ಬೆಂಗಳೂರು, (www.bengaluruwire.com) : ಕರ್ನಾಟಕ ಮತ್ತು ಕೇರಳದಲ್ಲಿ ಬ್ರಿಟನನ್ನು ಪ್ರತಿನಿಧಿಸುವ ನೂತನ ಉಪ ರಾಯಭಾರಿ (British Deputy High Commissioner)ಯಾಗಿ ಅನಾ ಶಾಟ್ ಬೋಲ್ಟ್ (Anna Shotbolt) ಗುರುವಾರ ಇಲ್ಲಿ ಅಧಿಕಾರ ಸ್ವೀಕರಿಸಿದರು. ಅನಾ ಶಾಟ್ ಬೋಲ್ಟ್ ಪ್ರಸ್ತುತ ದಕ್ಷಿಣ ಏಷ್ಯಾದ ಹೂಡಿಕೆ ಮತ್ತು ವ್ಯಾಪಾರದ ಉಪ ರಾಯಭಾರಿ (Deputy Trade Commissioner Investment ) ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಎರಡು ಹುದ್ದೆಗಳನ್ನು ಒಬ್ಬರೇ ವಹಿಸಿಕೊಂಡಿರುವುದು, ಭಾರತ- ಯುಕೆ ನಡುವಿನ ಹೂಡಿಕೆ ಮತ್ತು ವ್ಯಾಪಾರ ದ್ವಿಪಕ್ಷೀಯ ಸಂಬಂಧದಲ್ಲಿ ಬೆಂಗಳೂರು ಹಾಗೂ ದಕ್ಷಿಣ ಭಾರತಕ್ಕೆ ಹೆಚ್ಚುತ್ತಿರುವ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂದು ಬ್ರಿಟೀಷ್ ರಾಯಭಾರ ಕಚೇರಿಯ ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅನಾ ಶಾಟ್ ಬೋಲ್ಟ್ ಬ್ರಿಟನ್ ಉಪ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ಜರ್ಮಿ ಪಿಲ್ಮೋರೆ- ಬೆಡ್ಫೋರ್ಡ್ (Jeremy Pilmore-Bedford) ಈ ಹುದ್ದೆಯನ್ನು ನಿಭಾಯಿಸಿದ್ದರು.
ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿರುವ ಅನಾ ಶಾಟ್ ಬೋಲ್ಟ್, ಕರ್ನಾಟಕ, ಕೇರಳ ಹಾಗೂ ಯುಕೆ ನಡುವೆ ಸರ್ಕಾರ ಮತ್ತು ಸರ್ಕಾರಗಳ ನಡುವೆ ಪಾಲುದಾರಿಕೆ, ಉದ್ಯಮ ಮತ್ತು ವ್ಯಾಪಾರಗಳಿಗೆ ಪ್ರೋತ್ಸಾಹ ನೀಡುವುದು, ಜನರ ನಡುವೆ ಉತ್ತಮ ಸಂಬಂಧಗಳನ್ನು ಬಲಪಡಿಸುವುದು ಸೇರಿದಂತೆ ಮತ್ತಿತರ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಬೆಂಗಳೂರಿನಲ್ಲಿ ಬ್ರಿಟನ್ ಅನ್ನು ಪ್ರತಿನಿಧಿಸಲು ಇದಕ್ಕಿಂತ ಒಳ್ಳೆಯ ಸಮಯ ಇಲ್ಲ. ಭಾರತ ಮತ್ತು ಬ್ರಿಟನ್ ಸಂಬಂಧಗಳು ಇತಿಹಾಸ, ಮೌಲ್ಯ ಮತ್ತು ಸಂಸ್ಕೃತಿಗಳ ಹಂಚಿಕೆಯಿಂದ ಗಟ್ಟಿಯಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವಿನ ಪಾಲುದಾರಿಕೆಯನ್ನು ಕೊಂಡೊಯ್ಯುತ್ತೇನೆ. ಸರ್ಕಾರ, ಕೈಗಾರಿಕೆ, ನಾಗರೀಕ ಸಮಾಜದ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸುವುದು, ಪಾಲುದಾರಿಕೆ ಕಾಯ್ದುಕೊಳ್ಳುವುದು ತಮ್ಮ ಆದ್ಯತೆಯಾಗಿದೆ” ಎಂದು ನೂತನ ಬ್ರಿಟಿಷ್ ಡೆಪ್ಯುಟಿ ಹೈ ಕಮಿಷನರ್ ಅನಾ ಶಾಟ್ ಬೋಲ್ಟ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಅಧಿಕಾರ ಸ್ವೀಕರಿಸುವ ಮುನ್ನ ಲಂಡನ್ ನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದ್ದ ಬೆಂಗಳೂರು ಮೂಲದ ಎಂಟಿಆರ್ ಹೋಟೆಲ್ ಗೆ ತರಳಿ ಸ್ವಾದಿಷ್ಟವಾದ ಗರಿಗರಿಯಾದ ಮಸಾಲೆ ದೋಸೆಯನ್ನು ಸವಿದಿದ್ದರು. ಇದರ ಫೊಟೊಗಳನ್ನು ಯುಕೆ ಬೆಂಗಳೂರು ರಾಯಭಾರ ಕಚೇರಿ ತನ್ನ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.