗಳನ್ನು ಎಕ್ಸ್ ಪೋರ್ಟ್ ಮಾಡಲಾಗಿದೆ.
30 ಜಿಲ್ಲೆಯ ರಫ್ತುಕೇಂದ್ರಗಳಿಗೆ ಉತ್ಪನ್ನಗಳನ್ನು ಗುರ್ತಿಸಿದ ಕೇಂದ್ರ ಸರ್ಕಾರ :
ಕರ್ನಾಟಕವು ರಫ್ತುಕೇಂದ್ರವಾಗಿ ಅಭಿವೃದ್ಧಿ ಹೊಂದುತ್ತಿರುವ 30 ಜಿಲ್ಲೆಗಳಿಗೆ ಸ್ಥಳೀಯ ನೆಲೆಯಲ್ಲಿ ವಿಶಿಷ್ಠತೆ ಸಾಧಿಸಿದ ಅವುಗಳದ್ದೇ ಆದ ಉತ್ಪನ್ನಗಳನ್ನು ಭಾರತ ಸರ್ಕಾರ ಗುರುತಿಸಿದೆ. ತೆಂಗಿನಕಾಯಿ, ಗೋಡಂಬಿ, ಬೆಲ್ಲ, ದಾಳಿಂಬೆ, ನೆಲಗಡಲೆ, ಮಾವು, ಭೆಂಡಿ, ಈರುಳ್ಳಿ, ಅಕ್ಕಿ, ಜೋಳ, ಗ್ರಾನೈಟ್, ಜೀನ್ಸ್ ಪ್ಯಾಂಟ್, ಕಾಫಿ, ಸೀರೆ, ವಿದ್ಯುತ್ ಯಂತ್ರೋಪಕರಣಗಳು, ಫಾರ್ಮಾ ಮತ್ತು ಬಯೋಟೆಕ್ ಹೀಗೆ ನಾನಾ ಉತ್ಪನ್ನಗಳನ್ನು ಗುರುತಿಸಲಾಗಿದೆ.
ಭೌಗೋಳಿಕ ವಿಶಿಷ್ಠತೆ ಕಾಯ್ದುಕೊಳ್ಳುವ ಉತ್ಪನ್ನದ ಜಿಐ ನೀತಿ ಅವಳಡಿಸಿಕೊಂಡ ಕರ್ನಾಟಕ :
ರಾಜ್ಯ ಸರ್ಕಾರವು ಇದೇ ಮೊದಲ ಬಾರಿಗೆ ಭೌಗೋಳಿಕತೆಯನ್ನು ಸೂಚಿಸುವ (GI) ನೀತಿಯನ್ನು ಅಳವಡಿಸಿಕೊಂಡಿದೆ. ಇದರ ಮೂಲಕ ಭೌಗೋಳಿಕ ವಿಶಿಷ್ಠತೆಯನ್ನು ಕಾಯ್ದುಕೊಳ್ಳುವ ಮತ್ತು ಅದಕ್ಕೆ ಅನುಗುಣವಾಗಿ ಭೌಗೋಳಿಕ ಮಾಹಿತಿ ವ್ಯವಸ್ಥೆಯ ಕ್ಲಸ್ಟರ್ ಗಳನ್ನು ರಚಿಸಿ, ಅವುಗಳಿಗೆ ಸೂಕ್ತ ಮೂಲಸೌಕರ್ಯಗಳನ್ನು ಒದಗಿಸುವ ಕಾರ್ಯನೀತಿಯನ್ನು ಜಾರಿಗೆ ತರುತ್ತಿದೆ.
ಈ ನೀತಿಯನ್ನು ರಾಜ್ಯದಾದ್ಯಂತ ಪೂರ್ಣವಾಗಿ ಜಾರಿಗೆ ತರಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಶ್ರಯದಲ್ಲಿ ವಿಶ್ವೇಶ್ವರಯ್ಯ ಟ್ರೈಡ್ ಪ್ರಮೋಷನ್ ಸೆಂಟರ್ (VTPC) ಯು ರಾಜ್ಯದ ಏಳು ಜಿಐ ಕ್ಲಸ್ಟರ್ ಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಮೈಸೂರಿನ ಗಂಝೀಫಾ ಕಾರ್ಡುಗಳು, ಮೈಸೂರಿನ ಸಾಂಪ್ರದಾಯಿಕ ಚಿತ್ರಕಲೆ, ಉಡುಪಿಯ ಸೀರೆಗಳು, ಬಿದರು ಪಾತ್ರೆಗಳು, ಮೈಸೂರಿನ ಬೀಟೆ ಮರದ ಇನ್ಲೇ ಕಲೆ, ಉಡುಪಿಯ ಮುಳ್ಳುಗುಳ್ಳ ಬದನೆ, ಉಡುಪಿ ಮಲ್ಲಿಗೆ ಈ ಏಳು ಉತ್ಪನ್ನಗಳ ಏಳು ಕ್ಲಸ್ಟರ್ ಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 26 ಉತ್ಪನ್ನಗಳು ನೋಂದಾಯಿತ ಜಿಐ ಟ್ಯಾಗ್ ಹೊಂದಿವೆ. ಇದಲ್ಲದೆ ಕರ್ನಾಟಕದಲ್ಲಿ 414 ಸಾಫ್ಟ್ ವೇರ್ ಜಿಐ ಟ್ಯಾಗ್ ಅನುಮತಿ ನೀಡಲಾಗಿದೆ.