ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ ಫೆ.3 ರ ತನಕ 15-17 ವಯೋಮಾನದ ಶೇ.72 ರಷ್ಟು ಮಂದಿಗೆ ಮೊದಲ ಡೋಸ್ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಜ.3 ರಿಂದ ರಾಜ್ಯದಲ್ಲಿರುವ 15-17 ವಯೋಮಾನದವರಿಗೆ ವ್ಯಾಕ್ಸಿನ್ ನೀಡಿಕೆ ಕಾರ್ಯ ಆರಂಭಗೊಂಡಿದ್ದು 31.75 ಲಕ್ಷ ಈ ವರ್ಗದವರಿದ್ದು ಈತನಕ 22.95 ಲಕ್ಷ ಹದಿಹರಯದವರಿಗೆ (ಶೇ.72) ರಷ್ಟು ಮೊದಲ ಡೋಸ್ ನೀಡಲಾಗಿದೆ. ಈ ಪೈಕಿ ಗದಗ ಜಿಲ್ಲೆ ರಾಜ್ಯದಲ್ಲೇ ಮೊದಲಿಗೆ ಶೇ.100 ರಷ್ಟು ಮೊದಲ ಡೋಸ್ ನೀಡಿ ಪ್ರಥಮ ಸ್ಥಾನದಲ್ಲಿದೆ.
ಈ ಕುರಿತಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಕರ್ನಾಟಕದಲ್ಲಿ ಈ ವರ್ಗದಲ್ಲಿ ಇಲ್ಲಿಯ ತನಕ 1,95,771 ಮಂದಿಗೆ (ಶೇ.6.17) ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಬುಧವಾರವಷ್ಟೇ ಕೇಂದ್ರ ಸರ್ಕಾರ 15 ರಿಂದ 17 ವರ್ಷದವರಿಗೆ ಕೋವಿಡ್ ಎರಡನೇ ಡೋಸ್ ಲಸಿಕೆ ನೀಡಿಕೆಯನ್ನು ಹೆಚ್ಚಳ ಮಾಡುವ ಬಗ್ಗೆ ರಾಜ್ಯಗಳಿಗೆ ಸೂಚನೆ ನೀಡಿದ್ದು, ಪ್ರತಿದಿನ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಈ ಸಂಬಂಧ ಪ್ರಗತಿ ಪರಿಶೀಲನೆ ನಡೆಸುವಂತೆ ಹೇಳಿದೆ.
ಮೊದಲ ಡೋಸ್ ಲಸಿಕೆ ನೀಡಿಕೆಯಲ್ಲಿ ಮುಂದಿರುವ ಜಿಲ್ಲೆಗಳು :
ರಾಜ್ಯದಲ್ಲಿ ಮೊದಲ ಡೋಸ್ ಲಸಿಕೆಯಲ್ಲಿ ಮುಂದಿರುವ ಟಾಪ್-5 ಜಿಲ್ಲೆಗಳೆಂದರೆ : ಗದಗ- ಶೇ.100, ಕೊಡಗು ಶೇ.98, ಉಡುಪಿ ಶೇ.88, ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಶೇ.84, ಕೋಲಾರ ಶೇ.83 ನಷ್ಟು ಪ್ರಗತಿ ದಾಖಲಿಸಿ ಉಳಿದ ಜಿಲ್ಲೆಗಳಿಗಿಂತ ಮುಂದಿವೆ.
“ರಾಜ್ಯದಲ್ಲಿ ಈತನಕ 15 ರಿಂದ 17ರ ವಯೋಮಾನದ ಶೇ.72 ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಗದಗ ಜಿಲ್ಲೆಯಲ್ಲಿ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ. ಶಾಲೆಯಿಂದ ಹೊರಗುಳಿದು, ತಮ್ಮ ಪೋಷಕರಿಗೆ ಸಹಾಯಕವಾಗಿ ದುಡಿಯುತ್ತಿರುವ ಹದಿಹರೆಯದ ಯುವಕ- ಯುವತಿಯರನ್ನು ಗುರುತಿಸಿ ಲಸಿಕೆ ನೀಡುವುದು ಸವಾಲಿನ ಕೆಲಸವಾಗಿದ್ದು, ಆ ಕಾರ್ಯದಲ್ಲಿ ಯಶಸ್ಸು ಸಾಧಿಸಲು ಸೂಕ್ತ ಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದ್ದೇವೆ. ಫೆಬ್ರವರಿ ಅಂತ್ಯದ ವೇಳೆಗೆ ಕೋವಿಡ್ ಬಂದ ಮಕ್ಕಳನ್ನು ಹೊರತುಪಡಿಸಿ ಈ ವರ್ಗದ ಶೇ.95 ಮಂದಿಗೆ ಲಸಿಕೆ ನೀಡುವ ಗುರಿಯಿದೆ.”
– ಡಿ.ರಂದೀಪ್, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ