ಬೆಂಗಳೂರು, (www.bengaluruwire.com) : ನಗರದಲ್ಲಿ ಜ.5 ರಿಂದ ಜಾರಿಗೆ ಬರುವಂತೆ ಮುಂದಿನ ಎರಡು ವಾರಗಳ ಕಾಲ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಕರ್ಫ್ಯೂ ಇರಲಿದೆ. ಕೋವಿಡ್ ಏರಿಕೆಯ ನಿಯಂತ್ರಣಕ್ಕಾಗಿ ರಾಜ್ಯದೆಲ್ಲಡೆ ಹಾಗೂ ಪ್ರಮುಖವಾಗಿ ಬೆಂಗಳೂರಿಗೆ ಪ್ರತ್ಯೇಕವಾಗಿ ರಾಜ್ಯ ಸರ್ಕಾರ ನಿಯಂತ್ರಣ ಕ್ರಮಗಳನ್ನು ರೂಪಿಸಿದೆ.
ಬೆಂಗಳೂರಿನಲ್ಲಿ 10 ಮತ್ತು 12ನೇ ತರಗತಿ ಹಾಗೂ ವೈದ್ಯಕೀಯ, ಅರೆವೈದ್ಯಕೀಯ ಕಾಲೇಜು ಹೊರತುಪಡಿಸಿ ಉಳಿದ ಎಲ್ಲಾ ಶಾಲಾ ಕಾಲೇಜುಗಳನ್ನು (School and College Close ) ಜ.6 ರಿಂದ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಗಳಾದಂತ ಚಿತ್ರಮಂದಿರ, ಮಾಲ್, ಪಬ್, ಬಾರ್ ಗಳಲ್ಲಿ ಶೇ.50ರ ಮಿತಿಯನ್ನು ನಿಗಧಿಪಡಿಸಲಾಗಿದೆ.
ವಾರಾಂತ್ರ ಕರ್ಪ್ಯೂ ( Weekend Curfew ) ಜಾರಿಗೊಳಿಸಲಾಗಿದ್ದು, ನೈಟ್ ಕರ್ಪ್ಯೂ ( Night Curfew ) ಮುಂದಿನ ಎರಡು ವಾರ ಮುಂದುವರೆಸಲಾಗಿದೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೋವಿಡ್ ಕುರಿತಂತೆ ತಜ್ಞರ ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೋವಿಡ್ ಸಭೆಯನ್ನು ಮಾಡಲಾಯಿತು. ತಜ್ಞರು, ಅಧಿಕಾರಿ ವರ್ಗದವರು ಸಭೆಯಲ್ಲಿ ಭಾಗವಹಿಸಿದ್ದರು. ಸಿಎಂ ಬೊಮ್ಮಾಯಿಯವರು ನಾವು ಯಾವುದೇ ನಿರ್ಧಾರ ಕೈಗೊಂಡರು ಕೂಡ, ವಿಶ್ವಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ, ಹಾಗೂ ನೆರೆಯ ರಾಜ್ಯಗಳ ಕೋವಿಡ್ ಕೇಸ್ ಗಳನ್ನು ಪರಿಶೀಲಿಸಿ ಈ ತೀರ್ಮಾನಗಳನ್ನು ಮಾಡಿದ್ದಾರೆ.
ಓಮಿಕ್ರಾನ್ ಕೋವಿಡ್ ಗಿಂತ 5 ಪಟ್ಟು ಜಾಸ್ತಿಯಾಗುತ್ತಿದೆ ಎಂದು ತಜ್ಞರು ವರದಿ ಕೊಟ್ಟಿದ್ದಾರೆ. ಇವತ್ತು ಬೆಂಗಳೂರಿನಲ್ಲಿ 2048 ಕೇಸ್ ಪತ್ತೆ ಆಗಿದೆ. ರಾಜ್ಯದಳಿ ಓಮಿಕ್ರಾನ್ 147 ಕೇಸ್ ಕಂಡುಬಂದಿದೆ ಎಂದರು.
ಕಳೆದ ಮೂರು ದಿನಗಳಿಂದ ಕೋವಿಡ್ ಪ್ರಕರಣಗಳು ಎರಡು ಪಟ್ಟು ಹೆಚ್ಚಾಗುತ್ತಿದೆ. ಇವತ್ತು ಮೂರು ಸಾವಿರ ಪ್ರಕರಣ ಕಂಡುಬಂದಿದ್ದು, ಅದು ಆರು ಸಾವಿರ, ಒಂಭತ್ತು ಸಾವಿರ ಆಗುತ್ತಾ ಐದಾರು ದಿನಗಳಲ್ಲಿ ಹತ್ತು ಸಾವಿರ ಆಗುವ ಸಾಧ್ಯತೆ ಇದೆ. ಇದರಿಂದಾಗಿ ವಿಶೇಷವಾಗಿ ಬೆಂಗಳೂರಿಗೆ ವಿಶೇಷ ನಿಯಮ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರತ್ಯೇಕ ನಿಯಮ ಜಾರಿಗೆ ತರೋ ತೀರ್ಮಾನವನ್ನು ಸಿಎಂ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಮಂಗಳವಾರ ಒಂದೇ ದಿನ ಶೇ 3ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ :
ಇವತ್ತು ರಾಜ್ಯದಲ್ಲಿ ಶೇ.3ರಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಕಂಡುಬಂದಿದೆ. 20 ರಿಂದ 50 ವರ್ಷದವರಿಗೆ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಈ ಎಲ್ಲಾ ದೃಷ್ಟಿಯಿಂದ ಬೆಂಗಳೂರಿನಲ್ಲಿ 10 -12ನೇ ತರಗತಿ ಹೊರತು ಪಡಿಸಿ, 2 ವಾರ ಆಫ್ ಲೈನ್ ತರಗತಿ ಮಾಡಲು ನಿರ್ಧರಿಸಲಾಗಿದೆ. ನಾಳೆ ರಾತ್ರಿ 10 ಗಂಟೆಯಿಂದ ಕೋವಿಡ್ ರೂಲ್ಸ್ ಜಾರಿಗೆ ಬರಲಿದೆ. 10 ಮತ್ತು 12ನೇ ತರಗತಿಗಳು ಮಾತ್ರ ತೆರೆದಿರಲು ನಿರ್ಧರಿಸಲಾಗಿದೆ. ಆನ್ ಲೈನ್ ತರಗತಿಗಳಲ್ಲಿ ಶೈಕ್ಷಣಿಕ ಚಟುವಟಿಕೆ ಎಂದಿನಂತೆ ಮುಂದುವರೆಯಲಿದೆ. ಶುಕ್ರವಾರ ಮತ್ತು ಶನಿವಾರ ವಾರಾಂತ್ಯ ಕರ್ಪ್ಯೂ ತೀರ್ಮಾನ ಕೈಗೊಳ್ಳಲಾಗಿದ್ದು, ಮತ್ತೆ ಎರಡು ವಾರ ವಿಸ್ತರಿಸಲಾಗಿದೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಶೇ.50 ರಷ್ಟು ಮಿತಿ :
ಸರ್ಕಾರಿ ಕಚೇರಿ, ಮಾಲ್ ಗಳಲ್ಲಿ ಭಾರತ ಸರ್ಕಾರದ ಮಾರ್ಗಸೂಚಿ ಪಾಲಿಸಲು ನಿರ್ಧರಿಸಲಾಗಿದೆ. ಮಾಲ್, ಚಿತ್ರಮಂದಿರ, ಪಬ್, ಬಾರ್ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶೇ.50ರ ಜನರಿಗೆ ಮಾತ್ರ ಮಿತಿ ನಿಗಧಿಪಡಿಸಲಾಗಿದೆ. ಮದುವೆ ಹೊರಾಂಗಣಕ್ಕೆ 200 ಜನರು, ಒಳಾಂಗಣದಲ್ಲಿ 100 ಜನರಿಗೆ ಮಿತಿ ಹೇರಲಾಗಿದೆ. ಕೋವಿಡ್ ಸಂಪೂರ್ಣ ಡೋಸ್ ಪಡೆದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರ ರಾಜ್ಯಗಳಿಂದ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಕೋವಿಡ್ ಎಪಿಕ್ ಸೆಂಟರ್ :
ಕೋವಿಡ್ ನಿಯಂತ್ರಣಕ್ಕಾಗಿ ಬೆಂಗಳೂರಿಗೆ ವಿಶೇಷವಾಗಿ ತಂತ್ರ ರೂಪಿಸಲಾಗಿದೆ. ಸದ್ಯ ಬೆಂಗಳೂರಿನ್ನೇ ರಾಜ್ಯವಾಗಿ ಪರಿಗಣಿಸಿದ್ದೇವೆ. ಏಕೆಂದರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ರಾಜಧಾನಿಯನ್ನು ಎಪಿಕ್ ಸೆಂಟರ್ ಆಗಿ ಪರಿಗಣಿಸಲಾಗಿದೆ. ಶೇ.85-90% ಪ್ರಕರಣಗಳು ಬೆಂಗಳೂರಿನಲ್ಲಿ ಕಂಡು ಬರ್ತಿದೆ.
ಬಿಬಿಎಂಪಿ 8 ವಲಯಗಳಿಗೆ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ :
ಹೀಗಾಗಿ ಕೋವಿಡ್ ನಿಯಂತ್ರಣಕ್ಕಾಗಿ ಎಂಟು ವಲಯಗಳಿಗೆ ಐಎಎಸ್, ಐಪಿಎಸ್ ಅಧಿಕಾರಿಗಳ ನೇಮಕ ಮಾಡಲಾಗಿದೆ.
ಹಾಸಿಗೆ, ಟ್ರಯಾಜ್‌ಸೆಂಟರ್, ಏರ್ ರ್ಪೋರ್ಟ್‌ಗಳಿಗೆ ನೇಮಿಸಲಾಗಿದೆ. ವೇಗವಾಗಿ ಹರಡುತ್ತಿರೋ ಓಮಿಕ್ರಾನ್ ಪ್ರಭೇದ ಕ್ರಮಕ್ಕೆ, ಹತೋಟಿಗೆ ನಮ್ಮ ಸರ್ಕಾರ ಸಿದ್ದವಿದೆ. ಮಹಾರಾಷ್ಟ್ರ, ತೆಲಂಗಾಣ, ದೆಹಲಿ ರಾಜ್ಯದ ಕ್ರಮದ ಬಗ್ಗೆ ಅವಲೋಕನ ಮಾಡಿದ್ದೇವೆ. ಬೇರೆ ಬೇರೆ ದೇಶದ ಬಗ್ಗೆ ಕೂಡ ಅವಲೋಕನ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಶೇ 0.16 ಇದ್ದ ಸೋಂಕಿತ ಸಂಖ್ಯೆ, ಕಳೆದ ನಾಲ್ಕು ದಿನದಲ್ಲಿ 3.18ರಷ್ಟಾಗಿದೆ.
ವಿದೇಶದಿಂದ ಬರುವವರಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡುತ್ತೇವೆ. ಹೈ ರಿಸ್ಕ್ ದೇಶದಿಂದ ಬರುವವರಿಗೆ ಟೆಸ್ಟ್ ಮಾಡಿ, ಹೋಟೆಲ್ ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡುತ್ತೇವೆ. ಬಜೆಟ್ ಹೋಟೆಲ್ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಆದರೆ 2 ಸ್ಟಾರ್, 3 ಸ್ಟಾರ್ ಹಾಗೂ 5 ಸ್ಟಾರ್ ದರ್ಜೆಯ ದರವನ್ನು ಅವರೇ ಭರಿಸಬೇಕಾಗುತ್ತದೆ.
ಹಾಸಿಗೆ, ಆಕ್ಸಿಜನ್, ICU, ಔಷಧಿ ಖರೀದಿ, ಸಿದ್ದತೆ ಬಗ್ಗೆ ಸಂಪೂರ್ಣ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗಿದೆ. ಬಿಬಿಎಂಪಿಯ 198 ವಾರ್ಡ್‌ಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯದವರ ಮೇಲೆ ಹದ್ದಿನಕಣ್ಣು ಇಡಲಾಗಿದೆ. ರೈಲು, ಬಸ್, ವಿಮಾನ ಮೂಲಕ ಬಂದವರ ಮೇಲೆ ನಿಗಾವಹಿಸಲಾಗುವುದು. ಎರಡು ಡೋಸ್, RTPCR ಟೆಸ್ಟ್ ಕಡ್ಡಾಯ. ಗೋವಾದಿಂದ ಬಂದವರಿಗೆ ಸೋಂಕು ಹರಡಿರೋದು ದೃಢಪಟ್ಟಿದೆ. ಮೊದಲ ಎರಡು ಅಲೆಗೆ ಹೋಲಿಸಿದ್ರೆ, ಅಷ್ಟೇನು ಪರಿಣಾಮ ಇಲ್ಲ. ಹಲವು ದೇಶದಲ್ಲಿ ಆಗಿರೋದು ನೋಡಿದ್ದೇವೆ. ಕೈ ಮೀರಿ ಹೋಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.
ಮಾಸ್ಕ್ ಧರಿಸದಿದ್ದರೆ ದಂಡ ಬೀಳುತ್ತೆ :
ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇನ್ನು ಮುಂದೆ ಮೇಲೆ ಮಾಸ್ಕ್ ಧರಿಸದಿದ್ರೆ ದಂಡ ವಿಧಿಸಲಾಗುತ್ತದೆ. ಯಾವುದೇ ಕಾರ್ಯಕ್ರಮ, ಹೋರಾಟ ಮಾಡುವಂತಿಲ್ಲ. ಎಲ್ಲದಕ್ಕೂ ಸರ್ಕಾರ ನಿಯಮ ತರಲಾಗಿದೆ. ಎರಡು ಮೂರು ದಿನದಲ್ಲಿ ಆಸ್ಪತ್ರೆ ದಾಖಲಾತಿ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ಎಲ್ಲಾ ರೀತಿಯಲ್ಲಿ ವೈದ್ಯಕೀಯ ಸಿದ್ಧತೆ ಮಾಡಲಾಗಿದೆ. ಹಾಸಿಗೆ, ಆಕ್ಸಿಜನ್, ಮೆಡಿಸಿನ್ ತಯಾರಿದೆ.
ಜನರು ಆತಂಕ ಪಡೋದು ಬೇಡ. ಲಸಿಕೆ ತೆಗೆದುಕೊಳ್ಳಿ.
ಎರಡು ಡೋಸ್ ಲಸಿಕೆ ಪಡೆದವರಿಗೆ ಅಪಾಯ ಬಂದಿಲ್ಲ.
ದಯವಿಟ್ಟು ಲಸಿಕೆ ಪಡೆಯಿರಿ ಎಂದು ಆರೋಗ್ಯ ಸಚಿವ ಡಾ.ವಿ.ಸುಧಾಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.