ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸದಸ್ಯರ ಕೊನೆಯ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ಒಂದು ಎಡವಟ್ಟು ಹಾಗೂ ಕಣ್ ತಪ್ಪಿನ ನಿರ್ಣಯದಿಂದಾಗಿ ಬೆಂಗಳೂರಿನ ಪಾಲಿಕೆ ನಿವೇಶನದ ಗುತ್ತಿಗೆ ಪಡೆದ ಕನ್ನಡ ಸಂಘ ಸಂಸ್ಥೆಗಳು, ಕನ್ನಡ ಶಾಲೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ದುಬಾರಿ ಗುತ್ತಿಗೆ ಶುಲ್ಕ ಕಟ್ಟುವ ಅನಿವಾರ್ಯ ಪರಿಸ್ಥಿತಿಗೆ ಬಂದು ತಲುಪಿದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಕನ್ನಡ ಭಾಷೆ, ನಾಡು, ನುಡಿ, ನೆಲದ ಸಂಸ್ಕೃತಿ ಅಭಿವೃದ್ಧಿಗೆ ಕಟಿಬದ್ಧವಾಗಿರುವ ಕನ್ನಡ ಸಂಘ ಸಂಸ್ಥೆಗಳು ಹಾಗೂ ಕನ್ನಡ ಶಾಲೆಗಳಿಗೆ ಗುತ್ತಿಗೆ ನೀಡಿರುವ ನಿವೇಶನ, ಕಟ್ಟಡಗಳ ವಾರ್ಷಿಕ ಗುತ್ತಿಗೆ ಶುಲ್ಕವನ್ನು ಪ್ರಸ್ತುತ ಮಾರುಕಟ್ಟೆ ದರದ ಶೇ.2ರಷ್ಟು ನಿಗಧಿಪಡಿಸಬೇಕೆಂಬ ಬಿಬಿಎಂಪಿ ಕೌನ್ಸಿಲ್ ನಿರ್ಣಯಕ್ಕೆ ಕನ್ನಡ ಸಂಘ ಸಂಸ್ಥೆಗಳ ತೀವ್ರ ಒತ್ತಡಕ್ಕೆ ಪಾಲಿಕೆಯು ಮಣಿದಿದ್ದು, ಪ್ರಸಕ್ತ ನೀಡುತ್ತಿರುವ ದರಕ್ಕಿಂತ ಶೇ.10ರಷ್ಟು ಶುಲ್ಕ ಹೆಚ್ಚಳ ಮಾಡಿ ಗುತ್ತಿಗೆ ನವೀಕರಣ ಮಾಡಿಕೊಡುವ ಬಗ್ಗೆ ಸದ್ಯದಲ್ಲೇ ತಿದ್ದುಪಡಿ ನಿರ್ಣಯ ಕೈಗೊಳ್ಳಲಿದೆ.
ಈ ಕುರಿತ ಪ್ರಸ್ತಾವಿತ ಕಡತವೀಗ ಬಿಬಿಎಂಪಿ ಆಸ್ತಿ ವಿಭಾಗದಿಂದ, ಪಾಲಿಕೆ ಮುಖ್ಯ ಆಯುಕ್ತರ ಕಚೇರಿಗೆ ರವಾನೆಯಾಗಿದ್ದು, ಮುಖ್ಯ ಆಯುಕ್ತರು ಈ ಕಡತಕ್ಕೆ ಸದ್ಯದಲ್ಲೇ ಅನುಮೋದನೆ ನೀಡಿ, ಆಡಳಿತಗಾರರಾದ ರಾಕೇಶ್ ಸಿಂಗ್ ಈ ಸಂಬಂಧ ಕೌನ್ಸಿಲ್ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಕನ್ನಡ ನಾಡು, ನುಡಿ- ಸಂಸ್ಕೃತಿಯ ಅಭಿವೃದ್ಧಿಗಾಗಿ ಮೀಸಲಿರುವ ಸಂಘ ಸಂಸ್ಥೆಗಳು, ಹಾಗೂ ಕನ್ನಡ ಶಾಲೆಗಳಿಗೆ 5 ರಿಂದ 30 ವರ್ಷದ ವರೆಗೆ ಪಾಲಿಕೆಯು ತನ್ನ ನಿವೇಶನ, ಕಟ್ಟಡಗಳನ್ನು ಗುತ್ತಿಗೆಗೆ ನೀಡಲಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಗುಟ್ಟಹಳ್ಳಿಯಲ್ಲಿರುವ ಉದಯಭಾನು ಕಲಾಸಂಘ, ಬಸವನಗುಡಿಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನ, ಕಟ್ಟೆ ಬಳಗ, ಮನೋನಂದನ ಸೇರಿದಂತೆ ಹಲವು ಸಂಘಸಂಸ್ಥೆಗಳು, ಕನ್ನಡ ಶಾಲೆಗಳು ಸೇರಿದಂತೆ ಹತ್ತು ಹಲವು ಆಸ್ತಿಗಳನ್ನು ಪಾಲಿಕೆಯು ಗುತ್ತಿಗೆ ಆಧಾರದ ಮೇಲೆ ಹಸ್ತಾಂತರಿಸಿದ್ದವು. ಈ ಯಾವುದೇ ಸಂಸ್ಥೆಗಳು ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ.
ಕನ್ನಡ ಸಂಘ ಸಂಸ್ಥೆ- ಶಾಲೆಗಳಿಗೆ ಮಾರಕವಾಗಿದ್ದ ಕೌನ್ಸಿಲ್ ಕಣ್ ತಪ್ಪಿನ ನಿರ್ಣಯ :
ಬಿಬಿಎಂಪಿಯಲ್ಲಿ ಈ ಹಿಂದೆ 18-08-2020ರ ಪಾಲಿಕೆ ಸಭೆಯಲ್ಲಿ “ಕನ್ನಡ ಸಂಘಸಂಸ್ಥೆಗಳು, ಕನ್ನಡ ಶಾಲೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿವೇಶನ ಗುತ್ತಿಗೆ ಅವಧಿ ಮುಕ್ತಾಯಗೊಂಡು ಗುತ್ತಿಗೆ ನವೀಕರಣಕ್ಕೆ ಬಂದಾಗ ಯಾವುದೇ ಪರಭಾರೆ ಮಾಡದಂತೆ ಷರತ್ತು ವಿಧಿಸಿ, ಅದೇ ಸಂಸ್ಥೆಗಳಿಗೆ ಗುತ್ತಿಗೆ ನವೀಕರಣ ಮಾಡಲು ಆಯುಕ್ತರು ಅಗತ್ಯ ಕ್ರಮವಹಿಸುವುದು” ಎಂದು ಸಭೆ (ವಿಷಯ ಸಂಖ್ಯೆ : 18(230)/2020-21) ಸರ್ವಾನುಮತದಿಂದ ತೀರ್ಮಾನಿಸಿತ್ತು.
ಆದರೆ ಇದೇ ವಿಷಯವಾಗಿ 8ನೇ ಸೆಪ್ಟೆಂಬರ್ 2020ರ ರಂದು ಪಾಲಿಕೆ ಸದಸ್ಯರ ಕೊನೆಯ ಕೌನ್ಸಿಲ್ ಸಭೆಯಲ್ಲಿ (ವಿಷಯ ಸಂಖ್ಯೆ : 16(279)/2020-21), ಕನ್ನಡ ಸಂಘಸಂಸ್ಥೆಗಳು, ಕನ್ನಡ ಶಾಲೆಗಳ ಗುತ್ತಿಗೆ ನವೀಕರಣ ಸಂದರ್ಭದಲ್ಲಿ “ಪ್ರಸ್ತುತ ನೀಡುತ್ತಿರುವ ದರಕ್ಕಿಂತ ಶೇ.10ರಷ್ಟು ಹೆಚ್ಚಿನ ಶುಲ್ಕ ವಿಧಿಸುವಂತೆ” ಎಂದು ನಿರ್ಣಯ ಕೈಗೊಳ್ಳುವ ಬದಲು ಗೊಂದಲಕ್ಕೊಳಗಾಗಿ ಆತುರಾತುರವಾಗಿ “ಸರ್ಕಾರದ ಮಾರ್ಗಸೂಚಿ ದರದ ವಾರ್ಷಿಕ ಶೇ.10ರಷ್ಟು” (Present Government Guidence Value 10%) ಶುಲ್ಕ ವಿಧಿಸಿ ಗುತ್ತಿಗೆ ನವೀಕರಣ ಮಾಡಿಕೊಡುವಂತೆ ಎಂದು ತಪ್ಪಾಗಿ ಬಿಬಿಎಂಪಿ ಕೌನ್ಸಿಲ್ ನಿರ್ಣಯ ಕೈಗೊಂಡಿತ್ತು. ಇದಕ್ಕೆ ಆಗ ಮಾಜಿ ಮೇಯರ್ ಗಳು ಹಾಗೂ ಹಲವು ಕನ್ನಡ ಪರ ಸಂಘ-ಸಂಸ್ಥೆಗಳಿಂದ ತೀವ್ರ ವಿರೋಧ ಕಂಡು ಬಂದಿತ್ತು.
ಬಳಿಕ ಆಡಳಿತಗಾರರ ನೇತೃತ್ವದ ಕೌನ್ಸಿಲ್ ಸಭೆಯು 2021ರ ಇಸವಿಯ ಅ.29ರಂದು ( ವಿಷಯ ಸಂಖ್ಯೆ : 344/2021-22) ಕರೋನಾ ಸಾಂಕ್ರಾಮಿಕ ರೋಗದಿಂದ ಜರ್ಜರಿತವಾಗಿದ್ದ ಪಾಲಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ದೃಷ್ಟಿಯಿಂದ, ಪಾಲಿಕೆಯ ಗುತ್ತಿಗೆ ಅವಧಿ ಮುಗಿದ ನಿವೇಶನಗಳ ನವೀಕರಣ ಸಂದರ್ಭದಲ್ಲಿ ಯಾವುದೇ ಷರತ್ತು ವಿಧಿಸದೆ “ಪ್ರಸಕ್ತ ಮಾರುಕಟ್ಟೆ ಬೆಲೆಯ ಶೇ. 2ರಷ್ಟು ಗುತ್ತಿಗೆ ಶುಲ್ಕ” (Present Market Rate 2%) ನಿಗದಿಪಡಿಸುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದರು. ಇವರೆಡೂ ಕೌನ್ಸಿಲ್ ನಿರ್ಣಯಗಳು, ಯಾವುದೇ ಲಾಭದ ಆಕಾಂಕ್ಷೆಯಿಲ್ಲದೆ ನಡೆಯುತ್ತಿರುವ ಕನ್ನಡ ಶಾಲೆಗಳು ಹಾಗೂ ಕನ್ನಡ ಸಂಘಸಂಸ್ಥೆಗಳಿಗೆ ಇವು ಮಾರಕವಾದ ನಿರ್ಣಯಗಳಾಗಿದ್ದವು.
“ಬಿಬಿಎಂಪಿಯ ಕೌನ್ಸಿಲ್ ಸಭೆಯಲ್ಲಿ ಕನ್ನಡದ ಭಾಷೆ, ಸಂಸ್ಕೃತಿ, ಶಾಲೆಗಳ ವಿಷಯದಲ್ಲಿ ಇಂತಹ ಗೊಂದಲಕಾರಿ ಹಾಗೂ ಅವೈಜ್ಞಾನಿಕ ನಿರ್ಧಾರದಿಂದ ಪಾಲಿಕೆಯ ನಿವೇಶನದಲ್ಲಿ ಗುತ್ತಿಗೆ ಪಡೆದ ಕನ್ನಡ ಸಂಘ ಸಂಸ್ಥೆಗಳು ಅನಿವಾರ್ಯವಾಗಿ ದುಬಾರಿ ಮೊತ್ತದ ಗುತ್ತಿಗೆ ಮೊತ್ತ ಪಾವತಿಸುವ ಅನಿವಾರ್ಯತೆ ಸಿಲುಕಿದ್ದು ನಿಜಕ್ಕೂ ದುರಂತ. ಈ ಕೂಡಲೇ ಆಗಿರುವ ಅನ್ಯಾಯವನ್ನು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ಸರಿಪಡಿಸಬೇಕಿದೆ. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು.”
– ಪ್ರವೀಣ್ ಶೆಟ್ಟಿ, ರಾಜ್ಯಾಧ್ಯಕ್ಷರು, ಕರ್ನಾಟಕ ರಕ್ಷಣಾ ವೇದಿಕೆ
ಮಾರುಕಟ್ಟೆ ಮೌಲ್ಯ ಆಧರಿಸಿದರೆ 500 ರೂ. ಕಟ್ಟುವ ಕಡೆ 6 ಲಕ್ಷ ಕಟ್ಟಬೇಕಿತ್ತು :
ಈ ಹಿಂದೆ ಕನ್ನಡ ಶಾಲೆಗಳು, ಕನ್ನಡ ಸಂಘ ಸಂಸ್ಥೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರಕ್ಕೆ ನೀಡಿರುವ ನಿವೇಶನಗಳಿಗೆ ವಾರ್ಷಿಕ ಗುತ್ತಿಗೆ ಶುಲ್ಕ 500 ರೂಪಾಯಿ, 2,000 ರೂ., 3,000 ರೂ. ಈ ರೀತಿ ಅತಿ ಕಡಿಮೆ ಶುಲ್ಕವಿತ್ತು. ಆದರೆ ಅ.29ರಂದು ಪಾಲಿಕೆ ಆಡಳಿತಗಾರರು, ಸಂಬಂಧಿಸಿದ ಪಾಲಿಕೆ ಸ್ವತ್ತಿನ ಪ್ರಸಕ್ತ ಮಾರುಕಟ್ಟೆ ಮೌಲ್ಯದ ಶೇ.2ರಷ್ಟು ಗುತ್ತಿಗೆ ಮೊತ್ತವನ್ನು ಕಟ್ಟುವಂತೆ ನಿರ್ಣಯ ಕೈಗೊಂಡಿದ್ದರು. ಈ ನಿರ್ಣಯದ ಆಧರಿಸಿ ಉದಾಹರಣೆ ಮೂಲಕ ಹೇಳುವುದಾದರೆ, ಈ ಹಿಂದೆ ಕನ್ನಡ ಸಂಘಸಂಸ್ಥೆಗಳು, ಕನ್ನಡ ಶಾಲೆಗಳು 500 ರೂ. ವಾರ್ಷಿಕ ಗುತ್ತಿಗೆ ಶುಲ್ಕ ಕಟ್ಟುವ ಕಡೆ ಕನಿಷ್ಠ 6 ಲಕ್ಷ ರೂ. ಹಣ ಕಟ್ಟಬೇಕಾದ ಸಂದರ್ಭ ಎದುರಾಗುತ್ತಿತ್ತು.
“ವಾಣಿಜ್ಯ ಉದ್ದೇಶಕ್ಕಾಗಿ ಬಿಬಿಎಂಪಿಯಿಂದ ಗುತ್ತಿಗೆ ಪಡೆದ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ವಾರ್ಷಿಕ ಗುತ್ತಿಗೆ ಮೊತ್ತ ನಿಗಧಿ ಮಾಡಲಿ. ಆದರೆ ನಿಜವಾದ ಕನ್ನಡ ಸಂಘಗಳು, ಸಂಘಟನೆ, ಶಾಲೆಗಳಿಗೆ ಪ್ರಸ್ತುತ ಪಾವತಿಸುತ್ತಿರುವ ದರದಲ್ಲೇ ಗುತ್ತಿಗೆ ಮೊತ್ತ ನವೀಕರಣ ಮಾಡಬೇಕು. ಅಲ್ಲದೆ ಇಂತಹ ಲಾಭರಹಿತ ಉದ್ದೇಶದ ಸಂಸ್ಥೆಗಳಿಗೆ ವಾರ್ಷಿಕ ಗುತ್ತಿಗೆ ನವೀಕರಣದ ಬದಲು ಹತ್ತು ವರ್ಷಕೊಮ್ಮೆ ಗುತ್ತಿಗೆ ನವೀಕರಣ ಮಾಡುವ ಸೌಲಭ್ಯ ಕಲ್ಪಿಸಿದರೆ ಉತ್ತಮ. ಕೌನ್ಸಿಲ್ ಸಭೆಯು ಇಂತಹ ನಿರ್ಣಯ ಕೈಗೊಳ್ಳುವಾಗ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು.”
– ರಾ.ನಂ.ಚಂದ್ರಶೇಖರ್, ಕನ್ನಡದ ಹಿರಿಯ ಹೋರಾಟಗಾರರು
ಬಿಬಿಎಂಪಿ ಕೌನ್ಸಿಲ್ ನಿರ್ಣಯಕ್ಕೆ ತಿದ್ದುಪಡಿ ಮಾಡಲು ಜನಪ್ರತಿನಿಧಿಗಳಿಂದ ಒತ್ತಡ :
ಹೀಗಾಗಿ ಈ ನಿರ್ಣಯಕ್ಕೆ ತಿದ್ದುಪಡಿ ನಿರ್ಣಯ ಕೈಗೊಳ್ಳಲು ನಿರ್ದೇಶಿಸಬೇಕು ಎಂದು ಮಾಜಿ ಮೇಯರ್ ಗಳಾದ ಕಟ್ಟೆ ಸತ್ಯ ನಾರಾಯಣ, ಎಸ್.ಕೆ.ನಟರಾಜ್, ಮಾಜಿ ಉಪ ಮೇಯರ್ ಎಸ್.ಹರೀಶ್, ನಗರದ ಶಾಸಕರು, ಸಚಿವರು ಸೇರಿದಂತೆ 16 ಮಂದಿ ಜನಪ್ರತಿನಿಧಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ನೀಡಿದ್ದರು. ಆ ಪತ್ರದಲ್ಲಿ ಕನ್ನಡ ಭಾಷೆಯ ಬೆಳವಣಿಗೆಗಾಗಿ ಶ್ರಮಿಸುವ ಸಂಸ್ಥೆಗಳಿಗೆ ಈಗಾಗಲೇ ಗುತ್ತಿಗೆ ನೀಡಿರುವ ಮೊತ್ತಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಪಾವತಿಸಿಕೊಂಡು ಗುತ್ತಿಗೆ ಅವಧಿ ನವೀಕರಿಸುವಂತೆ ಕೋರಿದ್ದರು. ಈ ಪತ್ರ ಆಧರಿಸಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಈ ಹಿಂದೆ ಕೈಗೊಂಡ ಕೌನ್ಸಿಲ್ ನಿರ್ಣಯದ ಬಗ್ಗೆ ತಿದ್ದುಪಡಿ ನಿರ್ಣಯದ ಬಗ್ಗೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಗೆ 10-01-2022ರಂದು ಟಿಪ್ಪಣಿ ಪತ್ರ ಬರೆದು ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಬಿಬಿಎಂಪಿ ಆಸ್ತಿವಿಭಾಗದಿಂದ ಕಡತ ಸಿದ್ಧವಾಗಿ, ಬಿಬಿಎಂಪಿ ಆಯುಕ್ತರ ಮೂಲಕ ಪಾಲಿಕೆ ಆಡಳಿತಗಾರರಾದ ರಾಕೇಶ್ ಸಿಂಗ್ ಕಚೇರಿಗೆ ಬರಬೇಕಿದೆ.
“ಕನ್ನಡ ಸಾಹಿತ್ಯ ಪರಿಷತ್ತು, ಬಿ.ಎಂ.ಶ್ರೀ ಪ್ರತಿಷ್ಠಾನ, ಉದಯಭಾನು ಕಲಾಸಂಘ ಸೇರಿದಂತೆ ನಾನಾ ಕನ್ನಡ ಸಂಘ ಸಂಸ್ಥೆಗಳು, ಕನ್ನಡದ ಶಾಲೆಗಳಿಗೆ ಈಗಾಗಲೇ ಗುತ್ತಿಗೆಗೆ ನೀಡಿರುವ ಮೊತ್ತಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಹಣ ಪಾವತಿಸಿಕೊಂಡು ಗುತ್ತಿಗೆ ನವೀಕರಣ ಮಾಡಿಕೊಡುವ ಬಗ್ಗೆ ಮುಖ್ಯಂತ್ರಿಗಳಿಗೆ ಮಾಜಿ ಮೇಯರ್ ಗಳು, ಉಪಮೇಯರ್, ಶಾಸಕರು, ಸಚಿವರು ಸೇರಿದಂತೆ 16 ಜನರು ಮನವಿಪತ್ರ ನೀಡಿದ್ದೇವೆ. ನಗರಾಭಿವೃದ್ಧಿ ಇಲಾಖೆಯಿಂದ ಬಿಬಿಎಂಪಿಗೆ ಈ ಸಂಬಂಧ ಸೂಕ್ತ ಕ್ರಮಕ್ಕಾಗಿ ಪತ್ರ ಬರೆದಿದೆ. ಸದ್ಯದಲ್ಲೇ ನಮ್ಮ ಬೇಡಿಕೆಗೆ ಬಿಬಿಎಂಪಿ ಆಡಳಿತಗಾರರು ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ.”
– ಕಟ್ಟೆ ಸತ್ಯನಾರಾಯಣ, ಬಿಬಿಎಂಪಿ ಮಾಜಿ ಮೇಯರ್
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಕನ್ನಡ ಭಾಷೆಯು ಉಸಿರು ಕಟ್ಟುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳಸುವ ಕೆಲಸದಲ್ಲಿ ನಿರತರಾಗಿರುವ ಕನ್ನಡ ಸಂಘಸಂಸ್ಥೆಗಳು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಶಾಲೆಗಳ ನಿವೇಶನದ ಗುತ್ತಿಗೆ ಮೊತ್ತ ನಿಗಧಿಯಲ್ಲಿ ಎದ್ದಿರುವ ಗೊಂದಲಗಳಿಗೆ ಶೀಘ್ರದಲ್ಲೇ ತೆರೆ ಬೀಳುವ ನಿರೀಕ್ಷೆಯಿದೆ. ಈಗಾಗಲೇ ಗುತ್ತಿಗೆ ನೀಡಿರುವ ಮೊತ್ತಕ್ಕೆ ಶೇ.10ರಷ್ಟು ಹೆಚ್ಚುವರಿಯಾಗಿ ಪಾವತಿಸಿಕೊಂಡು ಗುತ್ತಿಗೆ ನವೀಕರಿಸುವ ನಿರ್ಧಾರ ನಗರದಲ್ಲಿರುವ ಕನ್ನಡದ ಸಂಘ ಸಂಸ್ಥೆಗಳಿಗೆ ನಿಜಕ್ಕೂ ಆವಶ್ಯಕವಾಗಿದೆ.