ಬೆಂಗಳೂರು, (www.bengaluruwire.com) : ರಾಜ್ಯದಲ್ಲಿ 2023ರ ಸಾವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವು ಆಡಳಿತ ಪಕ್ಷ ಬಿಜೆಪಿ ವಿರುದ್ಧ ಜಲಾಸ್ತ್ರವನ್ನು ಮುಂದಿಟ್ಟುಕೊಂಡು ರಾಜಕೀಯ ಆರಂಭಿಸಿವೆ. ಇದಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಗೆ ಹಿಂಬದಿಯಿಂದ ಕೋವಿಡ್ ನಿರ್ಬಂಧಗಳನ್ನು ರಾಜ್ಯಾದ್ಯಂತ ಹೇರಿ ಕೊಕ್ಕೆ ಹಾಕಲು ಪ್ರಯತ್ನಸುತ್ತಿದೆ ಎಂಬ ಲೆಕ್ಕಾಚಾರಗಳು ಹರಿದಾಡುತ್ತಿದೆ.
ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ಎದುರೇಟು ನೀಡಲು ಜೆಡಿಎಸ್ ಪಕ್ಷವು ತಾನು ಏನು ಕಮ್ಮಿಇಲ್ಲ ಅಂತ ಜೆಡಿಎಸ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು ಶುಕ್ರವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಜನತಾ ಜಲಧಾರೆ (Janatha Jaladhare) ಯಾತ್ರೆ ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ. 2022 ಇಸವಿಯು ಜೆಡಿಎಸ್ ಪಕ್ಷದ ಸಂಘಟನಾ ವರ್ಷ ಎಂದು ತಾವು ಹಲವು ಬಾರಿ ಹೇಳಿದ್ದೇನೆ. ಈ ನಿಟ್ಟಿನಲ್ಲಿ ಪಕ್ಷವು ಜನತಾ ಜಲಧಾರೆ ಯಾತ್ರೆ ಎಂಬ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಈ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರದಿಂದ ರಾಜ್ಯದ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯ ಹಾಗೂ ಕಿರುಕುಳದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ 15 ನದಿಗಳಿಂದ ಜಲಸಂಗ್ರಹ ಕಾರ್ಯಕ್ರಮ :
ರಾಜ್ಯದ ಎಲ್ಲಾ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲಾ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮಹಾ ಸಂಕಲ್ಪದೊಂದಿಗೆ ಜನವರಿ 26ರಿಂದ ರಾಜ್ಯವ್ಯಾಪಿ ಜನತಾ ಜಲಧಾರೆ ಯಾತ್ರೆಯನ್ನು ಜೆಡಿಎಸ್ ಪಕ್ಷವು ಆರಂಭಿಸಲಿದೆ. ಇಡೀ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು ರಾಜ್ಯದ 51 ಸ್ಥಳಗಳಲ್ಲಿ 15 ಪವಿತ್ರ ನದಿಗಳ ಜಲಸಂಗ್ರಹ ಮಾಡಲಾಗುವುದು. ರಾಜ್ಯದ 180 ವಿಧಾನಸಭಾ ಕ್ಷೇತ್ರಗಳು, 140 ತಾಲ್ಲೂಕು ಕೇಂದ್ರಗಳಲ್ಲಿ ಈ ನೀರು ಸಂಗ್ರಹಿಸಿದ ಕಲಶಗಳ ಮೆರವಣಿಗೆ ಸಾಗಿ 15 ರಿಂದ 20 ದಿನಗಳ ಒಳಗಾಗಿ ಆ ನೀರನ್ನು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬರಮಾಡಿಕೊಂಡು ಗಂಗಾಪೂಜೆ ನೆರವೇರಿಸಲಾಗುವುದು. ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಜಾರಿ ಮಾಡುವ ಎಲ್ಲಾ ನಿಯಮಗಳಿಗೆ ಬದ್ಧರಾಗಿ ಜಲಧಾರೆ ಕಾರ್ಯಕ್ರಮ ನಡೆಸುತ್ತೇವೆ. ಕಾಂಗ್ರೆಸ್ ನಾಯಕರಂತೆ ಅನುಮತಿ ನೀಡದಿದ್ದರೆ ಪ್ರಾಣ ಬಿಡುತ್ತೇವೆ ಎಂದು ನಾವು ಬೆದರಿಕೆ ಹಾಕುವುದಿಲ್ಲ ಎಂದು ಎಂದು ಮಾಜಿ ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.
ವರ್ಷವಿಡೀ ನಡೆಯಲಿದೆ ಗಂಗಾ ಪೂಜೆ :
ಈ ಕಾರ್ಯಕ್ರಮ ಮುಗಿದ ನಂತರ ಪೂಜಿಸಲ್ಪಟ್ಟಿದ್ದ ಪವಿತ್ರ ಜಲವುಳ್ಳ ಕಲಶವನ್ನು ಬೆಂಗಳೂರಿನ ವಿವಿಧೆಡೆಗಳಿಂದ ಮೆರವಣಿಗೆ ಮೂಲಕ ಪಕ್ಷದ ರಾಜ್ಯ ಕಚೇರಿ ಜೆಪಿ ಭವನಕ್ಕೆವಿದ್ಯುಕ್ತವಾಗಿ ಬರ ಮಾಡಿಕೊಂಡು ಆ ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ಅಂದಿನಿಂದ ಮುಂದಿನ 391 ದಿನಗಳ ಕಾಲ ಗಂಗಾ ಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಯಲಿದೆ. ಆ ನಿತ್ಯ ಪೂಜೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಇಲ್ಲಿ ಮೇಕೆದಾಟು, ತಮಿಳುನಾಡಿನಲ್ಲಿ ಡಿಎಂಕೆ ಸಖ್ಯ…!
ಮೇಕೆದಾಟು ಪಾದಯಾತ್ರೆ ಮೂಲಕ ಆ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡುತ್ತದೆ ಎಂದು ಕಾಂಗ್ರೆಸ್ಸಿಗರು ನನಗೆ ಗ್ಯಾರಂಟಿ ಕೊಟ್ಟರೆ ನಾನು ಕೂಡ ಎಲ್ಲರಿಗಿಂತ ಮೊದಲೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷದ್ದು ಪಾದಯಾತ್ರೆ ಅಲ್ಲ, ಅದು ಮತಯಾತ್ರೆ ಮಾತ್ರ. ಕೇವಲ ಮುಂದಿನ ಚುನಾವಣೆಯಲ್ಲಿ ಮತ ಪಡೆಯುವ ಏಕೈಕ ಉದ್ದೇಶದಿಂದ ಆ ಪಕ್ಷ ಜನರಿಗೆ ಪಾದಯಾತ್ರೆ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ ಎಂದು ಅವರು ಟೀಕಾಪ್ರಹಾರ ನಡೆಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡುತ್ತಿದೆ. ಆದರೆ, ಪಕ್ಕದ ತಮಿಳುನಾಡಿನಲ್ಲಿ ಮೇಕೆದಾಟು ಯೋಜನೆಯನ್ನು ವಿರೋಧ ಮಾಡುತ್ತಿರುವ ಡಿಎಂಕೆ ಪಕ್ಷದ ಮಿತ್ರಪಕ್ಷವಾಗಿದೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಬಿಡುವುದಿಲ್ಲ ಎಂದು ರಾಜ್ಯಪಾಲರಿಂದ ಭಾಷಣ ಮಾಡಿಸಿರುವ ಸ್ಟಾಲಿನ್ ಸರಕಾರದ ಜತೆ ಕಾಂಗ್ರೆಸ್ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಬಹುದಲ್ಲವೇ. ಅದನ್ನು ಬಿಟ್ಟು ಪಾದಯಾತ್ರೆ ಮೂಲಕ ನಾಟಕ ಮಾಡುವುದು ಏಕೆ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
“ಮೇಕೆದಾಟು ಡಿಪಿಆರ್ ಬಗ್ಗೆ ಸಿದ್ದರಾಮಯ್ಯ ಹಸಿಸುಳ್ಳು” :
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರಕಾರ ಇದ್ದಾಗಲೇ ಡಿಪಿಆರ್ ಮಾಡಿ ಸಲ್ಲಿಕೆ ಮಾಡಿದ್ದೇವೆ ಎಂದು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಅವರು 2017ರಲ್ಲಿ ಬೆಂಗಳೂರಿನಲ್ಲಿರುವ ಕೇಂದ್ರ ಜಲ ಆಯೋಗದ ಪ್ರಾದೇಶಿಕ ಕಚೇರಿಗೆ ಸಲ್ಲಿಕೆ ಮಾಡಿದ್ದು ಕೇವಲ ಯೋಜನೆಯ ಪ್ರಾಥಮಿಕ ಸಾಧ್ಯಾ ಸಾಧ್ಯತೆಗಳ ವರದಿ (ಪ್ರೈಮರಿ ಫೀಸಬಲ್ ರಿಪೋರ್ಟ್ – PFR) ಮಾತ್ರ. ಅದು ಅಲ್ಲಿಗೇ ನಿಂತಿತು. 2018ರಲ್ಲಿ ನಾನು ಸಿಎಂ ಆದ ಕೂಡಲೇ ಇನ್ನೊಮ್ಮೆ ಪಿಎಫ್ ಆರ್ ಸಲ್ಲಿಸಿ ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಲು ಅನುಮೋದನೆ ಪಡೆದುಕೊಳ್ಳಲಾಯಿತು. ಅದರ ಬೆನ್ನಲ್ಲೇ ಆಗ ಕೇಂದ್ರದ ಭೂಸಾರಿಗೆ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೆ. ಅವರು ಕೂಡಲೇ ಡಿಪಿಆರ್ ಸಲ್ಲಿಸಿ ಎಂದರು. ಹಲವು ಬಾರಿ ನಾನು ಗಡ್ಕರಿ ಅವರನ್ನು ಭೇಟಿ ಮಾಡಿದ್ದೆ. ನಾನು ಅಧಿಕಾರದಲ್ಲಿದ್ದ 14 ತಿಂಗಳಲ್ಲಿ 11 ಸಭೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
123 ಸೀಟು ಗೆಲ್ಲಲು ಮೇಕೆದಾಟು ಪಾದಯಾತ್ರೆ ಕಾರ್ಯಕ್ರಮ :
ನಾನು ಯಾವುದನ್ನು ಮುಚ್ಚುಮರೆ ಮಾಡುತ್ತಿಲ್ಲ. ನಮಗೆ ಐದು ವರ್ಷಗಳ ಸ್ವತಂತ್ರ ಸರಕಾರ ಕೊಡಿ ಎಂದು ಜನರನ್ನು ನೇರವಾಗಿಯೇ ಕೇಳುತ್ತಿದ್ದೇನೆ. 123 ಸೀಟು ಗೆಲ್ಲಿಸಿಕೊಡಿ ಎಂದು ಮನವಿ ಮಾಡುತ್ತಿದ್ದೇನೆ. ನಮ್ಮ ಪಕ್ಷಕ್ಕೆ ಪೂರ್ಣ ಪ್ರಮಾಣದ ಸರಕಾರ ಸಿಕ್ಕಿದರೆ ನಾವು ಮಾತು ಕೊಟ್ಟಂತೆ ಎಲ್ಲ ನೀರಾವರಿ ಯೋಜನೆಗಳನ್ನು ಕಾರ್ಯಗತ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಇದು ಬಿಜೆಪಿ ಪ್ರೇರಿತ ಕರೋನಾ ಕರ್ಫ್ಯೂ : ಕಾಂಗ್ರೆಸ್ ಕಿಡಿ
ಇನ್ನೊಂದೆಡೆ ಕಾಂಗ್ರೆಸ್ ಪಕ್ಷವು ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ, ಕೋವಿಡ್ ಕಠಿಣ ನಿರ್ಬಂಧಗಳನ್ನು ಹೇರಿರುವ ಬಗ್ಗೆ ಕಿಡಿಕಾರಿದೆ.
ಈ ಬಗ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ (KPCC) ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿ, ಸರ್ಕಾರವು ಈ ಕರ್ಫ್ಯೂ ನಿರ್ಧಾರ ಮಾಡುವ ಮುನ್ನ ಎಲ್ಲ ಪಕ್ಷಗಳ ಅಭಿಪ್ರಾಯ ಪಡೆದು ಮುಂದುವರೆಯುತ್ತಾರೆಂದು ಕೊಂಡಿದ್ದೆವು. ಈ ವಿಚಾರವಾಗಿ ತಮಗೆ ಜನರಿಂದ ಸಾವಿರಾರು ಕರೆಗಳು ಬರುತ್ತಿವೆ. ಈ ಬಗ್ಗೆ ವಾಸ್ತವವೇನೆಂದು ಕಾಂಗ್ರೆಸ್ ನ ಮಾಜಿ ಆರೋಗ್ಯ ಸಚಿವರು ಹಾಗೂ ವೈದ್ಯರ ತಂಡದ ಮೂಲಕ ಬೆಂಗಳೂರು, ರಾಮನಗರ, ಉತ್ತರ ಕರ್ನಾಟಕ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಪರಿಶೀಲನೆ ನಡೆಸಿದಾಗ ಇಡೀ ರಾಜ್ಯದಲ್ಲಿ ಶೇಕಡ 2ರಷ್ಟು ಕೋವಿಡ್ ಸೋಂಕು ಇಲ್ಲದಿರುವುದು ತಿಳಿದುಬಂದಿದೆ. ಕರ್ಫ್ಯೂ ಹಾಕಬೇಕಾದರೆ ಸರ್ಕಾರಕ್ಕೆ ತನ್ನದೇ ಆದ ಮಾನದಂಡವಿದೆ. ಎಷ್ಟು ಪ್ರಮಾಣದಲ್ಲಿ ಸೋಂಕಿತರಾಗಿದ್ದಾರೆ? ಎಷ್ಟು ಪ್ರಮಾಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ?, ಅವರಲ್ಲಿ ಎಷ್ಟು ಜನ ಐಸಿಯು, ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದ್ದೇವೆ.
ಕೋವಿಡ್ ಎರಡನೇ ಅಲೆಯಲ್ಲಿ ಆಕ್ಸಿಜನ್ ಬೇಡಿಕೆ 800 ಮೆಟ್ರಿಕ್ ಟನ್ ನಷ್ಟು ಇತ್ತು. ಅಲ್ಲದೆ ಶೇ.40ರಷ್ಟು ಆಸ್ಪತ್ರೆ ಹಾಸಿಗೆಗಳು ಭರ್ತಿಯಾಗಿದ್ದವು. ಆಗ ಲಾಕ್ ಡೌನ್ ಮಾಡಿದಾಗ ಕೋವಿಡ್ ಸೋಂಕಿನ ಪ್ರಮಾಣ ಶೇ.33ರಷ್ಟಿತ್ತು. ಆದರೆ ಜನವರಿ 6ರಂದು ಕೋವಿಡ್ ಸೋಂಕು ಪ್ರಮಾಣ ಶೇ.3.9ರಷ್ಟಿತ್ತು. ಈ ಹಿಂದೆ ಕೋವಿಡ್ ಸೋಂಕಿನ ಪ್ರಮಾಣ ಶೇ.5ರಷ್ಟು ಆಗಿದ್ದಾಗ ಲಾಕ್ ಡೌನ್ ಮಾಡುವುದಾಗಿ ಬಿಜೆಪಿ ಸರ್ಕಾರ ಹೇಳಿತ್ತು. ಕಳೆದ ವರ್ಷ ಲಾಕ್ ಡೌನ್ ಮಾಡಿದಾಗ ಸೋಂಕಿನ ಪ್ರಮಾಣ ಈಗಿನ ದರಕ್ಕಿಂತ 10 ಪಟ್ಟು ಹೆಚ್ಚಾಗಿತ್ತು. ಬಿಜೆಪಿ ಸರ್ಕಾರ ವಿಜ್ಞಾನ, ತಾಂತ್ರಿಕತೆಯ ಆಧಾರದ ಮೇಲೆ ಮಾತನಾಡುತ್ತಿಲ್ಲ. ಬದಲಿಗೆ ಕೋವಿಡ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಇಡೀ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಪ್ರವಾಸಿ ತಾಣಗಳನ್ನು ಬಂದ್ ಇಲ್ಲ. ಕೇವಲ ರಾಮನಗರದಲ್ಲಿ ಬಂದ್ ಮಾಡಿದ್ದಾರೆ. ಇದು ರಾಜಕೀಯ ಪ್ರೇರಿತ. ವೀಕೆಂಡ್ ಕರ್ಫ್ಯೂ ಹಾಗೂ ಮತ್ತಿತರ ನಿರ್ಬಂಧಗಳ ಬಗ್ಗೆ ರಾಜ್ಯ ಸಚಿವ ಸಂಪುಟದ ಸಚಿವರೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು ಕೋವಿಡ್ ನಿರ್ಬಂಧದ ಹಿಂದೆ ರಾಜಕೀಯದ ಬಗ್ಗೆ ಎಳೆ ಎಳೆಯಾಗಿ ಮಾಧ್ಯಮಗೋಷ್ಠಿಯಲ್ಲಿ ತೆರೆದಿಟ್ಟರು.
ಮೇಕೆದಾಟು ಪಾದಯಾತ್ರೆ ಇಬ್ಬರೇ ಆದರೂ ಸರಿ ಮಾಡುತ್ತೇವೆ :
ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ರಾಜ್ಯ ಸರ್ಕಾರ ಶತಾಯಗತಾಯ ಯತ್ನಿಸುತ್ತಿದೆ ಎಂದು ಆರೋಪಿಸಿದ ಡಿ.ಕೆ.ಶಿವಕುಮಾರ್, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ. ಆದರೂ ರಾಜ್ಯ ಸರ್ಕಾರ ರಾಮನಗರ ಜಿಲ್ಲಾಧಿಕಾರಿಗಳ ಮೂಲಕ ತಮಗೆ ಪತ್ರ ಕಳುಹಿಸಿದ್ದು, ಅದರಲ್ಲಿ ಪಾದಯಾತ್ರೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ನಾವು ಸಾವಿರಾರು ಜನ ಆಗಮಿಸುತ್ತೇವೆ ಎಂದು ಭಾವಿಸಿ ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ತಾವು ಹಾಗೂ ಸಿದ್ದರಾಮಯ್ಯ ಇಬ್ಬರಾದರೂ ಪಾದಯಾತ್ರೆ ನಡೆಯುತ್ತೇವೆ, ಜನ ಏನು ಮಾಡುತ್ತಾರೋ ನೋಡೋಣ. ಸಿದ್ದರಾಮಯ್ಯ ಮೈಸೂರಿನಲ್ಲಿ, ಬೇರೆ ನಾಯಕರು ಬೇರೆಡೆ ಎಲ್ಲಡೆ ಹೇಳಿದ್ದಾರೆ. ನಾಳೆ ಕನಕಪುರದಲ್ಲಿ ಮೇಕೆದಾಟು ಪಾದಯಾತ್ರೆ ಬಗ್ಗೆ ಸಭೆ ಮಾಡುವುದಾಗಿ ಅವರು ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆ ನಡೆಸದಂತೆ ಸರ್ಕಾರದ ಎಚ್ಚರಿಕೆ :
ಇನ್ನೊಂದೆಡೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಓಮಿಕ್ರಾನ್ ರೂಪಾಂತರಿ ಸೋಂಕು ಏರಿಕೆಯಾಗುತ್ತಿದ್ದು, ವಾರಂತ್ಯ ಕರ್ಫ್ಯೂವನ್ನು ಜಾರಿಗೊಳಿಸಿ, ನೈಟ್ ಕರ್ಫ್ಯೂವನ್ನು ರಾಜ್ಯಾದ್ಯಂತ ವಿಸ್ತರಿಸಿ, ಸಾರ್ವಜನಿಕ ಮೆರವಣಿಗೆ, ಸಭೆ, ಜಾತ್ರೆ ಮತ್ತಿತರ ಸಮಾರಂಭಗಳನ್ನು ನಿಷೇಧಿಸಿ ಕೋವಿಡ್ ನಿರ್ಬಂಧಗಳನ್ನು ಬಿಗಿಗೊಳಿಸಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಮೆರವಣಿಗೆಯನ್ನು ನಡೆಸದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಖಾತೆ ಸಚಿವ ಅರಮ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ. ಒಂದೊಮ್ಮೆ ಪಾದಯಾತ್ರೆ ನಡೆಸಿ ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಈ ಎಚ್ಚರಿಕೆಗೆ ಸೊಪ್ಪುಹಾಕುತ್ತಿಲ್ಲ.
ಚುನಾವಣೆ ಸಮೀಪಿಸುವಾಗ ಪಾದಯಾತ್ರೆಯಂತಹ ಕಾರ್ಯಕ್ರಮಗಳನ್ನು ಹಾಕಿಕೊಂಡು ಈ ಹಿಂದೆ ಪಕ್ಷಗಳು ಅಧಿಕಾರಕ್ಕೇರಿದ ನಿರ್ದರ್ಶನಗಳು ಕಣ್ಣಮುಂದೆ ಇರುವಾಗಲೇ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವು, 2023ರ ಸಾವತ್ರಿಕ ಚುನಾವಣೆ ಸಮೀಪಿಸುವ ಹೊತ್ತಿನಲ್ಲಿಯೇ ಪಾದಯಾತ್ರೆ, ಜಲಧಾರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.