ಬೆಂಗಳೂರು, (www.bengaluruwire.com) : ರಾಜಧಾನಿ ಬೆಂಗಳೂರಿನ ವಿವಿಧ ವಲಯಗಳಲ್ಲಿ 2010-11ರಿಂದ 2017-18ನೇ ಸಾಲಿನಲ್ಲಿ ಅಂದಾಜು 8 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳಿಗೆಂದು ಜಾಬ್ ಕೋಡ್ ಪಡೆದು ಕಾರ್ಯಾದೇಶ ಪಡೆಯದ ಕಾಮಗಾರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಏಕಾ ಏಕಿ ರದ್ದು ಮಾಡಲು ಹೊರಟಿದೆ….!
ಇದು ಪಾಲಿಕೆ ವ್ಯಾಪ್ತಿಯಲ್ಲಿ ಆಗಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಕೈಬಿಸಿ ಮಾಡಿ ತಮ್ಮ ಬಳಿ ಇಟ್ಟುಕೊಂಡಿದ್ದ ಜಾಬ್ ಕೋಡ್ ಕಾಮಗಾರಿಗಳಿಗೆ ಬೆಲೆಯೇ ಇಲ್ಲದಂತಾಗಲಿದೆ. ಅಲ್ಲದೆ ಈ ವಿಷಯ ಗುತ್ತಿಗೆದಾರರನ್ನು ದಂಗುಬಡಿಸಿದೆ. ಘನತ್ಯಾಜ್ಯ ವಿಲೇವಾರಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಕಾಂಟ್ರಾಕ್ಟರ್ ಗಳು ಸೂಕ್ತ ಕಾಲಾವಧಿಯಲ್ಲಿ ಪಾಲಿಕೆ ಯ ಹಣಕಾಸು ವಿಭಾಗದಿಂದ ಕಾಮಗಾರಿ ಬಿಲ್ ಪಾವತಿಯಾಗುತ್ತಿಲ್ಲ ಎಂದು ಇತ್ತೀಚೆಗಷ್ಟೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು.
ಇದಕ್ಕೆ ಕೌಂಟರ್ ಎನ್ನುವಂತೆ ಇದೀಗ ತುಳಸಿಮದ್ದಿನೇನಿ ಜಾಬ್ ಕೋಡ್ ಪಡೆದು ಸೂಕ್ತ ಕಾಲಾವಧಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಕಾಮಗಾರಿ ಪ್ರಾರಂಭಿಸದ ಗುತ್ತಿಗೆದಾರರಿಗೆ ಶಾಕ್ ಕೊಡಲು ಹೊರಟಿದ್ದಾರೆ. ತುಳಸಿ ಮದ್ದಿನೇನಿ ಮಾರ್ಚ್ 4ರಂದು ಪಾಲಿಕೆಯ ಎಲ್ಲಾ ವಲಯಗಳ ಮುಖ್ಯ ಎಂಜನಿಯರ್ ಹಾಗೂ ಕಾರ್ಯಪಾಲಕ ಎಂಜಿನಿಯರ್ ಗಳಿಗೆ ಕಳುಹಿಸಿರುವ ಆಂತರಿಕ ಕಚೇರಿ ಟಿಪ್ಪಣಿಯಲ್ಲಿ ವರ್ಕ್ ಆರ್ಡರ್ ಪಡೆದುಕೊಳ್ಳದ ಜಾಬ್ ಕೋಡ್ ಗಳನ್ನು ರದ್ದುಪಡಿಸುವುದಾಗಿ ತಿಳಿಸಿದ್ದಾರೆ.
ಈ ಆಂತರಿಕ ಕಚೇರಿ ಟಿಪ್ಪಣಿಯಲ್ಲೇನಿದೆ?
ಪಾಲಿಕೆಯಲ್ಲಿ ಆರ್ಥಿಕ ಶಿಸ್ತನ್ನು ಜಾರಿಗೆ ತರುವ ದೃಷ್ಟಿಯಿಂದ 3 ವರ್ಷಗಳಿಗಿಂತ ಹಿಂದಿನ ಜಾಬ್ ಕೋಡ್ ಗಳನ್ನು (ಕಾಮಗಾರಿಗಳನ್ನು ನಿರ್ವಹಿಸಲು ನೀಡುವ ನಿರ್ದಿಷ್ಟ ಸಂಕೇತ) ಫ್ರೀಜ್ ಆಗಿದ್ದರೆ ಅವುಗಳನ್ನು ಪುನಃ ಡಿಫ್ರೀಜ್ (ರದ್ದುಪಡಿಸಿರುವ ಆದೇಶವನ್ನು ಹಿಂಪಡೆಯುವ) ಮಾಡುವುದನ್ನು ತಡೆ ಹಿಡಿಯಲಾಗಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ 2010-11ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿ ಅನುದಾನದಡಿ ಜಾಬ್ ಕೋಡ್ ನೀಡಿರುವ 50,987 ಕಾಮಗಾರಿಗಳಿಗೆ ಐಎಫ್ ಎಂಎಸ್ ತಂತ್ರಾಂಶ (IFMS Software)ದಲ್ಲಿ ಕಾರ್ಯಾದೇಶ ಪತ್ರ (Work Order) ಪಡೆಯದೆ ಈತನಕ ಕೆಲಸಗಳನ್ನು ಆರಂಭ ಮಾಡದಿರುವುದನ್ನು ಪತ್ತೆಹಚ್ಚಲಾಗಿದೆ.
ಈ ಕಾಮಗಾರಿಗಳನ್ನು ಆಯಾ ವಲಯ ವ್ಯಾಪ್ತಿಯಲ್ಲಿರುವ ಸಂಬಂಧಿಸಿದ ಎಂಜಿನಿಯರ್ ಗಳು, ಐಎಫ್ಎಂಎಸ್ ತಂತ್ರಾಂಶದಲ್ಲಿ ಕಾರ್ಯಾದೇಶ ಪತ್ರ ನೀಡದೆ, ಭೌತಿಕವಾಗಿ ವರ್ಕ್ ಆರ್ಡರ್ ನೀಡಿದ್ದಲ್ಲಿ, ಅಂತಹ ಕಡತಗಳ ಮೂಲ ಜಾಬ್ ಕೋಡ್ ಪ್ರಮಾಣಪತ್ರ, ಟೆಂಡರ್ ದಾಖಲೆ, ಕಾರ್ಯಾದೇಶ, ಬಿಆರ್.ಸಂಖ್ಯೆ ಹಾಗೂ ಕಾಮಗಾರಿಯ ಛಾಯಾಚಿತ್ರಗಳನ್ನು ಒಳಗೊಂಡ ಭೌತಿಕ ಕಡತಗಳನ್ನು ಮಾ.15ರ ಸಂಜೆ 5.30ರ ಒಳಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಮುಖ್ಯ ಲೆಕ್ಕಾಧಿಕಾರಿಗಳ ವಿಭಾಗದಲ್ಲಿನ ಲೆಕ್ಕಾಧೀಕ್ಷಕರಿಗೆ ಸಲ್ಲಿಸುವಂತೆ ಗಡುವು ನೀಡಲಾಗಿದೆ.
ಒಂದೊಮ್ಮೆ ನೀಡಿರುವ ಡೆಡ್ ಲೈನ್ ಒಳಗಾಗಿ ಮಾಹಿತಿ ನೀಡದಿದ್ದರೆ ಐಎಫ್ ಎಂಎಸ್ ತಂತ್ರಾಂಶದಲ್ಲಿ ವರ್ಕ್ ಆರ್ಡರ್ ನಮೂದಿಸದೇ ಇರುವ ಕಾಮಗಾರಿಗಳನ್ನು, ಸಂಬಂಧಿಸಿದ ಜಾಬ್ ಸಂಖ್ಯೆಯಲ್ಲಿನ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಭಾವಿಸಿ ಆ ಜಾಬ್ ಕೋಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕುರಿತಂತೆ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಇದರಿಂದ ಲಂಚ ಪಡೆದುಕೊಂಡು ಜಾಬ್ ಕೋಡ್ ನೀಡಿದ ಅಧಿಕಾರಿಗಳ ದೇಹದಲ್ಲಿ ಕರೆಂಟ್ ಹೊಡೆದಂತಾಗಿದೆ. ಏಕೆಂದರೆ ಲಕ್ಷಾಂತರ ರೂಪಾಯಿ ಲಂಚ ನೀಡಿ ಜಾಬ್ ಕೋಡ್ ಪಡೆದುಕೊಂಡ ಗುತ್ತಿಗೆದಾರರು ಕಾಮಗಾರಿ ರದ್ದಾದರೆ ಸುಮ್ಮನಿರುತ್ತಾರೆಯೇ? ಎಂಬ ಪ್ರಶ್ನೆ ಉದ್ಭವಾಗುತ್ತದೆ.
ಪಾಲಿಕೆ ಕಾಂಟ್ರಾಕ್ಟರ್ ಗಳಿಗೆ ಹಣಕಾಸು ವಿಶೇಷ ಆಯುಕ್ತೆ ತುಳಸಿ ಗೇಮ್ ಪ್ಲಾನ್? :
ಬಿಬಿಎಂಪಿಯ ಸಾವಿರಾರು ಕೋಟಿ ರೂಪಾಯಿ ಬಾಕಿ ಬಿಲ್ ಜವಾಬ್ದಾರಿಯಿಂದ ಮುಕ್ತಿಪಡೆಯಲು ಬಿಬಿಎಂಪಿ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಹಳೆಯ ಜಾಬ್ ಕೋಡ್ ರದ್ದತಿಯ ಪ್ಲಾನ್ ಮಾಡಿದ್ದಾರೆಂದು ವಿಶ್ಲೇಷಿಸಲಾಗುತ್ತಿದೆ. ಮತ್ತೊಂದೆಡೆ ಗುತ್ತಿಗೆದಾರರು ತಮ್ಮ ವಿರುದ್ಧ ತೊಡೆತಟ್ಟಿ ಪ್ರತಿಭಟನೆ ಮಾಡಿ, ತಮಗೆ ಸಾರ್ವಜನಿಕ ವಲಯದಲ್ಲಿ ಇರಿಸುಮ-ಮುರಿಸು ಉಂಟುಮಾಡಿದ್ದಾರೆ. ಇದಕ್ಕೆ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಬಿಬಿಎಂಪಿಯ ಕಾಂಟ್ರಾಕ್ಟರ್ ಗಳ ವಿರುದ್ಧ ಜಾಬ್ ಕೋಡ್ ಪಡೆದು ಕಾರ್ಯಾದೇಶ ಪಡೆಯದ ಕಾಮಗಾರಿಗಳನ್ನು ರದ್ದು ಮಾಡುವ ಅಸ್ತ್ರ ಪ್ರಯೋಗಿಸಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಲಂಚ ನೀಡಿ ಗುತ್ತಿಗೆದಾರರು ಕಾಮಗಾರಿಗಳ ಜಾಬ್ ಕೋಡ್ ಪಡೆದುಕೊಂಡಿರುವಾಗ ಅವುಗಳನ್ನು ಆ ರೀತಿ ಏಕಾಏಕಿ ರದ್ದು ಮಾಡುವುದು ಅಷ್ಟು ಸುಲಭವಲ್ಲ ಎಂದು ಪಾಲಿಕೆ ಪಡಸಾಲೆಯಲ್ಲಿ ಮಾತುಗಳು ಕೇಳಿಬರುತ್ತಿದೆ.
ಬಿಬಿಎಂಪಿ ಗುತ್ತಿಗೆದಾರರ ಸಂಘ ಈ ಬಗ್ಗೆ ಏನನ್ನುತ್ತೆ? :
“ಕೆಲವು ಜನಪ್ರತಿನಿಧಿಗಳು, ಗುತ್ತಿಗೆದಾರರ ಬಳಿಯಿಂದ ಕಾರ್ಯಾದೇಶ ಪತ್ರವಿಲ್ಲದೆ ಕಾಮಗಾರಿಗಳನ್ನು ನಡೆಸಿದ್ದಾರೆ. ಕೆಲವು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಜಾಬ್ ಕೋಡ್ ಪಡೆದ ಕಾಮಗಾರಿಗಳಿಗೆ ಸೂಕ್ತ ರೀತಿಯಲ್ಲಿ ಕಾರ್ಯಾದೇಶ ಪತ್ರ ವಿತರಿಸದೆ ಮಾಡಿದ ಎಡವಟ್ಟಿನಿಂದಾಗಿ ಕಾಂಟ್ರಾಕ್ಟರ್ ಗಳು ಈಗ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಬಂದಿದೆ.”
– ಕೆ.ಟಿ.ಮಂಜುನಾಥ್, ಅಧ್ಯಕ್ಷರು, ಬಿಬಿಎಂಪಿ ಗುತ್ತಿಗೆದಾರರ ಸಂಘ
2022-23ನೇ ಸಾಲಿನ ಬಜೆಟ್ ತಯಾರಿಕೆಯಲ್ಲಿ ಹಿರಿಯ ಲೆಕ್ಕಾಧಿಕಾರಿಗಳನ್ನು ಹೊರಗಿಟ್ಟು ಆಯವ್ಯಯ ಸಿದ್ಧತೆ :
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಸ್ಥಿತ್ವಕ್ಕೆ ಬಂದ ನಂತರ ಬಹುಶಃ ಇದೇ ಮೊದಲ ಬಾರಿಗೆ ಬಿಬಿಎಂಪಿ ಹಿರಿಯ ಲೆಕ್ಕಾಧಿಕಾರಿಗಳನ್ನು ಹೊರಗಿಟ್ಟು ಪಾಲಿಕೆಯ 2022-23ನೇ ಸಾಲಿನ ಬಜೆಟ್ ಸಿದ್ಧಪಡಿಸಲಾಗುತ್ತಿದೆ. ಬಜೆಟ್ ಗೆ ಸಂಬಂಧಿಸಿದ ಒಂದಿಂಚು ಮಾಹಿತಿಯು ಎಲ್ಲೂ ಹೊರಗಡೆ ಸಿಗದಂತೆ ಹಣಕಾಸು ವಿಶೇಷ ಆಯುಕ್ತ ತುಳಸಿ ಮದ್ದಿನೇನಿ, ಸಾಕಷ್ಟು ಮುಂಜಾಗ್ರತೆ ವಹಿಸಿದ್ದಾರೆ ಎಂದು ಉನ್ನತ ಮೂಲಗಳು ಖಚಿತಪಡಿಸಿದೆ. ಇದೇ ರೀತಿ ಆಡಳಿತಾಧಿಕಾರಿಗಳ ಅವಧಿಯಾದ 2021-22ನೇ ಸಾಲಿನಲ್ಲಿ ಹಣಕಾಸು ಇಲಾಖೆ ವಿಶೇಷ ಆಯುಕ್ತರಾಗಿ ಮೊದಲ ಬಾರಿಗೆ ತುಳಿಸಿ ಮದ್ದಿನೇನಿ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡಿಸಿದ್ದಾಗಿ ಸಾರಿ ಸಾರಿ ಹೇಳಿದ್ದರು. ಆದರೆ 2021-22ನೇ ಅವಧಿಯಲ್ಲಿ ಕರೋನಾ ಎರಡನೇ ಅಲೆ ಕಾರಣಕ್ಕೆ ಬಜೆಟ್ ನಲ್ಲಿ ಮಂಡಿಸಿದ ಬಹುತೇಕ ಅಂಶಗಳು ಅನುಷ್ಠಾನಕ್ಕೆ ಬಂದಿಲ್ಲ. ಬಜೆಟ್ ನಲ್ಲಿ ಪ್ರಕಟಿಸಿದ ಶೇ.40- 45ರಷ್ಟು ಅಂಶಗಳನ್ನು ಕಾರ್ಯಗತವಾಗಿಲ್ಲ. ಈ ವಿಷಯವನ್ನು ಮರೆಮಾಚಲು ಹಳೆಯ ಜಾಬ್ ಕೋಡ್ ಕಾಮಗಾರಿಗಳ ರದ್ಧತಿ ಅಸ್ತ್ರ ಮುಂದಿಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ಸದ್ಯ 7,500 ಕೋಟಿ ರೂ. ಬಿಲ್ ಪಾವತಿಸುವ ಬಾಧ್ಯತೆಗೊಳಪಟ್ಟಿದೆ :
ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿ ಅನುದಾನದಡಿ ಕಾರ್ಯನಿರ್ವಹಿಸಿ ಬಿಲ್ ಸಲ್ಲಿಕೆ ಮಾಡಿದ ಗುತ್ತಿಗೆದಾರರಿಗೆ 3,500 ಕೋಟಿ ರೂ. ಮೊತ್ತ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿದೆ. ಅಲ್ಲದೆ ಕಳೆದ ಮೂರು ವರ್ಷದಿಂದ 4,000 ಕೋಟಿ ರೂ. ಮೌಲ್ಯದ ಜಾಬ್ ಕೋಡ್ ಗಳನ್ನು ನೀಡಿದ್ದು, ಅವುಗಳಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿದೆ. ಅವುಗಳ ಕಾರ್ಯನಿರ್ವಹಿಸಿದ ಕಾಂಟ್ರಾಕ್ಟರ್ ಗಳಿಗೂ ಹಣ ಪಾವತಿ ಮಾಡಬೇಕಿದೆ. ಒಟ್ಟಾರೆ 7,500 ಕೋಟಿ ರೂ. ಮೌಲ್ಯದ ಹಣವನ್ನು ಬಿಬಿಎಂಪಿಯು ನೀಡಬೇಕಿದೆ. ಇದರ ಜೊತೆಗೆ 2010-11ರಿಂದ 2017-18 ನೇ ಸಾಲಿನ ವರೆಗೆ ಜಾಬ್ ಕೋಡ್ ಪಡೆದು ಈತನಕ ಕಾಮಗಾರಿ ಆರಂಭಿಸದ 8,000 ಕೋಟಿ ರೂ. ಮೌಲ್ಯದ ಕಾಮಗಾರಿಗಳನ್ನು ರದ್ದುಪಡಿಸಿದರೆ, ಅಷ್ಟರ ಮಟ್ಟಿಗೆ ಪಾಲಿಕೆಯು ವಿತ್ತೀಯ ಹೊಣೆಗಾರಿಕೆಯಿಂದ ಮುಕ್ತಿ ಪಡೆದಂತಾಗುತ್ತದೆ ಎಂದು ಹಣಕಾಸು ವಿಭಾಗದ ಹಿರಿಯ ಅಧಿಕಾರಿಯೊಬ್ಬರು.
ಕಡಿಮೆ ಅವಧಿಯಲ್ಲಿ ವಿವರ ಸಲ್ಲಿಕೆ ಕಷ್ಟಸಾಧ್ಯ – ಅಧಿಕಾರಿಗಳ ಅಭಿಪ್ರಾಯ :
2010-11ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಬಿಬಿಎಂಪಿಯಲ್ಲಿ ಜಾಬ್ ಕೋಡ್ ಪಡೆದು ಐಎಫ್ ಎಂಎಸ್ ತಂತ್ರಾಂಶದಲ್ಲಿ ಕಾರ್ಯಾದೇಶ ಪತ್ರ ಪಡೆಯದೇ ಭೌತಿಕವಾಗಿ ಕಾರ್ಯಾದೇಶ ನೀಡಿರುವ ಕಾಮಗಾರಿಗಳ ಭೌತಿಕ ಕಡತಗಳನ್ನು ಮಾ.15ರ ಒಳಗಾಗಿ ಪರಿಶೀಲಿಸಿ ಸಲ್ಲಿಸಲು ಹಣಕಾಸು ವಿಭಾಗದ ವಿಶೇಷ ಆಯುಕ್ತರು ಕೇವಲ 10 ದಿನದ ಕಾಲಾವಕಾಶವನ್ನು ನೀಡಿದ್ದಾರೆ. ಹೀಗಾದರೆ ಕೇಂದ್ರ ಕಚೇರಿಗೆ ಇಷ್ಟು ಕಡಿಮೆ ಕಾಲಾವಧಿಯಲ್ಲಿ ಸಂಪೂರ್ಣ ಕಡತಗಳನ್ನು ಸಲ್ಲಿಸುವುದಾದರೂ ಹೇಗೆ ? ಜಾಬ್ ಕೋಡ್ ಪಡೆದು ಕಾರ್ಯಾದೇಶಪತ್ರ ಪಡೆಯದ ಕಾಮಗಾರಿಗಳನ್ನು ರದ್ದು ಮಾಡುವುದು ಇದರ ಹಿಂದಿನ ಉದ್ದೇಶ. ವಿಶೇಷ ಆಯುಕ್ತರ ಆಂತರಿಕ ಕಚೇರಿ ಟಿಪ್ಪಣಿ ಹೊರಡಿಸಿರುವುದು ಕಣ್ಣೊರೆಸುವ ತಂತ್ರವಷ್ಟೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿಯ ಹಿರಿಯ ಎಂಜಿನಿಯರ್ ಒಬ್ಬರು ಬೆಂಗಳೂರು ವೈರ್ ಗೆ ತಮ್ಮ ಅಸಹಾಯಕತೆಯನ್ನು ಹಂಚಿಕೊಂಡಿದ್ದಾರೆ.
ಹಿಂದಿನ ಆಡಳಿತಾಧಿಕಾರಿಗಳ ಅವಧಿಯಲ್ಲೂ ಹೀಗೆ ನಡೆದಿತ್ತು :
2015ನೇ ಇಸವಿಯಲ್ಲಿ ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಆಡಳಿತಾಧಿಕಾರಿಗಳಾಗಿ ತದನಂತರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಟಿ.ಎಂ.ವಿಜಯ್ ಭಾಸ್ಕರ್ ಈ ಹಿಂದೆ ಜಾಬ್ ಕೋಡ್ ಪಡೆದು ಹಲವು ವರ್ಷಗಳಾದರೂ ಕಾರ್ಯಾದೇಶಪತ್ರ ಪಡೆದು ಕಾಮಗಾರಿ ಆರಂಭಿಸದ ನೂರಾರು ಕೋಟಿ ರೂ. ಮೌಲ್ಯದ ಜಾಬ್ ಕೋಡ್ ಗಳನ್ನು ರದ್ದುಪಡಿಸಿ ಅಧಿಕಾರಿಗಳು ಹಾಗೂ ಲಾಭಿ ಮಾಡಿ ಜಾಬ್ ಕೋಡ್ ಪಡೆದ ಗುತ್ತಿಗೆದಾರರಲ್ಲಿ ನಡುಕ ಹುಟ್ಟಿಸಿದ್ದರು.
ಹಳೆಯ ಕಾಮಗಾರಿ ರದ್ದಾದರೆ ಮುಂಬರುವ ಟೆಂಡರ್ ನಲ್ಲಿ ಭಾಗವಹಿಸಲು ಕಾಂಟ್ರಾಕ್ಟರ್ ಗಳ ಹಿಂದೇಟು :
ಘನತ್ಯಾಜ್ಯ ವಿಲೇವಾರಿ, ರಸ್ತೆಗುಂಡಿ ಮುಚ್ಚುವಿಕೆ, ಗುಣಮಟ್ಟದ ಸಾರ್ವಜನಿಕ ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸದ ಕಾರಣಕ್ಕೆ ಪದೇ ಪದೇ ಹೈಕೋರ್ಟ್ ನಿಂದ ಚಾಟಿ ಬೀಸಿದರೂ ಈತನಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ ಜಾಬ್ ಕೋಡ್ ಪಡೆದು ಹಳೆಯ ಕಾಮಗಾರಿಗಳನ್ನು ರದ್ದುಪಡಿಸುವ ಕ್ರಮ ಕೈಗೊಂಡಲ್ಲಿ, ಪಾಲಿಕೆಯ ಅನುದಾನದಡಿ ಕಾರ್ಯನಿರ್ವಹಿಸುವ ಗುತ್ತಿಗೆದಾರರು, ಹೊಸ ಟೆಂಡರ್ ಕರೆದಾಗ ಆ ಕಾಮಗಾರಿಗಳಲ್ಲಿ ಭಾಗವಹಿಸಲು ಹಿಂದೇಟು ಹಾಕಿದರೆ, ನಗರದ ಅಭಿವೃದ್ಧಿ ಕಾಮಗಾರಿಗಳು ಅಷ್ಟರ ಮಟ್ಟಿಗೆ ಹಿಂದುಳಿಯುವ ಸಾಧ್ಯತೆಯಿದೆ. ಈ ವಿಷಯದಲ್ಲಿ ಬಿಬಿಎಂಪಿಯು ಜಾಣನಡೆ ಅನುಸರಿಸಿದರೆ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬಿಬಿಎಂಪಿಗೂ ಬಂತು ವಿತ್ತೀಯ ಹೊಣೆಗಾರಿಕೆ ನಿಯಮ :
ದೇಶದಲ್ಲೇ ಮೊದಲ ಬಾರಿಗೆ ನಗರ ಸ್ಥಳೀಯ ಸಂಸ್ಥೆಯಾದ ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ನಿಯಮಗಳನ್ನು ಗುರುವಾರದಿಂದ ಅನ್ವಯವಾಗುವಂತೆ ಜಾರಿಗೆ ತಂದಿದೆ. “ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ-2003” ಅನ್ನು ಜಾರಿಗೆ ತರುವಂತೆ ಈ ಗುರುವಾರವಷ್ಟೆ ರಾಜ್ಯ ಹಣಕಾಸು ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಅನುಗುಣವಾಗಿ, ‘ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ) ನಿಯಮಗಳು 2021’ ಅನ್ನು ರೂಪಿಸಲಾಗಿದ್ದು, ಈ ನಿಯಮವೂ ಮಾ.10ರಿಂದಲೇ ಜಾರಿಗೆ ಬಂದಿದೆ.
ಬೇಕಾಬಿಟ್ಟಿ ಬಜೆಟ್ ತಯಾರಿಕೆ ಇನ್ನು ಮುಂದೆ ಸಾಧ್ಯವಿಲ್ಲ :
ಹೀಗಾಗಿ ಇನ್ನು ಮುಂದೆ ಬಿಬಿಎಂಪಿಯು ಬೇಕಾಬಿಟ್ಟಿ ಬಜೆಟ್ ಅನ್ನು ಮಂಡಿಸುವುದಾಗಲಿ, ಹಣಕಾಸು ನಿರ್ವಹಣೆ ಮಾಡುವುದಾಗಲಿ ಸಾಧ್ಯವಿಲ್ಲ. ಪಾಲಿಕೆಯು ಬಜೆಟ್ ರೂಪಿಸುವಾಗ ಈ ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ. ಸಂಯುಕ್ತ ವಾರ್ಷಿಕ ಅಭಿವೃದ್ಧಿ ದರದ (CAGR – ನಿರ್ದಿಷ್ಟ ಅವಧಿಯ (ಮೂರು ಅಥವಾ ನಾಲ್ಕು ವರ್ಷ) ಪಾಲಿಕೆಯ ಅಭಿವೃದ್ಧಿ ದರಗಳ ಸರಾಸರಿಯೇ ಸಿಎಜಿಆರ್ ಆಗಿದೆ) ಆಧಾರದಲ್ಲೇ ಪಾಲಿಕೆಯು ಬಜೆಟ್ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ. ಬಜೆಟ್ ತಯಾರಿಗೆ ಹಣಕಾಸು ನಿರ್ವಹಣಾ ತತ್ವಗಳನ್ನು ಈ ನಿಯಮಗಳಲ್ಲಿ ರೂಪಿಸಲಾಗಿದೆ. ಇದರಂತೆ ಬಜೆಟ್ ವಿತ್ತೀಯ ಕೊರತೆಯು ಬಜೆಟ್ ಗಾತ್ರದ ಶೇ.3ರಷ್ಟನ್ನು ಮೀರುವಂತಿಲ್ಲ ಹಾಗೂ ವರಮಾನ ಕೊರತೆ ಇಲ್ಲದಂತೆ ಕ್ರಮ ಕೈಗೊಳ್ಳಲು ಬಿಬಿಎಂಪಿಯು ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ. ಪಾಲಿಕೆಯ ಹಣಕಾಸು ಸ್ಥಿತಿಗತಿಗಳನ್ನು ಅವಲೋಕಿಸುವುದಕ್ಕೆ ಸೂಚ್ಯಂಕ ರೂಪಿಸುವಿಕೆ, ಮಧ್ಯಮಾವಧಿ ವಿತ್ತೀಯ ಯೋಜನೆ ರೂಪಿಸುವುದನ್ನು ಕಡ್ಡಾಯ ಮಾಡಲಾಗಿದೆ.