ಬೆಂಗಳೂರು, (www.bengaluruwire.com) : ಮೈಸೂರಿನ ಹೊಸ ಹುಂಡಿಯ ಖಾಸಗಿ ಗೋದಾಮಿನಲ್ಲಿ ನಕಲಿ ನಂದಿನಿ ತುಪ್ಪ ಜಾಲ ಪತ್ತೆಯಾದ ಬಳಿಕ ಇದೀಗ ಬೆಂಗಳೂರು ಹಾಗೂ ಹೊಸಕೋಟೆಯಲ್ಲಿ ನಕಲಿ ನಂದಿನಿ ತುಪ್ಪ ಮಾರುತ್ತಿದ್ದ ಮೂರು ಅಂಗಡಿಗಳನ್ನು ಕರ್ನಾಟಕ ಹಾಲು ಮಹಾಮಂಡಳಿ (KMF) ಅಧಿಕಾರಿಗಳು ಸೋಮವಾರ ಸೀಜ್ ಮಾಡಿದ್ದಾರೆ.
ಬೆಂಗಳೂರಿನ ಹನುಮಂತನಗರದ ಎರಡು ಅಂಗಡಿಗಳಲ್ಲಿ ಹಾಗೂ ಹೊಸಕೋಟೆಯ ಒಂದು ಅಂಗಡಿಯಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಕೆಎಂಎಫ್ ಜಾಗೃತ ದಳ ಪತ್ತೆ ಹಚ್ಚಿದೆ ಎಂದು ಕೆಎಂಎಫ್ ಉನ್ನತ ಮೂಲಗಳ “ಬೆಂಗಳೂರು ವೈರ್” ಗೆ ಖಚಿತಪಡಿಸಿವೆ.
ಹೊಸಹುಂಡಿ ಪ್ರಕರಣದ ಬಳಿಕ ಕೆಎಂಎಫ್ ರಾಜ್ಯದಾದ್ಯಂತ ತನ್ನ 14 ಹಾಲು ಒಕ್ಕೂಟಗಳಲ್ಲಿ ಜಾಗೃತ ತಂಡಗಳನ್ನು ರಚಿಸಿ ಪರಿಶೀಲನೆ ಕಾರ್ಯವನ್ನು ಚುರುಕುಗೊಳಿಸಿದೆ. ಈ ಹಿನ್ನಲೆಯಲ್ಲಿ ಈಗಾಗಲೇ 150 ತಂಡಗಳು ಕಾರ್ಯಾಚರಣೆ ಸಕ್ರಿಯಗೊಳಿಸಿದೆ.
ಹನುಮಂತನಗರದ ಎರಡು ರಿಟೇಲ್ ಅಂಗಡಿಗಳಲ್ಲಿ ಕ್ರಮವಾಗಿ 150 ಲೀಟರ್ ಹಾಗೂ 11 ಲೀಟರ್ ನಕಲಿ ತುಪ್ಪವನ್ನು ಸೀಜ್ ಮಾಡಲಾಗಿದೆ. ಅದೇ ರೀತಿ ಆನ್ ಲೈನ್ ಶಾಪಿಂಗ್ ಮೂಲಕ ನಕಲಿ ತುಪ್ಪ ಮಾರುತ್ತಿದ್ದ ಅಂಗಡಿ ಸೀಜ್ ಮಾಡಿ ಕೆಎಂಎಫ್ ಜಾಗೃತ ದಳ ಆ ಅಂಗಡಿಯಿಂದ 60 ಲೀಟರ್ ತುಪ್ಪವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆ ಅಂಗಡಿ ಮಾಲೀಕ ಹಾಗೂ ಆನ್ ಲೈನ್ ಶಾಪಿಂಗ್ ಆಪ್ ಕಂಪನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೆಎಂಎಫ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕೆಎಂಎಫ್ ಗೆ ರಾಜಧಾನಿ ಬೆಂಗಳೂರು ತನ್ನ ಎಲ್ಲಾ ಉತ್ಪನ್ನಗಳ ಮಾರಾಟಕ್ಕೆ ಪ್ರಮುಖ ಮಾರುಕಟ್ಟೆಯಾಗಿದೆ. ನಗರದಲ್ಲೇ ಕೆಎಂಎಫ್ ವಿವಿಧ ಉತ್ಪನ್ನ ಮಾರಾಟ ಮಾಡುವ 10 ಸಾವಿರಕ್ಕೂ ಅಧಿಕ ಮಾರಾಟ ಕೇಂದ್ರಗಳಲ್ಲಿ ಹಾಗೂ ಸಾವಿರಾರು ರಿಟೇಲ್ ಶಾಪ್ ಗಳಲ್ಲಿ ನಂದಿನಿ ತುಪ್ಪ ಮಾರಾಟವಾಗುತ್ತಿದೆ. ಹಾಗಾಗಿ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ತಂಡಗಳನ್ನು ಅನುಮಾನ ಬಂದ ಕಡೆ ಕಳುಹಿಸಿ ತುಪ್ಪದ ಮಾದರಿಗಳನ್ನು ಲ್ಯಾಬ್ ನಲ್ಲಿ ಪರೀಕ್ಷಿಸಿ ನಕಲಿ ತುಪ್ಪ ಎಂದು ಖಚಿತವಾದ ಬಳಿಕ ಆ ಅಂಗಡಿಗಳನ್ನು ಜಪ್ತಿ ಮಾಡಲಾಗುವುದು ಎಂದು ಕೆಎಂಎಫ್ ವಿಶ್ವಸನೀಯ ಮೂಲಗಳು ತಿಳಿಸಿವೆ.
ತುಪ್ಪದ ಪ್ಯಾಕೇಟ್ ಗಳಿಗೆ ಕ್ಯುಆರ್ ಕೋಡ್ ಹಾಗೂ ಹಾಲೊಗ್ರಾಂ ಬಳಕೆಗೆ ಕ್ರಮ :
ಕೆಎಂಎಫ್ ತನ್ನ ಪ್ರಸಿದ್ಧ ನಂದಿನಿ ಬ್ರಾಂಡ್ ತುಪ್ಪ ನಕಲಿಯಾಗುವುದನ್ನು ತಪ್ಪಿಸಲು ಎಲ್ಲಾ ಮಾದರಿಯ ತುಪ್ಪದ ಪ್ಯಾಕೇಟ್ ಗಳಿಗೆ ಕ್ಯುಆರ್ ಕೋಡ್ ಹಾಗೂ ಹಾಲೊಗ್ರಾಂ ಬಳಕೆ ಮಾಡಲು ನಿರ್ಧರಿಸಿದೆ.
ಸದ್ಯದಲ್ಲೇ ಕೆಎಂಎಫ್ ನಂದಿನಿ ತುಪ್ಪದ ಪ್ಯಾಕೇಟ್ ಗಳಿಗೆ ಈ ಅತ್ಯಾಧುನಿಕ ಪದ್ಧತಿ ಅಳವಡಿಸುತ್ತೇವೆ. ಈ ಕಾರ್ಯ ಪ್ರಗತಿಯಲ್ಲಿದೆ. ಗುಣಮಟ್ಟದ ತುಪ್ಪ ನಕಲಿ ಮಾಡುವುದನ್ನು ತಡೆಯಲು ಈ ಹೊಸ ವ್ಯವಸ್ಥೆ ಸಹಾಯಕವಾಗಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ತಿಳಿಸಿದ್ದಾರೆ.
ಮೈಸೂರು ಬಳಿಯ ಹೊಸ ಹುಂಡಿಯ ಖಾಸಗಿ ಗೋದಾಮಿನಲ್ಲಿ ಡಿ.16 ರಂದು ನಕಲಿ ನಂದಿನಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಆ ಗೋಡೌನ್ ಮೇಲೆ ದಾಳಿ ನಡೆಸಿದಾಗ ಆಹಾರ ಸುರಕ್ಷತಾ ಪ್ರಾಧಿಕಾರದ ಅಧಿಕಾರಿಗಳು ನಂದಿನಿ ತುಪ್ಪ ಕಲಬೆರೆಕೆಗೆ ಡಾಲ್ಡಾ, ಬಣ್ಣ, ಯಂತ್ರಗಳು, ಪಾಮ್ ಆಯಿಲ್, ನಕಲಿ ನಂದಿನಿ ಪ್ಯಾಕೇಟ್, ಟಿನ್ ಮುಚ್ಚುವ ಕ್ಯಾಪ್ ಸೇರಿದಂತೆ ನಾನಾ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.
ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಗ್ರಾಹಕರು ನಂದಿನಿಯ ಗುಣಮಟ್ಟದ ತುಪ್ಪವನ್ನು ಮಾರುಕಟ್ಟೆಯಲ್ಲಿ ಯಾವುದೇ ಆತಂಕವಿಲ್ಲದೆ ಖರೀದಿಸಬಹುದು. ನಕಲಿ ನಂದಿನಿ ತುಪ್ಪ ಪತ್ತೆಯ ನಂತರ ರಾಜ್ಯದ ಎಲ್ಲೆಡೆ ಎಲ್ಲಾ ಒಕ್ಕೂಟಗಳಲ್ಲಿ ಜಾಗೃತದಳ ರಚನೆ ಮಾಡಿ, ಆಗಾಗ 14 ಒಕ್ಕೂಟಗಳ ವ್ಯಾಪ್ತಿಯ ನಂದಿನಿ ತುಪ್ಪದ ಮಾರಾಟ ಮಾಡುವ 21,000 ಮಾರಾಟ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಬಿ.ಸಿ.ಸತೀಶ್ ತಿಳಿಸಿದ್ದಾರೆ.
ನಂದಿನಿ ತುಪ್ಪದ ಒಂದು ಕೆಜಿಯ ಗರಿಷ್ಠ ಮಾರಾಟ ಬೆಲೆ ಪ್ರಸ್ತುತ 470 ರೂ. ಗಳಾಗಿದೆ. ಇನ್ನು ಮುಂದೆ ನಂದಿನಿ ತುಪ್ಪದ ಎಲ್ಲಾ ಪ್ಯಾಕ್ ಗಳಿಗೆ ಕ್ಯುಆರ್ ಕೋಡ್ ಹಾಗೂ ಹಾಲೊಗ್ರಾಂ ಅಳವಡಿಸುತ್ತೇವೆ ಎಂದಿದ್ದಾರೆ.
ನಂದಿನಿ ತುಪ್ಪದ ಬ್ರಾಂಡ್ ದೇಶ ವಿದೇಶಗಳಲ್ಲೂ ಹೆಸರುವಾಸಿಯಾಗಿದ್ದು, ಭಾರತೀಯ ರಕ್ಷಣಾ ಇಲಾಖೆ, ತಿರುಪತಿ ದೇವಸ್ಥಾನಕ್ಕೆ ನಂದಿನಿ ತುಪ್ಪ ಪೂರೈಕೆಯಾಗುತ್ತಿದೆ. ಅಯೋಧ್ಯೆಯಲ್ಲಿ ವರ್ಷಪೂರ್ತಿ ನಂದಿನಿ ತುಪ್ಪದಿಂದ ಅಖಂಡ ಜ್ಯೋತಿ ಬೆಳಗಿಸಲಾಗುತ್ತಿದೆ. ಅಮರಿಕ, ಕತಾರ್, ಸಿಂಗಾಪುರ, ದುಬೈ, ಆಸ್ಟ್ರೇಲಿಯಾ, ಓಮನ್ ಸೇರಿದಂತೆ ವಿವಿಧ ರಾಷ್ಟ್ರಗಳಿಗೂ ಕೆಎಂಎಫ್ ತುಪ್ಪ ರಫ್ತಾಗುತ್ತಿದೆ ಎಂದು ಸತೀಶ್ ಮಾಹಿತಿ ನೀಡಿದ್ದಾರೆ.
ಪ್ರತಿದಿನ ಮಾರುಕಟ್ಟೆಯಲ್ಲಿ ಮಾರಟವಾಗುವ ನಂದಿನಿ ತುಪ್ಪದ ಮಾದರಿಗಳನ್ನು ಪರೀಕ್ಷೆ ನಡೆಸಲಾಗುತ್ತದೆ. ಸಾರ್ವಜನಿಕರಿಗೆ ಅನುಮಾನ ಬಂದರೆ ಕೆಎಂಎಫ್ ಕೇಂದ್ರ ಪ್ರಯೋಗಾಲಯದಲ್ಲಿ ತುಪ್ಪದ ಮಾದರಿಗಳನ್ನು ನೀಡಿ ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ ಟೋಲ್‌ಫ್ರೀ ಸಂಖ್ಯೆ : 18004258030, ಅಥವಾ ನಂದಿನಿ ಸಹಾಯವಾಣಿ : 080-66660000 ಸಂಪರ್ಕಿಸಬಹುದು. ಇ-ಮೇಲ್ : [email protected] ಮಾಡಬಹುದು.