ಬೆಂಗಳೂರು, (www.bengaluruwire.com) : ಯುದ್ಧದಾಹಿ ರಷ್ಯಾ ದಾಳಿಯಿಂದ ತತ್ತರಿಸಿರುವ ಉಕ್ರೇನ್ ನಲ್ಲಿ ಭಾರತೀಯರು ಸಿಲುಕಿಕೊಂಡಿದ್ದು, ಅವರನ್ನು ಸ್ವದೇಶಕ್ಕೆ ಉಕ್ರೇನ್ ಗಡಿಭಾಗದ ರಾಷ್ಟ್ರಗಳಿಂದ ಸ್ಥಳಾಂತರಿಸುವ “ಆಪರೇಷನ್ ಗಂಗಾ” ಈಗಾಗಲೇ ಚಾಲನೆ ಸಿಕ್ಕಿದ್ದು, ಕರ್ನಾಟಕ ಮೂಲದ 30 ವಿದ್ಯಾರ್ಥಿಗಳನ್ನು ದೇಶ ತಲುಪಿದ್ದಾರೆ. ಆ ಪೈಕಿ ಬಾಂಬೆಯಿಂದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIAL)ಕ್ಕೆ ಮೊದಲ ಬ್ಯಾಚ್ ನಲ್ಲಿ 12 ವಿದ್ಯಾರ್ಥಿಗಳಿಂದು ಬೆಳಗ್ಗೆ ಬಂದಿಳಿದರು.
ಕೇಂದ್ರ ಸಂಸದೀಯ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ಕಂದಾಯ ಸಚಿವ ಆರ್.ಅಶೋಕ್. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA)ದ ಆಯುಕ್ತ ಹಾಗೂ ನೋಡೆಲ್ ಆಫೀಸರ್ ಮನೋಜ್ ರಾಜನ್, ಈ ವಿದ್ಯಾರ್ಥಿಗಳನ್ನು ಭರಮಾಡಿಕೊಂಡರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರು ಸುರಕ್ಷಿತವಾಗಿ ಬೆಂಗಳೂರಿಗೆ ಬಂದ ತಮ್ಮ ಮಕ್ಕಳನ್ನು ಕಂಡು ಸಂತಸಗೊಂಡರು. ಅಲ್ಲದೆ ಏರ್ ಪೋರ್ಟ್ ನಲ್ಲಿಯೇ ಸಚಿವರೊಂದಿಗೆ ರಾಷ್ಟ್ರಧ್ವಜ ಹಿಡಿದು ಫೊಟೋ ಕ್ಲಿಕ್ಕಿಸಿಕೊಂಡರು.
ಉಕ್ರೇನ್ ರಾಷ್ಟ್ರದಿಂದ ದೆಹಲಿ, ಬಾಂಬೆಗೆ ಬರುವ ಕರ್ನಾಟಕದ ವಿದ್ಯಾರ್ಥಿಗಳನ್ನು ರಾಜ್ಯ ಸರ್ಕಾರವೇ ತನ್ನ ಸ್ವಂತ ಕರ್ಚಿನಲ್ಲಿ ಬೆಂಗಳೂರಿಗೆ ವಿಮಾನ ಬುಕ್ ಮಾಡಿ, ವಿದ್ಯಾರ್ಥಿಗಳನ್ನು ಕೆರತರಲು ವ್ಯವಸ್ಥೆ ಮಾಡಿದೆ. ಇದಲ್ಲದೆ ಉಕ್ರೇನ್ ನಲ್ಲಿರುವ ಉಳಿದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ಕೆಎಸ್ ಡಿಎಂಎ ನೋಡಲ್ ಆಫೀಸರ್ ಮನೋಜ್ ರಾಜನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎರಡನೇ ಬ್ಯಾಚ್ ನಲ್ಲಿ ಒಟ್ಟು 13 ವಿದ್ಯಾರ್ಥಿಗಳು ದೆಹಲಿಯಿಂದ ಇಂದು ರಾತ್ರಿ 9.50ಕ್ಕೆ ಇಂಡಿಗೋ ವಿಮಾನದಲ್ಲಿ ಹೊರಟು ಮಧ್ಯರಾತ್ರಿ 1.25ಕ್ಕೆ ಬೆಂಗಳೂರು ಏರ್ ಪೋರ್ಟ್ ತಲುಪಲಿದ್ದಾರೆ. ಮೂರನೇ ಬ್ಯಾಚ್ ನಲ್ಲಿ ಐವರು ವಿದ್ಯಾರ್ಥಿಗಳು ಸಂಜೆ 5.35ಕ್ಕೆ ವಿಸ್ತಾರ ವಿಮಾನದಲ್ಲಿ ದೆಹಲಿಯನ್ನು ಬಿಟ್ಟು ರಾತ್ರಿ 8.25ಕ್ಕೆ ಬೆಂಗಳೂರಿಗೆ ಆಗಮಿಸುವರು. ಒಟ್ಟಾರೆ ಭಾನುವಾರ 30 ವಿದ್ಯಾರ್ಥಿಗಳು ಬೆಂಗಳೂರಿಗರಿಗೆ ಬಂದಂತಾಗಲಿದೆ ಎಂದು ಅವರು ಹೇಳಿದ್ದಾರೆ.
ಕೆಎಸ್ ಡಿಎಂಎ ಪ್ರಾರಂಭಿಸಿರುವ ವೆಬ್ ಪೋರ್ಟಲ್ ನಲ್ಲಿ ಫೆ.27ರ ತನಕ ಒಟ್ಟಾರೆ 400 ಮಂದಿ ಉಕ್ರೇನ್ ನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉಕ್ರೇನ್ ನಿಂದ ದೆಹಲಿಗೆ ಬಂದಿಳಿಯುವ ಕನ್ನಡಿಗರನ್ನು ರಾಜ್ಯಕ್ಕೆ ಕರತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದೆಹಲಿ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (Indira Gandhi International Airport – IGI) ದಲ್ಲಿ ಸಹಾಯ ಕೇಂದ್ರವನ್ನು ತೆರೆದಿದೆ. ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ದೆಹಲಿ ಐಜಿಐ ಏರ್ ಪೋರ್ಟ್ ಗೆ ಬಂದಾಗ ಈ ಕೆಳಕಂಡ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೆಹಲಿಯ ಕರ್ನಾಟಕ ಭವನದಲ್ಲಿರುವ ಸ್ಥಾನಿಕ ಆಯುಕ್ತರ ಕಚೇರಿಯಲ್ಲಿರುವ ಸಹಾಯ ಕೇಂದ್ರದಲ್ಲಿನ ಅಧಿಕಾರಿಗಳ ವಿವರ ಈ ಕೆಳಕಂಡಂತಿದೆ :
- ಅನಂತ, ವ್ಯವಸ್ಥಾಪಕ (9205593129), O/O, ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ
- ವೆಂಕಟೇಶ, ವ್ಯವಸ್ಥಾಪಕ (9818464249), O/O ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ
- ಜಗದೀಶ, ವ್ಯವಸ್ಥಾಪಕ (9205593126), O/O ಸ್ಥಾನಿಕ ಆಯುಕ್ತರು, ಕರ್ನಾಟಕ ಭವನ