ಬೆಂಗಳೂರು, (www.bengaluruwire.com) : ಸೇನಾಪಡೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ (Chief of the Army Staff, General M M Naravane) ಸೇನಾಪಡೆಯಲ್ಲಿ ಅತ್ಯಂತ ಅಸಾಧಾರಣ ಸೇವೆ ಸಲ್ಲಿಸಿದ ಮಿಲಿಟರಿ ಘಟಕಗಳಿಗೆ ನೀಡುವ “ಪ್ರೆಸಿಡೆಂಟ್ಸ್ ಕರ್ಲರ್ಸ್” (President’s Colours) ಅಥವಾ “ನಿಶಾನ್” (Nishan) ಎಂದು ಹೆಚ್ಚು ಜನಜನಿತವಾಗಿರುವ ಪ್ರತಿಷ್ಠಿತ ನಾಲ್ಕು ಪ್ರಶಸ್ತಿಯನ್ನು ಪ್ಯಾರಾಚ್ಯೂಟ್ ರೆಜಿಮೆಂಟಿನ (Parachute Regiment) 11 ಪ್ಯಾರಾ (ಎಸ್ ಎಫ್), 21 ಪ್ಯಾರಾ (ಎಸ್ಎಫ್), 23 ಪ್ಯಾರಾ ಹಾಗೂ 29 ಪ್ಯಾರಾ ಎಂಬ ನಾಲ್ಕು ಬೆಟಾಲಿಯನ್ ಗಳಿಗೆ ಬುಧವಾರ ಹಸ್ತಾಂತರಿಸಿದರು.
ಪ್ಯಾರಾಚ್ಯೂಟ್ ರೆಜಿಮೆಂಟ್ ನ ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ನಡೆದ ಆಕರ್ಷಕ ಪಥಸಂಚಲನವನ್ನು ಸೇನಾಪಡೆ ಮುಖ್ಯಸ್ಥ ಎಂ.ಎಂ.ನರವಣೆ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಎಂ.ಎಂ.ನರವಣೆ, ಪ್ಯಾರಾಚ್ಯೂಟ್ ರೆಜಿಮೆಂಟ್ ದೇಶದ ಯುದ್ಧದ ಸಂದರ್ಭ ಹಾಗೂ ಶಾಂತಿ ಪರಿಸ್ಥಿತಿಯಲ್ಲಿ ತೋರಿದ ಅಪ್ರತಿಮ ದೇಶಭಕ್ತಿ, ಅಸಾಧಾರಣ ಸೇವೆಯನ್ನು ಅವರು ಕೊಂಡಾಡಿದರು. ಇತ್ತೀಚೆಗೆ ಸೇನೆಗೆ ಸೇರ್ಪಡೆಗೊಂಡ ಘಟಕದಲ್ಲಿನ ಯೋಧರು ಆರಂಭದಲ್ಲಿ ಅತ್ಯುತ್ತಮ ಸಾಮರ್ಥ್ಯ ತೋರಿಸುತ್ತಿದ್ದು, ಇದೇ ರೀತಿ ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸುವಂತೆ ಕರೆನೀಡಿದರು.
ಇದೇ ವೇಳೆ 4 ಬೆಟಾಲಿಯನ್ ನ ಎಲ್ಲಾ ರ್ಯಾಂಕ್ ನಲ್ಲಿರುವ ಸೇನಾಧಿಕಾರಿಗಳು ಹಾಗೂ ಅವರ ಕುಟುಂಬಗಳಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಆಧುನಿಕ ಹಾಗೂ ವೃತ್ತಿಪರ ಭಾರತೀ ಸೇನೆ ಭವಿಷ್ಯದಲ್ಲಿ ದೇಶಕ್ಕೆ ಎದುರಾಗುವ ಯಾವುದೇ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಸದಾ ಸಿದ್ಧರಾಗಿರಬೇಕು ಎಂದು ಸೂಚಿಸಿದರು.
ಪ್ಯಾರಾಚ್ಯೂಟ್ ರೆಜಿಮೆಂಟ್ ಪಾಲಿಗೆ ನೂರಾರು ಪ್ರಶಸ್ತಿಗಳ ಗರಿ :
ಭಾರತೀಯ ಸೇನೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ಯಾರಚ್ಯೂಟ್ ರೆಜಿಮೆಂಟ್ ಈತನಕ 8 ಅಶೋಕ ಚಕ್ರ, 14 ಮಹಾವೀರ ಚಕ್ರ, 22 ಕೀರ್ತಿ ಚಕ್ರ, 63 ವೀರ ಚಕ್ರ, 116 ಶೌರ್ಯ ಚಕ್ರ ಹಾಗೂ 601 ಸೇನಾ ಪದಕವನ್ನು ಪಡೆದುಕೊಂಡಿದೆ. ಅಲ್ಲದೆ ನೂರಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
“ಪ್ರೆಸಿಡೆಂಟ್ಸ್ ಕರ್ಲರ್ಸ್” ಪಥಸಂಚಲನ ಕಾರ್ಯಕ್ರಮದಲ್ಲಿ ಸೇನಾಪಡೆಯ ಹಲವು ಸೇನಾಧಿಕಾರಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ನಾಲ್ಕು ಬೆಟಾಲಿಯನ್ ಗಳಿಂದ ಆಕರ್ಷಕ ಪಥಸಂಚಲನ, ಅಲ್ಲಿ ನೆರದಿದ್ದವರನ್ನು ಸೂಚಿಗಲ್ಲಿನಂತೆ ಸೆಳೆದಿತ್ತು.
ಏನಿದು “ಪ್ರೆಸಿಡೆಂಟ್ಸ್ ಕರ್ಲರ್ಸ್” ಪ್ರಶಸ್ತಿ?
“ಪ್ರೆಸಿಡೆಂಟ್ಸ್ ಕರ್ಲರ್ಸ್” ಎಂಬುದು ಸೇನಾಪಡೆಯಲ್ಲಿ ನೀಡುವ ಅತಿದೊಡ್ಡ ಪ್ರಶಸ್ತಿಯಾಗಿದೆ. ದೇಶದ ಯುದ್ಧ ಪರಿಸ್ಥಿತಿಯಲ್ಲಿ ಹಾಗೂ ಶಾಂತಿ ಸಂದರ್ಭದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ “ಪ್ರೆಸಿಡೆಂಟ್ಸ್ ಕರ್ಲರ್ಸ್” ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರದಾನ ಮಾಡುವರು. ಈ ಬಾರಿ ಸೇನಾಪಡೆ ಮುಖ್ಯಸ್ಥರ ಮೂಲಕ ಈ ಪ್ರಶಸ್ತಿಯನ್ನು ಪ್ಯಾರಾಚ್ಯೂಟ್ ರೆಜಿಮೆಂಟಿನ ನಾಲ್ಕು ಬೆಟಾಲಿಯನ್ ಗಳಿಗೆ ನೀಡಲಾಗಿದೆ.