ಬೆಂಗಳೂರು, (www.bengaluruwire.com) : ಸಿಲಿಕಾನ್ ಸಿಟಿ ಬೆಂಗಳೂರಿನ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯು ಜನಾಗ್ರಹ ಪ್ರತಿಷ್ಠಾನದ (Janagraha Foundation) ಸಹಯೋಗದೊಂದಿಗೆ 2022-23ನೇ ಸಾಲಿನ ಬಜೆಟ್ ಗಾಗಿ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯುವ ‘ನನ್ನ ನಗರ ನನ್ನ ಬಜೆಟ್’ (My City My Budget) ಅಭಿಯಾನಕ್ಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಚಾಲನೆ ನೀಡಿದರು.
ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ರವರು ಮಾತನಾಡಿ, ಜನಾಗ್ರಹ ಪ್ರತಿಷ್ಠಾನದ ಮೂಲಕ ‘ನನ್ನ ನಗರ ನನ್ನ ಬಜೆಟ್’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. 2015 ರಿಂದಲೂ ಅಭಿಯಾನವನ್ನು ನಡೆಸಿಕೊಂಡು ಬರುತ್ತಿದ್ದು, ಆ ಮೂಲಕ ನಗರದ ಬಜೆಟ್ ನಲ್ಲಿ ಜನರು ಭಾಗವಹಿಸುವಂತೆ ಮಾಡುವುದು ಇದರ ಉದ್ದೇಶವಾಗಿದೆ. ಈ ಬಾರಿ ವಿಶೇಷವಾಗಿ ಉದ್ಯಾನವನ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಾಗರಿಕರ ಪ್ರತಿಕ್ರಿಯೆ ಪಡೆಯಲಿದ್ದೇವೆ ಎಂದು ಅವರು ಹೇಳಿದರು.
“ಮೈ ಸಿಟಿ ಮೈ ಬಜೆಟ್” ವಾಹನವು ಎಲ್ಲಾ ವಾರ್ಡ್ ಗಳಿಗೆ ತೆರಳಿ ನಾಗರಿಕರಿಂದ ಸಲಹೆಗಳನ್ನು ಸಂಗ್ರಹಿಸಲಿದೆ. ಕಳೆದ ಬಾರಿ ಪಾದಚಾರಿ ಮಾರ್ಗ ಮತ್ತು ಯೆಲ್ಲೋ ಸ್ಪಾಟ್(ತೆರೆದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ) ಬಗ್ಗೆ ಗಮನ ಹರಿಸಲಾಗಿತ್ತು. ಈ ಬಾರಿ ಉದ್ಯಾನವನ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಶೌಚಾಲಯಗಳ ಬಗ್ಗೆ ನಾಗರಿಕರ ಸಲಹೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದರು.
ಇಂತಹ ಕಾರ್ಯಕ್ರಮ ಸಕ್ರಿಯವಾಗಿ ನಡೆಯಲಿ. ಇತರ ದೊಡ್ಡ ದೊಡ್ಡ ಮಹಾನಗರಗಳಿಗೆ ಹೋಲಿಸಿದಲ್ಲಿ ಇಂತಹ ಅಭಿಯಾನಗಳ ಪಾಲ್ಗೊಳ್ಳುವಿಕೆಯಲ್ಲಿ ಬೆಂಗಳೂರು ಸಾಕಷ್ಟು ಮುಂದಿದೆ. ನಗರದಲ್ಲಿ ವಾರ್ಡ್ ಸಮಿತಿಗಳು ಕೂಡ ಸಕ್ರಿಯವಾಗಿ ನಡೆಯುತ್ತಿದ್ದು, ಕಳೆದ ವರ್ಷದ ಆಯವ್ಯಯದಲ್ಲಿ ಪ್ರತಿ ವಾರ್ಡ್ ಗೆ 60 ಲಕ್ಷ ರೂ. ಅನುದಾನವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿತ್ತು. ಇದನ್ನು ಮುಂದುವರಿಸಿಕೊಂಡು ಹೋಗುವ ಆವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಮೈ ಸಿಟಿ ಮೈ ಬಜೆಟ್ ಅಭಿಯಾನವು ವಿವಿಧ ಸರ್ಕಾರೇತರ ಸಂಘಟನೆಗಳು (NGO) ಹಾಗೂ ನಾಗರೀಕ ಕ್ಷೇಮಾಭಿವೃದ್ಧಿ ಸಂಘಟನೆ (RWA) ಸೇರಿದಂತೆ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಮಾರ್ಚ್ 15 ರವರೆಗೆ ನಡೆಯಲಿದೆ. ಬಜೆಟ್ ವಾಹನವು ನಗರದ ಎಲ್ಲಾ ವಾರ್ಡ್ ಗಳಲ್ಲಿ ಸಂಚರಿಸಿ ನಾಗರಿಕರಿಂದ ಸಲಹೆಗಳನ್ನು ಸಂಗ್ರಹಿಸಲಿದೆ. ಇದಲ್ಲದೆ ವೆಬ್‌ಸೈಟ್ http://mycitymybudget.in/ ಗೆ ನಾಗರಿಕರು ಭೇಟಿ ನೀಡಿ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಜನಾಗ್ರಹ ಸಂಸ್ಥೆಯ ಶ್ರೀನಿವಾಸ್ ಅಲವಿಲ್ಲಿ ಸೇರಿದಂತೆ ಮತ್ತಿತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನ 110 ಹಳ್ಳಿಗಳ ರಸ್ತೆ ಕಾಮಗಾರಿ ಪೂರ್ಣಗೊಳಿಸಲು 2 ತಿಂಗಳ ಗಡುವು :
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, 110 ಹಳ್ಳಿಗಳಲ್ಲಿ ಜಲಮಂಡಳಿಯಿಂದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಗೆದಿರುವ ರಸ್ತೆಗಳನ್ನು ಪುನರ್ ಸ್ಥಾಪನೆ ಮಾಡುವ ಕಾಮಗಾರಿಗಳನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸಬೇಕು. ಆ ಕುರಿತಂತೆ ರಸ್ತೆ ಡಾಂಬರೀಕರಣ, ರಸ್ತೆ ಪುನರ್ ಸ್ಥಾಪನೆ ಕುರಿತು ಪ್ರತಿನಿತ್ಯ ಮಾಹಿತಿಯನ್ನು ಬಿಬಿಎಂಪಿ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.