ಬೆಂಗಳೂರು, (www.benglauruwire.com) : ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (KUWJ)
2022-2025ನೇ ಸಾಲಿನ ಚುನಾವಣೆಯಲ್ಲಿ ಹನ್ನೆರಡು ಜಿಲ್ಲೆಗಳಿಗೆ ಪೂರ್ಣ ಅವಿರೋಧ ಆಯ್ಕೆಯಾಗಿರುವುದು ಹೊಸ ದಾಖಲೆ ಸೃಷ್ಟಿಸಿದೆ. ಇನ್ನೊಂದೆಡೆ 19 ಜಿಲ್ಲೆಗಳಿಗೆ ನಡೆದ ಚುನಾವಣೆಯಲ್ಲಿ ಬೆಂಗಳೂರು ಹೊರತುಪಡಿಸಿ ಬಹುತೇಕ ಜಿಲ್ಲೆಗಳಲ್ಲಿ ಶೇ.98ರಷ್ಟು ಮತದಾನವಾಗಿರುವ ಮಾಹಿತಿ ಲಭ್ಯವಾಗಿದೆ.
ಕೆಯು ಡಬ್ಲ್ಯುಜೆ ಅಧ್ಯಕ್ಷ ಶಿವಾನಂದ ತಗಡೂರು ಅವರ ತವರು ಜಿಲ್ಲೆ ಹಾಸನ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಬಾಗಲಕೋಟೆ, ಚಿಕ್ಕಮಗಳೂರು, ಬಳ್ಳಾರಿ ಜಿಲ್ಲಾ ಘಟಕಗಳಿಗೆ ಅವಿರೋಧ ಆಯ್ಕೆಯಾಗಿದೆ. ಇನ್ನುಳಿದ 19 ಜಿಲ್ಲೆಗಳ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಚುನಾವಣೆ ಭಾನುವಾರ ಸಾಂಗವಾಗಿ ನಡೆಯಿತು.
ರಾಜ್ಯ ಘಟಕದ ಪದಾಧಿಕಾರಿಗಳ ಕೆಲ ಹುದ್ದೆಗಳಿಗೆ ಅವಿರೋಧ ಆಯ್ಕೆ :
ರಾಜ್ಯ ಘಟಕದ 9 ಪದಾಧಿಕಾರಿಗಳ ಹುದ್ದೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸ್ಥಾನಗಳಿಗೆ ಮತ್ತಿಕೆರೆ ಜಯರಾಂ, ನಿಂಗಪ್ಪ ಚಾವಡಿ, ಸೋಮಶೇಖರ ಕೆರಗೋಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರಾಜ್ಯ ಸಂಘದ ಉಪಾಧ್ಯಕ್ಷ ಮೂರು ಹುದ್ದೆಗಳಿಗೆ ಮಾತ್ರ ಚುನಾವಣೆ ನಡೆಯುತ್ತಿದ್ದು, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ, ಪುಂಡಲೀಕ ಬಿ ಬಾಳೋಜಿ ಹಾಗೂ ಬಂಗ್ಲೆ ಮಲ್ಲಿಕಾರ್ಜುನ ಸ್ಪರ್ಧಾ ಕಣದಲ್ಲಿದ್ದರು.
ಬೆಂಗಳೂರಿನಲ್ಲಿ ನೀರಸ ಮತದಾನ :
ಭಾನುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆ ತನಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೆಯು ಡಬ್ಲ್ಯುಜೆ ಪತ್ರಕರ್ತರ ಸಂಘಟನೆಯಲ್ಲಿ ರಾಜ್ಯದಾದ್ಯಂತ ಒಟ್ಟು 7,264 ಸದಸ್ಯರಿದ್ದಾರೆ. ಆ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ 448 ಮತದಾರರಿದ್ದಾರೆ. ಬೆಂಗಳೂರು ನಗರ ಜಿಲ್ಲೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ ಹಾಗೂ ವೀರೇಶ್ ನಡುವೆ ತುರಸಿನ ಸ್ಪರ್ಧೆ ಏರ್ಪಟ್ಟಿತ್ತು. ರಾಜಧಾನಿಯಲ್ಲಿ ಶೇ.56ರಷ್ಟು ಮಾತ್ರ ಮತದಾನವಾಗಿತ್ತು. ಐಡಿಕಾರ್ಡ್ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವುದು ಮತ್ತಿತರ ಗೊಂದಲದಿಂದಾಗಿ ಮತದಾನ ಪ್ರಮಾಣ ಕಡಿಮೆಯಾಗಿತ್ತು.
ಭಾನುವಾರದಂದೇ ಮತ ಎಣಿಕೆ :
ಚುನಾವಣೆ ಮುಗಿಯುತ್ತಿದ್ದಂತೆ ಇಂದೇ ಆಯಾ ಜಿಲ್ಲಾ ಘಟಕಗಳಲ್ಲಿ ಮತ ಎಣಿಕೆ ನಡೆಯಲಿದೆ. ಆದರೆ ಕೋರ್ಟ್ ನ ಗಮನಕ್ಕೆ ತಂದು ಅಲ್ಲಿ ಒಪ್ಪಿಗೆ ಪಡೆದ ಬಳಿಕವಷ್ಟೆ ಫಲಿತಾಂಶ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣಾಧಿಕಾರಿಗಳು ಯಾರಿದ್ದರು? :ವ
ಕೆಯುಡಬ್ಲ್ಯೂಜೆ ಚುನಾವಣೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಿ ಸು.ತ.ರಾಮೇಗೌಡ, ರಾಜ್ಯ ಸಹಾಯಕ ಚುನಾವಣಾಧಿಕಾರಿಯಾಗಿ ಎನ್.ರವಿಕುಮಾರ್ ಕಾರ್ಯನಿರ್ವಹಿದರು. ಪ್ರತಿ ಜಿಲ್ಲೆಯಲ್ಲಿಯೂ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿ ಅವರು ಚುನಾವಣೆ ನಡೆಸಿದ್ದಾರೆ. ರಾಜ್ಯ ಕಾರ್ಮಿಕ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲೂ ಉಸ್ತುವಾರಿಯನ್ನು ನೇಮಿಸಲಾಗಿತ್ತು. ಚುನಾವಣೆ ಘೋಷಣೆ ಮಾಡಿದ ಫೆ.7 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಫೆ.28ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಜಾರಿಯಲ್ಲಿರುತ್ತದೆ.