ಬೆಂಗಳೂರು, (www.bengaluruwire.com) : ಹಗಲಿನ ವೇಳೆ ಕೃಷಿ ಮಾಡುತ್ತಿರುವ ರೈತರಿಗೆ ಏಳು ಗಂಟೆ ವಿದ್ಯುತ್ ಪೂರೈಸುವುದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM)ಗೆ ಕಷ್ಟಕರವಾಗಿದೆ. ಹೀಗಾಗಿ ಈ ಸಮಸ್ಯೆಯನ್ನು ತೊಡೆದು ಹಾಕಲು ಬೆಸ್ಕಾಂ, ಕೃಷಿ ನೀರಿಗೆ ಅಭಾವವಿರುವ 5 ಜಿಲ್ಲೆಗಳ ವ್ಯಾಪ್ತಿಯಲ್ಲಿ 1.75 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಫೀಡರ್ ಮಟ್ಟದಲ್ಲೇ ಸೌರವಿದ್ಯುತ್ (Feeder Solarization) ಮೂಲಕ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಸುತ್ತಿದೆ.
ಪ್ರಧಾನಮಂತ್ರಿ- ಕುಸುಮ್ ಯೋಜನೆಯ ಕಾಂಪೊನೆಂಟ್ –ಸಿ (PM- KUSUM Project Component- C) ನಡಿ ಬೆಸ್ಕಾಂ ಸಂಸ್ಥೆಯು ಕೃಷಿಕರಿಗೆ ನೆರವಾಗುವ ದೃಷ್ಟಿಯಿಂದ ವ್ಯವಸಾಯ ಮಾಡಲು ನೀರಾವರಿಗೆ ಹೆಚ್ಚು ತೊಂದರೆಯಿರುವ ಬೆಸ್ಕಾಂನ ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು ಹಾಗೂ ಚಿಕ್ಕಬಳ್ಳಾಪುರದಲ್ಲಿನ 68 ವಿದ್ಯುತ್ ಉಪಕೇಂದ್ರಗಳಲ್ಲಿನ 1.75 ಲಕ್ಷ ರೈತರ ಕೃಷಿ ಪಂಪ್ ಸೆಟ್ (IP SET) ಗಳಿಗೆ ಫೀಡರ್ ಮಟ್ಟದಲ್ಲಿ ಸೋಲಾರ್ ಫಲಕಗಳನ್ನು ಅಳವಡಿಸಿ, ಅದರಿಂದ ಉತ್ಪಾದನೆಯಾಗುವ ವಿದ್ಯುತ್ ನಿಂದ ಪ್ರತಿದಿನ ಹಗಲಿನ ಹೊತ್ತು 7 ಗಂಟೆಗಳ ವಿದ್ಯುತ್ ಪೂರೈಸಲು ಯೋಜನೆ ರೂಪಿಸಿದೆ.
ಪ್ರತಿ ಫೀಡರ್ ನಲ್ಲಿ ಒಂದು ಸಾವಿರ ಐಪಿಸೆಟ್ ಗಳಿಗೆ ಸೋಲಾರ್ ವಿದ್ಯುತ್ ಪೂರೈಸಲು 5 ಕಿ.ಮೀ ವ್ಯಾಪ್ತಿಯೊಳಗೆ 1 ರಿಂದ 2 ಮೆಗಾವ್ಯಾಟ್ (MW) ವಿದ್ಯುತ್ ಉತ್ಪಾದಿಸುವ ಸೌರಫಲಕಗಳನ್ನು ಟೆಂಡರ್ ಕರೆದು ಯಶಸ್ವಿ ಬಿಡ್ ದಾರರಾಗುವ ಖಾಸಗಿ ಸಂಸ್ಥೆಗಳು ಸೌರವಿದ್ಯುತ್ ಫಲಕ ಅಳವಡಿಸಿ, ನಿರ್ವಹಣೆ ಮಾಡಿ ನಂತರ ಬೆಸ್ಕಾಂಗೆ ಹಸ್ತಾಂತರ (BOOT) ಮಾಡುವ ಆಧಾರದ ಮೇಲೆ ಅಥವಾ ಸೌರ ವಿದ್ಯುತ್ ಉತ್ಪಾದಿಸುವ ಕಂಪನಿಗೆ ಪ್ರತಿ ಯೂನಿಟ್ ಗೆ 3.20 ರೂ. ಹಣವನ್ನು ಬೆಸ್ಕಾಂ ಪಾವತಿಸುವ ಆಧಾರದ ಮೇಲೆ ಈ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿನ 1.75 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಸೌರವಿದ್ಯುತ್ :
ಪ್ರಧಾನಮಂತ್ರಿ- ಕುಸುಮ್ ಯೋಜನೆಯಡಿ ಫೀಡರ್ ಸೋಲಾರೈಸೇಷನ್ ನಡಿ ಬೆಸ್ಕಾಂ ವ್ಯಾಪ್ತಿಯಲ್ಲಿ 1.75 ಲಕ್ಷ ಕೃಷಿ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಪೂರೈಕೆಗೆ ಅಂದಾಜು 770 ಮೆಗಾವ್ಯಾಟ್ ಸೌರಫಲಕಗಳ ವಿದ್ಯುತ್ ಸಾಮರ್ಥ್ಯವು ಅಗತ್ಯವಿದ್ದು, ಈ ಸೌರಫಲಕಗಳಿಂದ ವಾರ್ಷಿಕವಾಗಿ 1,282 ದಶಲಕ್ಷ ಯೂನಿಟ್ ವಿದ್ಯುತ್ತನ್ನು ಉತ್ಪಾದಿಸಿ ಈ ಪಂಪ್ ಸೆಟ್ ಗಳಿಗೆ ನೀಡಬಹುದಾಗಿದೆ. ಐದು ಜಿಲ್ಲೆಗಳ 600 ಫೀಡರ್ ಗಳನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಈ ಯೋಜನೆಯ ಜಾರಿಯಿಂದ ರೈತರು ನೀರಾವರಿಗಾಗಿ ಹಗಲಿನ ಸಂದರ್ಭದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಕೆ ಪಡೆಯುವುದು ಮಾತ್ರವಲ್ಲದೆ, ಕೃಷಿ ಉತ್ಪಾದಕತೆಯು ಹೆಚ್ಚುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸುತ್ತಾರೆ.
“ಈ ಹಿಂದೆ ಪ್ರತಿ ಕೃಷಿ ಪಂಪ್ ಸೆಟ್ ಗಳಿಗೆ ನೇರವಾಗಿ ಸೌರವಿದ್ಯುತ್ ಫಲಕಗಳಿಂದ ವಿದ್ಯುತ್ ಪೂರೈಸುವ ಯೋಜನೆ ಜಾರಿಗೆ ತರಲಾಗಿತ್ತು. ಆದರೆ ಆ ಯೋಜನೆಗೆ ಹೆಚ್ಚು ಬೇಡಿಕೆ ಬಂದಿರಲಿಲ್ಲ. ಹೀಗಾಗಿ ಈಗ ಕೇಂದ್ರ ಸರ್ಕಾರದ ಪ್ರಧಾಮಂತ್ರಿಗಳ ಕುಸುಮ್ ಯೋಜನೆಯಡಿ ಫೀಡರ್ ಮಟ್ಟದಲ್ಲಿ ಸೌರವಿದ್ಯುತ್ ಉತ್ಪಾದಿಸಿ ಬೆಸ್ಕಾಂ ವ್ಯಾಪ್ತಿಯ 5 ಜಿಲ್ಲೆಗಳಲ್ಲಿನ 1.75 ಲಕ್ಷ ಐಪಿ ಸೆಟ್ ಗಳಿಗೆ ಹಗಲಿನ ಹೊತ್ತು ವರ್ಷದ 365 ದಿನವೂ 7 ಗಂಟೆಗಳ ಗುಣಮಟ್ಟದ ವಿದ್ಯುತ್ ಪೂರೈಸುವ ಯೋಜನೆಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಯೋಜನೆಯಿಂದ ರೈತರು ಹಾಗೂ ಬೆಸ್ಕಾಂಗೆ ಅನುಕೂಲವಾಗಲಿದೆ.”
- ರಾಜೇಂದ್ರ ಚೋಳನ್, ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ
ರಾಜ್ಯದಲ್ಲಿ ಒಟ್ಟಾರೆ ಅಂದಾಜು 30.6 ಲಕ್ಷಕ್ಕೂ ಹೆಚ್ಚು ಕೃಷಿ ಪಂಪ್ ಸೆಟ್ ಗಳಿದ್ದು, ಈ ಪಂಪ್ ಸೆಟ್ ಗಳಿಗೆ ವಿದ್ಯುತ್ ಪೂರೈಕೆ ಮಾಡಿರುವ 5 ವಿದ್ಯುತ್ ಸರಬರಾಜು ಕಂಪನಿ (ESCOMS) ಗಳಿಗೆ ರಾಜ್ಯ ಸರ್ಕಾರವು ಬರೋಬ್ಬರಿ 12,912 ಕೋಟಿ ರೂಪಾಯಿ ಸಬ್ಸೀಡಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಹಣ ಬಾರದ ಕಾರಣದಿಂದಾಗಿ ಎಸ್ಕಾಂಗಳು ವಿದ್ಯುತ್ ಖರೀದಿ ವೆಚ್ಚ, ನಿರ್ವಹಣೆ ಮತ್ತಿತರ ಕಾರ್ಯಗಳಿಗೆ ಹಣಕಾಸು ಸಂಪನ್ಮೂಲ ಕೊರತೆಯಿಂದ ನರಳುತ್ತಿವೆ.
2002- 2021ರ ತನಕ ಎಸ್ಕಾಂಗಳಿಗೆ 13.5 ಸಾವಿರ ಕೋಟಿ ರೂ. ಬಾಕಿ :
ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಐಪಿ ಸೆಟ್ ಗಳಿಗೆ ವಿದ್ಯುತ್ ಪೂರೈಸಿದ 12,912 ಕೋಟಿ ರೂಪಾಯಿ ಸಬ್ಸೀಡಿ ಹಣ ಬಾಕಿಯಿರುವುದು ತಿಳಿದುಬಂದಿತ್ತು. ಇನ್ನು ಬೆಸ್ಕಾಂ ಸಂಸ್ಥೆಗೆ 8 ಜಿಲ್ಲೆಗಳಿಂದ 3,750 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಬರಬೇಕಿದೆ. 2002-03ನೇ ಇಸವಿಯಿಂದ 2020-2021 (2021ರ ಜನವರಿ ಅಂತ್ಯದವರೆಗೆ) ವಿದ್ಯುತ್ ಸರಬರಾಜು ಕಂಪನಿಗಳಿಗೆ ಒಟ್ಟಾರೆಯಾಗಿ 13,568.59 ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ಪಾವತಿಸಬೇಕಿರುತ್ತದೆ.
ಎಸ್ಕಾಂಗಳ ಒಟ್ಟಾರೆ ವೆಚ್ಚದಲ್ಲಿ ಶೇ.85 ವಿದ್ಯುತ್ ಖರೀದಿಗೆ :
ಕರ್ನಾಟಕದ ಐದು ಎಸ್ಕಾಂಗಳ ಒಟ್ಟಾರೆ ವೆಚ್ಚದಲ್ಲಿ ವಿದ್ಯುತ್ ಖರೀದಿ ವೆಚ್ಚದ ಪಾಲು ಶೇ.85ರಷ್ಟಾಗಿದೆ. ಹೀಗಿರುವಾಗ ವಿದ್ಯುತ್ ಖರೀದಿ ವೆಚ್ಚವನ್ನು ಹಾಗೂ ಸರ್ಕಾರದ ಮೇಲಿನ ಸಬ್ಸೀಡಿ ಹೊರೆಯನ್ನು ಕಡಿಮೆ ಮಾಡುವಲ್ಲಿ ಫೀಡರ್ ಸೋಲಾರೈಸೇಷನ್ ಸಂಪೂರ್ಣವಾಗಿ ಯಶಸ್ವಿಯಾದರೆ ಅನುಕೂಲವಾಗಲಿದೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬೆಸ್ಕಾಂ ವ್ಯಾಪ್ತಿಯಲ್ಲಿನ 5 ಜಿಲ್ಲೆಗಳಲ್ಲಿ ಅಂದಾಜು 600 ಫೀಡರ್ ಮಟ್ಟದಲ್ಲಿ ಸೌರವಿದ್ಯುತ್ ಸ್ಥಾವರ ಅಳವಡಿಸುವ ಪಿಎಂ- ಕುಸುಮ್ ಯೋಜನೆ ಯಶಸ್ವಿಯಾಗುತ್ತದೆಂದು ಹೇಳಲಾಗದು. ಏಕಂದರೆ ರೈತರ ಕೃಷಿ ಪಂಪ್ ಸೆಟ್ ಗಳ ಕಾರ್ಯಕ್ಷಮತೆ ಗುಣಮಟ್ಟದ್ದಾಗಿಲ್ಲ. ಎಷ್ಟೋ ರೈತರು ತಮ್ಮ ಪಂಪ್ ಸೆಟ್ ಗಳಿಗೆ ಕೆಪಾಸಿಟರ್ ಗಳನ್ನು ಅಳವಡಿಸುವುದಿಲ್ಲ. ಇದರಿಂದಾಗಿ ವಿದ್ಯುತ್ ನಷ್ಠವಾಗುವ ಸಾಧ್ಯತೆಯಿರುತ್ತದೆ. ಫೀಡರ್ ಸೋಲಾರೈಸೇಷನ್ ಯೋಜನೆ ಜಾರಿಗೆ ತರುವ ಸಂದರ್ಭದಲ್ಲಿ ರೈತರು ಐಪಿ ಸೆಟ್ ಗಳ ಮೋಟಾರ್ ಕಾರ್ಯಕ್ಷಮತೆ, ಕೆಪಾಸಿಟರ್ ಗಳನ್ನು ಅಳವಡಿಕೆ ಹಾಗೂ ಸರಿಯಾದ ಗಾತ್ರದ ನೀರಿನ ಪೈಪ್ ಹಾಕಿದ್ದಾರೆಂಬ ತಾಂತ್ರಿಕ ಮಾಹಿತಿಗಳನ್ನು ಖಚಿತಪಡಿಸಿಕೊಂಡ ಬಳಿಕವಷ್ಟೆ ಅಂತಹ ರೈತರಿಗೆ ಸೌರವಿದ್ಯುತ್ ಪೂರೈಕೆ ಮಾಡಿದರೆ ಒಳಿತು. ಅಲ್ಲದೆ ಬೆಸ್ಕಾಂ ಸೂಕ್ತ ರೀತಿಯಲ್ಲಿ ವೋಲ್ಟೇಜ್ ಕಾಯ್ದುಕೊಂಡು ವಿದ್ಯುತ್ ಪೂರೈಕೆ ಮಾಡಬೇಕಿದೆ.”
- ಎಂ.ಜಿ.ಪ್ರಭಾಕರ್, ಇಂಧನ ತಜ್ಞರು ಮತ್ತು ಕೆಇಆರ್ ಸಿ ಸಲಹಾ ಸಮಿತಿ ಮಾಜಿ ಸದಸ್ಯರು
ಬೆಸ್ಕಾಂ ವ್ಯಾಪ್ತಿಯಲ್ಲಿವೆ 9.53 ಲಕ್ಷ ಕೃಷಿ ಪಂಪ್ ಸೆಟ್ಸ್ :
ಬೆಸ್ಕಾಂ ಸಂಸ್ಥೆಯು ಮಾರ್ಚ್ 2021ರ ತನಕ ಒಟ್ಟಾರೆ 128.21 ಲಕ್ಷ ಗ್ರಾಹಕರನ್ನು ಹೊಂದಿದೆ. ಅಲ್ಲದೆ ತನ್ನ 8 ಜಿಲ್ಲೆಗಳ ವ್ಯಾಪ್ತಿಯಲ್ಲಿ 9,53,219 ಐಪಿ ಸೆಟ್ ಗಳಿದ್ದು, ಅವುಗಳಿಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ. ಬೆಸ್ಕಾಂ 2020-21ನೇ ಸಾಲಿನಲ್ಲಿ ವಾರ್ಷಿಕವಾಗಿ ಗೃಹಬಳಕೆ, ಕೈಗಾರಿಕೆ, ತಾತ್ಕಾಲಿಕ ವಿದ್ಯುತ್ ಸೇರಿದಂತೆ ವಿವಿಧ ವರ್ಗಗಳಲ್ಲಿ ಒಟ್ಟಾರೆ 25,234 ದಶಲಕ್ಷ ಯೂನಿಟ್ ನಷ್ಟು ವಿದ್ಯುತ್ ಪೂರೈಕೆ ಮಾಡಿದೆ. ಆ ಪೈಕಿ ಶೇ.27ರಷ್ಟು (6,917.39 ದಶಲಕ್ಷ ಯೂನಿಟ್) ವಿದ್ಯುತ್ ಅನ್ನು ಕೃಷಿ ಪಂಪ್ ಸೆಟ್ ಗಳೇ ಬಳಸಿಕೊಂಡಿವೆ. ಪರಿಸ್ಥಿತಿ ಹೀಗಿರುವಾಗ ಈ ಐಪಿ ಪಂಪ್ ಗಳ ಪೈಕಿ 1.75 ಲಕ್ಷ ಐಪಿ ಸೆಟ್ ಗಳಿಗೆ ಫೀಡರ್ ಸೋಲಾರೈಸೇಷನ್ ಯೋಜನೆ ಮೂಲಕ ಸೌರ ವಿದ್ಯುತ್ ಪೂರೈಕೆ ಮಾಡುವಾಗ ಬೆಸ್ಕಾಂ ಎಲ್ಲಾ ರೀತಿಯ ಮುಂಜಾಗ್ರತೆಗಳನ್ನು ವಹಿಸಿ ಪ್ರಾಜೆಕ್ಟ್ ಅನ್ನು ಜಾರಿಗೆ ತರಬೇಕಾದ ಅನಿವಾರ್ಯತೆಯಿದೆ.