ಶ್ರೀಹರಿಕೋಟ, (www.bengaluruwire.com) :
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯು ಇಂದು ಬೆಳಗ್ಗೆ ಪಿಎಸ್ ಎಲ್ ವಿ -ಸಿ52 (PSLV C52) ರಾಕೆಟ್ ಮೂಲಕ ಭೂ- ಪರಿವೀಕ್ಷಣಾ ಉಪಗ್ರಹ (Earth observation Satellite- 04) ಹಾಗೂ ಎರಡು ಸಣ್ಣ ಉಪಗ್ರಹ ಸೇರಿದಂತೆ ಮೂರು ಸ್ಯಾಟಲೈಟ್ ಗಳನ್ನು ಯಶಸ್ವಿಯಾಗಿ ಹಾರಿಬಿಟ್ಟಿದೆ. ಇದು ಇಸ್ರೋ ಈ ವರ್ಷ ಹಾರಿಬಿಟ್ಟ ಮೊದಲ ರಾಕೆಟ್ ಉಡಾವಣೆಯಾಗಿದೆ.
ಈ ಯಶಸ್ವಿ ಉಡಾವಣೆಯನ್ನು ಇಸ್ರೋ “ಅದ್ಭುತ ಸಾಧನೆ” ಎಂದು ಬಣ್ಣಿಸಿದೆ. ಸೋಮವಾರ ಮುಂಜಾನೆ 5.59ಕ್ಕೆ ಶ್ರೀಹರಿಕೋಟಾದಿಂದ ಇಸ್ರೋ ಉಡಾವಣಾ ವಾಹನ ಪಿಎಸ್ ಎಲ್ ವಿ ಮೂಲಕ ಕತ್ತಲೆಯ ಆಕಾಶದಲ್ಲೇ ಮೂರು ಉಪಗ್ರಹವನ್ನು ಹಾರಿಬಿಡಲಾಯಿತು. ರಾಕೆಟ್ ಉಡಾವಣೆಯಾದ 19 ನಿಮಿಷದಲ್ಲೇ ಈ ಮೂರು ಸ್ಯಾಟಲೈಟ್ ಗಳನ್ನು ನಿಗಧಿತ ಕಕ್ಷೆಗೆ ತಲಿಪಿಸುವಲ್ಲಿ ಯಶಸ್ವಿಯಾಯಿತು ಎಂದು ಇಸ್ರೋ ಟ್ವಿಟರ್ ನಲ್ಲಿ ಹಂಚಿಕೊಂಡಿದೆ.
ಇಒಎಸ್-04 ಉಪಗ್ರಹವನ್ನು ಭೂಮಿಯಿಂದ 529 ಕಿ.ಮೀ ಎತ್ತರದಲ್ಲಿರುವ ಸೂರ್ಯ ಕೇಂದ್ರಿತ ಧೃವೀಯ ಕಕ್ಷೆಗೆ ಬೆಳಗ್ಗೆ 6.17ಕ್ಕೆ ತಲುಪಿತು. ಈ ಸಂದರ್ಭದಲ್ಲಿ ವರ್ಷದ ಮೊದಲ ರಾಕೆಟ್ ಉಡಾವಣೆಯ ಯಶಸ್ವಿ ಕಾರ್ಯಾಚರಣೆಯನ್ನು ಇಸ್ರೊ ವಿಜ್ಞಾನಿಗಳು ಕುತೂಹಲದಿಂದ ಗಮನಿಸಿ, ಹರ್ಷ ವ್ಯಕ್ತಪಡಿಸಿದರು.
ಇಒಎಸ್-04 ಉಪಗ್ರಹ ನಿಗಧಿತ ಕಕ್ಷೆಗೆ ಸೇರಿದ ಬಳಿಕ ಇನ್ ಸ್ಪೈರ್-1 (INSPIREsat-1)ಹಾಗೂ ಐಎನ್ ಎಸ್ -2ಟಿಡಿ (INS-2TD) ಸಣ್ಣ ಉಪಗ್ರಹಗಳನ್ನು ಅವುಗಳ ಕಕ್ಷೆಗೆ ಸೇರ್ಪಡೆಗೊಳಿಸಲಾಯಿತು. ಇಸ್ರೋ ಪಿಎಸ್ಎಲ್ ವಿಯ ಸೋಮವಾರದ ಕಾರ್ಯಾಚರಣೆ, 54ನೆಯದ್ದಾಗಿದೆ.
ಇಸ್ರೋ ನೂತನ ಅಧ್ಯಕ್ಷ ಎಸ್.ಸೋಮನಾಥ್ ಏನಂತಾರೆ? :
“ಪಿಎಸ್ ಎಲ್ ವಿ -ಸಿ52 (PSLV C52) ರಾಕೆಟ್ ಮೂಲಕ ಭೂ- ಪರಿವೀಕ್ಷಣಾ ಉಪಗ್ರಹ ಹಾಗೂ ಎರಡು ಸಣ್ಣ ಉಪಗ್ರಹ ಸೇರಿದಂತೆ ಮೂರು ಸ್ಯಾಟಲೈಟ್ ಗಳನ್ನು ಯಶಸ್ವಿಯಾಗಿ ನಿಗಧಿತ ಕಕ್ಷೆಗೆ ಸೇರಿಸುವ ಕಾರ್ಯದಲ್ಲಿ ಯಶಸ್ಸು ಸಾಧಿಸಿದ್ದೇವೆ. ಪಿಎಸ್ ಎಲ್ ವಿ ರಾಕೆಟ್ ದೇಶಸೇವೆಗೆ ಅತಿದೊಡ್ಡ ಆಸ್ತಿಯಾಗಿದೆ.” ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಎಸ್.ಸೋಮನಾಥ್ ಇಸ್ರೋ ಅಧ್ಯಕ್ಷರಾಗಿ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊತ್ತ ಮೊದಲ ರಾಕೆಟ್ ಲಾಂಚ್ ಆಗಿದೆ.
ಈ ಯೋಜನೆಯ ನಿರ್ದೇಶಕ ಎಸ್.ಆರ್.ಬಿಜು ಮಾತನಾಡಿ, ಇಂದಿನ ಮೂರು ಉಪಗ್ರಹಗಳ ಅದ್ಭುತ ಯಶಸ್ವಿ ಸಾಧಿಸಿದ್ದೇವೆ ಎಂದಿದ್ದಾರೆ.
ಇಒಎಸ್-04 ಉಪಗ್ರಹದ ವಿವರ :
ಭಾನುವಾರ ಬೆಳಗ್ಗೆ 4.29ರಿಂದಲೇ ಪಿಎಸ್ ಎಲ್ ವಿ ಸಿ52 ರಾಕೆಟ್ ಉಡಾವಣೆಗೆ ಕೌಂಟ್ ಡೌನ್ ಆರಂಭಿಸಲಾಗಿತ್ತು. ಇಒಎಸ್-04 ಉಪಗ್ರಹ ಒಟ್ಟು 1,710 ಕೆಜಿ ಭಾರವಾಗಿದ್ದು, 10 ವರ್ಷಗಳ ಕಾಲ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿದೆ. ಈ ರಾಡಾರ್ ಚಿತ್ರಗಳನ್ನು ತೆಗೆಯುವ ಉಪಗ್ರಹವು ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಕೇಂದ್ರಕ್ಕೆ ರವಾನಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಕೃಷಿ, ಅರಣ್ಯ, ತೋಟಗಾರಿಕೆ, ಮಣ್ಣಿನ ತೇವಾಂಶ, ಜಲವಿಜ್ಞಾನ ಹಾಗೂ ಪ್ರವಾಹ ನಕ್ಷೆಗೆ ಈ ಉಪಗ್ರಹ ಒದಗಿಸುವ ಚಿತ್ರಗಳನ್ನು ಬಳಸಬಹುದಾಗಿದೆ.
ಇನ್ ಸ್ಪೈರ್-1 ಸಣ್ಣ ಉಪಗ್ರಹ ಕೊಲರೆಡೊ ಬೌಲ್ಡರ್ ಯೂನಿವರ್ಸಿಟಿ ವಾಯುಮಂಡಲ ಪ್ರಯೋಗಾಲಯ ಮತ್ತು ಬಾಹ್ಯಾಕಾಶ ಭೌತವಿಜ್ಞಾನ ವಿಭಾಗ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಸೇರಿದ್ದಾಗಿದೆ. ಇನ್ನು ಐಎನ್ ಎಸ್ -2ಟಿಡಿ ಉಪಗ್ರಹವು ಇಸ್ರೊದ ತಂತ್ರಜ್ಞಾನ ಪ್ರದರ್ಶಕ ಸ್ಯಾಟಲೈಟ್ ಆಗಿದೆ.
ಸಣ್ಣ ಉಪಗ್ರಹಗಳ ವಿಶೇಷತೆ ಮತ್ತು ಅನುಕೂಲಗಳೇನು? :
ಇನ್ ಸ್ಪೈರ್-1 ಸಣ್ಣ ಉಪಗ್ರಹ ಒಟ್ಟು 8.1 ಕೆಜಿ ತೂಕ ಹೊಂದಿದ್ದು, ಅಯಾನುಗೋಳದ ಡೈನಮಿಕ್ಸ್ ಹಾಗೂ ಸೂರ್ಯನ ಕರೋನ ಭಾಗದಲ್ಲಿ ತಾಪಮಾನದ ಪ್ರಕ್ರಿಯೆ ಬಗ್ಗೆ ಅಧ್ಯಯನ ನಡೆಸಲಿದ್ದು, ಒಂದು ವರ್ಷ ಕಾರ್ಯನಿರ್ವಹಿಸಲಿದೆ. ಭೂಮಿಯ ಮೇಲಿನ 80 ಕಿಮೀ. ನಿಂದ 600 ಕಿ.ಮೀ ವಾತಾವರಣದ ಮಧ್ಯದಲ್ಲಿ ಅಯಾನುಗೋಳ ಬರಲಿದೆ.
ಈ ವಾತಾವರಣದಲ್ಲಿ ಅಲ್ಟ್ರಾವಾಯ್ಲೆಟ್ ಕಿರಣ ಹಾಗೂ ಸೂರ್ಯನ ಎಕ್ಸ್ ರೇ ವಿಕಿರಣದ ಅಣು ಮತ್ತು ಪರಮಾಣುವನ್ನು ಅಯಾನಿಕರಿಸುತ್ತದೆ. ಅಯಾನುಗೋಳವು ಸಂಪರ್ಕ ಹಾಗೂ ನ್ಯಾವಿಗೇಷನ್ ಗಾಗಿ ಬಳಸುವ ರೇಡಿಯೋ ತರಂಗಾಂತರಗಳನ್ನು ಪ್ರತಿಬಿಂಬಿಸುವ ಹಾಗೂ ಪರಿವರ್ತಿಸುವ ಬಹುಮುಖ್ಯ ಕಾರ್ಯಗಳನ್ನು ನಿರ್ವಹಿಸುತ್ತದೆ.
ಐಎನ್ ಎಸ್ -2ಟಿಡಿ ಸಣ್ಣ ಉಪಗ್ರಹವು ಒಟ್ಟು 17.5 ಕೆಜಿ. ತೂಕ ಹೊಂದಿದ್ದು, 6 ತಿಂಗಳುಗಳ ಜೀವಿತಾವಧಿ ಹೊಂದಿದೆ. ಈ ಸ್ಯಾಟಲೈಟ್ ನಲ್ಲಿ ಚಿತ್ರ ತೆಗೆಯುವ ಗುಣಮಟ್ಟದ ಕ್ಯಾಮರಾ ಅಳವಡಿಸಲಾಗಿದೆ. ಈ ಸ್ಯಾಟಲೈಟ್ ಒದಗಿಸುವ ಚಿತ್ರಗಳಿಂದ ಭೂ ಮೇಲ್ಮೈ ತಾಪಮಾನ ಮೌಲ್ಯಮಾಪನ, ಜೌಗು ಅಥವಾ ಕೆರೆಯ ಜಲ ಮೇಲ್ಮೈ ಉಷ್ಣಾಂಶ, ಬೆಳೆ ಹಾಗೂ ಅರಣ್ಯದ ವರ್ಣನೆ, ರಾತ್ರಿ ಮತ್ತು ಬೆಳಗಿನ ಉಷ್ಣಾಂಶ ಮತ್ತಿತರ ಕಾರ್ಯಗಳಿಗೆ ಸಹಾಯಕವಾಗಲಿದೆ.