ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ 2021-22ನೇ ಸಾಲಿನಲ್ಲಿ ಡಿಸೆಂಬರ್ ತನಕ 12,608 ಅಕ್ರಮ ಮದ್ಯ ಮಾರಾಟ ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದಾರೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ವಿಧಾನಸಭೆಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕ ಹಾಗೂ ಶಾಸಕರಾಗಿರುವ ಯು.ಟಿ.ಖಾದರ್ ಅವರು ಕೇಳಿದ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಮಂಗಳವಾರ ವಿಧಾನಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಸಚಿವ ಗೋಪಾಲಯ್ಯ, ಅಕ್ರಮ ಮದ್ಯ ಮಾರಾಟ ತಡೆಗಟ್ಟಲು ಅಬಕಾರಿ ಇಲಾಖೆಯು ವಲಯ ವ್ಯಾಪ್ತಿ ರೂಟ್ ಗಳಲ್ಲಿ ನಿರಂತರವಾಗಿ ಅಧಿಕಾರಿಗಳು ಗಸ್ತು ತಿರುಗಿ, ಅಕ್ರಮ ಮದ್ಯ ಮಾರಾಟ ಕಂಡು ಬಂದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನಿಯಮಿತವಾಗಿ ರಸ್ತೆಗಾವಲು ನಡೆಸಿ ಸಂಶಯದಾಸ್ಪದ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ.
2019-20ನೇ ಸಾಲಿನಲ್ಲಿ ರಾಜ್ಯದಲ್ಲಿ ಒಟ್ಟು 18,375 ಅಕ್ರಮ ಮದ್ಯ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 2020-21ನೇ ಸಾಲಿನಲ್ಲಿ ರಾಜ್ಯದಲ್ಲಿ 22,302 ಅಕ್ರಮ ಮದ್ಯ ಮಾರಾಟ ಪ್ರಕರಣಗಳನ್ನು ದಾಖಲಿಸಿ ಅಬಕಾರಿ ಕಾಯ್ದೆಯ ನಿಯಮಗಳ ಅನ್ವಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.
ಇಡೀ ರಾಜ್ಯದಲ್ಲಿ ಹೆಚ್ಚಾಗಿ ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲಾಗಿರುವ ಜಿಲ್ಲೆಗಳ ವಿವರ ಈ ಕೆಳಕಂಡಂತಿದೆ :
ಕ್ರಮ ಸಂಖ್ಯೆ | ಜಿಲ್ಲೆಯ ಹೆಸರು | 2020-2021ನೇ ಇಸವಿ | 2021-22ನೇ ಇಸವಿ (ಡಿಸೆಂಬರ್ ತನಕ) |
1) | ಬೆಂಗಳೂರು ನಗರ ಜಿಲ್ಲೆ | 1,527 | 1,528 |
2) | ತುಮಕೂರು | 2,042 | 1,030 |
3) | ಕಲಬುರುಗಿ | 529 | 832 |
4) | ಮೈಸೂರು ಮತ್ತು ಮೈ.ಗ್ರಾಮಾಂತರ | 848 | 703 |
5) | ಬೆಳಗಾವಿ | 874 | 521 |
6) | ಹಾವೇರಿ | 879 | 521 |
7) | ಶಿವಮೊಗ್ಗ | 1,000 | 479 |
8) | ಬೆಂಗಳೂರು ಗ್ರಾಮಾಂತರ | 730 | 449 |
9) | ಹಾಸನ | 609 | 427 |
10) | ಮಂಡ್ಯ | 700 | 405 |
ಒಟ್ಟಾರೆ ಪ್ರಕರಣಗಳು | 9,738 | 6,925 |
ಬೆಂಗಳೂರು ನಗರ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಒಟ್ಟು 1,527 ಪ್ರಕರಣಗಳು ಕಂಡು ಬಂದಿದ್ದರೆ 2021-22ನೇ ಸಾಲಿನಲ್ಲಿ ಡಿಸೆಂಬರ್ ತನಕ ಒಟ್ಟು 1,528 ಪ್ರಕರಣಗಳು ಕಂಡು ಬಂದಿದೆ. ಇದು ರಾಜ್ಯದಲ್ಲಿ ಕಂಡು ಬಂದ ಅತ್ಯಂತ ಹೆಚ್ಚಿನ ಅಕ್ರಮ ಮದ್ಯ ಮಾರಾಟ ಪ್ರಕರಣಗಳಾಗಿದೆ. ಒಟ್ಟು 10 ಜಿಲ್ಲೆಗಳಿಂದ 2020-21ನೇ ಸಾಲಿನಲ್ಲಿ ಒಟ್ಟಾರೆ 9,738 ಅಕ್ರಮ ಲಿಕ್ಕರ್ ಮಾರಾಟ ಪ್ರಕರಣ ದಾಖಲಾಗಿದ್ರೆ, 2021-22ನೇ ಸಾಲಿನಲ್ಲಿ ಡಿಸೆಂಬರ್ ತನಕ 6,925 ಪ್ರಕರಣಗಳು ಅಬಕಾರಿ ಇಲಾಖೆಯಲ್ಲಿ ದಾಖಲಾಗಿದೆ. ಅಬಕಾರಿ ಇಲಾಖೆಯು ಆಡಳಿತ ದೃಷ್ಟಿಯಿಂದ ರಾಜ್ಯದಲ್ಲಿನ 31 ಜಿಲ್ಲೆಗಳಲ್ಲಿ 6 ವಿಭಾಗಗಳನ್ನು ಮಾಡಿಕೊಂಡು, ಅದರಲ್ಲಿ 34 ಅಬಕಾರಿ ಜಿಲ್ಲೆಗಳನ್ನು ರಚಿಸಿದೆ.
ಅಬಕಾರಿ ಕಾಯ್ದೆ ಅನ್ವಯ ಅಕ್ರಮ ಮದ್ಯ ಮಾರಾಟದಲ್ಲಿ ಕಳ್ಳಬಟ್ಟಿ ಮಾರಾಟ, ಕಳಪೆ ಮದ್ಯ, ಅಬಕಾರಿ ಲೈಸೆನ್ಸ್ ಇಲ್ಲದೆ ಮದ್ಯ ಮಾರಾಟ ಮಾಡುವುದು, ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿಗೆ ಲಿಕ್ಕರ್ ಮಾರುವುದು ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ಅಕ್ರಮ ಮದ್ಯ ಮಾರಾಟ ಕೇಸ್ ದಾಖಲಿಸಲಾಗುತ್ತದೆ ಎಂದು ಅಬಕಾರಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.